ಆ್ಯಪ್ನಗರ

ಮುಗಿಯದ ಅಂತಾರಾಜ್ಯ‘ಸೇತುವೆ’

ನೆರೆ ಹಾವಳಿಗೆ ಹಾಳಾದ ಆಂಧ್ರಪ್ರದೇಶ ಕರ್ನಾಟಕ ಸಂಪರ್ಕ ಸೇತುವೆಯ ಮರುನಿರ್ಮಾಣ ಕೆಲಸ ಸಕಾಲದಲ್ಲಿ ಮುಗಿಯದ್ದರಿಂದ ವಾಹನ ಸಂಚಾರ ಕಡಿತವಾಗಿದೆ.

Vijaya Karnataka 26 Nov 2017, 4:03 pm

ಸಿರುಗುಪ್ಪ: ನೆರೆ ಹಾವಳಿಗೆ ಹಾಳಾದ ಆಂಧ್ರಪ್ರದೇಶ ಕರ್ನಾಟಕ ಸಂಪರ್ಕ ಸೇತುವೆಯ ಮರುನಿರ್ಮಾಣ ಕೆಲಸ ಸಕಾಲದಲ್ಲಿ ಮುಗಿಯದ್ದರಿಂದ ವಾಹನ ಸಂಚಾರ ಕಡಿತವಾಗಿದೆ.

ತಾಲೂಕಿನ ರಾರಾವಿ ಗ್ರಾಮದ ಬಳಿಯ ವೇದಾವತಿ ಹಗರಿ ನದಿಗೆ ಕಟ್ಟಿದ ಸೇತುವೆ ಸಂರ್ಪಕ ಸೇತುವಾಗುವಾಗದೇ ಸ್ಮಾರಕವಾಗುತ್ತಿದೆ. ನಗರ ಮಾರ್ಗದಿಂದ ಇರುವ ರಾಷ್ಟ್ರೀಯ ಹೆದ್ದಾರಿ 150 ಎ.ದಲ್ಲಿ ಸಾಗುವ ವಾಹನಗಳು ಹಗರಿ ನದಿ ಈ ಸೇತುವೆ ದಾಟಬೇಕು. ಸೀಮಾಂಧ್ರ ಪ್ರದೇಶದಲ್ಲಿನ ಶ್ರೀಶೈಲಾ, ಮಂತ್ರಾಲಯ ಮತ್ತು ಹೈದರಾಬಾದ್‌, ವಿಜಯವಾಡ, ಗುಂಟೂರು, ಕರ್ನೂಲ್‌, ಅನಂತಪುರ, ಆದೊನಿ, ಆಲೂರು ಸೇರಿದಂತೆ ಇತರ ನಗರಕ್ಕೆ ಸಾಗಲು ಇದೇ ಸೇತುವೆ ದಾರಿಯಾಗಿದೆ. ಸದ್ಯ ಸೇತುವೆ ಕೆಲಸ ಮುಗಿಯದ್ದರಿಂದ ಅಂತಾರಾಜ್ಯ ಸಂಪರ್ಕ ಕಡಿತವಾಗಿದೆ.

ಏನಿದು ಸೇತುವೆ? : ಹಗರಿ ನದಿಗೆ ಸ್ವಾತಂತ್ರ್ಯ ಪೂರ್ವದಲ್ಲಿ ಕಟ್ಟಲಾಗಿದ್ದ ಸೇತುವೆ 2009ರಲ್ಲಿ ಬಂದ ನೆರೆಹಾವಳಿಯಲ್ಲಿ ಕೊಚ್ಚಿ ಹೋಗಿತ್ತು. ತಾತ್ಕಾಲಿಕವಾಗಿ 50 ಲಕ್ಷ ರೂ.ವೆಚ್ಚದಲ್ಲಿ ಸೇತುವೆ ದುರಸ್ತಿ ಮಾಡಿ, ಸಂಪರ್ಕಕ್ಕೆ ಅನುವು ಮಾಡಿಕೊಡಲಾಗಿತ್ತು. 2016ರಲ್ಲಿ ಬಂದ ಮಳೆಯಿಂದಾಗಿ ಸೇತುವೆ ಮೇಲ್ಭಾಗ ಕೊಚ್ಚಿ ಹೋಗಿತ್ತು. ಸೇತುವೆಗೆ ಅಳವಡಿಸಿದ್ದ ಪೈಪ್‌ಗಳು ಕಿತ್ತುಹೋಗಿ ವಾಹನಗಳ ಸಂಚಾರಕ್ಕೆ ಕೊಕ್ಕೆ ಬಿದ್ದಿತ್ತು. ಸೇತುವೆ ನಿರ್ಮಾಣಕ್ಕೆ ಚಾಲನೆ ಸಿಕ್ಕು ಹಲವು ವರ್ಷ ಕಳೆದರೂ ಮೋಕ್ಷ ದೊರೆಕಿಲ್ಲ. ಕುಂಟುತ್ತಲೇ ಕಾಮಗಾರಿ ಸಾಗಿರುವುದರಿಂದ ಜನ ಸಮಸ್ಯೆ ಎದುರಿಸುವಂತಾಗಿದೆ.

ಮಳೆಗಾಲದಲ್ಲಿ ತಿಪ್ಲ: ತಾತ್ಕಾಲಿಕವಾಗಿ ಜನರ ಅನುಕೂಲಕ್ಕಾಗಿ ನಿರ್ಮಿಸಿ ಸೇತುವೆ ಮೇಲೆ ಮಳೆಗಾಲದಲ್ಲಿ ನೀರು ಹರಿಯುತ್ತಿದೆ. ಸೇತುವೆ ಸರಿಯಾಗಿದ್ದರೆ, 8 ಕಿ.ಮೀ ಅಂತರ ಕ್ರಮಿಸಬೇಕಿತ್ತು. ಆದರೆ, ಈಗ ಸುತ್ತಲಿನ ಜನರೇ ಸುತ್ತಾಡಿ ಹೋಗಬೇಕಿದೆ. ನೀರು ಸೇತುವೆ ಮೇಲೆ ಹರಿದಾಗ ಸುಮಾರು 20 ಕಿ.ಮೀ.ಅಂತರದ ಟಿ.ರಾಂಪುರ, ಕುರುವಳ್ಳಿ, ನಾಗಲಾಪುರ ಗ್ರಾಮದ ಮೂಲಕ ಕುಡುದರಹಾಳು ಸೇತುವೆ ಬಳಸಿ ಸಾಗಬೇಕಿದೆ.

ಗಡುವು ಪಾಲನೆಯಿಲ್ಲ: ಸೇತುವೆ ಗುತ್ತಿಗೆಯನ್ನು ಹೈದರಾಬಾದ್‌ನ ಮಾಧವನ್‌ ಹೈಟೆಕ್‌ ಇನ್ಫ್ರಾಸ್ಟ್ರಕ್ಚರ್‌ ಪ್ರೈ.ಲಿ.ಕಂಪನಿ ಇದರ ಗುತ್ತಿಗೆ ಪಡೆದಿದೆ. 29 ಕೋಟಿ 65 ಲಕ್ಷ ರೂ.ಅನುದಾನ ಬಿಡುಗಡೆಯಾಗಿತ್ತು.

ಜ.10, 2013 ರಂದು ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಈ ಸೇತುವೆಯ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು. 2015ಕ್ಕೆ ಸೇತುವೆಯ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಬೇಕಿತ್ತು. ಆದರೆ, ಇಲ್ಲಿಯವರೆಗೂ ಸೇತುವೆ ನಿರ್ಮಾಣ ಕಾರ್ಯ ಪೂರ್ಣಗೊಂಡಿಲ್ಲ. ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು, ಸಾರ್ವಜನಿಕರು ಮಳೆಗಾಲದಲ್ಲಿ ಇನ್ನಿಲ್ಲದ ತಾಪತ್ರಯ ಎದುರಿಸುತ್ತಿದ್ದಾರೆ.

-------

ಭಾರಿ ವಾಹನಕ್ಕೂ ನಿಷೇಧ

ಕುಡುದರಹಾಳು ಗ್ರಾಮದ ಹತ್ತಿರ ವೇದಾವತಿ ಹಗರಿ ನದಿಗೆ ಕಟ್ಟಿರುವ ಸೇತುವೆ ಪೂರ್ಣ ದುರ್ಬಲವಾಗಿದ್ದರಿಂದ ಭಾರಿ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಲಘುವಾಹನಗಳಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ನೆರೆಯ ಆಂಧ್ರಪ್ರದೇಶದಿಂದ ತಾಲೂಕಿಗೆ ಬರಬೇಕಿದ್ದ ಲಾರಿಗಳು, ಮಾರ್ಗ ಬದಲಿಸಿ ಆಗಮಿಸುತ್ತಿವೆ.

-----

Vijaya Karnataka Web international bridge
ಮುಗಿಯದ ಅಂತಾರಾಜ್ಯ‘ಸೇತುವೆ’

ಸೇತುವೆ ಕಾಮಗಾರಿ ನಿರಂತರವಾಗಿ ನಡೆಯುತ್ತಿದ್ದು, 2013ರಲ್ಲಿ ಪ್ರಾರಂಭಗೊಂಡ ಕಾಮಗಾರಿ 2015 ಪೂರ್ಣಗೊಳ್ಳಬೇಕಿತ್ತು. ಆದರೆ, ತಾಂತ್ರಿಕ ಕಾರಣದಿಂದ ಹಾಗೂ ಸೇತುವೆಯ ಎರಡು ಬದಿಯ ಜಮೀನು ಸ್ವಾಧೀನ ವಿಳಂಬವಾಗಿದ್ದರಿಂದ ತಡವಾಗಿದೆ.

-ಹನುಮಂತರಾವ್‌, ಎಇಇ, ಲೋಕೋಪಯೋಗಿ ಇಲಾಖೆ, ಸಿರುಗುಪ್ಪ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ