ಆ್ಯಪ್ನಗರ

‘ಏರ್‌ ಟ್ಯಾಕ್ಸಿ’ ಸೇವೆ ಅಧ್ಯಯನಕ್ಕೆ ಯುಡಿಡಿ ಅನುಮತಿ

ಮಹಾನಗರದಲ್ಲಿ ಒಂದೆಡೆಯಿಂದ ಮತ್ತೊಂದು ಕಡೆಗೆ ತ್ವರಿತವಾಗಿ ಸಂಚರಿಸಲು 'ಏರ್‌ ಟ್ಯಾಕ್ಸಿ' ಸೇವೆಯನ್ನು ಅನುಷ್ಠಾನಗೊಳಿಸುವ ಕುರಿತು ಕಾರ್ಯಸಾಧ್ಯತೆ ಅಧ್ಯಯನ ಕೈಗೊಳ್ಳಲು ನಗರಾಭಿವೃದ್ಧಿ ಇಲಾಖೆ(ಯುಡಿಡಿ) ಅನುಮತಿ ನೀಡಿದೆ.

Vijaya Karnataka 20 Mar 2019, 5:00 am
ಬೆಂಗಳೂರು : ಮಹಾನಗರದಲ್ಲಿ ಒಂದೆಡೆಯಿಂದ ಮತ್ತೊಂದು ಕಡೆಗೆ ತ್ವರಿತವಾಗಿ ಸಂಚರಿಸಲು 'ಏರ್‌ ಟ್ಯಾಕ್ಸಿ' ಸೇವೆಯನ್ನು ಅನುಷ್ಠಾನಗೊಳಿಸುವ ಕುರಿತು ಕಾರ್ಯಸಾಧ್ಯತೆ ಅಧ್ಯಯನ ಕೈಗೊಳ್ಳಲು ನಗರಾಭಿವೃದ್ಧಿ ಇಲಾಖೆ(ಯುಡಿಡಿ) ಅನುಮತಿ ನೀಡಿದೆ.
Vijaya Karnataka Web air taxi udd gives permission for study
‘ಏರ್‌ ಟ್ಯಾಕ್ಸಿ’ ಸೇವೆ ಅಧ್ಯಯನಕ್ಕೆ ಯುಡಿಡಿ ಅನುಮತಿ


ದೇಶದಲ್ಲೇ ಮೊದಲ ಬಾರಿಗೆ ವಿನೂತನ ರೀತಿಯಲ್ಲಿ ಸೇವೆ ಲಭ್ಯವಾಗುವ ಈ ಹೊಸ ಮಾದರಿಯ ಪ್ರಯಾಣದ ಸೌಲಭ್ಯವನ್ನು ಸಾಕಾರ ಮಾಡುವ ಆಸೆಯೊಂದಿಗೆ ಲಂಡನ್‌ ಮೂಲದ 'ಎಂಸಿಫ್ಲೈ ಡಾಟ್‌ ಏರೋ' ಎಂಬ ಖಾಸಗಿ ಕಂಪನಿ ಅಧ್ಯಯನಕ್ಕೆ ಮುಂದಾಗಿದೆ. ಇದಕ್ಕೆ ಒಪ್ಪಿಗೆ ಪಡೆದಲ್ಲಿ ಬೆಂಗಳೂರು ನಗರ ಏರ್‌ ಟ್ಯಾಕ್ಸಿ ಸೌಲಭ್ಯ ಹೊಂದುವ ಭಾರತದ ಮೊದಲ ನಗರವೆಂಬ ಖ್ಯಾತಿ ಪಡೆಯಲಿದೆ.

ಏರ್‌ ಟ್ಯಾಕ್ಸಿ ಹೆಲಿಕಾಪ್ಟರ್‌ ಸೇವೆಗಿಂತ ತುಸು ಭಿನ್ನವಾಗಿರಲಿದೆ. ಹೊಸ ಪೀಳಿಗೆಯ ಸಣ್ಣ ವಿಮಾನಗಳು ಪ್ರಯಾಣಿಕರು ಹಾಗೂ ಕಡಿಮೆ ತೂಕದ ವಸ್ತುಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿರುತ್ತದೆ. ಇದಕ್ಕಾಗಿ ಪ್ರತ್ಯೇಕ ವಿಮಾನಗಳನ್ನು ತಯಾರಿಸುತ್ತಿದ್ದು, 2020ರ ವೇಳೆಗೆ ಅಮೆರಿಕ, ಯೂರೋಪ್‌ನ ಕೆಲ ರಾಷ್ಟ್ರಗಳ ನಗರಗಳಲ್ಲಿ ಆರಂಭಗೊಳ್ಳಲಿದೆ.

ತೆರೆಮರೆಗೆ ಸರಿದ 'ಹೆಲಿ ಟ್ಯಾಕ್ಸಿ'

ನಗರದಿಂದ ಕೆಂಪೇಗೌಡ ವಿಮಾನ ನಿಲ್ದಾಣ(ಕೆಐಎ)ವನ್ನು ಬೇಗನೆ ತಲುಪಲು 'ಹೆಲಿ ಟ್ಯಾಕ್ಸಿ' ಆರಂಭವಾಗಿತ್ತಾದರೂ, ತಾಂತ್ರಿಕ ಕಾರಣದಿಂದ ಯಶಸ್ವಿಯಾಗಿಲ್ಲ. 2018ರ ಮಾ.5ರಂದು ಎಲೆಕ್ಟ್ರಾನಿಕ್‌ ಸಿಟಿಯಿಂದ ಕೆಐಎಗೆ ತುಂಬಿ ಏವಿಯೇಷನ್‌ ಕಂಪನಿ ತನ್ನ ಪ್ರಥಮ ಹಾರಾಟವನ್ನು ನಡೆಸಿತ್ತು. ಆರು ಆಸನಗಳುಳ್ಳ ಬೆಲ್‌-407 ಮಾದರಿಯ ಹೆಲಿಕಾಪ್ಟರ್‌ ಅನ್ನು ಸೇವೆಗೆ ಬಳಸಿಕೊಳ್ಳಲಾಗಿತ್ತು. ಕೆಐಎನಲ್ಲಿ ಪ್ರತ್ಯೇಕ ಇಳಿದಾಣವನ್ನು ಗುರುತಿಸಿದ್ದರೂ, ಕೆಲ ದಿನಗಳ ಬಳಿಕ ಸೇವೆಯನ್ನು ಸ್ಥಗಿತಗೊಳಿಸಲಾಯಿತು. ಭದ್ರತೆ ಹಾಗೂ ಇನ್ನಿತರ ಕಾರಣದಿಂದ ಹೆಲಿ ಟ್ಯಾಕ್ಸಿ ಸಾಕಾರವಾಗಲಿಲ್ಲ.

ಐಟಿ-ಬಿಟಿ ಸಹಿತ ಖಾಸಗಿ ಕಂಪನಿಗಳ ಗಣ್ಯರ ಓಡಾಟಕ್ಕೆ ಹೆಲಿ ಟ್ಯಾಕ್ಸಿ ಅನುಕೂಲ ಕಲ್ಪಿಸಿತ್ತು. ಕೇವಲ 15 ನಿಮಿಷಗಳಲ್ಲಿ ವಿಮಾನ ನಿಲ್ದಾಣವನ್ನು ತಲುಪುವಂತೆ ಬೆಳಗ್ಗೆ ಹಾಗೂ ಸಂಜೆ ಸಮಯದಲ್ಲಿ ಹಾರಾಟ ನಿಗದಿಯಾಗಿತ್ತು. ಇದರಿಂದ ಒಂದೂವರೆ ಗಂಟೆ ರಸ್ತೆ ಪ್ರಯಾಣದ ಪ್ರಯಾಸವನ್ನು ತಪ್ಪಿಸಿತ್ತು ಎಂಬ ಅಭಿಪ್ರಾಯದ ಮಧ್ಯೆಯೂ ಹೆಲಿ ಟ್ಯಾಕ್ಸಿ ಮುಂದುವರಿಯಲಿಲ್ಲ. ಈಗ ಹೊಸ ಮಾದರಿಯಲ್ಲಿ ಏರ್‌ ಟ್ಯಾಕ್ಸಿಯನ್ನು ಹೇಗೆ ಕಾರ್ಯಗತ ಗೊಳಿಸಬಹುದು ಎಂಬ ಹೊಣೆಯು ಎಂಸಿಫ್ಲೈ ಡಾಟ್‌ ಏರೋ ಕಂಪನಿಯ ಹೆಗಲ ಮೇಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ