ಆ್ಯಪ್ನಗರ

ರಾಜ್ಯಮಟ್ಟದ ಹ್ಯಾಂಡ್‌ಬಾಲ್‌ ಪಂದ್ಯಾವಳಿ ಆರಂಭ

ಹಾರೂಗೇರಿ: ಮೂರು ದಿನಗಳ 40ನೇ ರಾಜ್ಯಮಟ್ಟದ ಹೊನಲು ಬೆಳಕಿನ ಪುರುಷ ಹಾಗೂ ಮಹಿಳಾ ಸಿನಿಯರ್‌ ವಿಭಾಗದ ...

Vijaya Karnataka 26 Jul 2019, 5:00 am
ಹಾರೂಗೇರಿ : ಮೂರು ದಿನಗಳ 40ನೇ ರಾಜ್ಯಮಟ್ಟದ ಹೊನಲು ಬೆಳಕಿನ ಪುರುಷ ಹಾಗೂ ಮಹಿಳಾ ಸಿನಿಯರ್‌ ವಿಭಾಗದ ಹ್ಯಾಂಡ್‌ಬಾಲ್‌ ಪಂದ್ಯಾವಳಿಗಳು ಗುರುವಾರ ಹಾರೂಗೇರಿ ವಿದ್ಯಾಲಯದ ಮೈದಾನದಲ್ಲಿ ಪ್ರಾರಂಭವಾಗಿವೆ.
Vijaya Karnataka Web BEL-25ARAKERI-1


ಪಂದ್ಯಾವಳಿಯನ್ನು ಕರ್ನಾಟಕ ರಾಜ್ಯ ಹ್ಯಾಂಡ್‌ಬಾಲ್‌ ಅಸೋಸಿಯೇಶನ್‌ ಮತ್ತು ಬೆಳಗಾವಿ ಜಿಲ್ಲಾ ಹ್ಯಾಂಡ್‌ಬಾಲ್‌ ಅಸೋಸಿಯೇಶನ್‌ ಜಂಟಿಯಾಗಿ ಆಯೋಜಿಸಿವೆ. ಪುರುಷ ಮತ್ತು ಮಹಿಳೆಯರ ಪ್ರತ್ಯೇಕ ಪಂದ್ಯಾವಳಿಗಳು ಮೈದಾನದಲ್ಲಿ ನಡೆಯುತ್ತಿವೆ. ಸಾವಿರಾರು ಕ್ರೀಡಾ ಪ್ರೇಕ್ಷಕರು ಪಾಲ್ಗೊಂಡು ವೀಕ್ಷಣೆ ನಡೆಸಿದ್ದಾರೆ.

ಪಂದ್ಯಾವಳಿಯಲ್ಲಿ 22 ಪುರುಷ ಮತ್ತು 13 ಮಹಿಳಾ ತಂಡಗಳು ಭಾಗವಹಿಸಿವೆ. ಇವುಗಳಲ್ಲಿ ಪುರುಷರ ಕಳೆದ ಬಾರಿಯ ಚಾಂಪಿಯನ್‌ಗಳಾದ ಮದ್ರಾಸ್‌ ಎಂಜಿನಿಯರಿಂಗ್‌ ತಂಡ, ಆರ್ಮಿ ಸರ್ವಿಸ್‌ ಕಾರ್ಫ್ಸ್‌ ತಂಡ, ಮಹಿಳಾ ಕೊಡಗು ಮತ್ತು ಬೆಳಗಾವಿ ತಂಡಗಳು ಪಾಲ್ಗೊಂಡಿವೆ.

ಫಲಿತಾಂಶ: ಪುರುಷರ ವಿಭಾಗದ ಉದ್ಘಾಟನಾ ಪಂದ್ಯದಲ್ಲಿ ಮದ್ರಾಸ್‌ ಎಂಜಿನಿಯರಿಂಗ್‌ ತಂಡ 43-12 ಗೋಲುಗಳ ಅಂತರದಲ್ಲಿ ಉಡುಪಿ ತಂಡದ ವಿರುದ್ಧ ಗೆಲುವು ಸಾಧಿಸಿತು. ಎಂಇಜಿ ತಂಡದ ಚಂದ್ರಪ್ರಕಾಶ 12 ಗೋಲುಗಳನ್ನು ಪಡೆದರು. ಆರ್ಮಿ ಸರ್ವಿಸ್‌ ಕಾರ್ಫ್ಸ್‌ ತಂಡ ಮನದೀಪ್‌ ಸಿಂಗ್‌ರ 6 ಗೋಲುಗಳೊಂದಿಗೆ ಬಾಗಲಕೋಟ ತಂಡವನ್ನು 31-7 ಗೋಲುಗಳಿಂದ ಮಣಿಸಿತು. ಶಿವಮೊಗ್ಗ ತಂಡ ಶುಭಾಕರ ಅವರ 6 ಗೋಲುಗಳೊಂದಿಗೆ 22-11 ಗೋಲುಗಳ ಅಂತರದಲ್ಲಿ ದಾವಣಗೆರೆ ತಂಡದ ವಿರುದ್ಧ ಗೆಲುವು ಸಾಧಿಸಿತು. ಕರ್ನಾಟಕ ಸ್ಟೇಟ್‌ ಪೊಲೀಸ್‌ ತಂಡ ಮಂಜುನಾಥ ಅವರ 7 ಗೋಲುಗಳೊಂದಿಗೆ ಚಿಕ್ಕಬಳ್ಳಾಪುರ ಜಿಲ್ಲೆ ತಂಡವನ್ನು 34-13 ಗೋಲುಗಳ ಅಂತರದಿಂದ ಸೋಲಿಸಿತು. ಆಳ್ವಾಸ್‌ ತಂಡ ಕಾರ್ತಿಕಗೌಡ ಅವರ 6 ಗೋಲುಗಳೊಂದಿಗೆ ತುಮಕೂರು ತಂಡದ ವಿರುದ್ಧ 27-18 ಗೋಲುಗಳಿಂದ ಗೆಲುವು ಸಾಧಿಸಿದೆ.

ಮಹಿಳಾ ಸೀನಿಯರ್‌ ವಿಭಾಗದ ಉದ್ಘಾಟನಾ ಪಂದ್ಯದಲ್ಲಿ ಮೈಸೂರು ತಂಡ ಉಜ್ವಲಾಗೌಡಾ ಅವರ 11 ಗೋಲುಗಳ ನೆರವಿನಿಂದ ಧಾರವಾಡ ತಂಡವನ್ನು 24-11 ಗೋಲುಗಳ ಅಂತರದಲ್ಲಿ ಸೋಲಿಸಿತು. ಆಳ್ವಾಸ್‌ ತಂಡ ವರ್ಷಿತಾ ಅವರ 5 ಗೋಲುಗಳೊಂದಿಗೆ ಶಿವಮೊಗ್ಗ ತಂಡವನ್ನು 10-5 ಅಂತರಗಳಿಂದ ಸೋಲಿಸಿತು. ಕೊಡಗು ತಂಡ ಗೌತಮಿ ಅವರ 10 ಗೋಲುಗಳ ನೆರವಿನಿಂದ ಬೆಂಗಳೂರಿನ ಎಂಎಲ್‌ಎ ಕಾಲೇಜು ತಂಡವನ್ನು 19-1 ಭಾರೀ ಅಂತರದಿಂದ ಪರಾಭವಗೊಳಿಸಿತು.

ನಿರ್ಣಾಯಕರಾಗಿ ಶಿವಮೊಗ್ಗದ ರಾಕಲ್‌, ತ್ಯಾಗರಾಜು, ಬೆಳಗಾವಿಯ ಇಮ್ರಾನ್‌, ದಾವಣಗೆರೆಯ ಸ್ವಾಮಿನಾರಾಯಣ, ನಬಿ, ಹಾವೇರಿಯ ಸಿದ್ದು, ಕೃಷ್ಣ, ಹರೀಶ, ಭಾವನಾ, ಅಶ್ವಿನಿ, ಚಿಕ್ಕಮಗಳೂರಿನ ಅರಸ್‌ ಮತ್ತು ಚಿಕ್ಕಬಳ್ಳಾಪುರದ ಪ್ರದೀಪ ಕಾರ್ಯನಿರ್ವಹಿಸಿದರು.

ಪಂದ್ಯಾವಳಿಗಳ ಉದ್ಘಾಟನೆ :
40ನೇ ರಾಜ್ಯಮಟ್ಟದ ಹೊನಲು ಬೆಳಕಿನ ಪುರುಷ ಹಾಗೂ ಮಹಿಳಾ ಸೀನಿಯರ್‌ ವಿಭಾಗದ ಹ್ಯಾಂಡ್‌ಬಾಲ್‌ ಪಂದ್ಯಾವಳಿಗಳನ್ನು ಮಾಜಿ ಶಾಸಕ ಬಿ.ಸಿ. ಸರಿಕರ ಉದ್ಘಾಟಿಸಿದರು. ಕರ್ನಾಟಕ ರಾಜ್ಯ ಹ್ಯಾಂಡ್‌ಬಾಲ್‌ ಅಸೋಸಿಯೇಶನ್‌ ಕಾರ್ಯದರ್ಶಿ ಎಂ.ಕೆ. ನಾಗೇಂದ್ರ ಕ್ರೀಡಾ ಮೈದಾನ ಉದ್ಘಾಟಿಸಿದರು. ಬೆಳಗಾವಿ ಜಿಲ್ಲಾ ಹ್ಯಾಂಡ್‌ಬಾಲ್‌ ಅಸೋಸಿಯೇಶನ್‌ ಅಧ್ಯಕ್ಷ ಡಾ. ಎಲ್‌.ಎಸ್‌. ಜಂಬಗಿ ಪ್ರಾಸ್ತಾವಿಕ ಮಾತನಾಡಿದರು. ಅಸೋಸಿಯೇಶನ್‌ನ ಖಜಾಂಚಿ ವೀಣಾ ಶೇಖರ, ಡಾ. ವರ್ಷಾ ಜಂಬಗಿ, ಡಾ. ಗಿರೀಶ ನಾರಗೊಂಡ, ಪುರಸಭೆ ಸದಸ್ಯ ಗಿರೀಶ ದರೂರ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಡಿ.ಎಸ್‌. ಡಿಗ್ರಜ್‌, ಜೆ.ಪಿ. ಸಾಗರ, ಬಸಗೌಡ ಆಸಂಗಿ, ಸುರೇಶ ಠಕ್ಕಣ್ಣವರ, ರವಿ ಗಸ್ತಿ ವೇದಿಕೆಯಲ್ಲಿದ್ದರು. ಗೋಕಾಕದ ಕ್ರೀಡಾಪಟು ಸ್ನೇಹಲ್‌ ಬಗಾಡಿ ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಎಂ.ಡಿ. ನಾಯಿಕ ಸ್ವಾಗತಿಸಿದರು. ಶಿಕ್ಷಕ ಬಿ.ಎಲ್‌. ಘಂಟಿ ನಿರೂಪಿಸಿದರು. ಎಸ್‌.ಎಂ. ಹೆಳವರ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ