ಆ್ಯಪ್ನಗರ

ಕೊನೆಗೂ ವಿಚಾರಣೆಗೊಳಪಟ್ಟ ಆನಂದ್‌ ಅಪ್ಪುಗೋಳ

ಬೆಳಗಾವಿ: ಬಹುಕೋಟಿ ರೂ...

Vijaya Karnataka 20 Jan 2019, 5:00 am
ಬೆಳಗಾವಿ : ಬಹುಕೋಟಿ ರೂ. ಠೇವಣಿ ವಂಚನೆ ಪ್ರಕರಣದಲ್ಲಿ ಪೊಲೀಸ್‌ ಭದ್ರತೆ (ಎಸ್ಕಾರ್ಟ್‌) ಕೊರತೆ ಕಾರಣದಿಂದ ಹಲವು ಬಾರಿ ನ್ಯಾಯಾಲಯ ವಿಚಾರಣೆಯಿಂದ ಹೊರಗಿದ್ದ ಸಂಗೊಳ್ಳಿ ರಾಯಣ್ಣ ಕೋ ಆಪ್‌ ಸೊಸೈಟಿ ಚೇರ್ಮನ್‌ ಆನಂದ್‌ ಅಪ್ಪುಗೋಳ ಕೊನೆಗೂ ಶನಿವಾರ ವಿಚಾರಣೆಗೆ ಒಳಪಟ್ಟರು.
Vijaya Karnataka Web ultimately anand appugol faced inquiry in court
ಕೊನೆಗೂ ವಿಚಾರಣೆಗೊಳಪಟ್ಟ ಆನಂದ್‌ ಅಪ್ಪುಗೋಳ


ಜಿಲ್ಲಾ ಹೆಚ್ಚುವರಿ ಗ್ರಾಹಕರ ನ್ಯಾಯಾಲಯದ ಓಪನ್‌ ಕೋರ್ಟ್‌ನಲ್ಲಿ ನಡೆದ ವಿಚಾರಣೆಯಲ್ಲಿ ಪರ-ವಿರೋಧವಾಗಿ ಸುಧೀರ್ಘ ಅವಧಿಯವರೆಗೆ ಚರ್ಚೆ ನಡೆಯಿತು. ರಾಯಣ್ಣ ಸೊಸೈಟಿ ಅಧ್ಯಕ್ಷ ಆನಂದ್‌ ಅಪ್ಪುಗೋಳ, ಅಂಗ ಸಂಸ್ಥೆಯಾದ ಭೀಮಾಂಬಿಕಾ ಮಹಿಳಾ ಸೊಸೈಟಿ ಅಧ್ಯಕ್ಷೆ ಪ್ರೇಮಾ ಅಪ್ಪುಗೋಳ ಹಾಗೂ ಕಾರ್ಯದರ್ಶಿ ಶರಣಗೌಡ ಮರಿಬಸಪ್ಪ ವಿಚಾರಣೆಗೆ ಒಳಪಟ್ಟರು. ಈ ಸಂದರ್ಭದಲ್ಲಿ ನಡೆದ ವಿಚಾರಣೆಯಲ್ಲಿ ಠೇವಣಿ ಮರುಪಾವತಿ ವಿಷಯವಾಗಿ ನ್ಯಾಯಾಧೀಶರಾದ ಎಚ್‌.ಡಿ. ಏಕತಾ ಹಲವಾರು ಪ್ರಶ್ನೆ ಮಾಡಿದರು.

ನ್ಯಾಯಾಧೀಶರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಆನಂದ್‌ ಅಪ್ಪುಗೋಳ, ''ತನ್ನನ್ನು ಏಕಾಏಕಿ ಬಂಧಿಸಿ ಜೈಲಿನಲ್ಲಿಟ್ಟಿರುವುದರಿಂದ ಠೇವಣಿ ಮರುಪಾವತಿ ಮಾಡಲು ಆಗುತ್ತಿಲ್ಲ. ತನ್ನನ್ನು ಜಾಮೀನು ಮೇಲೆ ಹೊರಗೆ ಬಿಡಿ'', ಎಂದು ಮನವಿ ಮಾಡಿದರು. ಅಪ್ಪುಗೋಳ ಮನವಿಗೆ ವಿರೋಧ ವ್ಯಕ್ತಪಡಿಸಿದ ಠೇವಣಿ ವಂಚಿತ ಗ್ರಾಹಕರ ಪರ ವಕೀಲ ''ಎನ್‌.ಆರ್‌. ಲಾತೂರ, 2015ರ ಆಗಸ್ಟ್‌ನಲ್ಲಿ ಠೇವಣಿ ವಂಚನೆ ಪ್ರಕರಣ ದಾಖಲಾಗಿದೆ. ಅಪ್ಪುಗೋಳ ಬಂಧನಕ್ಕೆ ಒಳಗಾಗಿರುವುದು ಈಚೆಗೆ ಮೂರು ತಿಂಗಳ ಹಿಂದೆ. ಈವರೆಗೂ ಜೈಲಿನಿಂದ ಆಚೆಯೇ ಇದ್ದರೂ ಠೇವಣಿ ಮರುಪಾವತಿಸಿಲ್ಲ. ಇನ್ನು ಮುಂದೆ ಠೇವಣಿ ಮರುಪಾವತಿ ಮಾಡುತ್ತಾರೆ ಎನ್ನುವುದಕ್ಕೆ ಖಾತ್ರಿ ಇಲ್ಲವಾದ್ದರಿಂದ ಯಾವುದೇ ಕಾರಣಕ್ಕೂ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಬಾರದು'' ಎಂದು ಪ್ರತಿವಾದಿಸಿದರು.

ಜೈಲಿನಲ್ಲಿದ್ದರೂ ಹಕ್ಕು ಬಿಟ್ಟು ಪತ್ರ ನೀಡಿ ಇತರರ ಮೂಲಕ ಠೇವಣಿ ಮರುಪಾವತಿಗೆ ಅವಕಾಶವಿದೆ. ಅಗತ್ಯ ಬಿದ್ದರೆ ಹಕ್ಕು ಬಿಟ್ಟು ಪತ್ರದ ದುರ್ಬಳಕೆ ಆಗದಂತೆ ನೋಡಿಕೊಳ್ಳಲು ಸಮಿತಿ ರಚನೆಗೂ ಅವಕಾಶಗಳಿವೆ ಎಂದು ನ್ಯಾಯಾಲಯ ಅಪ್ಪುಗೋಳ ಅವರಿಗೆ ಸೂಚಿಸಿತು. ಫೆ.26 ರಂದು ನಡೆಯುವ ಮುಂದಿನ ವಿಚಾರಣೆ ಸಂದರ್ಭದಲ್ಲಿ ಅಪ್ಪುಗೋಳ ಅವರಿಗೆ ಸಂಬಂಧಿತ ಎಲ್ಲ ಆಸ್ತಿ ಮತ್ತು ಆಸ್ತಿ ಮೌಲ್ಯದ ಕುರಿತು ವರದಿ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿತು ಎಂದು ನ್ಯಾಯವಾದಿ ಎನ್‌.ಆರ್‌. ಲಾತೂರ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ