ಆ್ಯಪ್ನಗರ

2 ವರ್ಷದ ಬಳಿಕ ಯಮಕನಮರಡಿ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆ

ಯಮಕನಮರಡಿ: ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಪಿಡಿಒ ನಡುವಿನ ವೈಮನಸ್ಸಿನಿಂದ ಕಳೆದ 2 ವರ್ಷಗಳಿಂದ ನಡೆಯದ ಸ್ಥಳೀಯ 'ಗ್ರಾಮೀಣ ನೀರು ಮತ್ತು ನೈರ್ಮಲ್ಯ ಸಮಿತಿ' ...

Vijaya Karnataka 26 Jul 2019, 5:00 am
ಯಮಕನಮರಡಿ: ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಪಿಡಿಒ ನಡುವಿನ ವೈಮನಸ್ಸಿನಿಂದ ಕಳೆದ 2 ವರ್ಷಗಳಿಂದ ನಡೆಯದ ಸ್ಥಳೀಯ 'ಗ್ರಾಮೀಣ ನೀರು ಮತ್ತು ನೈರ್ಮಲ್ಯ ಸಮಿತಿ' ಸಭೆ ಗುರುವಾರ ಗ್ರಾಪಂ ಸಭಾಭವನದಲ್ಲಿ ಜರುಗಿತು.
Vijaya Karnataka Web BEL-25YMD1


ಸಭೆಯಲ್ಲಿ ಪಾಲ್ಗೊಂಡಿದ್ದ ಸಮಿತಿಯ ಎಲ್ಲ ಸದಸ್ಯರು, ''ಹಿಂದಿನ ಅವಧಿಯ ಪಿಡಿಒ ಜಯಮಾಲಾ ಅವರು 2 ವರ್ಷಗಳ ಕಾಲ ಸರ್ವಾಧಿಕಾರಿ ಧೋರಣೆಯಿಂದ ಆಡಳಿತ ನಡೆಸಿದ್ದಾರೆ'' ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು.

''ಜಯಮಾಲಾ ಅವರು ಸಮಿತಿ ಸಭೆ ಕರೆದು ಒಪ್ಪಿಗೆ ಪಡೆಯದೆ ಯಮಕನಮರಡಿ ವಿದ್ಯಾವರ್ಧಕ ಸಂಘದ ಶಾಲೆಯ ನಳದ ಸಂಪರ್ಕವನ್ನು ಸ್ಥಗಿತಗೊಳಿಸಿ, ಶಾಲೆಯಲ್ಲಿ ಕಲಿಯುತ್ತಿರುವ ಯಮಕನಮರಡಿ ಗ್ರಾಮದ ಸುಮಾರು 800 ಮಕ್ಕಳಿಗೆ ತೊಂದರೆ ನೀಡಿದ್ದಾರೆ. ಹೀಗಾಗಿ ಮೊದಲು ಈ ಶಾಲೆಯ ಮಕ್ಕಳಿಗೆ ನೀರು ಕೊಡಿ'' ಎಂದು ಸದಸ್ಯರೆಲ್ಲ ಒಕ್ಕೊರಲಿನಿಂದ ಆಗ್ರಹಿಸಿದರು.

ಸಮಿತಿ ಖಜಾಂಚಿ ರವೀಂದ್ರ ಹಂಜಿ ಮಾತನಾಡಿ, ''ಕಳೆದ 2 ವರ್ಷಗಳಿಂದ ಕಾನೂನುಗಳನ್ನು ಗಾಳಿಗೆ ತೂರಿ ಗ್ರಾಮದಲ್ಲಿ ಸ್ವ ಇಚ್ಛೆಯಿಂದ ಆಡಳಿತ ನಡೆಸಿದ ಹಿಂದಿನ ಪಿಡಿಒ ಜಯಮಾಲಾ ಅವರ ವಿರುದ್ಧ ಹುಕ್ಕೇರಿ ತಾಲೂಕಾಧಿಕಾರಿಗಳು ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಇದಕ್ಕೂ ತಮಗೂ ಸಂಬಂಧ ಇಲ್ಲ ಎನ್ನುವಂತೆ ವರ್ತಿಸಿರುವುದು ಖಂಡನೀಯ'' ಎಂದರು.

ಸದಸ್ಯರ ಮಾತುಗಳನ್ನು ಆಲಿಸಿ ಪ್ರತಿಕ್ರಿಯಿಸಿದ ಪಿಡಿಒ ಆನಂದ ಹೊಳೆನವರ ಮಾತನಾಡಿ, ''ಹಿಂದಿನ ಪಿಡಿಒ ಮಾಡಿರುವ ಕಾರ್ಯ ಕಾನೂನು ಬಾಹಿರವಾಗಿದೆ. ಯಮಕನಮರಡಿ ವಿದ್ಯಾವರ್ಧಕ ಸಂಘದ ನಳಕ್ಕೆ ನೀರು ಸ್ಥಗಿತಗೊಂಡಿರುವ ವಿಷಯ ನ್ಯಾಯಾಲಯ ಮೆಟ್ಟಿಲೇರಿದೆ. ಹೀಗಿರುವಾಗ ನಮ್ಮಿಂದ ಏನೂ ಮಾಡಲು ಬರುವುದಿಲ್ಲ'' ಎಂದು ಕೈ ಚೆಲ್ಲಿದರು.

''ಮೇದಾರ ಓಣಿಯ ನಳಗಳಿಗೆ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ. ಚರಂಡಿ ಸ್ವಚ್ಛತೆಯೂ ನಡೆಯುತ್ತಿಲ್ಲ. ಶೀಘ್ರ ಈ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗಬೇಕು'' ಎಂದು ವಾರ್ಡ್‌ನ ಸದಸ್ಯೆ ಮಮತಾಜ ಫಣಿಬಂದ ಆಗ್ರಹಿಸಿದರು.

ಚರಂಡಿ ಸ್ವಚ್ಛತೆಗೆ ಆದ್ಯತೆ :
ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಪಂ ಕಾರ್ಯದರ್ಶಿ ಹಣಮಂತ ಕೋಳಿ ಮಾತನಾಡಿ, ಇಂದು(ಗುರುವಾರ) ಸಂಜೆಯೊಳಗೆ 14ನೇ ಹಣಕಾಸಿನಲ್ಲಿ 38ಲಕ್ಷ ರೂ. ವೆಚ್ಚದಲ್ಲಿ ಗ್ರಾಮದಲ್ಲಿ ಚರಂಡಿ ಸ್ವಚ್ಛತೆಗೆ ಆದ್ಯತೆ ನೀಡಿಲಾಗುವುದು. ಕಾಲನಿಗಳಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಅವುಗಳಿಗೆ ಪೌಂಡರ್‌ ಅಥವಾ ಫಾಗಿಂಗ್‌ ಮಾಡಿಸಲಾಗುವುದು ಎಂದರು.

ಸಮಿತಿ ಅಧ್ಯಕ್ಷೆ ಜಯಶ್ರೀ ಕಾಪಸಿ ಸಭೆಯ ಅಧ್ಯಕ್ಷ ತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಅವ್ವಕ್ಕಾ ಮಾದರ, ಉಪಾಧ್ಯಕ್ಷ ಓಂಕಾರ ತುಬಚಿ, ಉದಯ ನಿರ್ಮಳ, ಸಿದ್ದಪ್ಪಾ ಯಾದವಾಡಿ, ಆನಂದ ಶಿಳ್ಳಿ, ರಾಜು ಮೇತ್ರಿ, ಸಂಜು ಹಟ್ಟಿ, ಸತೀಶ ಪಿಟಗಿ, ಲಕ್ಕವ್ವಾ ಬರಗಾಲಿ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ