ಆ್ಯಪ್ನಗರ

ಮೊದಲ ದಿನ 2 ನಾಮಪತ್ರ

ಬೆಳಗಾವಿ: ನಾಮಪತ್ರ ಸಲ್ಲಿಕೆಯ ಮೊದಲ ದಿನವಾದ ಗುರುವಾರ ...

Vijaya Karnataka 29 Mar 2019, 5:00 am
ಬೆಳಗಾವಿ : ನಾಮಪತ್ರ ಸಲ್ಲಿಕೆಯ ಮೊದಲ ದಿನವಾದ ಗುರುವಾರ ಜಿಲ್ಲೆಯ ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳಿಗೆ ತಲಾ ಒಂದು ನಾಮಪತ್ರ ಸಲ್ಲಿಕೆಯಾಗಿವೆ.
Vijaya Karnataka Web BEL-28 LBS 2


ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಹಾಲಿ ಸಂಸದ ಸುರೇಶ್‌ ಅಂಗಡಿ ನಾಮಪತ್ರ ಸಲ್ಲಿಸಿದರೆ, ಚಿಕ್ಕೋಡಿ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿ ಇಸ್ಮಾಯಿಲ್‌ ಗೌಸ್‌ಮೊಹಿದ್ದೀನ ಮಗದುಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.

ಗಣೇಶನಿಗೆ ಪೂಜೆ: ಬೆಳಗಾವಿ ನಗರದ ಚನ್ನಮ್ಮ ವೃತ್ತದಲ್ಲಿರುವ ಗಣೇಶ ಮಂದಿರದಲ್ಲಿ ಕುಟುಂಬ ಸಮೇತ ವಿಶೇಷ ಪೂಜೆ ಸಲ್ಲಿಸಿದ ಸಂಸದ ಸುರೇಶ್‌ ಅಂಗಡಿ ಬಳಿಕ ಬಿಜೆಪಿ ಮುಖಂಡರೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಬೆಳಗಾವಿ ಲೋಕಸಭೆ ಕ್ಷೇತ್ರಕ್ಕೆ ಉಮೇದುವಾರಿಕೆ ಸಲ್ಲಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಈ ಬಾರಿಯ ಲೋಕಸಭೆ ಚುನಾವಣೆ ಭಾರತವನ್ನು ಗೆಲ್ಲಿಸುವ ಚುನಾವಣೆ. ಹೀಗಾಗಿ ಪಕ್ಷಾತೀತವಾಗಿ ಎಲ್ಲ ರಾಜಕೀಯ ನಾಯಕರು, ಸಮಾಜದ ಮುಖಂಡರನ್ನು ಭೇಟಿ ಮಾಡಿ ಬೆಂಬಲಿಸುವಂತೆ ಮನವಿ ಮಾಡಿದ್ದೇನೆ'', ಎಂದು ಹೇಳುವ ಮೂಲಕ ಎಂಇಎಸ್‌ ಮುಖಂಡರು ಹಾಗೂ ಮಾಜಿ ಶಾಸಕ ಸಂಭಾಜಿ ಪಾಟೀಲ ಅವರ ಭೇಟಿಯನ್ನು ಸಮರ್ಥಿಸಿಕೊಂಡರು.

ಐತಿಹಾಸಿಕ ಗೆಲುವು: ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ, ''ಈಗಾಗಲೇ ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಸುರೇಶ್‌ ಅಂಗಡಿ ಅವರು ಈ ಬಾರಿ 3 ಲಕ್ಷಕ್ಕೂ ಅಧಿಕ ಮತಗಳಿಂದ ಐತಿಹಾಸಿಕ ಗೆಲುವು ದಾಖಲಿಸುವುದು ಖಚಿತ'', ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಾಜಿ ಶಾಸಕ ಸಂಜಯ ಪಾಟೀಲ, ''ನಮಗೆ ಮೋದಿ ಕ್ಯಾಪ್ಟನ್‌. ಕಾಂಗ್ರೆಸ್‌ನವರಿಗೆ ಕ್ಯಾಪ್ಟನ್‌ ಯಾರೆಂಬುದೇ ಸ್ಪಷ್ಟವಿಲ್ಲ'', ಎಂದು ಟೀಕಿಸಿದರು.

ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಶಾಸಕರಾದ ಅಭಯ ಪಾಟೀಲ, ಅನಿಲ್‌ ಬೆನಕೆ, ಆನಂದ ಮಾಮನಿ, ಮಹಾದೇವಪ್ಪ ಯಾದವಾಡ, ಮಾಜಿ ಶಾಸಕ ಡಾ. ವಿಶ್ವನಾಥ ಪಾಟೀಲ, ಮುಖಂಡರಾದ ಎಂ.ಬಿ. ಝಿರಲಿ, ಈರಣ್ಣ ಕಡಾಡಿ, ಕಿರಣ ಜಾಧವ, ರಾಜೇಂದ್ರ ಹರಕುಣಿ, ರಾಜು ಚಿಕ್ಕನಗೌಡ ಮತ್ತಿತರರು ಉಪಸ್ಥಿತರಿದ್ದರು.

ಏ.4ರಂದು ಪುನಃ ನಾಮಪತ್ರ :
ಸಂಸದ ಸುರೇಶ್‌ ಅಂಗಡಿ ಗುರುವಾರ ಎರಡು ಪ್ರತಿ ನಾಮಪತ್ರ ಸಲ್ಲಿಸಿದ್ದಾರೆ. ಇದಲ್ಲದೆ, ಅವರು ಏಪ್ರಿಲ್‌ 4ರಂದು ಬೃಹತ್‌ ಜಾಥಾ ಮೂಲಕ ಇನ್ನೊಮ್ಮೆ ನಾಮಪತ್ರ ಸಲ್ಲಿಸಲಿದ್ದಾರೆ. ಅಂದು ಬಿಜೆಪಿಯ ರಾಷ್ಟ್ರಮಟ್ಟದ ನಾಯಕರು ಸೇರಿದಂತೆ ಅಪಾರ ಕಾರ‍್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಐಟಿ ಅಧಿಕಾರಿಗಳು ಕೇಂದ್ರದ ಬಿಜೆಪಿ ನಾಯಕರ ಅಣತಿಯಂತೆ ಕೆಲಸ ಮಾಡುತ್ತಿದ್ದಾರೆ ಎನ್ನುವುದು ಜೆಡಿಎಸ್‌ ಹಾಗೂ ಕಾಂಗ್ರೆಸ್‌ ನಾಯಕರ ಭಾವನೆ. ಐಟಿ ಅಧಿಕಾರಿಗಳು ಸುಮ್ಮನೆ ದಾಳಿ ಮಾಡುವುದಿಲ್ಲ. ವರ್ಷದವರೆಗೆ ಅಧ್ಯಯನ ಮಾಡಿ ದಾಳಿ ಮಾಡುತ್ತಾರೆ. ಬಿಜೆಪಿ ಹಾಲಿ ಸಂಸದನ ಮನೆ ಮೇಲೂ ಐಟಿ ದಾಳಿ ನಡೆದಿದೆ.
- ಡಾ.ಪ್ರಭಾಕರ ಕೋರೆ, ರಾಜ್ಯಸಭೆ ಸದಸ್ಯ

ಹೈಕಮಾಂಡ್‌ ಹೇಳಿದಂತೆ ಕೇಳಿದ್ದೇನೆ :
''ನಾನು ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಟಿಕೆಟ್‌ ಕೇಳಿದ್ದೆ. ಆದರೆ, ಇನ್ನೂ ಒಂದು ವರ್ಷ ರಾಜ್ಯಸಭಾ ಸದಸ್ಯರಾಗಿ ಇರುವಂತೆ ಹೈಕಮಾಂಡ್‌ ತಿಳಿಸಿದೆ. ನಾನು ಪಕ್ಷದ ಶಿಸ್ತಿನ ಸಿಪಾಯಿ. ಹೀಗಾಗಿ ಹೈಕಮಾಂಡ್‌ ಹೇಳಿದಂತೆ ಕೇಳಿದ್ದೇನೆ. ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಮಾಜಿ ಸಂಸದ ರಮೇಶ ಕತ್ತಿ ಹಾಗೂ ಅಣ್ಣಾಸಾಹೇಬ ಜೊಲ್ಲೆ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್‌ ಸಿಗುವ ಸಾಧ್ಯತೆ ಇದೆ. ಪಕ್ಷ ಸೂಚಿಸಿದ ಅಭ್ಯರ್ಥಿಯ ಪರವಾಗಿ ಕೆಲಸ ಮಾಡುತ್ತೇನೆ'' ಎಂದು ಡಾ.ಪ್ರಭಾಕರ ಕೋರೆ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ