ಆ್ಯಪ್ನಗರ

ಕನ್ನಡ ಭಾಷೆಗೆ ಎಂದಿಗೂ ಸಾವಿಲ್ಲ: ಪಾಪು

ಕನ್ನಡ ಭಾಷೆ ಅಳಿದುಹೋಗುವ ಭಾಷೆಯಲ್ಲ, ಅದಕ್ಕೆ ಎಂದೂ ಸಾವಿಲ್ಲ ಎಂದು ನಾಡೋಜ ಪಾಟೀಲ್ ಪುಟ್ಟಪ್ಪ ಹೇಳಿದರು.

ವಿಕ ಸುದ್ದಿಲೋಕ 30 Nov 2016, 8:19 am
ಹೊಸಪೇಟೆ: ಕನ್ನಡ ಭಾಷೆ ಅಳಿದುಹೋಗುವ ಭಾಷೆಯಲ್ಲ, ಅದಕ್ಕೆ ಎಂದೂ ಸಾವಿಲ್ಲ ಎಂದು ನಾಡೋಜ ಪಾಟೀಲ್ ಪುಟ್ಟಪ್ಪ ಹೇಳಿದರು.
Vijaya Karnataka Web
ಕನ್ನಡ ಭಾಷೆಗೆ ಎಂದಿಗೂ ಸಾವಿಲ್ಲ: ಪಾಪು


ಹಂಪಿ ಕನ್ನಡ ವಿಶ್ವವಿದ್ಯಾಲಯ ಮಂಟಪ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ‘ಬೆಳ್ಳಿಹಬ್ಬ: ಚಿಂತನ ಮಂಥನ’ ಕಾರ್ಯಕ್ರಮಕ್ಕೆ ಚಾಲನೆನೀಡಿ ಮಾತನಾಡಿದ ಅವರು, ‘‘ಪ್ರಪಂಚದಲ್ಲಿ ಸದ್ಯ ನಾಲ್ಕು ಸಾವಿರ ಭಾಷೆಗಳು ಉಳಿದಿವೆ. ತೆಲುಗು, ತಮಿಳು, ಮಲೆಯಾಳಂ ಭಾಷೆಗಳು ಸುತ್ತುವರಿದರೂ ಕನ್ನಡ ಭಾಷೆ ಸಾಯುವುದಿಲ್ಲ ಎಂಬುದು ಭಾಷಾ ಶಾಸ್ತ್ರಜ್ಞರ ಅಭಿಪ್ರಾಯವಾಗಿದೆ. ಕರ್ನಾಟಕದಲ್ಲಿರುವ ಬೇರೆ ಬೇರೆ ವಿಶ್ವವಿದ್ಯಾಲಯಗಳು ದಯನೀಯ ಸ್ಥಿತಿಗೆ ಬಂದರೂ ಕನ್ನಡ ವಿವಿ ಅಂತಹ ಸ್ಥಿತಿಗೆ ಹೋಗುವುದಿಲ್ಲ’’ ಎಂದರು.

ತಿಳಿವಳಿಕೆಯ ಮೂಲ: ಕನ್ನಡ ವಿವಿ ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ರಹಮತ್ ತರೀಕೆರೆ ಮಾತನಾಡಿ, ‘‘ಕನ್ನಡ ಬರೀ ಭಾಷೆಯಲ್ಲ. ಇದೊಂದು ಸಂಸ್ಕೃತಿ. ಕನ್ನಡ ವಿವಿ ಹುಟ್ಟುವ ಕಾಲಕ್ಕೆ ಇಂಗ್ಲಿಷ್ ಭಾಷೆಯನ್ನು ಮಾರುಕಟ್ಟೆಯ ಭಾಷೆಯನ್ನಾಗಿ ನಾವು ಸ್ವೀಕರಿಸಿದ್ದೆವು. ಜಾಗತೀಕರಣದ ಒಟ್ಟೊಟ್ಟಿಗೆ ವಿವಿ ಸೆಣಸಾಡುತ್ತ ಕಳೆದ 24 ವರ್ಷಗಳಿಂದ ಕಾರ್ಯನಿರ್ವಹಿಸುತ್ತ ಬಂದಿದೆ. ದೇವದಾಸಿ, ಅಲೆಮಾರಿ, ದಲಿತರು, ಶೋಷಿತರ ಕುರಿತು ವಿವಿ ಸಂಶೋಧನೆ ಕೈಗೊಂಡಿದೆ. ಜನರ ಬಳಿ ಇರುವ ದೇಶೀ ಜ್ಞಾನ ಸಂಗ್ರಹಿಸಲಾಗುತ್ತಿದೆ. ಜನರನ್ನು ಬೇರೆ ವಿವಿಗಳು ಮಾಹಿತಿಯ ಮೂಲ ಎಂದು ಭಾವಿಸಿದರೆ, ಕನ್ನಡ ವಿವಿ ತಿಳಿವಳಿಕೆಯ ಮೂಲ ಎಂದು ಪರಿಭಾವಿಸಿದೆ’’ ಎಂದರು.

ಈ ಸಂದರ್ಭದಲ್ಲಿ ಕುಲಪತಿ ಡಾ.ಮಲ್ಲಿಕಾ ಎಸ್.ಘಂಟಿ, ಕುಲಸಚಿವ ಡಾ.ಡಿ.ಪಾಂಡುರಂಗಬಾಬು, ಡಾ.ಕಮಲಾ ಹಂಪನಾ, ಡಾ.ಹಂಪ ನಾಗರಾಜಯ್ಯ, ಡಾ.ಎ.ಮುರಿಗೆಪ್ಪ, ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ, ಡಾ.ಹಿ.ಚಿ.ಬೋರಲಿಂಗಯ್ಯ, ಡಾ.ತಾಳ್ತಜೆ ವಸಂತಕುಮಾರ, ಡಾ.ಕಾಳೇಗೌಡ ನಾಗವಾರ, ಡಾ.ಗಿರಡ್ಡಿ ಗೋವಿಂದರಾಜ್, ಇಮ್ರಾಪುರ, ಸನತ್ ಕುಮಾರ ಬೆಳಗಲಿ, ಪತ್ತಾರ್ ಇತರರಿದ್ದರು. ನಂತರ ಕನ್ನಡ ವಿವಿ ಇದುವರೆಗಿನ ನಡೆ ಮತ್ತು ಮುಂದಿನ ನಡೆ ಕುರಿತು ಪರಾಮರ್ಶೆ ಮತ್ತು ಚರ್ಚೆ ಜರುಗಿತು. ಡಾ.ಬಾನಂದೂರು ಕೆಂಪಯ್ಯ, ಜನಾರ್ದನ ಹಾಗೂ ಡಾ.ಹನುಮಣ್ಣನಾಯಕ ದೊರೆ ಅವರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ