ಆ್ಯಪ್ನಗರ

ಉಳ್ಳಾಗಡ್ಡೆ ‘ಲಾಭ’ ರೈತರಿಗಿಲ್ಲ

ಆರಂಭದಲ್ಲೇ ರೋಗಕ್ಕೆ ಸಿಲುಕಿ ಕ್ರಿಮಿನಾಶಕ ಸಿಂಪರಣೆಯಿಂದ ಬದುಕುಳಿದ ಈರುಳ್ಳಿ ಈಗ ಮಾರುಕಟ್ಟೆಯಲ್ಲಿ ಬೆಲೆ ಕಾಣದೇ ಕುಸಿದಿದೆ.

Vijaya Karnataka 23 Mar 2018, 5:00 am

ಪಿ.ವೀರೇಂದ್ರಗೌಡ, ಸಂಡೂರು

ಆರಂಭದಲ್ಲೇ ರೋಗಕ್ಕೆ ಸಿಲುಕಿ ಕ್ರಿಮಿನಾಶಕ ಸಿಂಪರಣೆಯಿಂದ ಬದುಕುಳಿದ ಈರುಳ್ಳಿ ಈಗ ಮಾರುಕಟ್ಟೆಯಲ್ಲಿ ಬೆಲೆ ಕಾಣದೇ ಕುಸಿದಿದೆ.

ಕಡಿಮೆ ಕೃಷಿ ಭೂಮಿ ಇರುವ ತಾಲೂಕಿನಲ್ಲಿ ಇರುವ ಈರುಳ್ಳಿ ಬೆಳೆಗಾರರು, ಈರುಳ್ಳಿ ಘಾಟು ಇಲ್ಲದೇ ಕಣ್ಣೀರಿಡುತ್ತಿದ್ದಾರೆ. ಭುಜಂಗರನಗರ, ಕೃಷ್ಣಾನಗರ, ದೌಲತ್‌ಪುರ, ತಾರಾನಗರ, ಸುಶೀಲಾನಗರ, ಧರ್ಮಾಪುರ ಸೇರಿ ನಾನಾ ಕಡೆ ಈರುಳ್ಳಿ ಪ್ರಮುಖ ಬೆಳೆಯಾಗಿದೆ. 528 ಹೆಕ್ಟೇರ್‌ನಲ್ಲಿ ಹಿಂಗಾರು ಬೆಳೆಯಾಗಿ ಈರುಳ್ಳಿ ಹಾಕಲಾಗಿತ್ತು. ರೈತರು ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದರು. ಹುಸಿಯಾಗದೇ ಈರುಳ್ಳಿ ದೊರಕಿದೆ. ಆದರೆ, ಬೆಲೆ ಕಾಣದೇ ಕಂಗೆಟ್ಟಿದೆ.

ಖರ್ಚಿನ ಹೊರೆ: ಡಿಸೆಂಬರ್‌, ಜನವರಿಯಲ್ಲಿ ಕೆಲ ದಿನ ಮೋಡ ಮುಸುಕಿದ ವಾತಾವರಣವಿತ್ತು. ಮಂಜಿನ ಹನಿಗಳ ಕಾಟಕ್ಕೆ ಮಜ್ಜಿಗೆ ರೋಗ ಆವರಿಸಿ ಬಹುತೇಕ ಈರುಳ್ಳಿ ಬೆಳೆಗಾರರು ಔಷಧ ಸಿಂಪರಣೆ ಮಾಡಿ ಬೆಳೆ ಉಳಿಸಿಕೊಳ್ಳಲು ಹರ ಸಾಹಸಪಟ್ಟರು. 150 ಹೆಕ್ಟೇರ್‌ಗೂ ಹೆಚ್ಚಿನ ಈರುಳ್ಳಿ ಬೆಳೆ ನಾಶವಾಗುವ ಸ್ಥಿತಿ ನಿರ್ಮಾಣವಾಗಿತ್ತು. ಒಂದು ಎಕರೆ ಈರುಳ್ಳಿ ಬೆಳೆಗೆ ಬೀಜ ನಾಟಿ ಮಾಡಿ ಸಸಿ ನೆಟ್ಟು ನೀರು ಹಾಯಿಸಿ, ಸೂಕ್ತ ಗೊಬ್ಬರ ಕೊಟ್ಟು ಪಾಲನೆ ಪೋಷಣೆ ಮಾಡಲು ಕನಿಷ್ಠ 40-50 ಸಾವಿರ ರೂ.ಖರ್ಚು ತಗಲುತ್ತದೆ. ರೋಗ ಬಾಧೆಗೆ ಹೆದರಿ ಬೆಳೆ ಹಾಳು ಮಾಡಿಕೊಳ್ಳಲು ಮನಸ್ಸಿಲ್ಲದ ರೈತರು ಔಷಧೋಪಚಾರಕ್ಕೆ ಮತ್ತಷ್ಟೂ ಹಣ ವ್ಯಯ ಮಾಡಿದ್ದು, ಇದೀಗ ಬೆಲೆ ಕುಸಿತದಿಂದ ಸಂಕಷ್ಟಕ್ಕೀಡಾಗಿದ್ದಾರೆ.

ಬೆಲೆ ಕುಸಿತ: ತಿಂಗಳ ಹಿಂದೆ ಈರುಳ್ಳಿ ಕ್ವಿಂಟಲ್‌ಗೆ 2,500 ರಿಂದ 2,800 ರೂ.ವರೆಗೆ ಮಾರಾಟವಾಗುತ್ತಿತ್ತು. ಕಳೆದ 10 ದಿನಗಳಿಂದ ಇದ್ದಕ್ಕಿದ್ದಂತೆ ಈರುಳ್ಳಿ ಬೆಲೆ ಕ್ವಿಂಟಲ್‌ಗೆ ಕೇವಲ 600-700 ರೂ.ಗೆ ಕುಸಿತ ಕಂಡಿದೆ. ಬೀಜ, ಗೊಬ್ಬರ, ನಾಟಿ ಖರ್ಚು ಸೇರಿ ಪ್ರತಿ ಎಕರೆ ಈರುಳ್ಳಿ ಬೆಳೆಯನ್ನು ಕೊಯ್ಯಲು 10 ಸಾವಿರ ರೂ., ಕೊಯ್ದ ಈರುಳ್ಳಿಯ ಸಣ್ಣ ಮತ್ತು ದೊಡ್ಡ ಗಡ್ಡೆಗಳನ್ನು ಬೇರ್ಪಡಿಸಿ, ಸೋಸಲು ಆಳುಗಳ ಕೂಲಿ 600 ರೂ., ಹೊತ್ತು ಹಾಕುವವರ ಕೂಲಿ 600 ರೂ., ಜಮೀನಿನಿಂದ ಕಣಕ್ಕೆ ಸಾಗಣೆ ಮಾಡಲು ಪ್ರತಿ ಟ್ರ್ಯಾಕ್ಟರ್‌ಗೆ ಒಂದು ಸಾವಿರ ರೂ.ಬಾಡಿಗೆ ಸೇರಿ ಎಕರೆಗೆ ಕನಿಷ್ಠ 40-50 ಸಾವಿರ ರೂ.ವ್ಯಯಿಸಲಾಗಿದೆ.

ಚಿಂತೆ: ಸಹಾಯಧನ ಆಧರಿತ ಡ್ರಿಪ್‌ ಸೌಲಭ್ಯವಿದೆ ಎಂದು ಹೇಳುವ ತೋಟಗಾರಿಕೆ ಇಲಾಖೆ ಅಧಿಕಾರಿಗಳು ನಾಟಿ ಮಾಡಿದ ತಿಂಗಳ ನಂತರ ಜಮೀನಿಗೆ ಬಂದು ಸಮೀಕ್ಷೆ ಮಾಡುತ್ತಾರೆ. ನಂತರ ಇತ್ತ ಸುಳಿಯುವುದಿಲ್ಲ. ಇಲಾಖೆ ಸಹಾಯ ಧನಕ್ಕೆ ಕಾದು ಸುಸ್ತಾದ ಪರಿಣಾಮ 1,600 ರೂ.ಗೆ ಒಂದರಂತೆ ಎಕರೆಗೆ 10 ಪೈಪ್‌ಲೈನ್‌ಗಳನ್ನು ಹಾಕಿಕೊಂಡು ಸ್ವಂತ ಡ್ರಿಪ್‌ ಮಾಡಿಕೊಂಡ ರೈತರು ಸಾಕಷ್ಟು ಜನರಿದ್ದಾರೆ. ರೋಗಕ್ಕೆ ಔಷಧ ಸಿಂಪರಣೆ ಮಾಡಿದ ರೈತರು ಎಕರೆಗೆ 10-12 ಟನ್‌ ಬೆಳೆ ಬೆಳೆದಿದ್ದಾರೆ. ರೋಗ ನಿಯಂತ್ರಣಕ್ಕೆ ತರಲು ಸಾಧ್ಯವಾಗದವರು, ಎಕರೆಗೆ 7-8 ಟನ್‌ ಈರುಳ್ಳಿ ಬೆಳೆದಿದ್ದು ಯಾರೊಬ್ಬರೂ ಲಾಭ ಹೊಂದುವ ಸ್ಥಿತಿಯಿಲ್ಲ. ಉತ್ತಮ ಬೆಲೆ ಬರುವವರೆಗೆ ಈರುಳ್ಳಿ ಶೇಖರಿಸಿಟ್ಟುಕೊಳ್ಳುವ ಚಿಂತನೆಯಲ್ಲಿದ್ದಾರೆ. ಇದೀಗ ಶೇಖರಣೆ ಘಟಕ ನಿರ್ಮಾಣದ ಖರ್ಚಿಗೆ ಹಣ ಜೋಡಿಸುವ ಚಿಂತೆಯಲ್ಲಿದ್ದಾರೆ.

...

ಈರುಳ್ಳಿ ಬೆಳೆಗಾರರಿಗೆ ಸಹಾಯ ಧನ ಆಧರಿತ ಡ್ರಿಪ್‌ ಹಾಕುತ್ತೇವೆ ಎಂದು ಬಂದು ಹೋದ ತೋಟಗಾರಿಕೆ ಇಲಾಖೆಯವರು ಇತ್ತ ಸುಳಿಯಲಿಲ್ಲ. ಸ್ವಂತ ಹಣದಲ್ಲಿ ಡ್ರಿಪ್‌ ಹಾಕಿಕೊಂಡು ಈರುಳ್ಳಿ ಬೆಳೆದಿದ್ದೇವೆ. ಇದೀಗ ಬೆಲೆ ಕುಸಿತದಿಂದ ಕಂಗೆಟ್ಟಿದ್ದೇವೆ.

-ಜಿ.ಗಿರಿಯಪ್ಪ, ಚಂದ್ರಶೇಖರ್‌, ಈರುಳ್ಳಿ ಬೆಳೆಗಾರರು, ಭುಜಂಗನಗರ, ಸಂಡೂರು

ಈರುಳ್ಳಿ ಬೆಲೆ ಕುಸಿತವಾಗಿರುವುದು ನಿಜ. ಉತ್ತಮ ಬೆಲೆ ಸಿಗುವರೆಗೆ ಈರುಳ್ಳಿ ಸಂಗ್ರಹಣೆ ಮಾಡಲು ಕನಿಷ್ಠ 2.50 ಎಕರೆ ಈರುಳ್ಳಿ ಬೆಳೆದ ರೈತರಿಗೆ ಶೇಖರಣೆ ಘಟಕ ನಿರ್ಮಾಣಕ್ಕಾಗಿ ಗರಿಷ್ಠ 64 ಸಾವಿರ ರೂ.ಸಹಾಯಧನ ಲಭ್ಯವಿದೆ. ಆಸಕ್ತ ರೈತರು ಇಲಾಖೆಯನ್ನು ಸಂಪರ್ಕಿಸಬಹುದು.

-ಮಕಬುಲ್‌ ಹುಸೇನ್‌, ಎಡಿ, ತೋಟಗಾರಿಕೆ ಇಲಾಖೆ, ಸಂಡೂರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ