ಆ್ಯಪ್ನಗರ

ಗ್ರಾಮೀಣ ಭಾಗದಲ್ಲಿ ನೀರು, ಮೇವು ಪೂರೈಕೆ ಅಸಮರ್ಪಕ

ಚಿಕ್ಕೋಡಿ: ಮಳೆಯಿಲ್ಲದೇ ಕುಡಿಯುವ ನೀರಿಗಾಗಿ ತತ್ತರಿಸುತ್ತಿರುವ ಗ್ರಾಮೀಣ ಪ್ರದೇಶದಲ್ಲಿ ...

Vijaya Karnataka 26 Jun 2019, 5:00 am
ಚಿಕ್ಕೋಡಿ : ಮಳೆಯಿಲ್ಲದೇ ಕುಡಿಯುವ ನೀರಿಗಾಗಿ ತತ್ತರಿಸುತ್ತಿರುವ ಗ್ರಾಮೀಣ ಪ್ರದೇಶದಲ್ಲಿ ತಾಲೂಕು ಆಡಳಿತ ಪೂರೈಕೆ ಮಾಡುತ್ತಿರುವ ನೀರು ಮತ್ತು ಮೇವು ಸಮರ್ಪಕವಾಗಿ ಜನರಿಗೆ ಲಭ್ಯವಾಗುತ್ತಿಲ್ಲ ಎಂದು ತಾಲೂಕು ಪಂಚಾಯಿತಿ ಸದಸ್ಯರು ಆರೋಪಿಸಿದರು.
Vijaya Karnataka Web BEL-25CKD2


ಇಲ್ಲಿನ ತಾಲೂಕು ಪಂಚಾಯಿತಿ ಸಭಾ ಭವನದಲ್ಲಿ ಮಂಗಳವಾರ ತಾಪಂ ಅಧ್ಯಕ್ಷೆ ಉರ್ಮಿಳಾ ಪಾಟೀಲ ಅಧ್ಯಕ್ಷ ತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಒಕ್ಕೊರಲಿನಿಂದ ಸಮಸ್ಯೆ ಬಿಂಬಿಸಿದರು.

ಬರಗಾಲ ಇರುವ ಗ್ರಾಮಗಳಲ್ಲಿ ನೀರು, ಮೇವು ಪೂರೈಸಲಾಗುತ್ತಿದೆ ಎಂದು ಅಧಿಕಾರಿಗಳು ಕೇವಲ ಕಾಗದ ಪತ್ರದಲ್ಲಿ ಮಾತ್ರ ಹೇಳುತ್ತಾರೆ. ಆದರೆ ವಾಸ್ತವದಲ್ಲಿ ಮಡ್ಡಿ ಪ್ರದೇಶದ ಜನರಿಗೆ ಸಮರ್ಪಕ ಮೇವು ಲಭ್ಯವಾಗುತ್ತಿಲ್ಲ ಎಂದು ವಡ್ರಾಳ ಮತ್ತು ಬಂಬಲವಾಡ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ತಹಸೀಲ್ದಾರ ಡಾ.ಸಂತೋಷ ಬಿರಾದಾರ ಮಾತನಾಡಿ, ಚಿಕ್ಕೋಡಿ ತಾಲೂಕಿನ ಬರಪೀಡಿತ ಬಹುತೇಕ ಗ್ರಾಮಗಳಿಗೆ ಬೇಡಿಕೆಗೆ ಅನುಗುಣವಾಗಿ ಟ್ಯಾಂಕರ್‌ ಮೂಲಕ ನೀರು ಕೊಡಲಾಗುತ್ತದೆ. ಬೆಳಕೂಡ ಕ್ರಾಸ್‌ ಬಳಿ ಮೇವು ಬ್ಯಾಂಕ್‌ ಸ್ಥಾಪಿಸಿ ಅನುಕೂಲ ಕಲ್ಪಿಸಿದೆ ಎಂದರು.

ಇದಕ್ಕೆ ಆಕ್ಷೇಪಿಸಿದ ವಡ್ರಾಳ ಭಾಗದ ಸದಸ್ಯ ರಾಜು ಪಾಟೀಲ, ಬೆಳಕೂಡ ಕ್ರಾಸ್‌ನಲ್ಲಿ ಮೇವು ಬ್ಯಾಂಕ್‌ ಸ್ಥಾಪಿಸಿದರೆ ಜೈನಾಪುರ, ವಡ್ರಾಳ, ಮುಗಳಿ, ಹತ್ತರವಾಟ ಮತ್ತು ಕರೋಶಿ ಗ್ರಾಮದ ಜನ ಹೇಗೆ ಮೇವು ತರಲು ಹೋಗಲು ಸಾಧ್ಯವೆಂದು ಪ್ರಶ್ನಿಸಿದರು. ಅನುಕೂಲವಾಗುವಂತೆ ಮೇವು ಬ್ಯಾಂಕ್‌ ಸ್ಥಾಪನೆಗೆ ಒತ್ತಾಯಿಸಿದರು.

ಬಂಬಲವಾಡ ಸದಸ್ಯ ಕಾಶಿನಾಥ ಕುರಣಿ ಮಾತನಾಡಿ, ಮಾರ್ಚ್‌ ತಿಂಗಳಿಂದ ತಾಲೂಕಾಡಳಿತ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡುತ್ತಿದೆ. ಟ್ಯಾಂಕರ್‌ ಆರಂಭವಾದಾಗಿನಿಂದ ಇಲ್ಲಿಯವರಿಗೆ ಜಿಪಿಎಸ್‌ ಅಳವಡಿಸದ ಮಾಲಿಕರು ಈಗ ಏಕೆ ಜಿಪಿಎಸ್‌ ಅಳವಡಿಸಿದ್ದಾರೆ. ಜಿಪಿಎಸ್‌ ಅಳವಡಿಸದೇ ನೀರು ಪೂರೈಕೆ ಮಾಡಿ ಸರಕಾರದ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬ ಸಂಶಯ ಮೂಡಿದ್ದು ತನಿಖೆಯಾಗಬೇಕೆಂದು ಆಗ್ರಹಿಸಿದರು.

ತಾಲೂಕಿನಲ್ಲಿ ನೆನೆಗುದಿಗೆ ಬಿದ್ದಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪ್ರಾರಂಭಿಸಬೇಕು ಎಂದು ತಾಪಂ ಸದಸ್ಯ ರವೀಂದ್ರ ಮಿರ್ಜೆ ಒತ್ತಾಯಿಸಿದರು. ಶೀಘ್ರ ದುರಸ್ತಿ ಕೈಗೊಳ್ಳುವುದಾಗಿ ಗ್ರಾಮೀಣ ಕುಡಿಯುವ ನೀರಿನ ಯೋಜನೆ ಕಾರ್ಯನಿರ್ವಾಹಕ ಅಭಿಯಂತರ ಎಸ್‌.ಬಿ.ಬಣಕಾರ ಹೇಳಿದರು.

ಉಪಾಧ್ಯಕ್ಷೆ ಮಹಾದೇವಿ ನಾಯಿಕ, ಸ್ಥಾಯಿ ಸಮಿತಿ ಅಧ್ಯಕ್ಷ ಶಂಕರಗೌಡ ಪಾಟೀಲ, ವೀರೇಂದ್ರ ಪಾಟೀಲ,ಅಚ್ಯುತ ಮಾನೆ, ಪ್ರಕಾಶ ರಾಚನ್ನವರ, ಪಾಂಡುರಂಗ ಕೋಳಿ, ಸುರೇಶ ನಸಲಾಪುರೆ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಲೂಕಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್‌. ಪಾಟೀಲ ಸ್ವಾಗತಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ