ಆ್ಯಪ್ನಗರ

ಕ್ಷೇತ್ರದ ಸಮಸ್ಯೆ ಕಡತಕ್ಕೆ ಸೀಮಿತಿ !

ನಾನಾ ಕ್ಷೇತ್ರದ ಸಮಸ್ಯೆ ಕೇವಲ ಕಡತಕ್ಕೆ ಮಾತ್ರ ಸೀಮಿತ ಆಗಿದೆ. ಈ ಹಿಂದಿನ ಸಾಮಾನ್ಯ ಸಭೆಯಲ್ಲಿ ಚರ್ಚಿಸಿದ ಸಮಸ್ಯೆಗೆ ಸೂಕ್ತ ಪರಿಹಾರ ದೊರೆತಿಲ್ಲ. ಹಿಂಗಾದ್ರೆ ಹ್ಯಾಂಗ್‌ ಈ ಸಭೆಯಲ್ಲಿ ಸಮಸ್ಯೆ ಕುರಿತು ಚರ್ಚಿಸೋದು.

Vijaya Karnataka 13 Jun 2018, 5:00 am
ಬಳ್ಳಾರಿ : ನಾನಾ ಕ್ಷೇತ್ರದ ಸಮಸ್ಯೆ ಕೇವಲ ಕಡತಕ್ಕೆ ಮಾತ್ರ ಸೀಮಿತ ಆಗಿದೆ. ಈ ಹಿಂದಿನ ಸಾಮಾನ್ಯ ಸಭೆಯಲ್ಲಿ ಚರ್ಚಿಸಿದ ಸಮಸ್ಯೆಗೆ ಸೂಕ್ತ ಪರಿಹಾರ ದೊರೆತಿಲ್ಲ. ಹಿಂಗಾದ್ರೆ ಹ್ಯಾಂಗ್‌ ಈ ಸಭೆಯಲ್ಲಿ ಸಮಸ್ಯೆ ಕುರಿತು ಚರ್ಚಿಸೋದು.
Vijaya Karnataka Web BLR-BLY12GK1


ಹೀಗೆ ತಾ.ಪಂ.ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದು, ನಗರದ ಕೋಟೆ ಪ್ರದೇಶದಲ್ಲಿರುವ ತಾ.ಪಂ.ಕಚೇರಿ ಶ್ರೀ ಕೃಷ್ಣ ದೇವರಾಯ ಸಭಾಂಗಣದಲ್ಲಿ ಮಂಗಳವಾರ ನಡೆದ 10ನೇ ಸಾಮಾನ್ಯ ಸಭೆಯಲ್ಲಿ. ಈಗಾಗಲೇ 9ಕ್ಕೂ ಹೆಚ್ಚು ಸಾಮಾನ್ಯ ಸಭೆಗಳು ನಡೆದಿವೆ. ಆಯಾ ಕ್ಷೇತ್ರದ ಸಮಸ್ಯೆ ಕುರಿತು ಸಭೆಯ ಗಮನಕ್ಕೆ ತರಲಾಗಿದೆ. ಆದರೆ ಈವರೆಗೂ ಪರಿಹಾರ ಕಲ್ಪಿಸುವಲ್ಲಿ ಅಧಿಕಾರಿಗಳು ಮುಂದಾಗಿಲ್ಲ. ಆದರೆ, ಸರಕಾರಿ ಕಡತಗಳಲ್ಲಿ ಮಾತ್ರ ಸಮಸ್ಯೆ ಬಗ್ಗೆ ಉಲ್ಲೇಖವಾಗಿದೆ. ಪರಿಹಾರವಾಗದ ಕುರಿತು ಸಂಬಂಧಿಸಿದ ಇಲಾಖೆ ಮೇಲಾಧಿಕಾರಿಗಳು ಕೇಳೋರಿಲ್ಲ ಅಂತ ಕಾಣ್ಸುತ್ತೆ. ಹಾಗಾಗಿ, ಸಮಸ್ಯೆಯನ್ನು ಜೀವಂತವಾಗಿಡಲಾಗುತ್ತಿದೆ ಎಂದು ಅಧಿಕಾರಿಗಳ ವಿರುದ್ಧ ಸದಸ್ಯರು ಗರಂ ಆದರು.

ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ: 2018ರ ಫೆಬ್ರವರಿ 8ರಂದು ನಡೆದ ಸಾಮಾನ್ಯ ಸಭೆಯಲ್ಲಿ ತಾಲೂಕಿನ ರೂಪನಗುಡಿ, ಬಾದನಹಟ್ಟಿ, ಕೊರ್ಲಗುಂದಿ, ನೆಲ್ಲುಡಿ ಸೇರಿದಂತೆ ಇತರೆ ಗ್ರಾಮಗಳ ಸಮಸ್ಯೆ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆದರೂ ಪ್ರಯೋಜನ ಆಗಿಲ್ಲ. ಇದೀಗ 10ನೇ ಸಾಮಾನ್ಯ ಸಭೆ ನಡೆದರೂ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಆಗಿಲ್ಲ. ಮೊಬೈಲ್‌ ಕರೆ ಮಾಡಿದರೂ ಅಧಿಕಾರಿ, ಕರೆ ಸ್ವೀಕರಿಸುತ್ತಿಲ್ಲ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಬಳ್ಳಾರಿ ತಾಲೂಕಿನ ರೂಪನಗುಡಿ ಕ್ಷೇತ್ರದ ಸದಸ್ಯ ಗೋವಿಂದ ಮಾತನಾಡಿ, ಕುಂಟನಾಳು ಗ್ರಾಮದಲ್ಲಿ ಎರಡು ವಿದ್ಯುತ್‌ ಕಂಬ ದುರಸ್ತಿಯಾಗಿದ್ದು, ಈವರೆಗೆ ಬದಲಾವಣೆ ಮಾಡುತ್ತಿಲ್ಲ. ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಾತ್ರಿವೇಳೆ ವೈದ್ಯರೊಬ್ಬರೂ ಇರುವುದಿಲ್ಲ. ತುರ್ತು ಚಿಕಿತ್ಸೆ ಪಡೆಯಲು ಬಂದ ನಾನಾ ಗ್ರಾಮಸ್ಥರಿಗೆ ಸಮಸ್ಯೆ ಉಂಟಾಗುತ್ತಿದೆ ಎಂದು ದೂರಿದರು.

ಕೇವಲ ಪರಮದೇವನಹಳ್ಳಿ ಗ್ರಾಮಕ್ಕೆ 108 ಆಂಬ್ಯುಲೆನ್ಸ್‌ ಸೀಮಿತವಾಗಿದೆ. ತುರ್ತು ಚಿಕಿತ್ಸೆ ಪಡೆಯಲು ನಾನಾ ಗ್ರಾಮಗಳ ಗ್ರಾಮಸ್ಥರು ಪರದಾಡುತ್ತಿದ್ದಾರೆ ಎಂದು ಆರೋಪಿಸಿದರು.

ಬಾದನಹಟ್ಟಿ ಕ್ಷೇತ್ರದ ಸದಸ್ಯ ಗೋವಿಂದಪ್ಪ ಮಾತನಾಡಿ, ಬಾದನಹಟ್ಟಿ ಗ್ರಾಮದಲ್ಲಿ ಕುಡಿವ ನೀರಿನ ಪೈಪ್‌ಲೈನ್‌ ಹೊಡೆದು ನೀರಿನ ಸಮಸ್ಯೆ ಪ್ರಾರಂಭವಾಗಿದೆ. ಪಿಡಿಒ ಕ್ರಮಕೈಗೊಂಡಿಲ್ಲ. ರೈತರು ಪೈಪ್‌ಲೈನ್‌ ಮೂಲಕ ಅನಧಿಕೃತ ನೀರಿನ ಸಂಪರ್ಕ ಪಡೆದುಕೊಂಡಿದ್ದಾರೆ. ಓವರ್‌ ಹೆಡ್‌ ನಿರ್ಮಾಣ ಕಾಮಗಾರಿ ಅಪೂರ್ಣಗೊಂಡಿದೆ ಎಂದು ದೂರಿದರು.

ಕೊರ್ಲಗುಂದಿ ಸದಸ್ಯ ತಿಮ್ಮಾರೆಡ್ಡಿ ಮಾತನಾಡಿ, ಗುಡದೂರು ಗ್ರಾಮದ ಸರಕಾರಿ ಶಾಲೆಗೆ ಕಂಪೌಂಡ್‌ ಕೊರತೆಯಿಂದ ಬಿಸಿಯೂಟ ವೇಳೆ ಹಂದಿ, ನಾಯಿಗಳ ಕಾಟ ಹೆಚ್ಚಾಗಿದೆ. ಬಿಸಿಯೂಟದ ವೇಳೆಗೆ ಶಿಕ್ಷ ಕರು ಕಟ್ಟಿಗೆ ಹಿಡಿದು ವಿದ್ಯಾರ್ಥಿಗಳಿಗೆ ಊಟ ಮಾಡಿಸುವಂಥ ದುಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಕಂಪೌಂಡ್‌ ನಿರ್ಮಿಸಬೇಕು ಎಂದು ಆಗ್ರಹಿಸಿದರು.

ತಾ.ಪಂ.ಇಒ ಜಾನಕಿರಾಂ ಪ್ರತಿಕ್ರಿಯಿಸಿ, ರೂಪನಗುಡಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ 108 ಆಂಬ್ಯುಲೆನ್ಸ್‌ ಇರುವಂತೆ ತಾಲೂಕು ವೈದ್ಯಾಧಿಕಾರಿ ಸೂಕ್ತಕ್ರಮ ಕೈಗೊಳ್ಳಬೇಕು. ಜಿ.ಪಂ. ಸಭೆಯಲ್ಲೂ ಗಮನಕ್ಕೆ ತರಲಾಗುವುದು. ರಾತ್ರಿ ವೇಳೆ ಆಸ್ಪತ್ರೆಯಲ್ಲಿ ವೈದ್ಯರು ಕಾರ್ಯನಿರ್ವಹಿಸುವಂತೆ ಸೂಚಿಸಬೇಕು. ಬಾದನಹಟ್ಟಿ ಗ್ರಾಮದಲ್ಲಿ ಪೈಪ್‌ಲೈನ್‌ ದುರಸ್ತಿ ಕಾಮಗಾರಿಯನ್ನು 15ದಿನದೊಳಗೆ ಪೂರ್ಣಗೊಳಿಸುವಂತೆ ಗ್ರಾಮೀಣ ಕುಡಿವ ನೀರು ಸರಬರಾಜು ಇಲಾಖೆ ಅಧಿಕಾರಿಗೆ ಸೂಚಿಸಲಾಯಿತು. ಗುಡುದೂರು ಗ್ರಾಮದ ಸರಕಾರಿ ಶಾಲೆಗೆ ಕೂಡಲೇ ಕಂಪೌಂಡ್‌ ಗೋಡೆ ನಿರ್ಮಾಣ ಕಾರ್ಯ ಪ್ರಾರಂಭಿಸಬೇಕು. ಆ ಕುರಿತು ಆಕ್ಷೇಪಣೆಗಳಿದ್ದರೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದು ಎಂದರು.

ತಾಲೂಕು ಪಂಚಾಯಿತಿ ಅಧ್ಯಕ್ಷೆ ರಮೀಜಾ ಬೀ, ಉಪಾಧ್ಯಕ್ಷ ಮಲ್ಲಿಕಾರ್ಜುನ ಸೇರಿದಂತೆ ತಾ.ಪಂ.ಸದಸ್ಯರು ಹಾಗೂ ಆಯಾ ಇಲಾಖೆ ಅಧಿಕಾರಿಗಳು ಇದ್ದರು.

===

ಮೊಬೈಲ್‌ ಕರೆಗೆ ಪ್ರತಿಕ್ರಿಯಿಸಿ

ಬಳ್ಳಾರಿ ತಾಲೂಕು ಪಂಚಾಯಿತಿ ಸದಸ್ಯರ ಮೊಬೈಲ್‌ ಕರೆಗೆ ಸಕಾಲದಲ್ಲಿ ಆಯಾ ಇಲಾಖೆ ಅಧಿಕಾರಿಗಳು ಪ್ರತಿಕ್ರಿಯಿಸಬೇಕು. ಹಾಗೂ ಎಲ್ಲ ಸದಸ್ಯರ ಮೊಬೈಲ್‌ ಸಂಖ್ಯೆಯನ್ನು ಮೊದಲು ನೋಟ್‌ ಮಾಡಿಕೊಳ್ಳಿ.

- ಜಾನಕಿರಾಂ, ಇಒ, ತಾ.ಪಂ.



ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ