ಆ್ಯಪ್ನಗರ

ಒಳ ಹರಿವು ಚೇತರಿಕೆ: ಹೆಚ್ಚಿದ ಮೊದಲ ಬೆಳೆ ನಿರೀಕ್ಷೆ

ಜಲಾನಯನ ಪ್ರದೇಶದಲ್ಲಿ ಮುಂಗಾರು ಪೂರ್ವದಿಂದಲೇ ಭಾರೀ ಮಳೆ ಸುರಿಯುತ್ತಿರುವ ಪರಿಣಾಮ ಪ್ರಸಕ್ತ ವರ್ಷ ಜೂನ್ ತಿಂಗಳಲ್ಲಿಯೇ ತುಂಗಭದ್ರಾ ಜಲಾಶಯಕ್ಕೆ ಜೀವ ಕಳೆ ಬಂದಿದೆ!.

Vijaya Karnataka 18 Jun 2018, 12:00 am
ಮಲ್ಲಿಕಾರ್ಜುನ ಚಿಲ್ಕರಾಗಿ, ಬಳ್ಳಾರಿ
Vijaya Karnataka Web BLR-BLY17HPT11


ಜಲಾನಯನ ಪ್ರದೇಶದಲ್ಲಿ ಮುಂಗಾರು ಪೂರ್ವದಿಂದಲೇ ಭಾರೀ ಮಳೆ ಸುರಿಯುತ್ತಿರುವ ಪರಿಣಾಮ ಪ್ರಸಕ್ತ ವರ್ಷ ಜೂನ್ ತಿಂಗಳಲ್ಲಿಯೇ ತುಂಗಭದ್ರಾ ಜಲಾಶಯಕ್ಕೆ ಜೀವ ಕಳೆ ಬಂದಿದೆ!.

2017-18ನೇ ಸಾಲಿನ ಜಲವರ್ಷದಲ್ಲಿ ಮುಂಗಾರು, ಹಿಂಗಾರು ಮಳೆ ಕೊರತೆ ಪರಿಣಾಮ ಮೇ ಅಂತ್ಯದಲ್ಲಿ ಕೇವಲ 2 ಟಿಎಂಸಿಗೆ ತಲುಪಿದ್ದ ನೀರಿನ ಪ್ರಮಾಣ ಕಳೆದ ಹತ್ತು ದಿನಗಳಲ್ಲಿ 20 ಟಿಎಂಸಿಯ ಗಡಿ ದಾಟಿದೆ. ಒಂದು ವಾರದಿಂದ ಪ್ರತಿ ನಿತ್ಯ ಒಳ ಹರಿವಿನ ಪ್ರಮಾಣ 40-50ಸಾವಿರ ಕ್ಯೂಸೆಕ್‌ವರೆಗೆ ಹರಿದು ಬರುತ್ತಿರುವ ಪರಿಣಾಮ ಇಷ್ಟೊಂದು ನೀರು ಜಲಾಶಯದ ಮಡಿಲು ಸೇರಲು ಕಾರಣವಾಗಿದೆ. ಇದೇ ಒಳ ಹರಿವು ಮುಂದುವರಿದರೆ ಜೂನ್ ಅಂತ್ಯಕ್ಕೆ 35-40ಟಿಎಂಸಿವರೆಗೂ ನೀರು ಜಲಾಶಯದಲ್ಲಿ ಸಂಗ್ರಹವಾಗುವ ನಿರೀಕ್ಷೆ ಇದೆ.

ಕಳೆದ ವರ್ಷ ಕೇವಲ 0.950ಟಿಎಂಸಿ: ಕಳೆದ ವರ್ಷ ಮುಂಗಾರು ಮಳೆ ಕೊರತೆಯಿಂದಾಗಿ ಜುಲೈ ಆರಂಭದವರೆಗೂ ಜಲಾಶಯಕ್ಕೆ ನೀರು ಹರಿದು ಬರಲಿಲ್ಲ. 2017ರ ಜೂನ್ 17ರಲ್ಲಿ ಕೇವಲ 0.950ಟಿಎಂಸಿ ನೀರು ಸಂಗ್ರಹವಾಗಿತ್ತು. ಈ ವೇಳೆ ಒಳ ಹರಿವಿನ ಪ್ರಮಾಣ ಕೇವಲ 317 ಟಿಎಂಸಿ ದಾಖಲಾಗಿದ್ದರೆ, ಹೊರ ಹರಿವು 200 ಕ್ಯೂಸೆಕ್ ಇತ್ತು. ಪ್ರಸಕ್ತ 2018ರ ಜೂನ್ 17ರ ಪ್ರಕಾರ 43000-44000 ಕ್ಯೂಸೆಕ್‌ವರೆಗೂ ಒಳ ಹರಿವಿದ್ದರೆ ಹೊರ ಹರಿವು 160 ಕ್ಯೂಸೆಕ್ ದಾಖಲಾಗಿದೆ. ವಿಶೇಷವೆಂದರೆ ತುಂಗಾಭದ್ರಾ ಜಲಾಶಯಕ್ಕೆ ಶನಿವಾರ ಒಂದೇ ದಿನ 4.50 ಟಿಎಂಸಿ ನೀರು ಹರಿದು ಬಂದಿದಿದ್ದರೆ, ಭಾನುವಾರ 4.60ಟಿಎಂಸಿ ನೀರು ಜಲಾಶಯದ ಒಡಲು ಸೇರಿದೆ. ಕಳೆದ ನಾಲ್ಕೇ ದಿನಗಳಲ್ಲಿ ಬರೋಬ್ಬರಿ 15ಟಿಎಂಸಿ ನೀರು ಜಲಾಶಯಕ್ಕೆ ಹರಿದು ಬಂದಂತಾಗಿದೆ.

ಹೆಚ್ಚಿದ ನಿರೀಕ್ಷೆ: ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಜೂನ್ ಆರಂಭದಿಂದಲೇ ತುಂಗಭದ್ರಾ ಜಲಾಶಯಕ್ಕೆ ನೀರಿನ ಹರಿವು ಹೆಚ್ಚಳವಾಗಿದೆ. ಕಳೆದ ಬಾರಿ ಮಳೆ ಕೊರತೆ, ಅಗತ್ಯ ನೀರು ಸಂಗ್ರಹವಾಗದೇ ಇರುವ ಕಾರಣಕ್ಕೆ ತುಂಗಭದ್ರಾ ಎಡ, ಬಲದಂಡೆ ಕಾಲುವೆಗಳ ಮೂಲಕ ಮುಂಗಾರು ಕೃಷಿ ಚಟುವಟಿಕೆಗೆ ಜುಲೈ ತಿಂಗಳ ಅಂತ್ಯದವರೆಗೂ ನೀರು ಹರಿಸುವ ಬಗ್ಗೆ ತೀರ್ಮಾನವೇ ಕೈಗೊಂಡಿರಲಿಲ್ಲ. ಜುಲೈ, ಆಗಷ್ಟ್‌ನಲ್ಲಿ ಮಳೆಯಾಗಿದ್ದರಿಂದ ಸೆಪ್ಟೆಂಬರ್ ತಿಂಗಳಲ್ಲಿ ಮೊದಲ ಬೆಳೆಗೆ ಅಳೆದು-ತೂಗಿ ನೀರು ಹರಿಸಲಾಯಿತು. ಆದರೆ ಸಮರ್ಪಕ ನೀರು ಸಿಗದೇ ಇರುವ ಕಾರಣ ಕೊಪ್ಪಳ, ಬಳ್ಳಾರಿ, ರಾಯಚೂರು ಸೇರಿ ನೆರೆಯ ಆಂಧ್ರ, ತೆಲಂಗಾಣ ಜಿಲ್ಲೆಯಲ್ಲೂ ಬೆಳೆಯಲಾಗಿದ್ದ 6 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಭತ್ತ ಸೇರಿ ಇತರೆ ಬೆಳೆ ನಿರೀಕ್ಷಿತ ಫಸಲು ಬಾರದೇ ನಷ್ಟವಾಯಿತು. ಆದರೆ ಈ ಬಾರಿ ಜೂನ್ ಅರ್ಧದಲ್ಲಿಯೇ ಜಲಾಶಯದಲ್ಲಿನ ನೀರು 20ಟಿಎಂಸಿ ಗಡಿ ದಾಟಿದ್ದು ಹೆಚ್ಚಿನ ನಿರೀಕ್ಷೆ ಮೂಡಿಸಿದೆ. ಜೂನ್ ಮುಕ್ತಾಯದ ವೇಳೆಗೆ 45 ಟಿಎಂಸಿವರೆಗೂ ನೀರು ಹರಿದು ಬಂದರೆ ಮೊದಲ ಬೆಳೆಯ ಬಗ್ಗೆ ಚಿಂತೆ ಇಲ್ಲ ಎನ್ನುತ್ತಾರೆ ರೈತರು.

ನದಿಗೂ ಹೆಚ್ಚಿದ ಕಳೆ: ಮುಂಗಾರು ಉತ್ತಮವಾಗಿದ್ದರಿಂದ ಕೇವಲ ಜಲಾಶಯ ಮಾತ್ರವಲ್ಲದೇ ತುಂಗಭದ್ರಾ ನದಿಗೂ ನೀರು ಹರಿದು ಬರುತ್ತಿದೆ. ಕಳೆದ ಎರಡು ವರ್ಷದಿಂದ ಸಂಪೂರ್ಣ ಬರಿದಾಗಿದ್ದ ನದಿಗೆ ಈ ಬಾರಿ ನೀರು ಹರಿವಿನಿಂದಾಗಿ ಮರು ಜೀವ ಪಡೆದಿದೆ. ನದಿ ಪಾತ್ರದ ಹಳ್ಳಿಗಳಲ್ಲೂ ಕೃಷಿ ಚಟುವಟಿಕೆಯ ಕನಸು ಚಿಗುರಿದ್ದು, ಜನ-ಜಾನುವಾರುಗಳ ದಾಹವೂ ತಣಿದಂತಾಗಿದೆ.
----
ಕಳೆದ ಒಂದು ವಾರದಿಂದ ಜಲಾಶಯಕ್ಕೆ ಉತ್ತಮ ಒಳ ಹರಿವು ದಾಖಲಾಗಿದೆ. 20 ಟಿಎಂಸಿವರೆಗೂ ನೀರು ಸಂಗ್ರಹವಾಗಿದೆ. ಇಷ್ಟೇ ಪ್ರಮಾಣದ ನೀರು ಬಂದರೆ ಮುಂಗಾರು ಬೆಳೆಗೆ ಯಾವುದೇ ಚಿಂತೆ ಇಲ್ಲ.
-ಶಂಕರಗೌಡ, ಸಿಇ ಮುನಿರಾಬಾದ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ