ಆ್ಯಪ್ನಗರ

ಮಲ್ಲಿಗೆ ನಾಡಿನಲ್ಲಿ ಹೊಸಭಾಷ್ಯ ಬರೆದ ಕೈ

ಸತತ 2ನೇ ಬಾರಿಗೆ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್‌ನ ಪಿ.ಟಿ. ಪರಮೇಶ್ವರನಾಯ್ಕ ಮಲ್ಲಿಗೆ ನಾಡಿನ ರಾಜಕೀಯ ಇತಿಹಾಸದಲ್ಲಿ ಹೊಸ ಭಾಷ್ಯವನ್ನು ಬರೆದಿದ್ದಾರೆ.

Vijaya Karnataka 16 May 2018, 5:00 am
ಪಿ.ವೀರಣ್ಣ ಹೂವಿನಹಡಗಲಿ
Vijaya Karnataka Web
ಮಲ್ಲಿಗೆ ನಾಡಿನಲ್ಲಿ ಹೊಸಭಾಷ್ಯ ಬರೆದ ಕೈ


ಸತತ 2ನೇ ಬಾರಿಗೆ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್‌ನ ಪಿ.ಟಿ. ಪರಮೇಶ್ವರನಾಯ್ಕ ಮಲ್ಲಿಗೆ ನಾಡಿನ ರಾಜಕೀಯ ಇತಿಹಾಸದಲ್ಲಿ ಹೊಸ ಭಾಷ್ಯವನ್ನು ಬರೆದಿದ್ದಾರೆ.

ಕ್ಷೇತ್ರದಲ್ಲಿ ಎಲ್ಲರ ಲೆಕ್ಕಾಚಾರವನ್ನು ಬುಡಮೇಲು ಮಾಡಿದ ಪ್ರಜ್ಞಾವಂತ ಮತದಾರ, ಈ ಬಾರಿ ಉಲ್ಟಾ ಹೊಡೆದಿದ್ದಾನೆ. ಈ ವರೆಗೆ ಇಲ್ಲಿ ಗೆದ್ದವರದ್ದೇ ಸರಕಾರ ಎಂಬ ಸಂಪ್ರದಾಯಕ್ಕೆ ಇತಿ ಶ್ರೀ ಹಾಡಿ, ಸಂಪೂರ್ಣವಾಗಿ ಅಭಿವೃದ್ಧಿಯನ್ನು ಬೆಂಬಲಿಸಿದ್ದಾನೆ. ರಾಜ್ಯದಲ್ಲಿ ಎಲ್ಲೆಡೆ ಆಡಳಿತ ವಿರೋಧಿ ಅಲೆಯಿದ್ದರೂ ಕ್ಷೇತ್ರದಲ್ಲಿ ಮಾತ್ರ ಇಂತಹ ಯಾವುದೇ ವಿರೋಧ ವ್ಯಕ್ತವಾಗದೆ, ಸಾಮಾನ್ಯರ ನಿರೀಕ್ಷೆ ಸಾಬೀತಾಗಿದೆ.

ಹೊಸ ಇತಿಹಾಸ: ಕ್ಷೇತ್ರದ ರಾಜಕೀಯ ಇತಿಹಾಸದಲ್ಲಿ ಪಕ್ಷೇತರ ಅಭ್ಯರ್ಥಿ ಯಶ ಕಂಡಿರುವ ನಿದರ್ಶನವಿಲ್ಲ ಎಂಬುದು ಮತದಾರನ ಪ್ರಬುದ್ಧತೆಯಿಂದ ಸ್ಪಷ್ಟವಾಗಿದೆ. ಜತೆಗೆ ರಾಕಾರಣಿಗಳು ಯಾವುದೇ ಒಂದು ಜಾತಿಯಿಂದ ರಾಜಕಾರಣ ಮಾಡುವುದು ಅಸಾಧ್ಯ ಎಂಬುದನ್ನು ಈ ಚುನಾವಣೆಯಲ್ಲಿ ಮತದಾರ ತಕ್ಕ ಪಾಠ ಕಲಿಸಿದ್ದಾನೆ.

ಗೆಲುವಿನ ಅಂತರ: ಕಳೆದ ಬಾರಿಗಿಂತ ಈ ಬಾರಿಯ ಗೆಲುವಿನ ಅಂತರ ಒಂದಷ್ಟು ಕಡಿಮೆಯಾಗಿರುವುದನ್ನು ಹೊರತುಪಡಿಸಿದರೆ ಎಲ್ಲೆಡೆ ಕಾಂಗ್ರೆಸ್‌ ಅಲೆಯಿರುವುದನ್ನು ಸ್ಪಷ್ಟಪಡಿಸಿದೆ. ಪ್ರಸ್ತುತ ಚುನಾವಣೆಯಲ್ಲಿ ಪರಮೆಶ್ವರನಾಯ್ಕ 53,656ಮತಗಳನ್ನು ಪಡೆದರೆ, ಇವರ ಸಮೀಪದ ಪ್ರತಿಸ್ಪರ್ಧಿ ಪಕ್ಷೇತರ ಅಭ್ಯರ್ಥಿ ಓದೋ ಗಂಗಪ್ಪ 44,448ಮತಗಳನ್ನು ಪಡೆದಿದ್ದಾರೆ. ಬಿಜೆಪಿ ಅಭ್ಯರ್ಥಿ ಚಂದ್ರನಾಯ್ಕ 28035, ಜೆಡಿಎಸ್‌ನ ಪುತ್ರೇಶ 8307ಮತಗಳನ್ನು ಪಡೆದಿದ್ದಾರೆ. ಒಟ್ಟಾರೆಯಾಗಿ ಈ ಬಾರಿಯೂ ಪರಮೇಶ್ವರನಾಯ್ಕ ಕ್ಷೇತ್ರದಲ್ಲಿ ಮತ್ತೊಮ್ಮೆ ತಮ್ಮ ಪಾರುಪತ್ಯೆ ಮೆರೆದಿರುವುದಂತೂ ದಿಟವಾಗಿದೆ.

ನಾಮಪತ್ರ ಸಲ್ಲಿಕೆ ವೇಳೆಯಲ್ಲಿ ತ್ರಿಕೋನ ಸ್ಪರ್ಧೆಯಿದ್ದು, ಬಳಿಕ ಹಂತಹಂತವಾಗಿ ಕಾಂಗ್ರೆಸ್‌ ಮತ್ತು ಪಕ್ಷೇತರ ಅಭ್ಯರ್ಥಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಕೊನೆ ಗಳಿಗೆವರೆಗೂ ಇದೇ ಸೆಣಸಾಟ ನಡೆದಿತ್ತು. ಯಾರ ಗೆಲುವಿಗೆ ಯಾರು ಅಡ್ಡಗಾಲು ಎಂಬುದೇ ಪ್ರಶ್ನೆಯಾಗಿತ್ತು. ಒಂದೆಡೆ ಕಾಂಗ್ರೆಸ್‌ ಗೆಲುವಿನಲ್ಲಿ ಜೆಡಿಎಸ್‌ ಅಡ್ಡಗಾಲು ಎನ್ನುತ್ತಿದ್ದರೆ, ಮತ್ತೊಂದೆಡೆ ಬಿಜೆಪಿ ಗೆಲುವಿನಲ್ಲಿ ಪಕ್ಷೇತರ ಅಭ್ಯರ್ಥಿ ಅಡ್ಡಿ ಎಂದು ವಿಶ್ಲೇಷಿಸಲಾಗಿತ್ತು. ಆದರೆ ಅಂತಿಮವಾಗಿ ಬಿಜೆಪಿ ಗೆಲುವಿಗೆ ಪಕ್ಷೇತರ ಅಡ್ಡಗಾಲು ಎಂದು ಸಾಬೀತಾದರೆ, ಪಿ.ಟಿ.ಪರಮೇಶ್ವರನಾಯ್ಕರ ಗೆಲುವಿಗೆ ಯಾರೂ ಅಡ್ಡಿಯಾಗಲಿಲ್ಲ ಎಂಬುದನ್ನು ಮತದಾರ ಸ್ಪಷ್ಟಪಡಿಸಿದ್ದಾನೆ.

ತಲೆಕೆಳಗಾದ ಲೆಕ್ಕಾಚಾರ: ಕ್ಷೇತ್ರದಲ್ಲಿ ಪ್ರತಿ ಸಲದಂತೆ ಈ ಬಾರಿ ಮತದಾರ ಬದಲಾವಣೆ ಬಯಸಿರುವುದಾಗಿ ವಿಶ್ಲೇಷಿಸಲಾಗಿತ್ತು. ಆದರೆ ರಾಜಕೀಯ ತಜ್ಞರ ಎಲ್ಲ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿದ ಮತದಾರ ಮತ್ತೊಮ್ಮೆ ಪರಮೇಶ್ವರನಾಯ್ಕರ ಕೈ ಹಿಡಿದಿದ್ದಾನೆ.

ಅತಂತ್ರ: ಕ್ಷೇತ್ರದ ಈವರೆಗಿನ ಸಂಪ್ರದಾಯ ಮುಂದುವರಿಯಲು ಇನ್ನೂ ಕಾಲ ಮಿಂಚಿಲ್ಲ. ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿಯಲು ಇನ್ನು ಸ್ಪಷ್ಟ ಚಿತ್ರಣ ಸಿಗದೆ ಅತಂತ್ರ ಸ್ಥಿತಿಯಲ್ಲಿದೆ. ಒಂದು ವೇಳೆ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬಂದರೆ, ಇಲ್ಲಿ ಗೆದ್ದವರದ್ದೇ ಸರಕಾರ ಎಂಬ ಸಂಪ್ರದಾಯಕ್ಕೆ ಮತದಾರ ಮಣೆ ಹಾಕಿರುವುದು ಸ್ಪಷ್ಟವಾಗುತ್ತಿದೆ.

ಸ್ವಯಂಕೃತ ಅಪರಾಧ: ಅತ್ತ ಬಿಜೆಪಿ ಸೋಲಿಗೆ ಪಕ್ಷ ದ ರಾಜ್ಯ, ಜಿಲ್ಲಾ ನಾಯಕರ ಸ್ವಯಂ ಕೃತಾಪರಾಧವೇ ಕಾರಣ ಎಂದು ಬಣ್ಣಿಸಲಾಗುತ್ತಿದೆ. ಮುಖಂಡರು ಪಕ್ಷೇತರ ಅಭ್ಯರ್ಥಿಯನ್ನು ಕನಿಷ್ಠ ಮನವೊಲಿಸುವುದಿರಲಿ, ಸೌಜನ್ಯಕ್ಕೂ ಅವರನ್ನು ಕಣದಿಂದ ಹಿಂದೆ ಸರಿಯುವಂತೆ ಯಾವೊಬ್ಬ ಮುಖಂಡರೂ ಯತ್ನಿಸಲಿಲ್ಲ ಎಂಬ ಆರೋಪ ಕೇಳುತ್ತಿದೆ. ಜತೆಗೆ ಕೆಲ ಮುಖಂಡರಂತೂ ಪರೋಕ್ಷ ವಾಗಿ ಪಕ್ಷೇತರ ಅಭ್ಯರ್ಥಿಯನ್ನೇ ಬೆಂಬಲಿಸಿದ್ದಾರೆನ್ನಲಾಗಿದೆ. ಹಾಗಾಗಿ ಬಿಜೆಪಿ ಹೀನಾಯ ಸೋಲಿನಲ್ಲಿ ಪಕ್ಷ ದ ಮುಖಂಡರೇ ಪ್ರಮುಖ ಪಾತ್ರ ವಹಿಸಿದ್ದಾರೆಂಬ ದೂರುಗಳು ಕೇಳುತ್ತಿವೆ.

ಇದೇ ಮೊದಲ ಬಾರಿಗೆ ರಾಜಕೀಯ ಅಖಾಡಕ್ಕಿಳಿದಿರುವ ಪಕ್ಷೇತರ ಅಭ್ಯರ್ಥಿ ಓದೋ ಗಂಗಪ್ಪ, 2ನೇ ಸ್ಥಾನದಲ್ಲಿರುವುದು ದೊಡ್ಡ ಸಾಧನೆಯೇ. ಕೇವಲ ಸರಕಾರಿ ನೌಕರಿಯಲ್ಲಿದ್ದು, ಕರ್ತವ್ಯ ನಿರ್ವಹಿಸಾದಕ್ಷ ಣ ರಾಜಕೀಯದಲ್ಲಿ ಸಾಧನೆ ತೋರಿಸುವುದು ಕಷ್ಟದಾಯಕ. ಆದರೂ ಮತಬೇಟೆಯಲ್ಲಿ ಆಡಳಿತ ಪಕ್ಷ ದ ಶಾಸಕರನ್ನು ಬೆಂಬತ್ತಿಕೊಂಡು ಹೋಗಿ ಗೆಲುವಿನ ಹತ್ತಿರ ಮುಗ್ಗರಿಸಿದ್ದರೂ ಅದು ಭವಿಷ್ಯದ ಗೆಲುವಿಗೆ ರಹದಾರಿಯೇ ಎಂದು ಬಣ್ಣಿಸಲಾಗುತ್ತಿದೆ. ಇತ್ತ ಕಾಂಗ್ರೆಸ್‌ ಅಭ್ಯರ್ಥಿ ಪರಮೇಶ್ವರನಾಯ್ಕ ಗೆಲುವಿಗೆ ಅಗತ್ಯವಿದ್ದ ಎಲ್ಲ ರಾಜಕೀಯ ತಂತ್ರಗಾರಿಕೆ ಮೆರೆದಿದ್ದರು. ಜಾತಿ ಸಮೀಕರಣದ ಲೆಕ್ಕಾಚಾರದ ಮೇಲೆಯೇ ಕಣ್ಣಿಟ್ಟಿದ್ದ ಅವರು, ಅದರಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿದ್ದಾರೆ ಎನ್ನಬಹುದು.

ಸಾಂಘಿಕ ಶಕ್ತಿ: ಕಾಂಗ್ರೆಸ್‌ ಗೆಲುವಿಗೆ ಸಾಂಘಿಕ ಶಕ್ತಿ ಪ್ರಮುಖ ಪಾತ್ರ ವಹಿಸಿದೆ. ಚುನಾವಣೆ ಘೋಷಣೆಯಾದ ಕೂಡಲೇ ಮುಖಂಡರ ಪಕ್ಷಾಂತರ ಪರ್ವ ಸಾಮಾನ್ಯ. ಹಲವು ಹತ್ತು ಮುಖಂಡರು ಪಕ್ಷ ತೊರೆದರೂ ಶಾಸಕ ಪರಮೇಶ್ವರನಾಯ್ಕ ಇರುವ ನಾಯಕರನ್ನೇ ಮುಂದಿಟ್ಟುಕೊಂಡು ಕ್ಷೇತ್ರಾದ್ಯಂತ ಹೋರಾಟ ಮಾಡಿ ಗೆಲುವು ಸಾಧಿಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಕೊನೆಗೂ ಮಲ್ಲಿಗೆ ನಾಡಿನ ಮತದಾರ ನೇತಾರನ ಕೈ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾನೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ