ಆ್ಯಪ್ನಗರ

ಕೊಲೆಯ ಹಿಂದೆ ಹರೆಯದ ಯುವಕರು!

ಬೆಳಗಾವಿ: ಮಾರಿಹಾಳ ಗ್ರಾಮದ ಹೊಲದಲ್ಲಿ ಎರಡು ದಿನಗಳ ಹಿಂದೆ ನಡೆದ ಜೋಡಿ ...

Vijaya Karnataka 23 Jan 2019, 5:00 am
ಬೆಳಗಾವಿ : ಮಾರಿಹಾಳ ಗ್ರಾಮದ ಹೊಲದಲ್ಲಿ ಎರಡು ದಿನಗಳ ಹಿಂದೆ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರಿಹಾಳ ಠಾಣೆ ಪೊಲೀಸರು ಮಂಗಳವಾರ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
Vijaya Karnataka Web BLG-2201-2-52-22PRAMOD2


ಜೋಡಿ ಕೊಲೆ ಪ್ರಕರಣದಲ್ಲಿ ಮಾರಿಹಾಳ ಗ್ರಾಮದ ಶಿವಾನಂದ ಕರವಿನಕೊಪ್ಪ (23), ಮಹೇಶ ನಗಾರಿ (20), ನಿಂಗಪ್ಪ ಬಳ್ಕೋಡಿ (27) ಬಂಧಿತ ಆರೋಪಿಗಳು. ಇದರೊಂದಿಗೆ ಕಳೆದ ಮೂರು ವಾರಗಳಲ್ಲಿ ನಗರದಲ್ಲಿ ನಡೆದ ನಾಲ್ಕು ಜನರ ಕೊಲೆ ಪ್ರಕರಣಗಳಲ್ಲಿ 23 ವರ್ಷಗಳ ಆಸು ಪಾಸಿನ ಯುವಕರೇ ಆರೋಪಿಗಳಾಗಿರುವುದು ಆತಂಕ ಸೃಷ್ಟಿಸಿದೆ.

ಮಾರಿಹಾಳ ಪ್ರಕರಣದಲ್ಲಿ ಕ್ಷುಲ್ಲಕ ಕಾರಣಕ್ಕೆ ಶತ್ರುವಿನ ಶತ್ರುಗಳೆಲ್ಲ ಒಂದಾಗಿ ಜೋಡಿ ಕೊಲೆ ನಡೆಸಿದ ಸಂಗತಿ ಪೊಲೀಸ್‌ ವಿಚಾರಣೆಯಿಂದ ಬೆಳಕಿಗೆ ಬಂದಿದೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಆಯುಧ ಮತ್ತು ಮೃತರ ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಾರಿಹಾಳ ಗ್ರಾಮದ ವಿಠ್ಠಲ ಮಲ್ಲಾರಿ ಎನ್ನುವವರ ಹೊಲದಲ್ಲಿ ಭಾನುವಾರ ರಾತ್ರಿ ಅದೇ ಗ್ರಾಮದ ಪತ್ರೆಪ್ಪ ಮಲ್ಲನ್ನವರ (40), ಬಸನಗೌಡ ಪಾಟೀಲ್‌ (24) ಎನ್ನುವವರ ಕತ್ತು ಸೀಳಿ, ಮುಖವನ್ನು ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಲಾಗಿತ್ತು. ಕೆಲ ಸಾಕ್ಷಿಗಳ ಸುಳಿವು ಆಧರಿಸಿ ತನಿಖೆ ನಡೆಸಿದ ಪೊಲೀಸರು ಮಂಗಳವಾರ ಬೆಳಗ್ಗೆ ಸುಳೇಬಾವಿ ರೈಲ್ವೆ ನಿಲ್ದಾಣದ ಬಳಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಹಿತ್ತಲ ಜಗಳಕ್ಕೆ ಜೀವ ಬಲಿ: ಸಿನಿಮೀಯ ರೀತಿಯಲ್ಲಿ ನಡೆದಿರುವ ಜೋಡಿ ಹತ್ಯೆಯ ಹಿಂದೆ ಹಿತ್ತಲ ವ್ಯಾಜ್ಯ ಮತ್ತು ಹಣದ ವ್ಯವಹಾರ ಇತ್ತು ಎಂದು ಹೇಳಲಾಗುತ್ತಿದೆ. ಬಸನಗೌಡ ಹಾಗೂ ಪಕ್ಕದ ಮನೆಯ ನಿಂಗಪ್ಪ ಮಧ್ಯೆ ಹಿತ್ತಲಿಗೆ ಸಂಬಂಧಿಸಿ ಜಗಳ ನಡೆದಿತ್ತು. ಆರೋಪಿ ಶಿವಾನಂದ ಜತೆಗೂ ಬೇರೊಂದು ಕಾರಣಕ್ಕೆ ವ್ಯಾಜ್ಯ ನಡೆದಿತ್ತು. ಇನ್ನೊಂದೆಡೆ ಪತ್ರೆಪ್ಪ ಮತ್ತು ಮಹೇಶ ನಡುವೆ ವೈಮನಸ್ಸು ಇತ್ತು. ಪತ್ರೆಪ್ಪ ಮತ್ತು ಬಸನಗೌಡ ಆತ್ಮೀಯರಾಗಿದ್ದು, ಭಾನುವಾರ ಹೊಲ ಊಳುವ ವೇಳೆ ಮೂವರು ಆರೋಪಿಗಳೊಂದಿಗೆ ಜಗಳ ನಡೆದಿದೆ. ಮದ್ಯ ಸೇವಿಸಿದ ಮತ್ತಿನಲ್ಲಿ ಇಬ್ಬರ ಕತ್ತು ಕೊಯ್ದು ಕೊಲೆ ಮಾಡಿದ್ದಾಗಿ ಆರೋಪಿಗಳು ಬಾಯಿಬಿಟ್ಟಿದ್ದಾರೆ ಎಂದು ಮಾರಿಹಾಳ ಠಾಣೆ ಇನ್‌ಸ್ಪೆಕ್ಟರ್‌ ವಿಜಯಕುಮಾರ ಸಿನ್ನೂರ ತಿಳಿಸಿದ್ದಾರೆ.

ದಾರಿ ತಪ್ಪಿದವರು...:
ಬೆಳಗಾವಿ ನಗರ ಪೊಲೀಸ್‌ ಆಯುಕ್ತರ ವ್ಯಾಪ್ತಿಯಲ್ಲಿ ಕಳೆದ ಮೂರು ವಾರಗಳಲ್ಲಿ ನಾಲ್ಕು ಜನರ ಕೊಲೆಯಾಗಿದ್ದು, ಎಲ್ಲ ಕೊಲೆ ಪ್ರಕರಣಗಳಲ್ಲಿ 23 ವರ್ಷಗಳ ಆಸುಪಾಸಿನ ಯುವಕರೇ ಆರೋಪಿಗಳಾಗಿದ್ದಾರೆ. ನಗರದ ಅಲಾರವಾಡ ಬಳಿ ಡಿ.30ರ ರಾತ್ರಿ ಹೊಸ ವರ್ಷದ ಪಾರ್ಟಿಗೆ ಹಣ ಇಲ್ಲ ಎಂದು ದಾರಿಹೋಕನನ್ನು ಹೊಲಕ್ಕೆ ಕರೆದುಕೊಂಡು ಹೋಗಿ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ 21, 23 ವರ್ಷದ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಮಾರನೇ ದಿನವೇ ಜ.1ರಂದು ಮಾರಿಹಾಳ ಠಾಣೆ ವ್ಯಾಪ್ತಿಯಲ್ಲಿ ಸುಳೇಬಾವಿ ಗ್ರಾಮದ ಯುವಕನನ್ನು ಕೊಲೆ ಮಾಡಲಾಗಿದೆ. ಈ ಪ್ರಕರಣದ ಏಳು ಆರೋಪಿಗಳ ಪೈಕಿ ಆರು ಜನರನ್ನು ಪೊಲೀಸರು ಬಂಧಿಸಿದ್ದು, ಅವರೆಲ್ಲರೂ 23ರಿಂದ 30 ವರ್ಷದೊಳಗಿನವರಿದ್ದಾರೆ. ಈ ಜೋಡಿ ಕೊಲೆಯಲ್ಲಿಯೂ 21, 23, 27 ವರ್ಷದವರೇ ಆರೋಪಿಗಳಾಗಿರುವುದು ಪೊಲೀಸರನ್ನೇ ಆತಂಕಕ್ಕೀಡು ಮಾಡಿದೆ.

ಗಾಂಜಾ, ಮದ್ಯದ ಅಮಲು! :
ಬೆಳಗಾವಿಯಲ್ಲಿ ಗಾಂಜಾ ಮತ್ತು ಮದ್ಯ ವ್ಯಸನ ಹೆಚ್ಚಾಗುತ್ತಿರುವುದು ಅಪರಾಧ ಕೃತ್ಯಗಳು ಹೆಚ್ಚಲು ಕಾರಣ ಎಂದು ಹೇಳಲಾಗುತ್ತಿದೆ. ಈವರೆಗೆ ನಡೆದ ಮೂರು ಕೊಲೆ ಪ್ರಕರಣಗಳಲ್ಲಿ ಆರೋಪಿಗಳು ನಶೆಯಲ್ಲಿಯೇ ಕೃತ್ಯ ನಡೆಸಿದ್ದು ಪೊಲೀಸ್‌ ತನಿಖೆಯಲ್ಲಿ ಪತ್ತೆಯಾಗಿದೆ. ಆದರೆ, ಅದು ಗಾಂಜಾ ನಶೆ ಎಂದು ಒಪ್ಪಿಕೊಳ್ಳಲು ಪೊಲೀಸರು ತಯಾರಿಲ್ಲ. ಕೆಲ ದಿನಗಳ ಹಿಂದೆಯಷ್ಟೇ ಮಾರ್ಕೆಟ್‌ ಠಾಣೆ ಪೊಲೀಸರು ನಗರದಲ್ಲಿ ಗಾಂಜಾ ಮಾರಾಟ ನಡೆಸುತ್ತಿದ್ದ ಒಬ್ಬ ಯುವತಿ ಸೇರಿ ಮೂವರು ಯುವಕರನ್ನು ಬಂಧಿಸಿದ್ದಾರೆ. ಕಳೆದ ವರ್ಷ ಯುವಕರ ದಂಡು ಗಾಂಜಾ ಖರೀದಿಸಲು ಹಣಕ್ಕಾಗಿ ನಗರದಲ್ಲಿ ಸ್ಕೂಟಿ ಸವಾರನೊಬ್ಬನನ್ನು ಥಳಿಸಿ ಹಣ ದೋಚಿತ್ತು.

ಕೊಲೆ ಪ್ರಕರಣದಲ್ಲಿ 23ರಿಂದ 30 ವರ್ಷದೊಗಳಗಿನ ಯುವಕರೇ ಆರೋಪಿಗಳಾಗಿರುವುದು ಆಶ್ಚರ್ಯ ಉಂಟುಮಾಡಿದೆ. ಕತ್ತು ಸೀಳುವಂತ ಕೃತ್ಯಕ್ಕೆ ಯುವಕರು ಇಳಿಯುತ್ತಾರೆ ಎನ್ನುವುದೇ ಭಯಂಕರ.ಮದ್ಯದ ಅಮಲಿನಲ್ಲಿ ಇಂಥ ಕೃತ್ಯಗಳು ನಡೆದಿರುವಂತಿದೆ.
- ವಿಜಯಕುಮಾರ ಸಿನ್ನೂರ, ಇನ್‌ಸ್ಪೆಕ್ಟರ್‌, ಮಾರಿಹಾಳ ಠಾಣೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ