ಆ್ಯಪ್ನಗರ

ನೀರು ಬಿಡಿಸಲು ಮಹಾರಾಷ್ಟ್ರಕ್ಕೆ ಹೋಗುವ ನಾಟಕ ನಿಲ್ಲಿಸಿ

ಚಿಕ್ಕೋಡಿ : ಈಗಾಗಲೇ ಕಾಳಮ್ಮವಾಡಿ ಜಲಾಶಯದಿಂದ ದೂಧಗಂಗಾ ನದಿಗೆ 5...

Vijaya Karnataka 29 Jan 2019, 5:00 am
ಚಿಕ್ಕೋಡಿ : ಈಗಾಗಲೇ ಕಾಳಮ್ಮವಾಡಿ ಜಲಾಶಯದಿಂದ ದೂಧಗಂಗಾ ನದಿಗೆ 5.35 ಟಿಎಂಸಿ ನೀರು ಬಿಡುವ ಆದೇಶ ದೊರೆತಿದ್ದು, ಇನ್ನಾದರೂ ಬಿಜೆಪಿ ನಾಯಕರು ಮಹಾರಾಷ್ಟ್ರಕ್ಕೆ ಹೋಗಿ ನೀರು ಬಿಡುವಂತೆ ಮನವಿ ಸಲ್ಲಿಸಿ ನಾಟಕ ಮಾಡುವುದನ್ನು ನಿಲ್ಲಿಸಬೇಕು ಎಂದು ಸಂಸದ ಪ್ರಕಾಶ ಹುಕ್ಕೇರಿ ಕಿವಿಮಾತು ಹೇಳಿದ್ದಾರೆ.
Vijaya Karnataka Web BEL-28CKD1


ತಾಲೂಕಿನ ಯಕ್ಸಂಬಾ ಪಟ್ಟಣದ ಕರಾಳೆ ಪ್ರೌಢ ಶಾಲೆಯ ಮೈದಾನದಲ್ಲಿ ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ 70.53 ಕೋಟಿ ಮೊತ್ತದ ನಾನಾ ಅಭಿವೃದ್ಧಿ ಕಾಮಗಾರಿಗಳ ಆದೇಶ ಪ್ರತಿ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ''ಪ್ರತಿ ವರ್ಷ ರಾಜ್ಯಕ್ಕೆ ದೊರೆಯುತ್ತಿದ್ದ 4 ಟಿಎಂಸಿ ನೀರಿನ ಜತೆಗೆ ಹೆಚ್ಚುವರಿಯಾಗಿ 1.35 ಟಿಎಂಸಿ ನೀರು ಬಿಡಲು ತಾವು ರಾಜ್ಯ ಸರಕಾರದ ಅಧಿಕಾರಿಗಳೊಂದಿಗೆ ನಡೆಸಿದ ಒಡಂಬಡಿಕೆಗೆ ಮಹಾರಾಷ್ಟ್ರ ರಾಜ್ಯ ಒಪ್ಪಿಕೊಂಡಿದೆ'', ಎಂದರು.

''38 ವರ್ಷಗಳ ಸುದೀರ್ಘ ರಾಜಕಾರಣದಲ್ಲಿ ನಾನು ಜನರ ಮಧ್ಯೆಯೇ ಬೆಳೆದಿದ್ದು ಹಳ್ಳಿ ಜನರ ಸಂಕಷ್ಟ ಗೊತ್ತಿದೆ. ಲೋಕಸಭಾ ವ್ಯಾಪ್ತಿಯ ಹಳ್ಳಿಗಳಿಗೆ ನಾನು ಹೋಗಿಲ್ಲ ಎಂದು ಆರೋಪ ಮಾಡುತ್ತಿದ್ದಾರೆ. ಬೆಳಗಾವಿಯಲ್ಲಿದ್ದು ಆರೋಪವೆಸಗುವವರು ಎಷ್ಟು ಹಳ್ಳಿಯ ಜನರಿಗೆ ಭೇಟಿಯಾಗಿದ್ದಾರೆ ಎಂಬುದು ನಮಗೆ ಗೊತ್ತಿದೆ'', ಎಂದು ಹರಿಹಾಯ್ದರು.

ಕ್ಷೇತ್ರದಲ್ಲಿ ನಿಪ್ಪಾಣಿ ವಿಧಾನಸಭಾ ಕ್ಷೇತ್ರಕ್ಕೆ 70 ಲಕ್ಷ , ಕುಡಚಿಗೆ 3.20 ಕೋಟಿ, ರಾಯಬಾಗಕ್ಕೆ 3.20 ಲಕ್ಷ, ಹುಕ್ಕೇರಿಗೆ 3.50 ಲಕ್ಷ, ಅಥಣಿಗೆ 25.40 ಕೋಟಿ, ಕಾಗವಾಡಕ್ಕೆ 4 ಕೋಟಿ, ಚಿಕ್ಕೋಡಿ-ಸದಲಗಾ ಕ್ಷೇತ್ರಕ್ಕೆ 30.38 ಕೋಟಿ, ಯಮಕನಮರಡಿಗೆ 15 ಲಕ್ಷ ಸೇರಿದಂತೆ ಒಟ್ಟು 70.53 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ಮಾಹಿತಿ ನೀಡಿದರು.

ಸರಕಾರದ ಮುಖ್ಯ ಸಚೇತಕ ಗಣೇಶ ಹುಕ್ಕೇರಿ ಮಾತನಾಡಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ಮತದಾರರಿಗೆ ನೀಡಿರುವ ಆಶ್ವಾಸನೆಗಳನ್ನು ಈಡೇರಿಸಲು ನಮ್ಮ ಕುಟುಂಬ ಬದ್ಧವಾಗಿದೆ ಎಂದರು. ದ್ರಾಕ್ಷಾರಸ ಮಂಡಳಿ ಮಾಜಿ ಅಧ್ಯಕ್ಷ ರವೀಂದ್ರ ಮಿರ್ಜೆ, ಮುಖಂಡ ಮಹಾವೀರ ಮೋಹಿತೆ, ನಿಪ್ಪಾಣಿ ನಗರಸಭೆ ಮಾಜಿ ಅಧ್ಯಕ್ಷ ವಿಲಾಸ ಗಾಡಿವಡ್ಡರ ಮಾತನಾಡಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಾದ ರಾಜೇಶ ಕದಂ, ಶ್ಯಾಮ ಪೂಜಾರಿ, ಸಂಜಯ ನಷ್ಟಿ, ಅಶೋಕ ಅಂಕಲಗಿ, ಧೂಳಗೌಡ ಪಾಟೀಲ, ಮಹಾದೇವ ಕೋರೆ, ಜಿಪಂ ಸದಸ್ಯ ಅಮೂಲ ನಾಯಿಕ, ದಾದಾ ಶಿಂಧೆ, ಬಸವರಾಜ ಬುಟಾಳಿ, ಸಿದಗೌಡ ಪಾಟೀಲ, ಸುರೇಶ ಚೌಗಲಾ, ಮಲ್ಲಿಕಾರ್ಜುನ ಪಾಟೀಲ, ಸುದರ್ಶನ ಖೋತ, ಅರುಣ ದೇಸಾಯಿ, ಗೋಮಟೇಶ ಪಾಟೀಲ, ಅಕ್ಬರ್‌ ಅಲಿ ಮಾರೂಫ, ಗಣೇಶ ಮೋಹಿತೆ ಉಪಸ್ಥಿತರಿದ್ದರು.

ನಾವು ಬಿಜೆಪಿ ಸೇರುವುದಾಗಿ ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಹೇಳಿದ್ದಾರೆ. ಬಿಜೆಪಿ ಸೇರಲು ನಮಗೆ ತಲೆಕೆಟ್ಟಿಲ್ಲ. ನಾವು ಎರಡು ಬಣ ಮಾಡಿದ ತಪ್ಪಿನಿಂದಾಗಿಯೇ ಶಾಸಕ ದುರ್ಯೋಧನ ಐಹೊಳೆ ಆಯ್ಕೆಯಾಗಿದ್ದು. ಅವರ ಆಯ್ಕೆ ನಮ್ಮ ದುರ್ದೈವ.
- ಪ್ರಕಾಶ ಹುಕ್ಕೇರಿ, ಸಂಸದ

ಸಾಧನೆ ಹೇಳಿದರೆ ಟಿಕೆಟ್‌ ಬಿಟ್ಟುಕೊಡುವೆ :
''ನಾಲ್ಕೂವರೆ ವರ್ಷಗಳ ಅವಧಿಯಲ್ಲಿ 700 ಕೋಟಿ ರೂ.ಗೂ ಹೆಚ್ಚು ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಭರದಲ್ಲಿ ಜನರನ್ನು ಭೇಟಿಯಾಗಲು ಸಮಯ ಸಿಕ್ಕಿಲ್ಲ. ನಾನು ಕೈಗೊಂಡ ಕಾಮಗಾರಿಗಳ ಬಗ್ಗೆ ಒಂದೇ ವೇದಿಕೆಯಲ್ಲಿ ಚರ್ಚಿಸಲು ಸಿದ್ಧ. ಒಂದು ವೇಳೆ ಹಳ್ಳಿಗೆ ಹೋಗಿ ಜನರನ್ನು ಭೇಟಿಯಾಗಿದ್ದರೆ ಇಷ್ಟೊಂದು ದೊಡ್ಡ ಪ್ರಮಾಣದ ಅನುದಾನ ಕ್ಷೇತ್ರಕ್ಕೆ ದೊರೆಯುತ್ತಿರಲಿಲ್ಲ. ಇಷ್ಟಾದರೂ ನಿಮ್ಮ ಆರೋಪ ಪರಿಗಣಿಸುತ್ತೇನೆ. ಐದು ವರ್ಷಗಳಲ್ಲಿ ನಿಮ್ಮ ಅವಧಿಯಲ್ಲಿ ನೀವು ಕೈಗೊಂಡ ದಾಖಲೆ ಪ್ರದರ್ಶಿಸಿದರೆ ನಾನು ಮುಂದಿನ ಲೋಕಸಭಾ ಚುನಾವಣೆ ಟಿಕೆಟ್‌ ಬಿಟ್ಟು ಕೊಡುತ್ತೇನೆ'', ಎಂದು ವಿರೋಧಿಗಳಿಗೆ ಸಂಸದ ಹುಕ್ಕೇರಿ ಸವಾಲು ಹಾಕಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ