ಆ್ಯಪ್ನಗರ

ಸೌಹಾರ್ದಕ್ಕೆ ಧಕ್ಕೆ, ವಾಟ್ಸ್‌ ಆ್ಯಪ್‌ ಗುಂಪಿನ ಅಡ್ಮಿನ್‌ ಬಂಧನ

ಸಾಮಾಜಿಕ ಜಾಲತಾಣದ ಮೂಲಕ ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡಲು ಯತ್ನಿಸಿದ ಆರೋಪದ ಮೇಲೆ ವಾಟ್ಸ್‌ ಆ್ಯಪ್‌ ಗ್ರೂಪ್‌ ಅಡ್ಮಿನ್‌ ಒಬ್ಬರನ್ನು ಬೆಳಗಾವಿ ನಗರದ ಸೈಬರ್‌ ಎಕನಾಮಿಕ್‌ ಆ್ಯಂಡ್‌ ನಾಕೋಟಿಕ್‌ (ಸಿಇಎನ್‌) ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

Vijaya Karnataka 25 Aug 2018, 8:24 am
ಬೆಳಗಾವಿ: ಸಾಮಾಜಿಕ ಜಾಲತಾಣದ ಮೂಲಕ ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡಲು ಯತ್ನಿಸಿದ ಆರೋಪದ ಮೇಲೆ ವಾಟ್ಸ್‌ ಆ್ಯಪ್‌ ಗ್ರೂಪ್‌ ಅಡ್ಮಿನ್‌ ಒಬ್ಬರನ್ನು ಬೆಳಗಾವಿ ನಗರದ ಸೈಬರ್‌ ಎಕನಾಮಿಕ್‌ ಆ್ಯಂಡ್‌ ನಾಕೋಟಿಕ್‌ (ಸಿಇಎನ್‌) ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
Vijaya Karnataka Web BLG-2408-2-52-24MAHESH3


ಉದ್ಯಮಬಾಗ ಮಹಾವೀರ ನಗರದ ಅಕ್ಷಯ ರಾಜೇಂದ್ರ ಅಲಗೋಡಿಕರ (20) ಬಂಧಿತ.

'ಟಾಪ್‌ ಮ್ಯೂಸಿಕ್‌ ಓನ್ಲಿ' ಹೆಸರಿನಲ್ಲಿ ವಾಟ್ಸ್‌ ಆ್ಯಪ್‌ ಗ್ರೂಪ್‌ ರಚಿಸಿದ್ದ ಅಕ್ಷಯ ತನ್ನ ಸ್ನೇಹಿತರು ಸೇರಿದಂತೆ ವಿದೇಶಿಗರನ್ನೂ ಸದಸ್ಯರನ್ನಾಗಿ ಸೇರಿಸಿಕೊಂಡಿದ್ದ. ಆದರೆ, ಗ್ರೂಪ್‌ನಲ್ಲಿ ಮತೀಯ ಮತ್ತು ಕೋಮು ಭಾವನೆ ಕೆರಳಿಸುವ ರೀತಿಯಲ್ಲಿ ಸಂದೇಶಗಳು ರವಾನೆಯಾಗುತ್ತಿದ್ದವು. ದೇವರ ಚಿತ್ರಗಳಿಗೆ ಅಶ್ಲೀಲ ಚಿತ್ರಗಳನ್ನು ಕ್ಲೋನ್‌ ಮಾಡಿ ಹರಿಬಿಡುವುದು ಕಂಡು ಬಂದಿತ್ತು. ಸದಸ್ಯರು ಇಂಥವುಗಳನ್ನು ಇತರ ಗ್ರೂಪ್‌ಗಳಿಗೂ ರವಾನಿಸುತ್ತಿದ್ದರು. ಇವೆಲ್ಲ ಧಾರ್ಮಿಕ ಮತ್ತು ಸೌಹಾರ್ದತೆಗೆ ಧಕ್ಕೆ ತರುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಸಿಇಎನ್‌ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ್ದಾರೆ.

ಪಾಕಿಸ್ತಾನಿಯರಿದ್ದರು!

ಉದ್ಯಮಬಾಗದ ಕೈಗಾರಿಕಾ ಘಟಕದಲ್ಲಿ ಕೆಲಸ ಮಾಡುತ್ತಿರುವ ಅಕ್ಷಯ ತನ್ನ ಸ್ನೇಹಿತರ ಜತೆಗೆ +92 ಸಂಖ್ಯೆಯಿಂದ ಆರಂಭಗೊಳ್ಳುವ ಮೊಬೈಲ್‌ ನಂಬರ್‌ ಹೊಂದಿರುವ ಇಬ್ಬರು ಪಾಕಿಸ್ತಾನಿ ಪ್ರಜೆಗಳನ್ನೂ ಗ್ರೂಪಿಗೆ ಸೇರಿಸಿದ್ದ. ತಕ್ಷಣ ಈ ಇಬ್ಬರು ಗ್ರೂಪ್‌ನಿಂದ ಹೊರ ಹೋಗಿದ್ದರೂ ಅಕ್ಷಯ ಅವರನ್ನು ಮತ್ತೆ ಒತ್ತಾಯಪೂರ್ವಕ ಗ್ರೂಪ್‌ಗೆ ಸೇರಿಸಿದ್ದ. ಆ.5ರಂದು ಈ ಪಾಕಿಸ್ತಾನಿ ಪ್ರಜೆಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಗ್ರೂಪಿಗೆ ಸಂದೇಶ ಹಾಕಿದ್ದರು. ಈ ಸಂದೇಶಗಳು ಇತರ ಗ್ರೂಪ್‌ಗಳಿಗೂ ರವಾನೆಯಾಗಿ ವೈರಲ್‌ ಆಗುತ್ತಿರುವುದನ್ನು ಗಮನಿಸಿದ ಸಿಇಎನ್‌ ಪೊಲೀಸರು, ಗ್ರೂಪ್‌ ಕುರಿತು ಪೂರ್ಣ ಮಾಹಿತಿ ಕಲೆ ಹಾಕಿದ್ದಾರೆ. ನಂತರ ಕೋಮು ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಸಂದೇಶ ಹಾಕಿದ ಪಾಕಿಸ್ತಾನ ಮೂಲದ ವ್ಯಕ್ತಿಯನ್ನು ಮೊದಲ ಆರೋಪಿ ಹಾಗೂ ಗ್ರೂಪ್‌ ಅಡ್ಮಿನ್‌ ಅಕ್ಷಯ್‌ನನ್ನು ಎರಡನೇ ಆರೋಪಿಯನ್ನಾಗಿ ಪರಿಗಣಿಸಿ ಶುಕ್ರವಾರ ದೂರು ದಾಖಲಿಸಿಕೊಂಡಿದ್ದಾರೆ. ಅಲ್ಲದೆ, ಅಕ್ಷಯ್‌ನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.

ಇತರರಿಗೂ ಎಚ್ಚರಿಕೆ ಗಂಟೆ

ವಾಟ್ಸ್‌ ಆ್ಯಪ್‌ ಗ್ರೂಪ್‌ನಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದ ರೀತಿ ವರ್ತಿಸಿದ ಹಿನ್ನೆಲೆಯಲ್ಲಿ ದಾಖಲಾದ ಈ ಪ್ರಕರಣ ಬೆಳಗಾವಿ ಜಿಲ್ಲೆಯ ಮೊದಲ ಪ್ರಕರಣ ಎನಿಸಿಕೊಂಡಿದ್ದು, ಇನ್ನುಳಿದ ಗ್ರೂಪ್‌ ಮತ್ತು ಗ್ರೂಪ್‌ ಅಡ್ಮಿನ್‌ಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ. ಈ ಕುರಿತು ಎಚ್ಚರಿಕೆ ನೀಡಿರುವ ನಗರ ಪೊಲೀಸ್‌ ಆಯುಕ್ತ ಡಾ.ಡಿ.ಸಿ.ರಾಜಪ್ಪ, ''ಜ್ಞಾನಾರ್ಜನೆಗೆ ಸೋಷಿಯಲ್‌ ಮೀಡಿಯಾ ಅತ್ಯಂತ ಉಪಯುಕ್ತ ಮಾಧ್ಯಮ. ಅಲ್ಲದೆ, ಸಾಮಾಜಿಕ ಜಾಗೃತಿಗೂ ಹೆಚ್ಚು ಅನುಕೂಲ. ಆದರೆ, ಕಾನೂನು ಸುವ್ಯವಸ್ಥೆ ಕೆಡಿಸುವ ಸಾಧ್ಯತೆಗಳೂ ಇರುವ ಹಿನ್ನೆಲೆಯಲ್ಲಿ ಸೋಷಿಯಲ್‌ ಮೀಡಿಯಾಗೆ ಅದರದೇ ಆದ ಕಟ್ಟುಪಾಡುಗಳನ್ನು ಹಾಕಲಾಗಿದೆ. ಆದ್ದರಿಂದ, ವಾಟ್ಸ್‌ ಆ್ಯಪ್‌, ಫೇಸ್‌ಬುಕ್‌, ಟ್ವಿಟರ್‌ ಬಳಕೆದಾರರು ಕಾನೂನು ಚೌಕಟ್ಟಿನಡಿ ಕೆಲಸ ಮಾಡಬೇಕು. ವಿಶೇಷವಾಗಿ ಗ್ರೂಪ್‌ ಅಡ್ಮಿನ್‌ಗಳು ಗ್ರೂಪ್‌ ಮೇಲೆ ನಿಗಾ ಇಡಬೇಕು. ತಪ್ಪಿದರೆ ಪೊಲೀಸರು ಕ್ರಮ ಕೈಗೊಳ್ಳುವುದು ಖಚಿತ'', ಎಂದು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ