ಆ್ಯಪ್ನಗರ

ಬಾಲಕಿ ಅತ್ಯಾಚಾರ, ಕೊಲೆ ಖಂಡಿಸಿ ಪ್ರತಿಭಟನೆ

ಕೋಲಾರ ಜಿಲ್ಲೆ ಮಾಲೂರಿನಲ್ಲಿ ಹತ್ತನೇ ತರಗತಿ ವಿದ್ಯಾರ್ಥಿನಿಯ ಅತ್ಯಾಚಾರ, ಕೊಲೆ ಘಟನೆ ಖಂಡಿಸಿ ನಗರದ ರಾಯಲ್‌ ಸರ್ಕಲ್‌ನಲ್ಲಿ ಎಐಡಿಎಸ್‌ಒ, ಎಐಎಂಎಸ್‌ಎಸ್‌, ಎಐಡಿವೈಒ ಸಂಘಟನೆಗಳ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.

Vijaya Karnataka 7 Aug 2018, 5:00 am
ಬಳ್ಳಾರಿ : ಕೋಲಾರ ಜಿಲ್ಲೆ ಮಾಲೂರಿನಲ್ಲಿ ಹತ್ತನೇ ತರಗತಿ ವಿದ್ಯಾರ್ಥಿನಿಯ ಅತ್ಯಾಚಾರ, ಕೊಲೆ ಘಟನೆ ಖಂಡಿಸಿ ನಗರದ ರಾಯಲ್‌ ಸರ್ಕಲ್‌ನಲ್ಲಿ ಎಐಡಿಎಸ್‌ಒ, ಎಐಎಂಎಸ್‌ಎಸ್‌, ಎಐಡಿವೈಒ ಸಂಘಟನೆಗಳ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.
Vijaya Karnataka Web BLR-06BLYRN01


ಸಂಘಟನೆ ಮುಖ್ಯಸ್ಥೆ ಕೆ.ಎಂ.ಈಶ್ವರಿ ಮಾತನಾಡಿ, ಹೆಣ್ಣು ಮಕ್ಕಳ ಮೇಲೆ ರಾಜ್ಯದಲ್ಲಿ ನಿರಂತರವಾಗಿ ಅತ್ಯಾಚಾರ, ಕೊಲೆ, ದೌರ್ಜನ್ಯಗಳು ನಡೆಯುತ್ತಿವೆ. ಪೊಲೀಸ್‌ ಇಲಾಖೆಯವರು ಮಹಿಳೆಯರ ಭದ್ರತೆಗೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ, ಕ್ರೀಡಾಕೂಟ ಮುಗಿಸಿಕೊಂಡು ಮನೆಗೆ ಬರುತ್ತಿದ್ದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಲಾಗಿದೆ. ಇದರಿಂದ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಬಿಹಾರದ ಮುಜಫ್ಫರ್‌ದ ಎನ್‌ಜಿಒ ಒಂದರಲ್ಲಿ 34ಕ್ಕೂ ಹೆಚ್ಚು ಬಾಲಕಿಯರ ಮೇಲೆ ಅಲ್ಲಿನ ಸಿಬ್ಬಂದಿ, ಕೆಲ ರಾಜಕಾರಣಿಗಳು ಸೇರಿದಂತೆ ಹಲವರು ಅತ್ಯಾಚಾರ ನಡೆಸುವ ಮೂಲಕ ಪೈಶಾಚಿಕ ಕೃತ್ಯ ಎಸಗಿದ್ದಾರೆ. ಈ ಘಟನೆಯಿಂದ ಇಡೀ ದೇಶವೇ ಬೆಚ್ಚಿಬಿದ್ದಿದೆ. ದೇಶದ ಮಾನ ಮೂರುಕಾಸಿಗೆ ವಿಶ್ವದಾದ್ಯಂತ ಹರಾಜಾಗಿದೆ. ಇಂತಹ ವಿಕೃತ ಮನಸ್ಸಿನ ಕಾಮುಕರಿಗೆ ಕಠಿಣಾತಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯರ ಬಗೆಗಿನ ಅಶ್ಲೀಲ ಚಿತ್ರ, ವಿಡಿಯೋ ತುಣಕುಗಳು ಹರಿದಾಡುತ್ತಿರುವುದು ಇಂತಹ ಘಟನೆಗಳಿಗೆ ಪ್ರಚೋದನಕಾರಿಯಾಗಿದೆ. ಅಶ್ಲೀಲ ವೆಬ್‌ಸೈಟ್‌ ಸೇರಿದಂತೆ ಯುವಕರ ಮನಸ್ಸಿನ ಮೇಲೆ ಪರಿಣಾಮ ಬೀರುವ ಸಾಮಾಜಿಕ ಜಾಲತಾಣಗಳ ಮೇಲೆ ಸರಕಾರ ನಿಗಾಯಿಡಬೇಕು. ಮಹಿಳೆಯರ ಮೇಲೆ ನಡೆದ ದೌರ್ಜನ್ಯ, ಅತ್ಯಾಚಾರ ಸೇರಿದಂತೆ ಇನ್ನಿತರೆ ಪ್ರಕರಗಳನ್ನು ಶೀಘ್ರ ವಿಚಾರಣೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ನಾನಾ ಕಾಲೇಜಿನ ವಿದ್ಯಾರ್ಥಿಗಳಾದ ಗೋವಿಂದ, ಶಾಂತಾ, ಗೌರಿಸ್ವಾಮಿ, ಜಗದೀಶ್‌, ರವಿಕಿರಣ, ರಾಜು, ಈರಣ್ಣ, ಭಾರ್ಗವಿ, ರೇಖಾ, ವಿದ್ಯಾ ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ