ಆ್ಯಪ್ನಗರ

ಅದಿರು ಸಾಗಣೆಗೆ ದಾರಿ ನೀಡಲು ನಿರಾಕರಣೆ

ತಾಲೂಕಿನ ಸುಬ್ಬರಾಯನಹಳ್ಳಿ ಸಮೀಪದಲ್ಲಿ ಅದಿರು ಗಣಿಗಾರಿಕೆ ನಡೆಸಲು ಎಂಎಸ್‌ಪಿಎಲ್‌ ಲಿ. ಹೊಸಪೇಟೆ ಇವರು ಅದಿರು ಸಾಗಣೆಗಾಗಿ ದಾರಿ ಕೇಳಿದ ಬೇಡಿಕೆಯನ್ನು ದೇವಗಿರಿ ಗ್ರಾ.ಪಂ.ನ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಗ್ರಾಮ ಸಭೆ ಒಕ್ಕೊರಲಿನಿಂದ ಸೋಮವಾರ ತಿರಸ್ಕರಿಸಿದೆ.

Vijaya Karnataka 21 Aug 2018, 5:00 am
ಸಂಡೂರು : ತಾಲೂಕಿನ ಸುಬ್ಬರಾಯನಹಳ್ಳಿ ಸಮೀಪದಲ್ಲಿ ಅದಿರು ಗಣಿಗಾರಿಕೆ ನಡೆಸಲು ಎಂಎಸ್‌ಪಿಎಲ್‌ ಲಿ. ಹೊಸಪೇಟೆ ಇವರು ಅದಿರು ಸಾಗಣೆಗಾಗಿ ದಾರಿ ಕೇಳಿದ ಬೇಡಿಕೆಯನ್ನು ದೇವಗಿರಿ ಗ್ರಾ.ಪಂ.ನ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಗ್ರಾಮ ಸಭೆ ಒಕ್ಕೊರಲಿನಿಂದ ಸೋಮವಾರ ತಿರಸ್ಕರಿಸಿದೆ.
Vijaya Karnataka Web refusal to lead the ore shipment
ಅದಿರು ಸಾಗಣೆಗೆ ದಾರಿ ನೀಡಲು ನಿರಾಕರಣೆ


ಗ್ರಾ.ಪಂ.ಅಧ್ಯಕ್ಷ ಎಂ.ಸುರೇಶ, ಉಪಾಧ್ಯಕ್ಷೆ ಜ್ಯೋತಿ, ಕಮತೂರು ಅರಣ್ಯ ಹಕ್ಕು ಸಮಿತಿ ಅಧ್ಯಕ್ಷ ಎನ್‌.ಎಚ್‌.ಮಲ್ಲಿಸ್ವಾಮಿ, ಸುಬ್ಬರಾಯನಹಳ್ಳಿ ಅರಣ್ಯ ಹಕ್ಕು ಸಮಿತಿ ಅಧ್ಯಕ್ಷ ಬ್ರಹ್ಮಾನಂದ ನೇತೃತ್ವದಲ್ಲಿ ನಡೆದ ಅರಣ್ಯ ಹಕ್ಕು ಗ್ರಾಮ ಸಭೆಯಲ್ಲಿ ಪಿಡಿಒ ಕುಮಾರಸ್ವಾಮಿ ಮಾತನಾಡಿ, ಹೊಸಪೇಟೆಯ ಎಂಎಸ್‌ಪಿಎಲ್‌ ಲಿ.ನವರು ಮೈನಿಂಗ್‌ ಲೀಸ್‌ ಸಂ.2559 ರಲ್ಲಿ 26.71 ಹೆಕ್ಟೇರ್‌ ಪ್ರದೇಶದಲ್ಲಿ ಕಬ್ಬಿಣದ ಗಣಿಗಾರಿಕೆ ನಡೆಸಿ ಅದಿರು ಸಾಗಣೆಗೆ 1.60 ಹೆಕ್ಟೇರ್‌ ಪ್ರದೇಶದಲ್ಲಿ ದಾರಿ ಕೇಳಿದ್ದಾರೆ. ಅದಕ್ಕಾಗಿ ಈ ಭಾಗದಲ್ಲಿ ಪ.ಪಂಗಡ ಹಾಗೂ ಬುಡಕಟ್ಟು ಜನಾಂಗದವರು ವಾಸಿಸುತ್ತಾರೆ ಅಥವಾ ವಾಸಿಸುತ್ತಿಲ್ಲ ಎಂಬುದರ ಬಗ್ಗೆ ಅಧಿನಿಯಮ 2006, 2008 ರಡಿ ಪರಿಶೀಲಿಸಿ, ನಮೂನೆ-1 ಮತ್ತು 2 ರಲ್ಲಿ ಪ್ರಮಾಣ ಪತ್ರ ಸಲ್ಲಿಸಲು ಸಭೆ ಕರೆಯಲಾಗಿದೆ ಎಂದು ವಿಷಯ ಪ್ರಸ್ತಾಪಿಸಿದರು.

ಪರಿಸರಕ್ಕೆ ಧಕ್ಕೆಯಾಗುವ ಭೀತಿ: ಇದಕ್ಕೆ ಸದಸ್ಯರಾದ ಉದಯ್‌ ಕುಮಾರ್‌, ಜುಲೇಕಾಬೀ, ಪೆನ್ನಯ್ಯ, ಪರುಶುರಾಮ, ಲಕ್ಷ್ಮಿ, ಸುಬ್ಬರಾಯುಡು, ಫರ್ವಿನ್‌ ಬಾನು, ಮುಖಂಡರಾದ ಎಂ.ಪಿ.ಪೆನ್ನಪ್ಪ, ವಿ.ಕುಮಾರಸ್ವಾಮಿ, ಡಿ.ಸಾರೆಣ್ಣ, ತಿಮ್ಮಪ್ಪ, ಮಾರೆಣ್ಣ, ಈರಲಿಂಗಪ್ಪ, ಎನ್‌.ಮಲ್ಲೇಶ, ಷಣ್ಮುಖ ಪಾಟೀಲ್‌ ಸೇರಿ ಇತರರು ಮಾತನಾಡಿ, ಐತಿಹಾಸಿಕ ಕುಮಾರಸ್ವಾಮಿ ದೇಗುಲಕ್ಕೆ ಕೂಗಳತೆ ದೂರದಲ್ಲಿ ಎಂಎಸ್‌ಪಿಎಲ್‌ನವರು ಈ ಟೆಂಡರ್‌ನಲ್ಲಿ ಖರೀದಿಸಿದ ಗಣಿಯಿದೆ. ಗಣಿಗಾರಿಕೆಯಿಂದ ದೇಗುಲಕ್ಕೆ ಧಕ್ಕೆ ಯಾಗುವ ಜತೆಗೆ ಧಾರ್ಮಿಕ ಭಾವನೆಗಳಿಗೆ ನೋವು ಉಂಟಾಗಲಿದೆ. ಈ ಭಾಗದಲ್ಲಿ ಬುಡಕಟ್ಟು ಜನರಿಲ್ಲವಾದರೂ ಪ.ಪಂಗಡದ ಜನ ಸಾಕಷ್ಟಿದ್ದಾರೆ. ದಟ್ಟವಾದ ಅರಣ್ಯದಲ್ಲಿ ಅರಣ್ಯೇತರ ಚಟುವಟಿಕೆ ನಡೆಸುವುದು, ರಸ್ತೆ ನಿರ್ಮಾಣ ಮಾಡುವುದರಿಂದ ಪರಿಸರ ನಾಶದ ಜತೆಗೆ ನವಿಲು, ಚಿರತೆ ಸೇರಿ ನಾನಾ ಪ್ರಾಣಿ ಪಕ್ಷಿಗಳಿಗೆ ತೊಂದರೆಯಾಗುವ ಜತೆಗೆ ಜೀವ ವೈವೀಧ್ಯತೆ ನಾಶವಾಗುತ್ತದೆ. ಮೇಲಾಗಿ ಗಣಿ ಗುತ್ತಿಗೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವಮುಖ್ಯ ರಸ್ತೆಯನ್ನು ಒಳಗೊಂಡಿದ್ದು ಧೂಳು ಹೆಚ್ಚಲಿದೆ. ಕಾರ್ತೀಕೇಶ್ವರ ಗ್ರಾಮ, ಸರಕಾರಿ ಶಾಲೆ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ ಆದ್ದರಿಂದ ಯಾವುದೇ ಕಾರಣಕ್ಕೂ ಈಭಾಗದಲ್ಲಿ ಗಣಿಗಾರಿಕೆ ನಡೆಸಲು ಅವಕಾಶ ನೀಡಬಾರದು ಮತ್ತು ರಸ್ತೆ ನಿರ್ಮಾಣಕ್ಕೆ ಅರಣ್ಯದ ಜಾಗ ನೀಡಬಾರದು ಎಂದು ಒಕ್ಕೊರಲಿನಿಂದ ಆಗ್ರಹಿಸಿದರು. ಇದಕ್ಕೆ ಸಭೆ ಒಪ್ಪಿ ನಿರ್ಣಯಿಸಿತು.

ಈ ಸಂದರ್ಭದಲ್ಲಿ ತಾ.ಪಂ.ಇಒ ಜೆ.ಎಂ.ಅನ್ನದಾನಯ್ಯಸ್ವಾಮಿ, ಯೋಜನಾಧಿಕಾರಿ ಲೋಕೇಶಬಾಬು, ಆರ್‌ಎಫ್‌ಒ ಶಶಿಧರ್‌, ಮಹಿಳಾ ಮೇಲ್ವಿಚಾರಕಿ ಎಂ.ಎಂ.ಭಜಂತ್ರಿ ಸೇರಿದಂತೆ ಗ್ರಾಮದ ಮುಖಂಡರು ಇತರರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ