Please enable javascript.ಎಇಇ ಬದಲು ಸಿಕ್ಕ ಜೆಇಗೆ ತರಾಟೆ - ಎಇಇ ಬದಲು ಸಿಕ್ಕ ಜೆಇಗೆ ತರಾಟೆ - Vijay Karnataka

ಎಇಇ ಬದಲು ಸಿಕ್ಕ ಜೆಇಗೆ ತರಾಟೆ

ವಿಕ ಸುದ್ದಿಲೋಕ 8 Jul 2015, 3:31 am
Subscribe

ನಂ.3 ಎಚ್‌ಎಲ್‌ಸಿ ಕಾಲುವೆ ವಿಭಾಗದ ಜೆಇ ಕಾರ್ಯವೈಖರಿಗೆ ಆಕ್ರೋಶ, ನೋಡಲ್ ಅಧಿಕಾರಿಯಿಂದಲೂ ಬೇಸರ. ಹಲವರಿಂದ ದೂರಿನ ಸುರಿಮಳೆ.

ಎಇಇ ಬದಲು ಸಿಕ್ಕ ಜೆಇಗೆ ತರಾಟೆ
ಬಳ್ಳಾರಿ; ನಂ.3 ಎಚ್‌ಎಲ್‌ಸಿ ಕಾಲುವೆ ವಿಭಾಗದ ಜೆಇ ಕಾರ್ಯವೈಖರಿಗೆ ಆಕ್ರೋಶ, ನೋಡಲ್ ಅಧಿಕಾರಿಯಿಂದಲೂ ಬೇಸರ. ಹಲವರಿಂದ ದೂರಿನ ಸುರಿಮಳೆ.

ಇದು ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಮುಖ್ಯಾಂಶಗಳಿವು.

ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಬಸವರಾಜ್ ಮಾತನಾಡಿ, ಇನ್ನೂ ನಾಲ್ಕೈದು ದಿನಗಳಲ್ಲಿ ಎಚ್‌ಎಲ್‌ಸಿ ಕಾಲುವೆಗೆ ನೀರು ಹರಿಸಲಾಗುತ್ತದೆ ಎಂಬ ಮಾಹಿತಿ ಇದೆ, ಕಾಲುವೆಗಳಲ್ಲಿನ ಹೂಳನ್ನು ಈವರೆಗೂ ತೆರವುಗೊಳಿಸಿಲ್ಲ, ಗ್ರಾಮಗಳಲ್ಲಿ ಜನರು, ರೈತರು ಬೈಯ್ಯುತ್ತಿದ್ದಾರೆ ಎಂದು ನಂ .3 ಎಚ್‌ಎಲ್‌ಸಿ ಉಪ ವಿಭಾಗ ಜೆಇ ಹೊನ್ನೂರಪ್ಪ ವಿರುದ್ಧ ಕಿಡಿಕಾರಿದರು. ಇದಕ್ಕೆ ಅಧಿಕಾರಿ ಹೊನ್ನೂರಪ್ಪ ಪ್ರತಿಕ್ರಿಯಿಸಿ, ಕಾಲುವೆಗೆ ನೀರು ಹರಿಸುವ ಬಗ್ಗೆ ಟಿಬಿ ಬೋರ್ಡ್‌ನ ಸಭೆಯಲ್ಲಿ ನಿರ್ಧಾರಿಸಲಾಗುತ್ತದೆ. ಇನ್ನೂ ನೀರು ಹರಿಸಲು ಸಮಯವಿದ್ದು, ಇದಕ್ಕಾಗಿ ಅಧಿಕಾರಿಗಳು ಮುನಿರಾಬಾದ್‌ಗೆ ತೆರಳಿದ್ದಾರೆ ಎಂದರು. ಇದಕ್ಕೆ ನೋಡಲ್ ಅಧಿಕಾರಿ ಡಾ.ಚನ್ನಪ್ಪ ಮಾತನಾಡಿ, ‘‘ಅಲ್ಲರ‌್ರೀ ನಿಮ್ಮ ಸರ್ ಮುನಿರಾಬಾದ್‌ಗೆ ಹೋಗಿ ಬಸ್‌ನಲ್ಲಿ ವಾಪಸ್ ಬಂದರೆ ಕೆಲಸ ಆಗುತ್ತಾ, ಹೂಳು ತೆಗೆಯುವ ಕಾರ್ಯ ನೀರು ಹರಿಸುವುದಕ್ಕಿಂತ ಮುನ್ನವೇ ಕೆಲಸ ಆರಂಭಿಸಬೇಕು. ಇಲ್ಲದಿದ್ದರೆ ನೀರು ಎಲ್ಲೆಂದರಲ್ಲಿ ಹರಿಯುತ್ತದೆ’’ ಎಂದು ತರಾಟೆಗೆ ತೆಗೆದುಕೊಂಡರು.

ನೋಟಿಸ್‌ಗೆ ಸೂಚನೆ: ನೋಡಲ್ ಅಧಿಕಾರಿ ಚನ್ನಪ್ಪ ಮಾತನಾಡಿ, ನಂ.3 ಎಚ್‌ಎಲ್‌ಸಿ ಉಪವಿಭಾಗದ ಎಇಇ ಸಭೆಗೆ ಏಕೆ ಬಂದಿಲ್ಲ. ಅವರಿಗೆ ಪ್ರತಿ ಭಾರಿ ಸಭೆಗೆ ಹಾಜರಾಗುವಂತೆ ಸೂಚನೆ ನೀಡಿದ್ದರೂ ಪ್ರಯೋಜವಾಗುತ್ತಿಲ್ಲ. ಅನುಪಾಲನಾ ವರದಿ, ಪ್ರಗತಿ ವರದಿಯೂ ಸರಿಯಾಗಿ ನೀಡುತ್ತಿಲ್ಲ. ಈ ಬಗ್ಗೆ ಅವರಿಗೆ ನೋಟಿಸ್ ನೀಡಿ. ಅಲ್ಲದೇ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಸೇರಿದಂತೆ ಕೆಲ ಇಲಾಖಾಧಿಕಾರಿಗಳು ಪ್ರಗತಿ ವರದಿಯನ್ನು ಪುನರಾರ್ವತನೆ ನೀಡುತ್ತಿದ್ದಾರೆ. ಅಂತಹವರಿಗೂ ನೋಟಿಸ್ ನೀಡಿ ಎಂದು ತಾ.ಪಂ. ಇಒ ಜಾನಕೀರಾಮ್‌ಗೆ ಸೂಚನೆ ನೀಡಿದರು.

ವಾಗ್ದಾಳಿ: ತಾ.ಪಂ. ಅಧ್ಯಕ್ಷೆ ಅರುಣಾ ಜ್ಯೋತಿ, ಉಪಾಧ್ಯಕ್ಷ ಬಸವರಾಜ್ ಮಾತನಾಡಿ, ಕಾಲುವೆಯಲ್ಲಿ ಹೂಳು ತೆಗೆಯಲು ಟೆಂಡರ್ ಕರೆಯುವ ಮುನ್ನವೇ ನೀರು ಬಂದಿರುತ್ತದೆ. ಆ ಮೇಲೆ ಟೆಂಡರ್ ಕರೆದರೆ ಏನು ಪ್ರಯೋಜನ. ಕೆಳ ಭಾಗದ ರೈತರಿಗೆ ಸಮರ್ಪಕವಾಗಿ ನೀರು ದೊರೆಯಬೇಕೆಂದರೆ, ಕಾಲುವೆಯಲ್ಲಿ ಹೂಳು ತೆಗೆಯಬೇಕು. ಈ ಬಗ್ಗೆ ಸಾಮಾನ್ಯ ಸಭೆಯಲ್ಲಿ ತಿಳಿಸಲಾಗಿದ್ದರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಹರಿಹಾಯ್ದರು. ಮಧ್ಯಪ್ರವೇಶಿಸಿದ ನೋಡಲ್ ಅಧಿಕಾರಿ, ಗಮನಹರಿಸುವಂತೆ ಸೂಚಿಸಿದರು.

ಫಾಗಿಂಗ್ ಮಾಡಿ: ತಾಲೂಕು ವೈದ್ಯಾಧಿಕಾರಿ ಡಾ.ವೆಂಕಟೇಶ್‌ಮೂರ್ತಿ ಮಾತನಾಡಿ, ಕೆಲವೇ ದಿನಗಳಲ್ಲಿ ಹೊಸ ನೀರು ಬರುವುದರಿಂದ ತಾಲೂಕಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಂಕ್ರಾಮಿಕ ಕಾಯಿಲೆಗಳು ಹರಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅಗತ್ಯವಿರುವಲ್ಲಿ ಫಾಗಿಂಗ್‌ಮಾಡಿ ಸೊಳ್ಳೆಗಳನ್ನು ನಿಯಂತ್ರಿಸುವಂತೆ ಗ್ರಾ.ಪಂ.ಗಳಿಗೆ ಮನವಿ ಮಾಡಿದರು.

ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಜಡೇಗೌಡ ಇದ್ದರು. ಶಿವಶಂಕರ್ ನಿರ್ವಹಿಸಿದರು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ