ಆ್ಯಪ್ನಗರ

ಕಸದ ತೊಟ್ಟಿಯಾದ ಇಟಗಿಕ್ರಾಸ್‌ ಅಂಡರ್‌ಪಾಸ್‌

Vijaya Karnataka 23 Jun 2018, 5:00 am
-ಸಾರ್ವಜನಿಕರು ಮೂಗು ಮೂಚ್ಚಿಕೊಂಡೇ ದಾಟಬೇಕು- ಪ್ರಯೋಜನಕ್ಕೆ ಬಾರದ ಬಸ್‌ ತಂಗುದಾಣ
Vijaya Karnataka Web BEL-22 ITAGI 4


ರುದ್ರೇಶ ಸಂಪಗಾವಿ ಇಟಗಿ


ಇಟಗಿ ಕ್ರಾಸ್‌ದಲ್ಲಿಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಇಟಗಿ-ಕಾದರವಳ್ಳಿ ಕಡೆಗಳಿಗೆ ಅವೈಜ್ಞಾನಿಕವಾಗಿ ನಿರ್ಮಿಸಿದ ಅಂಡರ್‌ಪಾಸ್‌(ನೆಲ ಮಾಳಿಗೆ)ನಲ್ಲಿ ಗಲಿಜು ತುಂಬಿದ್ದರಿಂದ ಪಾದಚಾರಿಗಳು ಮೂಗು ಮುಚ್ಚಿಕೊಂಡು ಹೋಗಬೇಕಾಗಿದೆ.

ಇಲ್ಲಿ ವಿದ್ಯುತ್‌ ಸೌಲಭ್ಯ ಕಲ್ಪಿಸಿಲ್ಲ. ಮೂತ್ರ ವಿಸರ್ಜನೆಯ ಗಬ್ಬು ವಾಸನೆ, ರಾತ್ರಿ ಸಮಯದಲ್ಲಿ ಕತ್ತಲಲ್ಲಿಯೇ ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದು ಸಾಗಬೇಕು. ಕುಡುಕ ಪುಂಡಪೋಕರಿಗಳ ಹಾವಳಿಯೂ ಇಲ್ಲಿರುವುದರಿಂದ ಪ್ರಯಾಣಿಕರಿಗೆ ಅಂಡರ್‌ಪಾಸ್‌ದೊಳಗೆ ಹೋಗಲು ತೊಂದರೆಯಾಗುತ್ತಿದೆ.

ಸಂಜೆ ಆಯಿತೆಂದರೆ ಸಾಕು ಅಂಡರ್‌ಪಾಸ್‌ದಲ್ಲಿ ಕುಡುಕರ ಹಾವಳಿ ಹೆಚ್ಚಾಗುತ್ತದೆ. ಒಬ್ಬಂಟಿ ಮಹಿಳೆಯರು ರಾತ್ರಿ ಸಮಯದಲ್ಲಿ ಅಂಡರ್‌ಪಾಸ್‌ದಲ್ಲಿ ಹೋಗಲು ಹೆದರುತ್ತಾರೆ. ಕುಡುಕರು ಕುಡಿದು ಅಲ್ಲಲ್ಲಿ ಬಿದ್ದು, ಅವಾಚ್ಯ ಶಬ್ದಗಳಿಂದ ಬೈಯುತ್ತಿರುತ್ತಾರೆ. ಅಂಡರ್‌ಪಾಸ್‌ ಅಲ್ಲಲ್ಲಿ ಮಳೆ ನೀರು ಸೋರುತ್ತಿದೆ. ನೀರು ಸರಾಗವಾಗಿ ಹೋಗದೆ ಅಲ್ಲೇ ಸಂಗ್ರಹವಾಗುವುದರಿಂದ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ.

ಯಾರಿಗೂ ಬೇಡವಾದ ತಂಗುದಾಣ:
ಇಟಗಿ, ಗಂದಿಗವಾಡ, ತೋಲಗಿ, ಬೀಡಿ, ಕರವಿನಕೊಪ್ಪ, ಚಿಕ್ಕಮುನವಳ್ಳಿ, ಹಿರೇಮುನವಳ್ಳಿ ಇನ್ನಿತರ ಗ್ರಾಮಗಳಿಗೆ ತೆರಳುವ ಪ್ರಯಾಣಿಕರಿಗೆ ಬಸ್‌ ಬರುವ ತನಕ ಅಂಗಡಿ ಮುಂಗಟ್ಟುಗಳೇ ತಂಗುದಾಣಗಳಾಗಿವೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಬಸ್‌, ಟೆಂಪೋ ನಿಲ್ಲುವ ಸ್ಥಳ ಬಿಟ್ಟು ದೂರದಲ್ಲಿ ತಂಗುದಾಣ ನಿರ್ಮಿಸಿದ್ದಾರೆ. ಇದು ಯಾರಿಗೂ ಉಪಯೋಗಕ್ಕೆ ಬಾರದಂತಾಗಿದೆ. ಇಲ್ಲಿ ಬಸ್‌ಗಳೂ ನಿಲ್ಲುವುದಿಲ್ಲ, ಹಾಗಾಗಿ ತಂಗುದಾಣ ಇದ್ದೂ ಇಲ್ಲದಂತಾಗಿದೆ.

ಅಂಡರ್‌ ಪಾಸ್‌ದಲ್ಲಿ ವಿದ್ಯುತ್‌ ಇಲ್ಲ. ಇಲ್ಲಿ ಸಂಗ್ರಹಗೊಂಡ ನೀರಿನಿಂದ ಗಲೀಜು ಆಗುತ್ತಿದೆ. ಈ ಬಗ್ಗೆ ಹಿರೇಬಾಗೇವಾಡಿ ಟೋಲ್‌ ನಾಕಾದ ಅಧಿಕಾರಿಗಳಿಗೆ ಮನವಿ ಅರ್ಪಿಸಲಾಗಿದೆ. ಆದರೂ ಪ್ರಯೋಜನವಾಗಿಲ್ಲ. ಟೂಲ್‌ ಫೀ ನೆಪದಲ್ಲಿ ಹೆಚ್ಚಿನ ಹಣ ಜನತೆಯಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಣ ಸುಲಿಯುತ್ತಿದ್ದರೂ ಇಲ್ಲಿ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ.
-ದೀಪಕ ಅಂಬಲಿ, ನ್ಯಾಯವಾದಿ.

ಅಂಡರ್‌ ಪಾಸ್‌ದಲ್ಲಿ ಕರೆಂಟ್‌ ಇಲ್ಲದ್ದರಿಂದ ಪ್ರಯಾಣಿಕರಿಗೆ ಸಂಚರಿಸಲು ತೊಂದರೆಯಾಗುತ್ತಿದೆ. ಈ ಬಗ್ಗೆ ಹಿರೇಬಾಗೇವಾಡಿ ಟೊಲ್‌ ನಾಕಾ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಅಂಡರ್‌ಪಾಸ್‌ನಲ್ಲಿ ವಿದ್ಯುತ್‌ ದೀಪದ ವ್ಯವಸ್ಥೆಯಾಗಬೇಕು. ಸಂಗ್ರಹಗೊಂಡ ನೀರು ಹೊರಹೋಗಬೇಕು. ಕುಡುಕರ ಹಾವಳಿ ತಪ್ಪಿಸಬೇಕು. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಪೊಲೀಸ್‌ ಇಲಾಖೆ ಹಾಗೂ ಸಂಬಂಧಪಟ್ಟವರು ತಕ್ಷ ಣ ಗಮನ ಹರಿಸುವ ಅಗತ್ಯವಿದೆ.
-ಮುದಕಪ್ಪ ಮರಡಿ ತಾಪಂ ಸದಸ್ಯ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ