ಆ್ಯಪ್ನಗರ

ಮತ್ತೆ ಭುಗಿಲೆದ್ದ ಕಬ್ಬಿಗರ ಆಕ್ರೋಶ

ಇಚಲಕರಂಜಿ : ಎಫ್‌ಆರ್‌ಪಿ ಅನ್ವಯ ಒಂದೇ ಕಂತಿನಲ್ಲಿ ಕಬ್ಬಿನ ದರ ಪಾವತಿಸುವಂತೆ ಒತ್ತಾಯಿಸಿ ಸ್ವಾಭಿಮಾನಿ ...

Vijaya Karnataka 14 Jan 2019, 5:00 am
ಇಚಲಕರಂಜಿ : ಎಫ್‌ಆರ್‌ಪಿ ಅನ್ವಯ ಒಂದೇ ಕಂತಿನಲ್ಲಿ ಕಬ್ಬಿನ ದರ ಪಾವತಿಸುವಂತೆ ಒತ್ತಾಯಿಸಿ ಸ್ವಾಭಿಮಾನಿ ರೈತ ಸಂಘಟನೆ ಕಾರ್ಯಕರ್ತರು ಭಾನುವಾರ ಕೊಲ್ಲಾಪುರ ಹಾಗೂ ಸಾಂಗ್ಲಿ ಜಿಲ್ಲೆಯ ಹಲವು ಕಡೆ ಪ್ರತಿಭಟನೆ ನಡೆಸಿದ್ದು, ಕೆಲ ಸಕ್ಕರೆ ಕಾರ್ಖಾನೆಗಳ ವಿಭಾಗೀಯ ಕಚೇರಿಗಳಿಗೆ ಬೀಗ ಹಾಕಿದ್ದು, ಇನ್ನು ಕೆಲವು ಕಡೆ ಬೆಂಕಿ ಹಾಕಿದ್ದಾರೆ. ಈ ಎಲ್ಲ ಬೆಳವಣಿಗಳ ಹಿನ್ನೆಲೆಯಲ್ಲಿ ಕಬ್ಬು ಕಟಾವು ಸ್ಥಗಿತಗೊಂಡಿದೆ.
Vijaya Karnataka Web BEL-13ICH2


ಜೈಸಿಂಗಪುರದ ಜವಾಹರ, ದತ್ತ ಹಾಗೂ ಗುರುದತ್ತ ಸಕ್ಕರೆ ಕಾರ್ಖಾನೆಗಳ ವಿಭಾಗೀಯ ಕಾರ್ಯಾಲಯದ ಮೇಲೆ ದಾಳಿ ಮಾಡಿದ ಸ್ವಾಭಿಮಾನಿ ರೈತ ಸಂಘಟನೆ ಕಾರ್ಯಕರ್ತರು, ಅಲ್ಲಿದ್ದ ಕುರ್ಚಿ, ಟೇಬಲ್‌ ಇನ್ನಿತರ ವಸ್ತುಗಳನ್ನು ಒಡೆದು ಹಾಕಿದ್ದಾರೆ. ಸಿಬ್ಬಂದಿಯನ್ನು ಕಚೇರಿಯಿಂದ ಹೊರಗೆ ತಳ್ಳಿ ಕಾರ್ಯಾಲಯಗಳಿಗೆ ಬೀಗ ಜಡಿದರು. ಸಾಂಗಲಿ ಜಿಲ್ಲೆಯ ಕ್ರಾಂತಿ ಸಕ್ಕರೆ ಕಾರ್ಖಾನೆ ಹಾಗೂ ಕೃಷ್ಣಾ ಸಕ್ಕರೆ ಕಾರ್ಖಾನೆಯ ಕಾರ್ಯಾಲಯಗಳಿಗೆ ಬೆಂಕಿ ಹಾಕಲಾಗಿದ್ದು, ಕಾಗದ ಪತ್ರಗಳು ಸುಟ್ಟಿವೆ. ಪ್ರಸಕ್ತ ಸಾಲಿನಲ್ಲಿ ಪೂರೈಸಿದ ಕಬ್ಬಿಗೆ ಒಂದೇ ಕಂತಿನಲ್ಲಿ ಎಫ್‌ಆರ್‌ಪಿ ಅನ್ವಯ ಬಿಲ್‌ ನೀಡಬೇಕು. ಅಲ್ಲಿಯವರೆಗೆ ಕಚೇರಿಗೆ ಹಾಕಿದ ಬೀಗ ತೆರೆಯುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೈಶಾಳದ ದತ್ತ ಕಾರ್ಖಾನೆ, ಮೋಹನರಾವ್‌ ಶಿಂಧೆ ಕಾರ್ಖಾನೆ, ಶಿವಶಕ್ತಿ ಹಾಗೂ ಕಾಗವಾಡ ಶುಗರ್ಸ್‌ನ ಸ್ಥಳೀಯ ಕಾರ್ಖಾನೆಗಳ ವಿಭಾಗೀಯ ಕಚೇರಿಗೂ ಬೀಗ ಹಾಕಲಾಗಿದೆ.

ಪುನಾದಲ್ಲಿ ಸೋಮವಾರ ಸಕ್ಕರೆ ಆಯುಕ್ತರನ್ನು ಸ್ವಾಭಿಮಾನಿ ರೈತ ಸಂಘಟನೆ ಅಧ್ಯಕ್ಷ ರಾಜು ಶೆಟ್ಟಿ ಭೇಟಿಯಾಗಿ ಎಫ್‌ಆರ್‌ಪಿ ಕುರಿತು ಚರ್ಚಿಸಲಿದ್ದರೆ. ಈಗಾಗಲೇ ಕಟಾವು ಮಾಡಿದ ಕಬ್ಬನ್ನು ಮಾತ್ರ ಕಾರ್ಖಾನೆಗೆ ಪೂರೈಸಲು ಅವಕಾಶ ನೀಡಲಾಗುತ್ತಿದೆ. ಬಾಕಿ ಕಬ್ಬು ಕಟಾವು ಸ್ಥಗಿತಗೊಳಿಸಲಾಗಿದೆ ಎಂದು ಶಿರೋಳ ಸ್ವಾಭಿಮಾನಿ ಯುವ ಸಂಘಟನೆ ಅಧ್ಯಕ್ಷ ಬಾಳಗೊಂಡ ಪಾಟೀಲ 'ವಿಜಯ ಕರ್ನಾಟಕ'ಕ್ಕೆ ತಿಳಿಸಿದರು.

ಎಫ್‌ಆರ್‌ಪಿ ದರ ವಿಭಜನೆ :
ಬಹುತೇಕ ಸಕ್ಕರೆ ಕಾರ್ಖಾನೆಗಳು ಎಫ್‌ಆರ್‌ಪಿ ದರ ವಿಭಜಿಸಿ ಪ್ರತಿ ಟನ್‌ ಕಬ್ಬಿಗೆ 2300 ರೂ. ದರವನ್ನು ರೈತರ ಖಾತೆಗೆ ಜಮಾ ಮಾಡಿದ್ದು ಕಬ್ಬು ಬೆಳೆಗಾರರನ್ನು ಕೆರಳಿಸಿದೆ.

ಸ್ವಾಭಿಮಾನಿ ರೈತ ಸಂಘಟನೆಯ ವಾಳವಾ ತಾಲೂಕು ಅಧ್ಯಕ್ಷ ಭಾಗವತ ಜಾಧವ ಮಾತನಾಡಿ, ''ಎಫ್‌ಆರ್‌ಪಿ ಕಾಯ್ದೆ ಉಲ್ಲಂಘಿಸಿ ಕಾರ್ಖಾನೆಗಳು ಎಫ್‌ಆರ್‌ಪಿ ವಿಭಜನೆ ಮಾಡಿ ರೈತರ ಖಾತೆಗೆ ದರ ಜಮಾಮಾಡಿದರೆ ಒಪ್ಪಲು ಸಾಧ್ಯವಿಲ್ಲ. ಕಡಿತವಿಲ್ಲದೆ ಒಂದೇ ಕಂತಿನಲ್ಲಿ ದರ ನೀಡಬೇಕೆಂದು'' ಎಚ್ಚರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ