ಆ್ಯಪ್ನಗರ

ನೊಣದಿಂದ ಜನತೆಗೆ ಫಜೀತಿ

ತಾಲೂಕಿನ ಕುರೇಕುಪ್ಪ ಪರಸಭೆ ವ್ಯಾಪ್ತಿಯ ಕುರೇಕುಪ್ಪ ಪಟ್ಟಣ ಹಾಗೂ ತೋರಣಗಲ್ಲು ರೈಲ್ವೆ ನಿಲ್ದಾಣ ಪ್ರದೇಶದಲ್ಲಿ ಸ್ವಚ್ಛತೆ ಕೊರತೆಯಿಂದ ನೊಣಗಳ ಹಾವಳಿ ಮಿತಿ ಮೀರಿದ್ದು, ಜನ ಸಾಂಕ್ರಾಮಿಕ ರೋಗದ ಭೀತಿಯಲ್ಲಿ ದಿನ ಕಳೆಯುವಂತಾಗಿದೆ.

Vijaya Karnataka 1 May 2018, 5:00 am
ಸಂಡೂರು : ತಾಲೂಕಿನ ಕುರೇಕುಪ್ಪ ಪರಸಭೆ ವ್ಯಾಪ್ತಿಯ ಕುರೇಕುಪ್ಪ ಪಟ್ಟಣ ಹಾಗೂ ತೋರಣಗಲ್ಲು ರೈಲ್ವೆ ನಿಲ್ದಾಣ ಪ್ರದೇಶದಲ್ಲಿ ಸ್ವಚ್ಛತೆ ಕೊರತೆಯಿಂದ ನೊಣಗಳ ಹಾವಳಿ ಮಿತಿ ಮೀರಿದ್ದು, ಜನ ಸಾಂಕ್ರಾಮಿಕ ರೋಗದ ಭೀತಿಯಲ್ಲಿ ದಿನ ಕಳೆಯುವಂತಾಗಿದೆ. ಎರಡು ದಶಕದ ಹಿಂದೆ ಕುಗ್ರಾಮದಂತಿದ್ದ ಈ ಪ್ರದೇಶಗಳು ಜಿಂದಾಲ್‌ ಸೇರಿ ನಾನಾ ಕಾರ್ಖಾನೆಗಳ ಸ್ಥಾಪನೆಯಿಂದಾಗಿ ಬೃಹತ್‌ ಪ್ರಮಾಣದಲ್ಲಿ ಬೆಳೆದಿದೆ. ಜನ ಸಂಖ್ಯೆ ಹೆಚ್ಚಿದೆ. ಕೆಲಸ ಅರಸಿ ಬರುವ ವಲಸಿಗರು ಹೆಚ್ಚಿದ್ದು, ಅಗತ್ಯಕ್ಕೆ ತಕ್ಕಷ್ಟು ವೈಯಕ್ತಿಕ ಮತ್ತು ಸಾಮೂಹಿಕ ಶೌಚಾಲಯಗಳಿಲ್ಲ. ಪರಿಣಾಮ ಬಯಲು ಶೌಚ ಇಲ್ಲಿ ಸಾಮಾನ್ಯ ಸಂಗತಿ ಎಂಬಂತಾಗಿದೆ.
Vijaya Karnataka Web BLR-BLY 30 SDR 1


ಸ್ವಚ್ಛತೆಯ ಕೊರತೆ: ಸದಾ ತುಂಬಿ ತುಳುಕುವ ಚರಂಡಿಗಳು, ಅಲ್ಲಲ್ಲಿ ಬಿದ್ದ ಪೇಪರ್‌ ಹಾಗೂ ಪ್ಲ್ಯಾಸ್ಟಿಕ್‌ ತ್ಯಾಜ್ಯ ನೊಣಗಳ ಸಂಖ್ಯೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.

ತ್ಯಾಜ್ಯದ ಮೇಲೆ ಕುಳಿತ ನೊಣಗಳು ರಸ್ತೆ ಬದಿಯಲ್ಲಿ ಮಾರಾಟ ಮಾಡುವ ಎಳನೀರು, ಕಲ್ಲಂಗಡಿ ಹಣ್ಣು, ಫುಟ್‌ಪಾತ್‌ ಹೋಟೆಲ್‌ನ ತಿಂಡಿ, ತಿನಿಸುಗಳ ಮೇಲೆ ಲಗ್ಗೆ ಇಟ್ಟು ಕಲುಷಿತಗೊಳಿಸುತ್ತಿವೆ.

ಬೇಸಿಗೆಯ ಬಿಸಿಲ ಹೊಡೆತಕ್ಕೆ ನೆರಳಿಲ್ಲದೇ ನಲುಗಿದ ಜನ ದಾಹ ನೀಗಿಸಿಕೊಳ್ಳಲು ಎಳನೀರು, ಕಲ್ಲಂಗಡಿ ಸೇವಿಸಲು ಹೋದಲ್ಲಿ ಜಾಗ್ರತೆಯಿಂದ ನೊಣಗಳನ್ನು ಓಡಿಸುತ್ತ ಸೇವಿಸಬೇಕಿದೆ. ವ್ಯಾಪಾರಿಗಳು ಬಟ್ಟೆ, ಬೀಸಣಿಕೆಯಿಂದ ಓಡಿಸಿದರೂ ಕ್ಷ ಣಾರ್ಧದಲ್ಲಿ ವಾಪಸ್‌ ಬಂದು ತಿನಿಸುಗಳ ಮೇಲೆ ಕೂಡುತ್ತವೆ. ಮೈ ಮರೆತರೆ ಸೇವಿಸುವ ಆಹಾರದೊಂದಿಗೆ ವ್ಯಕ್ತಿಯ ಬಾಯಿ ಸೇರುವ ಸಾಧ್ಯತೆ ಹೆಚ್ಚಿದೆ.

ರೈಲ್ವೆ ನಿಲ್ದಾಣದ ಸಮೀಪ ಬಸ್‌ ನಿಲ್ದಾಣವಿಲ್ಲದ್ದರಿಂದ ಆಂಜನೇಯ ದೇವಸ್ಥಾನದ ಮರದ ನೆರಳಿನಲ್ಲಿ ಕುಳಿತುಕೊಂಡ ಪ್ರಯಾಣಿಕರ ಮುಖಕ್ಕೆ ಮುತ್ತಿಕೊಳ್ಳುತ್ತವೆ. ನೊಣಗಳನ್ನು ಓಡಿಸಲು ಸಾಧ್ಯವಾಗದೇ ಸುಸ್ತಾದ ಜನ ಬಯಲಿಗೆ ಬಂದು ನಿಲ್ಲುವ ಸ್ಥಿತಿಯಿದೆ.

ಇನ್ನಾದರೂ ಪುರಸಭೆ ಆಡಳಿತ ನೊಣಗಳ ನಿಯಂತ್ರಣ ಕುರಿತು ಮುಂಜಾಗ್ರತೆ ಕ್ರಮ ವಹಿಸಬೇಕು. ಇಲ್ಲವಾದಲ್ಲಿ ಜನ ಸಾಂಕ್ರಾಮಿಕ ರೋಗಗಳಿಂದ ಬಳಲುವುದು ಕಾಯಂ ಎಂಬಂತಾಗಿದೆ.

===

ನಮ್ಮೂರಲ್ಲಿ ವಿಪರೀತ ನೊಣಗಳ ಹಾವಳಿ ಇದೆ. ಆಹಾರದ ಮೇಲೆ ಹಿಂಡು ಹಿಂಡಾಗಿ ಕುಳಿತುಕೊಳ್ಳುವ ನೊಣಗಳನ್ನು ನೋಡಿದರೆ ಊಟ ಮಾಡಲು ವಾಕರಿಕೆ ಎನಿಸುತ್ತದೆ. ಪುರಸಭೆ ಆಡಳಿತ ಕರ ವಸೂಲಿಗೆ ತೋರುವ ಕಾಳಜಿಯನ್ನು ನೊಣಗಳನ್ನು ಓಡಿಸುವಲ್ಲಿ ತೋರಬೇಕು.

- ತೋರಣಗಲ್ಲು ರೈಲ್ವೆ ನಿಲ್ದಾಣದ ನಿವಾಸಿಗಳು.

--

ನೊಣಗಳನ್ನು ಕೊಲ್ಲಲು ಬೈಟೆಕ್‌ ದ್ರಾವಣ ಸಿಂಪಡಣೆ ಇಂದಿನಿಂದಲೇ ಪ್ರಾರಂಭಿಸಲಾಗುವುದು. ರಸ್ತೆ ಬದಿ ಬ್ಲೀಚಿಂಗ್‌ ಪೌಡರ್‌ ಸಿಂಪಡಿಸಲು ಸಿಬ್ಬಂದಿಗೆ ಸೂಚನೆ ನೀಡುತ್ತೇನೆ.

-ಅಬ್ದುಲ್‌ ರೆಹಮಾನ್‌ ಖುರೇಶಿ, ಮುಖ್ಯಾಧಿಕಾರಿ, ಪುರಸಭೆ, ಕುರೇಕುಪ್ಪ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ