ಆ್ಯಪ್ನಗರ

ಬಡವರ ಕನಸಿನ ಮನೆ ಅಪೂರ್ಣ

ಸಂತೋಷ ಗಿರಿ ಬಾವನಸೌಂದತ್ತಿ ಬಡವರಿಗಾಗಿ ಸರಕಾರ ...

Vijaya Karnataka 19 Sep 2019, 5:00 am
ಸಂತೋಷ ಗಿರಿ ಬಾವನಸೌಂದತ್ತಿ
Vijaya Karnataka Web 17 BSDT 01 (1)_53

ಬಡವರಿಗಾಗಿ ಸರಕಾರ ರೂಪಿಸಿದ ಬಸವ ವಸತಿ ಯೋಜನೆ ಅನುದಾನದ ಕೊರತೆಯಿಂದ ಬಡವಾಗಿದ್ದು ಫಲಾನುಭವಿಗಳು ಮನೆ ಕಟ್ಟಿಕೊಳ್ಳಲಾಗದೆ ಅತಂತ್ರರಾಗಿದ್ದಾರೆ.

ರಾಯಬಾಗ ತಾಲೂಕಿನ ಬಾವನ ಸೌಂದತ್ತಿ, ದಿಗ್ಗೇವಾಡಿ, ಜಲಾಲಪುರ, ಭಿರಡಿ, ಯಡ್ರಾಂವಿ, ನಂದಿಕುರುಳಿ, ನಸಲಾಪುರ ಸೇರಿದಂತೆ ಅನೇಕ ಗ್ರಾಮಗಳಲ್ಲಿಬಸವ ವಸತಿ ಯೋಜನೆಯಡಿ ಫಲಾನುಭವಿಗಳಿಗೆ ಮನೆ ಮಂಜೂರು ಮಾಡಲಾಗಿದೆ. ಫಲಾನುಭವಿಗಳು ಕೈಯಲ್ಲಿದ್ದ ಹಣವನ್ನು ವಿನಿಯೋಗಿಸಿ ಮನೆಗೆ ಅಡಿಪಾಯ ಹಾಕಿಕೊಂಡಿದ್ದಾರೆ. ಗ್ರಾಮ ಪಂಚಾಯಿತಿಯವರು ಮನೆಯ ಜಿಪಿಎಸ್‌ ಮಾಡಿಕೊಂಡು ಹೋಗಿ ನಾಲ್ಕು ತಿಂಗಳು ಕಳೆದಿವೆ.

ಆದರೂ, ಇನ್ನೂವರೆಗೆ ಮೊದಲ ಹಂತದ ಬಿಲ್‌ ಕೂಡ ಬಂದಿಲ್ಲ. ಹೀಗಾಗಿ ಫಲಾನುಭವಿಗಳಿಗೆ ಮನೆ ಕಟ್ಟುವ ಕಾರ‍್ಯ ಮುಂದುವರಿಸಲು ಆಗುತ್ತಿಲ್ಲ. ಹಲವು ಕಡೆ ಫೌಂಡೇಶನ್‌ ಹಂತಕ್ಕೇ ನಿಂತಿದೆ. ಕೆಲವರು ಅರ್ಧಕ್ಕೆ ಕಟ್ಟಿ ಸರಕಾರದ ನೆರವಾಗಿ ಕಾಯುತ್ತ ಕುಳಿತಿದ್ದಾರೆ. ಇನ್ನು ಕೆಲವರಂತೂ ಹೊಸ ಮನೆಗೆ ಆಸೆ ಪಟ್ಟು ಇದ್ದ ಹಳೇ ಮನೆಯನ್ನು ತೆರವು ಮಾಡಿದ್ದಾರೆ. ಅಂತಹವರಿಗೆ ಈಗ ಹಳೇ ಮನೆಯೂ ಇಲ್ಲ. ಹೊಸ ಮನೆ ನಿರ್ಮಾಣ ಕೆಲಸವೂ ಆಗುತ್ತಿಲ್ಲ. ಸರಕಾರದಿಂದ ಅನುದಾನ ಬರುತ್ತಿಲ್ಲ.

ಒಂದು ಕಂತಿನ ಹಣವೂ ಬಂದಿಲ್ಲ:
ಫೌಂಡೇಶನ್‌, ಗೋಡೆ, ಚಾವಣಿ ಹಾಗೂ ಪೂರ್ಣಗೊಂಡ ಮನೆ ಹೀಗೆ ನಾಲ್ಕು ಹಂತದಲ್ಲಿಮನೆಗಳ ಫೋಟೊ ತೆಗೆದು ಜಿಪಿಎಸ್‌ ಮಾಡಲಾಗುತ್ತದೆ. ಒಂದು ಮನೆಗೆ ಸರಕಾರದಿಂದ 1.20 ಲಕ್ಷ ರೂ. ನೆರವು ಸಿಗುತ್ತದೆ. ಈ ಹಣ ನಾಲ್ಕು ಹಂತಗಳಲ್ಲಿಫಲಾನುಭವಿಗಳ ಖಾತೆಗೆ ಜಮಾ ಆಗುತ್ತದೆ. ಹಣ ಇಂದು ಬರುತ್ತದೆ, ನಾಳೆ ಬರುತ್ತದೆ ಎಂದು ಫಲಾನುಭವಿಗಳು ಕಾಯುತ್ತ ಕುಳಿತಿದ್ದಾರೆ. ಆದರೆ, ನಾಲ್ಕು ತಿಂಗಳಿಂದ ಹಣ ಬಂದಿಲ್ಲ. ಈ ನಡುವೆ ಕೆಲ ಫಲಾನುಭವಿಗಳು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರ ಮನೆಗೆ ತೆರಳಿ ನಮಗೆ ಹಣ ನೀಡಿ ಎಂದು ಮನವಿ ಮಾಡುತ್ತಿದ್ದಾರೆ.

''ಮನೆಯ ಬಿಲ್‌ ವಿಚಾರದಲ್ಲಿಫಲಾನುಭವಿಗಳು ಮನೆಗೆ ಬರುತ್ತಿದ್ದಾರೆ. ಇದು ಸರಕಾರದ ಮಟ್ಟದಲ್ಲಿಮಂಜೂರು ಆಗಬೇಕು ಎಂದು ತಿಳಿ ಹೇಳುತ್ತಿದ್ದೇವೆ. ಆದರೆ, ಫಲಾನುಭವಿಗಳಿಗೆ ನಮ್ಮ ಮಾತಿನಲ್ಲಿನಂಬಿಕೆ ಬರುತ್ತಿಲ್ಲ. ಸರಕಾರ ತಕ್ಷಣ ಸಮಸ್ಯೆ ಪರಿಹರಿಸಬೇಕು'' ಎನ್ನುತ್ತಾರೆ ಅಂಕಲಿ ಗ್ರಾಪಂ ಸದಸ್ಯ ತುಕಾರಾಮ್‌ ಪಾಟೀಲ.

ಜಿಲ್ಲೆಯಲ್ಲಿ'ವಸತಿ' ಸ್ಥಿತಿಗತಿ
ಫೌಂಡೇಶನ್‌ ಹಂತದ ಮನೆಗಳು- 11,789
ಲಿಂಟಲ್‌ ಹಂತದ ಮನೆಗಳು- 10,708
ಚಾವಣಿ ಹಂತದ ಮನೆಗಳು- 15,653
ಒಟ್ಟು -38,150

ಹೊಸ ಮನೆ ನಿರೀಕ್ಷೆಯಲ್ಲಿಹಳೇ ಮನೆ ಕಳೆದುಕೊಂಡು ಹೈರಾಣಾಗಿದ್ದೇವೆ. ಮನೆ ಕೆಲಸ ಅರ್ಧಕ್ಕೆ ನಿಂತಿದೆ. ಪೂರ್ತಿ ಕಟ್ಟಲು ಹಣ ಇಲ್ಲ. ಸದ್ಯ ಬಾಡಿಗೆ ಮನೆಯಲ್ಲಿವಾಸವಿದ್ದೇವೆ. ಮನೆ ಕಾಮಗಾರಿ ಯಾವಾಗ ಮುಗಿಯುತ್ತದೆ ಎಂಬ ಚಿಂತೆ ಆರಂಭವಾಗಿದೆ.
- ಮಾರ್ತಾಂಡ ಬಡಿಗೇರ, ಬಾವನಸೌಂದತ್ತಿ

ಬಸವ ವಸತಿ ಯೋಜನೆಯಡಿ ಮಂಜೂರಾದ ಮನೆಗಳಿಗೆ ಕಳೆದ ನಾಲ್ಕು ತಿಂಗಳಿಂದ ಬಿಲ್‌ ಜಮೆಯಾಗಿಲ್ಲ. ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ.
- ಸುದೀಪ್‌ ಚೌಗಲಾ, ತಾಪಂ ಕಾರ್ಯನಿರ್ವಾಹಕ ಪ್ರಭಾರ ಅಧಿಕಾರಿ

ಪ್ರಧಾನ ಮಂತ್ರಿ ಆವಾಸ್‌ ಯೋಜನೆಯ ಫಲಾನುಭವಿಗಳಿಗೆ ಸಹಾಯಧನ ವಿತರಣೆ ಮಾಡಲಾಗುತ್ತಿದೆ. ಆದರೆ, ಬಸವ ವಸತಿ ಮತ್ತು ಅಂಬೇಡ್ಕರ್‌ ಯೋಜನೆಯಡಿ ಅನುದಾನ ಸರಕಾರದಿಂದ ಬಂದಿಲ್ಲ. ಅಲ್ಲದೆ, ವಸತಿ ಯೋಜನೆ ಸಿಬ್ಬಂದಿ ಪ್ರವಾಹ ಸಮೀಕ್ಷೆಗೆ ಕೆಲಸ ಮಾಡುತ್ತಿರುವುದರಿಂದ ವಸತಿ ಯೋಜನೆಯ ಡಾಟಾ ಎಂಟ್ರಿ ಕೆಲಸ ನಿಧಾನವಾಗುತ್ತಿವೆ.
- ಜಿ.ಪಿ.ಸುಂಕದ, ಪ್ರಭಾರ ಯೋಜನಾಧಿಕಾರಿ, ಜಿಪಂ, ಬೆಳಗಾವಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ