ಆ್ಯಪ್ನಗರ

ಪ್ರಶಸ್ತಿಗಾಗಿ ಶೌಚಾಲಯಗಳಿಗೆ ಶೃಂಗಾರ

ಕೇಂದ್ರದ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳಲು ರಾಜ್ಯದಲ್ಲಿ ಭರದ ಸಿದ್ಧತೆ ನಡೆದಿದ್ದು, ಶೌಚಾಲಯಗಳು ಬಣ್ಣ ಬಣ್ಣದಿಂದ ಕಂಗೊಳಿಸಲಾರಂಭಿಸಿವೆ. ಈ ತಿಂಗಳು ಪೂರ್ತಿ ನಡೆಯಲಿರುವ ಅಭಿಯಾನದಲ್ಲಿ ರಾಜ್ಯದ ಪರವಾಗಿ ನಾಮನಿರ್ದೇಶಿತಗೊಳ್ಳುವ 3 ಜಿಲ್ಲೆಗಳ ಪಟ್ಟಿಯಲ್ಲಿ ಸೇರಲು ಎಲ್ಲ ಕಡೆಗೂ ಸ್ಪರ್ಧೆ ಏರ್ಪಟ್ಟಿದೆ.

Vijaya Karnataka 28 Jan 2019, 10:00 am
ಪಿ.ವೀರಣ್ಣ, ಹೂವಿನಹಡಗಲಿ
Vijaya Karnataka Web Toilet


ಸ್ವಚ್ಛತೆಗಾಗಿ ಗಾಂಧಿ ಗ್ರಾಮ ಪುರಸ್ಕಾರ ಸೇರಿದಂತೆ ಹಲವು ಪ್ರೋತ್ಸಾಹಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ ಕೇಂದ್ರ ಸರಕಾರ, ಸ್ವಚ್ಛ, ಸುಂದರ ಶೌಚಾಲಯಗಳಿಗೂ ಬಹುಮಾನ ನೀಡಲು ಮುಂದಾಗಿದೆ.

ಕೇಂದ್ರದ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳಲು ರಾಜ್ಯದಲ್ಲಿ ಭರದ ಸಿದ್ಧತೆ ನಡೆದಿದ್ದು, ಶೌಚಾಲಯಗಳು ಬಣ್ಣ ಬಣ್ಣದಿಂದ ಕಂಗೊಳಿಸಲಾರಂಭಿಸಿವೆ. ಈ ತಿಂಗಳು ಪೂರ್ತಿ ನಡೆಯಲಿರುವ ಅಭಿಯಾನದಲ್ಲಿ ರಾಜ್ಯದ ಪರವಾಗಿ ನಾಮನಿರ್ದೇಶಿತಗೊಳ್ಳುವ 3 ಜಿಲ್ಲೆಗಳ ಪಟ್ಟಿಯಲ್ಲಿ ಸೇರಲು ಎಲ್ಲ ಕಡೆಗೂ ಸ್ಪರ್ಧೆ ಏರ್ಪಟ್ಟಿದೆ. ಗ್ರಾಮ ಪಂಚಾಯಿತಿಗಳು ಇದಕ್ಕಾಗಿ ಗ್ರಾಮ ಹಂತದಿಂದ ಸ್ವಚ್ಛ, ಸುಂದರ ಅಭಿಯಾನಕ್ಕಾಗಿ ಅಗತ್ಯ ತಯಾರಿ ನಡೆಸಿವೆ.

ಏನಿದು ಪ್ರಶಸ್ತಿ ?:

ಶೌಚಾಲಯಗಳಿಗೆ ಆಕರ್ಷಕ ಬಣ್ಣ, ವಿಭಿನ್ನ ಘೋಷಣೆಗಳು, ಉಪಯುಕ್ತ ಮಾಹಿತಿಯಿರುವ ಚಿತ್ರಗಳು ಹಾಗೂ ಬರಹದ ಮೂಲಕ ಪೇಂಟಿಂಗ್‌ ಮಾಡಿರುವ ಇಡೀ ಜಿಲ್ಲೆ, ಗ್ರಾಮ ಪಂಚಾಯಿತಿ ಹಾಗೂ ಫಲಾನುಭವಿ ಕುಟುಂಬಕ್ಕೆ ಸರಕಾರ ಪ್ರಶಸ್ತಿಯನ್ನು ನೀಡಲಿದೆ. ಗ್ರಾಮೀಣ ಪ್ರದೇಶದ ಸಾರ್ವಜನಿಕ ಗುಂಪು ಶೌಚಾಲಯ, ಸರಕಾರಿ ಶಾಲೆಗಳ ಶೌಚಾಲಯ ಹಾಗೂ ಶಾಲಾ ಕಾಂಪೌಂಡ್‌ಗಳಿಗೆ ಸ್ವಚ್ಛ ಭಾರತ ಮಿಷನ್‌ನ ವಿಭಿನ್ನ ಘೋಷಣೆ ಹಾಗೂ ಶೌಚಾಲಯ ಬಳಕೆ ಕುರಿತು ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಜಾರಿಯಾಗಿರುವ ಸ್ವಚ್ಛ, ಸುಂದರ ಶೌಚಾಲಯ ಜವಾಬ್ದಾರಿಯನ್ನು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಗ್ರಾ.ಪಂ.ಅಧ್ಯಕ್ಷ ರಿಗೆ ವಹಿಸಲಾಗಿದೆ.

ಪ್ರಯತ್ನ ಚುರುಕು:


ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಸೃಜನಾತ್ಮಕ ಮತ್ತು ಆಕರ್ಷಕ ಪೇಂಟಿಂಗ್‌ ಹೊಂದಿರುವ 5 ಶೌಚಾಲಯಗಳ ಭಾವಚಿತ್ರಗಳನ್ನು ತೆಗೆದು ಕಳುಹಿಸಲು ಪೈಪೋಟಿ ಏರ್ಪಟ್ಟಿದೆ. ಫೆ.10 ರೊಳಗೆ ಅಂತಿಮಗೊಳ್ಳಬೇಕಿದ್ದು, ರಾಜ್ಯ ಸರಕಾರದ ಮೂಲಕ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಲಿವೆ. ಇದಕ್ಕೂ ಮೊದಲು ಎಲ್ಲ ಶೌಚಾಲಯಗಳು ಅಂದ-ಚೆಂದದಿಂದ ಕಂಗೊಳಿಸಿ, ನಾಗರಿಕರನ್ನು ಆಕರ್ಷಿಸಬೇಕು. ಆ ಮೂಲಕ ಶೌಚಾಲಯ ಎಂದು ಮೂಗು ಮುರಿಯುವವರೆಗೆ ಉತ್ತಮ ಪರಿಸರ ನಿರ್ಮಿಸಿ ಉತ್ತರ ನೀಡಬೇಕೆನ್ನುವ ಉದ್ದೇಶದೊಂದಿಗೆ ರಾಜ್ಯವ್ಯಾಪಿ ಶೌಚಾಲಯಗಳನ್ನು ಅಲಂಕರಿಸುವ ಪ್ರಯತ್ನ ಸಾಗಿವೆ.

ರಾಜ್ಯದ ಸ್ಥಿತಿಗತಿ ಏನು?

2017ರಿಂದ 2018ರವರೆಗೆ ಬಯಲು ಬಹಿರ್ದೆಸೆ ಮುಕ್ತ ರಾಜ್ಯವನ್ನಾಗಿಸುವ ಅಭಿಯಾನದ ಮೂಲಕ ಮೂಲಕ ಪ್ರತಿ ಕುಟುಂಬವೂ ಶೌಚಾಲಯ ಹೊಂದಬೇಕೆನ್ನುವ ಗುರಿಯನ್ನು ಹೊಂದಲಾಗಿತ್ತು. 2012-13ರ ಬೇಸ್‌ ಲೈನ್‌ ಸರ್ವೆ ಪ್ರಕಾರ ರಾಜ್ಯದಲ್ಲಿ ಅಂದಾಜು 70.26ಲಕ್ಷ ಕುಟುಂಬಗಳಿಗೆ ಶೌಚಾಲಯದ ಅಗತ್ಯವಿತ್ತು. ಇದರಲ್ಲಿ ಕೇವಲ 24.83ಲಕ್ಷ ಕುಟುಂಬಗಳು ಶೌಚಾಲಯ ಹೊಂದಿದ್ದವು. ಆದರೆ ಇನ್ನೂ 45.42ಕುಟುಂಬಗಳು ವಯಕ್ತಿಕ ಶೌಚಾಲಯದಿಂದ ದೂರ ಉಳಿದಿದ್ದರು. ಇದನ್ನರಿತ ಸರಕಾರ ಕೂಡಲೇ ಈ ಕುರಿತು ದೊಡ್ಡ ಸಮರವನ್ನೇ ಸಾರಿದ್ದವು. ಇದರ ಪರಿಣಾಮ ಕೇವಲ ಒಂದೇ ವರ್ಷದಲ್ಲಿ ಎಲ್ಲ ಕುಟುಂಬಗಳು ಅಂದರೆ 70.26ಲಕ್ಷ ಕುಟುಂಬಗಳೂ ಈಗಾಗಲೇ ಶೌಚಾಲಯ ನಿರ್ಮಿಸಿಕೊಂಡಿರುವುದು ಸಾಧನೆಯೇ ಸರಿ.

ಸ್ವಚ್ಛ ಭಾರತ್‌ ಮಿಷನ್‌ ಯೋಜನೆಯಡಿ ಶೌಚಾಲಯ ನಿರ್ಮಿಸುವಲ್ಲಿ ಗುರಿ ಮೀರಿ ಸಾಧನೆ ಮಾಡಲಾಗಿದೆ. ಕೇಂದ್ರದ ಸ್ವಚ್ಛ ಸುಂದರ ಶೌಚಾಲಯ ಸ್ಪರ್ಧೆ ಉದ್ದೇಶದಿಂದ ತಾಲೂಕಿನಲ್ಲಿ 110 ಶೌಚಾಲಯಗಳಿಗೆ ಪೇಂಟಿಂಗ್‌ ಮಾಡಿಸಲಾಗಿದೆ. ಪೇಂಟಿಂಗ್‌ ಆಕರ್ಷಕವಾಗಿದ್ದು, ಸ್ಪರ್ಧೆಯಲ್ಲಿ ಪ್ರಶಸ್ತಿ ಗಿಟ್ಟಿಸುವ ವಿಶ್ವಾಸವಿದೆ-ಯು.ಎಚ್‌. ಸೋಮಶೇಖರ್‌ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಹೂವಿನಹಡಗಲಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ