Please enable javascript.ಮರಗಳ ಮಾರಣ ಹೋಮಕ್ಕೆ ಅಧಿಕಾರಿಗಳೇ ಹೊಣೆ: ಆರೋಪ - ಮರಗಳ ಮಾರಣ ಹೋಮಕ್ಕೆ ಅಧಿಕಾರಿಗಳೇ ಹೊಣೆ: ಆರೋಪ - Vijay Karnataka

ಮರಗಳ ಮಾರಣ ಹೋಮಕ್ಕೆ ಅಧಿಕಾರಿಗಳೇ ಹೊಣೆ: ಆರೋಪ

Vijaya Karnataka Web 29 Sep 2013, 4:50 am
Subscribe

ನಗರದಲ್ಲಿ ಮರಗಳ ಮಾರಣ ಹೋಮಕ್ಕೆ ಅರಣ್ಯ ವಿಭಾಗದ ಅಧಿಕಾರಿಗಳೇ ಕಾರಣರಾಗಿದ್ದು, ಭ್ರಷ್ಟರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಸದಸ್ಯರು ಪಕ್ಷಭೇದ ಮರೆತು ಒತ್ತಾಯಿಸಿದ ಪ್ರಸಂಗ ಶನಿವಾರ ಬಿಬಿಎಂಪಿ ವಿಷಯ ಸಭೆಯಲ್ಲಿ ನಡೆಯಿತು.

ಮರಗಳ ಮಾರಣ ಹೋಮಕ್ಕೆ ಅಧಿಕಾರಿಗಳೇ ಹೊಣೆ: ಆರೋಪ
ಬೆಂಗಳೂರು: ನಗರದಲ್ಲಿ ಮರಗಳ ಮಾರಣ ಹೋಮಕ್ಕೆ ಅರಣ್ಯ ವಿಭಾಗದ ಅಧಿಕಾರಿಗಳೇ ಕಾರಣರಾಗಿದ್ದು, ಭ್ರಷ್ಟರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಸದಸ್ಯರು ಪಕ್ಷಭೇದ ಮರೆತು ಒತ್ತಾಯಿಸಿದ ಪ್ರಸಂಗ ಶನಿವಾರ ಬಿಬಿಎಂಪಿ ವಿಷಯ ಸಭೆಯಲ್ಲಿ ನಡೆಯಿತು.

ಅರಣ್ಯ ವಿಭಾಗದ ಅಧಿಕಾರಿಗಳ ಬೇಜವಾಬ್ದಾರಿತನದ ಬಗ್ಗೆ ಮೇಯರ್ ಕೂಡ ಅಸಮಾಧಾನ ವ್ಯಕ್ತಪಡಿಸಿದ ಬಳಿಕ ಆಯುಕ್ತರು ತಪ್ಪಿತಸ್ತರ ವಿರುದ್ಧ ಸೂಕ್ತ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು.

ಖದೀಮರು ಬಂದಿದ್ದಾರೆ
ಸಭೆ ಆರಂಭವಾಗುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ಆಡಳಿತ ಪಕ್ಷದ ನಾಯಕ ಎನ್.ನಾಗರಾಜ್, ‘‘ಜಯನಗರ 3 ಹಾಗೂ 4ನೇ ಬ್ಲಾಕ್‌ನ ಹಲವು ರಸ್ತೆಗಳಲ್ಲಿ ರಾತ್ರೋರಾತ್ರಿ ಮರಗಳನ್ನು ಕಡಿಯಲಾಗಿದೆ. ಅರಣ್ಯ ಇಲಾಖೆಯಿಂದ ಬಿಬಿಎಂಪಿಗೆ ಖದೀಮರು ಬಂದಿದ್ದಾರೆ. ಅರಣ್ಯ ವಿಭಾಗದ 24 ಮಂದಿ ಅಧಿಕಾರಿಗಳ ವೇತನಕ್ಕೆ ಮಾಸಿಕವಾಗಿ 10 ಲಕ್ಷ ರೂ. ವೆಚ್ಚ ಮಾಡಲಾಗುತ್ತಿದೆ. ಆದರೆ ಇವರಿಂದ ಹಸಿರು ವೃದ್ಧಿಗೆ ಯಾವುದೇ ನೆರವಾಗುತ್ತಿಲ್ಲ. ಬದಲಿಗೆ ಅವರು ಸಂಸ್ಥೆಗಳೊಂದಿಗೆ ಶಾಮೀಲಾಗಿ ರಾತ್ರೋರಾತ್ರಿ ಮರ ಕಡಿದು ಅಕ್ರಮವಾಗಿ ಜಾಹೀರಾತು ಫಲಕ ಅಳವಡಿಸಲು ನೆರವಾಗುತ್ತಿದ್ದಾರೆ. ಅರಣ್ಯ ವಿಭಾಗವು ಕಳೆದ ಮೂರು ವರ್ಷಗಳಿಂದ ನೆಟ್ಟಿರುವ ಸಸಿಗಳನ್ನು ಮೇಯರ್, ಆಯುಕ್ತರು ಖುದ್ದಾಗಿ ಪರಿಶೀಲಿಸಿದರೆ ಸತ್ಯಾಂಶ ಗೊತ್ತಾಗಲಿದೆ,’’ ಎಂದರು.

25,000 ಮರ ನಾಶ
‘‘ನನ್ನ ವಾರ್ಡ್‌ನಲ್ಲಿ ಸಸಿಗಳನ್ನು ನೆಟ್ಟು ಸ್ವಂತ ಹಣದಲ್ಲಿ 2,500 ಟ್ರೀ ಗಾರ್ಡ್ ಅಳವಡಿಸಿ ಮಕ್ಕಳಂತೆ ಪೋಷಿಸಿ ಬೆಳೆಸಿದ್ದೇನೆ. ಇಂತಹ ಮರಗಳನ್ನು ಕಡಿದಾಗ ನೋವಾಗುತ್ತದೆ. ಅರಣ್ಯ ವಿಭಾಗದ ಅಧಿಕಾರಿಗಳು ಶಾಮೀಲಾಗಿ ನಗರದಲ್ಲಿ 25,000ಕ್ಕೂ ಹೆಚ್ಚು ಮರಗಳನ್ನು ಕಡಿದಿದ್ದಾರೆ. ಸಸಿಗಳನ್ನು ನೆಡದಿದ್ದರೂ ಕೋಟ್ಯಂತರ ರೂ. ಬಿಲ್ ಮಾಡಲಾಗುತ್ತಿದೆ. ತಪ್ಪಿತಸ್ತ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು,’’ ಎಂದು ನಾಗರಾಜ್ ಹೇಳಿದರು. ಇದಕ್ಕೆ ಪ್ರತಿಪಕ್ಷ ನಾಯಕ ಬಿ.ಎನ್.ಮಂಜುನಾಥರೆಡ್ಡಿ ಹಲವು ಸದಸ್ಯರು ದನಿಗೂಡಿಸಿದರು.

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬ್ರಿಜೇಶ್ ಕುಮಾರ್ ಪ್ರತಿಕ್ರಿಯಿಸಿ, ‘ಮರ ಕಡಿತ, ತೆರವಿಗೆ ಸಂಬಂಧಪಟ್ಟ ಅರ್ಜಿಗಳು ಕಿರಿಯ ಅಧಿಕಾರಿಗಳ ಹಂತದಲ್ಲೇ ವಿಲೇವಾರಿಯಾಗುತ್ತಿದ್ದು, ಪರಿಶೀಲಿಸಲಾಗುವುದು,’’ ಎಂದರು. ಇದಕ್ಕೆ ಸದಸ್ಯರು ಸಮಾಧಾನಗೊಳ್ಳಲಿಲ್ಲ.

ವೀರಪ್ಪನ್‌ಗಿಂತ ದೊಡ್ಡ ದಂಡು
ಬಳಿಕ ಮಾತನಾಡಿದ ಮೇಯರ್, ‘ಅರಣ್ಯ ವಿಭಾಗದ ಹಿರಿಯ ಅಧಿಕಾರಿಯು ತಿಂಗಳಿಗೆ ಒಂದು ಲಕ್ಷ ರೂ. ವೇತನ ಪಡೆಯುತ್ತಿದ್ದರೂ ಅವರ ಕಾರ್ಯ ನಿರ್ವಹಣೆ ಶೂನ್ಯ. ನಗರದಲ್ಲಿ ಅಪಾಯಕಾರಿ ಮರಗಳ ತೆರವು ಕಾರ್ಯ ಸುಗಮಗೊಳಿಸಲು ಪಾಲಿಕೆಯಲ್ಲಿ ಈ ಘಟಕ ತೆರೆಯಲಾಯಿತು. ಆದರೀಗ ವೀರಪ್ಪನ್‌ಗಿಂತ ದೊಡ್ಡ ದಂಡೇ ಪಾಲಿಕೆಗೆ ಬಂದಿದೆ. ಹಲವು ಬಾರಿ ಸೂಚನೆ ನೀಡಿದರೂ ಈವರೆಗೆ ನೆಟ್ಟಿರುವ ಗಿಡಗಳ ಸ್ಥಳ ತೋರಿಸಿಲ್ಲ. ಲೂಟಿ ಮಾಡಲು ಬಂದಿರುವ ಅರಣ್ಯ ವಿಭಾಗದ ಅಧಿಕಾರಿಗಳು ಪಾಲಿಕೆಗೆ ಅಗತ್ಯವಿಲ್ಲ,’’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪರಿಶೀಲಿಸಿ ಕ್ರಮ
ಕೊನೆಗೆ ಪ್ರತಿಕ್ರಿಯೆ ನೀಡಿದ ಆಯುಕ್ತ ಎಂ.ಲಕ್ಷ್ಮೀನಾರಾಯಣ್, ‘‘ಜಯನಗರದಲ್ಲಿ ಮರ ಕಡಿತಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗುವುದು. ಎರಡು ದಿನಗಳಲ್ಲಿ ಪ್ರತಿಕ್ರಿಯೆ ಪಡೆದು ನಂತರ ಅವರನ್ನು ಅಮಾನತುಪಡಿಸಿ, ಮಾತೃ ಇಲಾಖೆಗೆ ವಾಪಸ್ ಕಳುಹಿಸಲಾಗುವುದು. ನಗರದಲ್ಲಿ ಸಸಿ ನೆಡುವ ಕಾರ್ಯಕ್ಕೆ 10 ಕೋಟಿ ರೂ. ಕಾಯ್ದಿರಿಸಲಾಗಿದ್ದು, ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಇದಕ್ಕೆ ಅಗತ್ಯ ಅನುಮೋದನೆಯನ್ನು ಶೀಘ್ರವಾಗಿ ನೀಡುವಂತೆ ಹಣಕಾಸು ವಿಭಾಗಕ್ಕೆ ಸೂಚಿಸಲಾಗುವುದು,’’ ಎಂದರು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ