ಆ್ಯಪ್ನಗರ

ಬೇಡಿಕೆ ಈಡೇರಿಕೆಗೆ ಕಾರ್ಮಿಕರ ಒತ್ತಾಯ

ಮಹಾನಗರ ಪಾಲಿಕೆ ಗುತ್ತಿಗೆ ಪೌರ ಕಾರ್ಮಿಕರು ಹಾಗೂ ಕಸ ಸಂಗ್ರಹಣೆ ವಾಹನ ಚಾಲಕರ ಬಾಕಿ ವೇತನ ಕೂಡಲೇ ನೀಡಬೇಕು ಎಂದು ಒತ್ತಾಯಿಸಿ ಸಮಾನತೆ ಯೂನಿಯನ್ ನೇತೃತ್ವದಲ್ಲಿ ನೂರಾರು ಪೌರ ಕಾರ್ಮಿಕರು ಸ್ಥಳೀಯ ಮಹಾನಗರ ಪಾಲಿಕೆ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು.

ವಿಕ ಸುದ್ದಿಲೋಕ 5 Mar 2016, 5:08 am
ಬಳ್ಳಾರಿ; ಮಹಾನಗರ ಪಾಲಿಕೆ ಗುತ್ತಿಗೆ ಪೌರ ಕಾರ್ಮಿಕರು ಹಾಗೂ ಕಸ ಸಂಗ್ರಹಣೆ ವಾಹನ ಚಾಲಕರ ಬಾಕಿ ವೇತನ ಕೂಡಲೇ ನೀಡಬೇಕು ಎಂದು ಒತ್ತಾಯಿಸಿ ಸಮಾನತೆ ಯೂನಿಯನ್ ನೇತೃತ್ವದಲ್ಲಿ ನೂರಾರು ಪೌರ ಕಾರ್ಮಿಕರು ಸ್ಥಳೀಯ ಮಹಾನಗರ ಪಾಲಿಕೆ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು.
Vijaya Karnataka Web the demand for labor force to achieve
ಬೇಡಿಕೆ ಈಡೇರಿಕೆಗೆ ಕಾರ್ಮಿಕರ ಒತ್ತಾಯ


ಬೆಳಗ್ಗೆ 6ಗಂಟೆ ಸುಮಾರಿಗೆ ಪಾಲಿಕೆ ಕಚೇರಿ ಆವರಣದಲ್ಲಿ ಜಮಾಯಿಸಿದ ನೂರಾರು ಗುತ್ತಿಗೆ ಪೌರ ಕಾರ್ಮಿಕರು ಎಲ್ಲ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು. ಸಮಾನತೆ ಯೂನಿಯನ್ ರಾಜ್ಯ ಸಂಚಾಲಕ ರಾಮಚಂದ್ರ ಮಾತನಾಡಿ, ಗುತ್ತಿಗೆ ಪೌರ ಕಾರ್ಮಿಕರು, ವಾಹನ ಚಾಲಕರಿಗೆ ಕಳೆದ ಎರಡ್ಮೂರು ತಿಂಗಳಿನಿಂದ ವೇತನ ನೀಡಿಲ್ಲ. ಇದರಿಂದ ಜೀವನ ನಿರ್ವಹಣೆ ಕಷ್ಟವಾಗಿದೆ.ಅಲ್ಲದೇ ಪೌರ ಕಾರ್ಮಿಕರ ಭವಿಷ್ಯ ನಿಧಿ ಬಗ್ಗೆ ಸ್ಪಷ್ಟತೆ ಇಲ್ಲ. ಬ್ಯಾಂಕ್ ಖಾತೆಯಲ್ಲಿ ಭವಿಷ್ಯ ನಿಧಿ ಹಣ ಎಷ್ಟು ಜಮಾಮಾಡಲಾಗಿದೆ ಎಂಬ ಸಮರ್ಪಕ ಮಾಹಿತಿ ನೀಡುತ್ತಿಲ್ಲ. ಜತೆಗೆ ಇಎಸ್‌ಐ ಕಾರ್ಡ್‌ಗಳನ್ನು ವಿತರಿಸಿಲ್ಲ ಎಂದು ದೂರಿದರು.

ಗುತ್ತಿಗೆ ಪೌರ ಕಾರ್ಮಿಕರಿಗೆ ದಿನ ಬೆಳಗ್ಗೆ ಉಪಾಹಾರ ನೀಡಲು 2015ರಲ್ಲಿ ಸರಕಾರಿ ಆದೇಶವಾಗಿದ್ದರೂ, ಈವರೆಗೂ ಯಾರೊಬ್ಬರಿಗೂ ಉಪಹಾರ ನೀಡುತ್ತಿಲ್ಲ. ಪೌರ ಕಾರ್ಮಿಕರನ್ನು ನಿರಂತರವಾಗಿ ಕಡೆಗಣಿಸಲಾಗುತ್ತಿದೆ. ಪಾಲಿಕೆಗೆ ಹೊಸ ಆಯುಕ್ತರು ಬಂದ ನಂತರ ಉಪಹಾರ ನೀಡಲಾಗುವುದು ಎಂದು ಕೆಲ ಅಧಿಕಾರಿಗಳು ಹೇಳುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರತಿಭಟನ ನಿರತರು ಆಕ್ರೋಶ ವ್ಯಕ್ತಪಡಿಸಿದರು.

ಆಗ್ರಹ: ಗುತ್ತಿಗೆ ಪೌರ ಕಾರ್ಮಿಕರಿಗೆ ಪ್ರತಿ ಭಾನುವಾರ ವೇತನ ಸಹಿತ ರಜೆ ನೀಡಬೇಕು. ಕಾರ್ಮಿಕರಿಗೆ ಬಟ್ಟೆ ಹಾಗೂ ಅಗತ್ಯ ಪರಿಕರಗಳನ್ನು ನೀಡಬೇಕು. ಆರೋಗ್ಯ ತಪಾಸಣೆ ನಡೆಸುವುದು. ಪ್ರತಿ ತಿಂಗಳು 10ನೇ ತಾರೀಖಿನೊಳಗೆ ವೇತನ ನೀಡುವುದು. ವಿಮೆ ಸೌಲಭ್ಯ ಕಲ್ಪಿಸುವುದು. ಗುತ್ತಿಗೆ ಪದ್ಧತಿ ರದ್ದುಗೊಳಿಸಿ ಪಾಲಿಕೆಯಿಂದಲೇ ಪೌರ ಕಾರ್ಮಿಕರನ್ನು ನೇಮಿಸಿಕೊಳ್ಳುವುದು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದು. ಪಾಲಿಕೆ ಕಾಯಂ ಪೌರ ಕಾರ್ಮಿಕರಿಗೆ ರಜೆ ದಿನಗಳಲ್ಲಿ ಕೆಲಸಮಾಡಿದ 21ದಿನದ ವೇತನ ನೀಡಬೇಕು. 2013-14 ಹಾಗೂ 2015-16ನೇ ಸಾಲಿನ ಪೌರ ಕಾರ್ಮಿಕ ದಿನಾಚರಣೆಯ ವಿಶೇಷ ಭತ್ಯೆಯನ್ನು ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಪ್ರತಿಭಟನಾ ನಿರತರು ಒತ್ತಾಯಿಸಿದರು.

ಮೇಯರ್ ಭೇಟಿ: ಗುತ್ತಿಗೆ ಪೌರ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿರುವ ಸುದ್ಧಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪಾಲಿಕೆ ಮೇಯರ್ ನಾಗಮ್ಮ ಆಗಮಿಸಿ, ‘ಸಮಸ್ಯೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಬಗೆಹರಿಸಿಕೊಳ್ಳೋಣ. ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವೆ’ ಎಂದು ಭರವಸೆ ನೀಡಿದ ಬಳಿಕ ಪೌರ ಕಾರ್ಮಿಕರು ಪ್ರತಿಭಟನೆ ಕೈಬಿಟ್ಟರು. ಮುಖಂಡರಾದ ರತ್ನಮ್ಮ, ಕಾಳಿಪ್ರಸಾದ್, ಅಮರನಾಥ್, ರವಿಕುಮಾರ್, ಮಾರೆಣ್ಣ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ