ಆ್ಯಪ್ನಗರ

ಯಶವಂತಪುರ ಎಪಿಎಂಸಿಯಲ್ಲಿ ಶೇ.50 ವಹಿವಾಟು ಕುಸಿತ

ಆನ್‌ಲೈನ್‌ ವ್ಯಾಪಾರ ವಹಿವಾಟಿನ ಭರಾಟೆಯಿಂದ ಯಶವಂತಪುರ ಎಪಿಎಂಸಿಯ ವ್ಯಾಪಾರಕ್ಕೆ ಕುತ್ತು ಬಂದಿದ್ದು, ಶೇ.50ರಷ್ಟು ಇಳಿಕೆಯಾಗಿದೆ.

Vijaya Karnataka 15 Oct 2018, 5:00 am
ಎಚ್‌.ಪಿ.ಪುಣ್ಯವತಿ ಬೆಂಗಳೂರು
Vijaya Karnataka Web apmc transaction declines
ಯಶವಂತಪುರ ಎಪಿಎಂಸಿಯಲ್ಲಿ ಶೇ.50 ವಹಿವಾಟು ಕುಸಿತ


ಆನ್‌ಲೈನ್‌ ವ್ಯಾಪಾರ ವಹಿವಾಟಿನ ಭರಾಟೆಯಿಂದ ಯಶವಂತಪುರ ಎಪಿಎಂಸಿಯ ವ್ಯಾಪಾರಕ್ಕೆ ಕುತ್ತು ಬಂದಿದ್ದು, ಶೇ.50ರಷ್ಟು ಇಳಿಕೆಯಾಗಿದೆ.

ಸಾಮಾನ್ಯವಾಗಿ ದಸರಾ, ದೀಪಾವಳಿ ಹಬ್ಬಗಳಲ್ಲಿ ಖರೀದಿದಾರರು ಕಿಕ್ಕಿರಿದು ಸೇರುತ್ತಿದ್ದರು. ನಿತ್ಯ ಕೋಟ್ಯಾಂತರ ರೂ. ವಹಿವಾಟು ನಡೆಯುತ್ತಿತ್ತು. ಆದರೆ, ಇದೀಗ ದಸರಾಗೆ ಚಾಲನೆ ಸಿಕ್ಕಿದ್ದರೂ ಖರೀದಿದಾರರಿಲ್ಲದೆ ಯಶವಂತಪುರ ಎಪಿಎಂಸಿ ಕಳೆಗುಂದಿದೆ. ಆನ್‌ಲೈನ್‌ ಮಾರಾಟದಲ್ಲಿ ರಿಯಾಯಿತಿ ಹಾಗೂ ಕೊಡುಗೆಗಳ ಮಹಾಪೂರದಿಂದಾಗಿ ವ್ಯಾಪಾರ ವಹಿವಾಟು ಕುಸಿದಿದೆ ಎನ್ನುತ್ತಾರೆ ಯಶವಂತಪುರ ಎಪಿಎಂಸಿಯ ಬೇಳೆ, ಕಾಳು ಆಹಾರ ಧಾನ್ಯಗಳ ಸಗಟು ವರ್ತಕರ ಸಂಘದ ಅಧ್ಯಕ್ಷ ರಮೇಶ್‌ಚಂದ್ರ ಲಹೋಟಿ.

ನಾಡಹಬ್ಬ 'ದಸರಾ' ಎಂದರೆ ಹೆಸರೇ ಹೇಳುವಂತೆ ಕರ್ನಾಟಕದಲ್ಲಿ ದೊಡ್ಡ ಹಬ್ಬ. ಎಲ್ಲೆಡೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಹೀಗಾಗಿ ಮಾರುಕಟ್ಟೆಯಲ್ಲಿ ಬಿಡುವಿಲ್ಲದ ಖರೀದಿಯಿರುತ್ತಿತ್ತು. ಆದರೆ, ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ವ್ಯಾಪಾರ ವಹಿವಾಟು ನಡೆಯುತ್ತಿಲ್ಲ. ಎಲ್ಲೆಡೆ ಆನ್‌ಲೈನ್‌ ಖರೀದಿ ನಡೆಯುತ್ತಿದೆ. ಹೀಗಾಗಿ ಮೊದಲಿನಂತೆ ವ್ಯಾಪಾರ ನಡೆಯುತ್ತಿಲ್ಲ ಎಂಬುದು ಚಿಲ್ಲರೆ ವ್ಯಾಪಾರಿಗಳ ಅಳಲು.

ಕಳೆದ ವರ್ಷ ಕೂಡ ಇದೇ ಅವಧಿಯಲ್ಲಿ ಜಿಎಸ್‌ಟಿ ಜಾರಿಯಿಂದಾಗಿ ವ್ಯಾಪಾರ ವಹಿವಾಟು ಶೇ.50ರಷ್ಟು ಕುಸಿದಿತ್ತು. ಈ ಬಾರಿ ಜಿಎಸ್‌ಟಿ ಜತೆಗೆ ವಿದೇಶಿ ಕಂಪನಿಗಳ ಆನ್‌ಲೈನ್‌ ಮಾರಾಟ ವಹಿವಾಟಿನಲ್ಲಿ ಭಾರಿ ಸ್ಪರ್ಧೆ ಉಂಟಾಗಿದ್ದು, ಮಿತಿಯಿಲ್ಲದ ಕೊಡುಗೆಗಳನ್ನು ಘೋಷಿಸುತ್ತಿವೆ. ಇದು ವ್ಯಾಪಾರ ಕ್ಷೇತ್ರದಲ್ಲಿ ಅಲ್ಲೋಲ ಕಲ್ಲೋಲ ಉಂಟು ಮಾಡಿದೆ. ಹೀಗಾಗಿ ಎಪಿಎಂಸಿಯ ನೇರ ಸಗಟು ಮಾರುಕಟ್ಟೆಯಲ್ಲಿ ವ್ಯಾಪಾರಕ್ಕೆ ತೊಡಕುಂಟಾಗಿದೆ.

ತೊಗರಿಕಾಳಿನ ಬೆಲೆ ಕೆ.ಜಿ.ಗೆ 50 ರೂ.ಗೂ ಹೆಚ್ಚಿದೆ. ಆದರೆ, ಫ್ಲಿಪ್‌ಕಾರ್ಟ್‌, ಅಮೆಜಾನ್‌ನಂತಹ ಆನ್‌ಲೈನ್‌ ಮಾರಾಟಗಾರರು ಕನಿಷ್ಠ ಖರೀದಿ ಮೊತ್ತದ ಷರತ್ತಿನೊಂದಿಗೆ 1 ರೂ.ಗೆ ತೊಗರಿಬೇಳೆ ನೀಡುತ್ತಿವೆ ಇದು ಸಗಟು ವ್ಯಾಪಾರಿಗಳನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ಜಾಗೃತಿ ರಥ ಇಂದು ನಗರಕ್ಕೆ

ವಿದೇಶಿ ಕಂಪನಿಗಳು ಬಂದು ನಮ್ಮಲ್ಲಿ ಮಾರಾಟ ಮಾಡುವುದು ಸರಿಯಲ್ಲ. ಅದರಲ್ಲೂ ಆಹಾರ ಕ್ಷೇತ್ರದಲ್ಲಿ ಅವರ ಪಾಲ್ಗೊಳ್ಳುವಿಕೆಯನ್ನು ತಡೆಯಬೇಕು. ಈ ನಿಟ್ಟಿನಲ್ಲಿ ಇ-ಕಾಮರ್ಸ್‌ ಅನ್ನು ಹತೋಟಿಯಲ್ಲಿಡಲು ರಾಷ್ಟ್ರೀಯ ನೀತಿ ಜಾರಿಗೆ ತರಬೇಕು. ಈ ಬಗ್ಗೆ ವ್ಯಾಪಾರಿಗಳಲ್ಲಿ ಅರಿವು ಮೂಡಿಸುವುದು ಹಾಗೂ ಸರಕಾರಗಳ ಮೇಲೆ ಒತ್ತಡ ತರುವ ಹಿನ್ನೆಲೆಯಲ್ಲಿ ಕಾನ್ಫೆಧಿಡರೇಷನ್‌ ಆಫ್‌ ಆಲ್‌ ಇಂಡಿಯಾ ಟ್ರೇಡರ್ಸ್‌ 108 ಮಾದರಿಯಲ್ಲಿ ಮೊಬೈಲ್‌ ವಾಹನದ ಮೂಲಕ 'ರಥಯಾತ್ರೆ' ನಡೆಸುತ್ತಿದೆ.

ಈ ಯಾತ್ರೆಯು ಆಗಸ್ಟ್‌ನಲ್ಲಿ ಆರಂಭವಾಗಿದ್ದು, ದೇಶದ ನಾನಾ ರಾಜ್ಯಗಳಿಗೆ ತೆರಳಿ ಅರಿವು ಮೂಡಿಸಿದೆ. ಅ.15ರಂದು ಯಶವಂತಪುರ ಎಪಿಎಂಸಿಗೆ ಆಗಮಿಸುತ್ತಿದೆ. ಗೇಟ್‌ 8ರಲ್ಲಿ ಯಾತ್ರೆಯನ್ನು ಬೆಳಗ್ಗೆ 10 ಗಂಟೆಗೆ ಬರಮಾಡಿಕೊಳ್ಳಲಾಗುವುದು. ಸುಮಾರು ಎರಡು ಗಂಟೆಗಳ ಕಾಲ ಯಾತ್ರೆಯು ಎಪಿಎಂಸಿ ಪ್ರಾಂಗಣದಲ್ಲಿರಲಿದೆ. ವ್ಯಾಪಾರಿ ಸಮೂಹ ಇದರಲ್ಲಿ ಪಾಲ್ಗೊಳ್ಳಲಿದೆ. ಬಳಿಕ ವಾಹನವು ಚಿಕ್ಕಪೇಟೆ ಮತ್ತಿತರ ಬಡಾವಣೆಗಳಲ್ಲಿ ಸಂಚರಿಸಿ, ತಮಿಳುನಾಡಿನತ್ತ ಸಾಗಲಿದೆ ಎಂದು ಯಶವಂತಪುರ ಎಪಿಎಂಸಿಯ ಬೇಳೆ, ಕಾಳು ಆಹಾರ ಧಾನ್ಯಗಳ ಸಗಟು ವರ್ತಕರ ಸಂಘದ ಅಧ್ಯಕ್ಷ ರಮೇಶ್‌ಚಂದ್ರ ಲಹೋಟಿ ಮಾಹಿತಿ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ