ಆ್ಯಪ್ನಗರ

ನಾಮಫಲಕಗಳಲ್ಲಿ ಕನ್ನಡ ಕಡ್ಡಾಯಕ್ಕೆ ಜಾಹೀರಾತು ಬೈಲಾಗೆ ತಿದ್ದುಪಡಿ: ಶೀಘ್ರವೇ ಕರಡು ಅಧಿಸೂಚನೆ

ನಗರದಲ್ಲಿನ ಎಲ್ಲ ಅಂಗಡಿ-ಮುಂಗಟ್ಟುಗಳ ನಾಮಫಲಕಗಳಲ್ಲಿ ಕನ್ನಡ ಭಾಷೆಗೆ ಪ್ರಾಶಸ್ತ್ಯ ನೀಡುವುದನ್ನು ಕಡ್ಡಾಯಗೊಳಿಸಲು ಬಿಬಿಎಂಪಿ ಜಾಹೀರಾತು ಬೈಲಾಗೆ ತಿದ್ದುಪಡಿ ತರಲಾಗುತ್ತಿದೆ. ಸದ್ಯದಲ್ಲೇ ಕರಡು ಅಧಿಸೂಚನೆ ಬರಲಿದೆ.

Vijaya Karnataka Web 27 Jan 2021, 8:30 pm
ಬೆಂಗಳೂರು: ನಗರದಲ್ಲಿನ ಎಲ್ಲ ಅಂಗಡಿ-ಮುಂಗಟ್ಟುಗಳ ನಾಮಫಲಕಗಳಲ್ಲಿ ಕನ್ನಡ ಭಾಷೆಗೆ ಪ್ರಾಶಸ್ತ್ಯ ನೀಡುವುದನ್ನು ಕಡ್ಡಾಯಗೊಳಿಸಲು ಬಿಬಿಎಂಪಿ ಜಾಹೀರಾತು ಬೈಲಾಗೆ ತಿದ್ದುಪಡಿ ತರಲಾಗುತ್ತಿದೆ. ಸದ್ಯದಲ್ಲೇ ಕರಡು ಅಧಿಸೂಚನೆ ಹೊರಡಿಸಲಾಗುವುದು ಎಂದು ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಹೇಳಿದರು.
Vijaya Karnataka Web BBMP


'ಕನ್ನಡ ಕಾಯಕ ವರ್ಷಾಚರಣೆ' ಅಂಗವಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಬಿಬಿಎಂಪಿ ಸಹಯೋಗದಲ್ಲಿ ಹಮ್ಮಿಕೊಂಡಿರುವ ಶುದ್ಧ ಕನ್ನಡ ನಾಮಫಲಕ ಜಾಗೃತಿ ಅಭಿಯಾನಕ್ಕೆ ಬುಧವಾರ ಚಾಲನೆ ನೀಡಿದ ಬಳಿಕ ಮಾತನಾಡಿದರು.

''ನಾಮಫಲಕಗಳಲ್ಲಿ ಶೇ 67ರಷ್ಟು ಕನ್ನಡ ಮತ್ತು ಶೇ 33ರಷ್ಟು ಇಂಗ್ಲಿಷ್‌, ಹಿಂದಿ ಅಥವಾ ಇತರೆ ಭಾಷೆ ಬಳಸಬಹುದು. ಕನ್ನಡಕ್ಕೆ ಆದ್ಯತೆ ನೀಡದ ಅಂಗಡಿಗಳ ವ್ಯಾಪಾರ ಪರವಾನಗಿ ರದ್ದುಪಡಿಸುವುದಾಗಿ ಈ ಹಿಂದೆ ಆದೇಶ ಹೊರಡಿಸಲಾಗಿತ್ತು. ಇದನ್ನು ಪ್ರಶ್ನಿಸಿ ಕೆಲ ಅಂಗಡಿಗಳ ಮಾಲೀಕರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ನ್ಯಾಯಾಲಯವು ಪಾಲಿಕೆ ಆದೇಶಕ್ಕೆ ತಡೆಯಾಜ್ಞೆ ನೀಡಿದೆ,'' ಎಂದು ತಿಳಿಸಿದರು.

ಬೆಂಗಳೂರು: ಮೆಡಿಕಲ್‌ ಸೀಟ್‌ ಕೊಡಿಸುವುದಾಗಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚನೆ..!

''ನಾಮಫಲಕಗಳಲ್ಲಿ ಕನ್ನಡ ಭಾಷೆಗೆ ಆದ್ಯತೆ ನೀಡುವುದನ್ನು ಜಾಹೀರಾತು ಬೈಲಾದಲ್ಲೇ ಕಡ್ಡಾಯಗೊಳಿಸಲಾಗುತ್ತಿದೆ. ಇದರಿಂದ ಯಾವುದೇ ಕಾನೂನಾತ್ಮಕ ತೊಡಕುಗಳು ಎದುರಾಗುವುದಿಲ್ಲ. ಆ ಬಳಿಕ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ನಿಯಮವನ್ನು ಸುಲಭವಾಗಿ ಅನುಷ್ಠಾನಗೊಳಿಸಬಹುದು. ನಿಯಮ ಉಲ್ಲಂಘಿಸುವ ಅಂಗಡಿ ಮಾಲೀಕರು ಮತ್ತು ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲು ಅವಕಾಶವಿರಲಿದೆ,'' ಎಂದರು.

''ಪಾಲಿಕೆ ವತಿಯಿಂದ ಅಳವಡಿಸಿರುವ ಕೆಲವು ಮಾರ್ಗಸೂಚಿ ಫಲಕಗಳಲ್ಲಿ ಬಡಾವಣೆಗಳ ಹೆಸರುಗಳಲ್ಲಿಅಕ್ಷರಗಳು ತಪ್ಪಾಗಿರುವುದನ್ನು ಕನ್ನಡ ಜಾಗೃತಿ ಸಮಿತಿ ಸದಸ್ಯರು ಗಮನಕ್ಕೆ ತಂದಿದ್ದಾರೆ. ಈ ಲೋಪ ಸರಿಪಡಿಸಲು ಮೂರು ದಿನಗಳಲ್ಲಿ ಕ್ರಮ ಕೈಗೊಳ್ಳುವಂತೆ ವಿಧಾನಸಭಾ ಕ್ಷೇತ್ರಗಳ ಕಾರ್ಯನಿರ್ವಾಹಕ ಎಂಜಿನಿಯರ್‌ಗಳು ಹಾಗೂ ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ,'' ಎಂದು ತಿಳಿಸಿದರು.

ನಾಲ್ಕು ವರ್ಷಗಳ ಬಳಿಕ ಜೈಲಿನಿಂದ ಬಿಡುಗಡೆಗೊಂಡ ಶಶಿಕಲಾ: ಆಸ್ಪತ್ರೆವಾಸ ಮುಂದುವರಿಕೆ!

''ಬಿಬಿಎಂಪಿಯಿಂದ ಹೊರಡಿಸುವ ಪ್ರತಿಯೊಂದು ಸುತ್ತೋಲೆ ಕನ್ನಡದಲ್ಲೇ ಇರುತ್ತದೆ. ಕೇಂದ್ರ ಸರಕಾರ ಮತ್ತು ರಕ್ಷಣಾ ಇಲಾಖೆಗೆ ಕಳುಹಿಸುವ ಸುತ್ತೋಲೆಗಳು ಮಾತ್ರ ಇಂಗ್ಲಿಷ್‌ನಲ್ಲಿರುತ್ತವೆ,'' ಎಂದು ಹೇಳಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌.ನಾಗಾಭರಣ ಮಾತನಾಡಿ, ''ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ ಎಂಬುದನ್ನು ಎಲ್ಲರೂ ಒಪ್ಪಿಕೊಂಡಿದ್ದೇವೆ. ಈ ನಗರವನ್ನು ಕಟ್ಟಿದಾಗಲೇ ಬೇರೆ ಬೇರೆ ರಾಜ್ಯಗಳ ಜನ ಇಲ್ಲಿ ಬಂದು ನೆಲೆಸಿದ್ದಾರೆ. ಇಲ್ಲಿನದು ಒಗ್ಗೂಡಿ ಬೆಳೆಯುವ ಸಂಸ್ಕೃತಿ. ಕನ್ನಡವು ಎಲ್ಲರನ್ನೂ ಒಗ್ಗೂಡಿಸುತ್ತದೆ. ಇಂಥ ಭಾಷೆಯನ್ನು ಪಾಲಿಕೆಯು ತನ್ನದಾಗಿಸಿಕೊಂಡು ತನ್ನತನವನ್ನು ಕಾಪಾಡಿಕೊಳ್ಳಬೇಕಿದೆ,'' ಎಂದರು.

ಕೇಂದ್ರ ಸರ್ಕಾರದ ಹೊಸ ಗೈಡ್‌ಲೈನ್ಸ್: ಚಿತ್ರಮಂದಿರದ ಶೇ.50 ಆಸನ ಭರ್ತಿ ನಿಯಮದಲ್ಲಿ ಬದಲಾವಣೆ!

''ಶುದ್ಧ ಕನ್ನಡ ನಾಮಫಲಕ ಅಭಿಯಾನವು ಕೇವಲ ರಸ್ತೆ, ಅಂಗಡಿಗಳಿಗಷ್ಟೇ ಸೀಮಿತವಲ್ಲ. ಇದರ ಮೂಲಕ ಸಂಸ್ಕೃತಿಯನ್ನು ತಿಳಿಸಿ, ಕನ್ನಡ ಮನಸ್ಸುಗಳನ್ನು ಕಟ್ಟುತ್ತಿದ್ದೇವೆ. ಇದು ಸಾಧ್ಯವಾಗಲು ಅಕ್ಷರ ದಾಸೋಹ ಮಾಡಬೇಕಿದೆ. ಆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಈ ವರ್ಷವನ್ನು ಕನ್ನಡ ಕಾಯಕ ವರ್ಷವೆಂದು ಘೋಷಿಸಿದ್ದಾರೆ. ಅದರ ಒಂದೊಂದೇ ಹೆಜ್ಜೆಯಾಗಿ ಅಭಿಯಾನ ನಡೆಸಲಾಗುತ್ತಿದೆ. ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಬೆಂಗಳೂರು ಕನ್ನಡಮಯವಾಗಲಿದೆ,'' ಎಂದು ಹೇಳಿದರು.

ಪಾಲಿಕೆಯ ಆಡಳಿತಾಧಿಕಾರಿ ಗೌರವ್‌ ಗುಪ್ತ, ''ನಗರದಲ್ಲಿ ಅನ್ಯ ಭಾಷಿಕರಿಗೆ ಕನ್ನಡ ಲಿಪಿ ಮತ್ತು ಭಾಷೆ ಬಗ್ಗೆ ಅರಿವು ಮೂಡಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಅಭಿಯಾನ ಕೈಗೊಂಡಿದೆ. ಇದಕ್ಕೆ ಪಾಲಿಕೆಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ನಾಮಫಲಕಗಳಲ್ಲಿ ಕನ್ನಡ ಭಾಷೆಗೆ ಆದ್ಯತೆ ನೀಡಲಾಗುವುದು,'' ಎಂದು ತಿಳಿಸಿದರು.

ವಾಹನದ ಮೂಲಕ ಜಾಗೃತಿ:
ಶುದ್ಧ ಕನ್ನಡ ನಾಮಫಲಕ ಜಾಗೃತಿ ಅಭಿಯಾನದ ವಾಹನವು ನಗರದ ಹಲವೆಡೆ ಸಂಚರಿಸಿ, ಭಾಷೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಿದೆ. ಕನ್ನಡ ಬಾವುಟದ ಕೆಂಪು, ಹಳದಿ ಬಣ್ಣದ ವಾಹನವು ಸಂಚರಿಸುವ ಕಡೆಗಳಲ್ಲಿ ಕನ್ನಡದ ಘೋಷಣೆ ಮೊಳಗಿಸುವ ಮೂಲಕ ಭಾಷೆಯ ಮಹತ್ವ ಸಾರಲಿದೆ. ಅನ್ಯ ಭಾಷಿಕರಿಗೂ ಕನ್ನಡ ಲಿಪಿ ಮತ್ತು ಸಂಸ್ಕೃತಿಯ ಕುರಿತು ತಿಳಿಸಿಕೊಡಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ