ಆ್ಯಪ್ನಗರ

ಬಳಕೆದಾರರ ಅನಾಗರಿಕತೆ: ಬಾಡಿಗೆ ದ್ವಿಚಕ್ರ ವಾಹನಗಳ ಸೇವಾದಾರರಿಗೆ ನಷ್ಟ

'ಕೊನೆ ತನಕ ಪ್ರಯಾಣ' (ಲಾಸ್ಟ್ ಮೈಲ್ ಕನೆಕ್ಟಿವಿಟಿ) ಕಲ್ಪನೆಯಡಿ ದ್ವಿಚಕ್ರ ವಾಹನಗಳ ಬಾಡಿಗೆ ಸೇವೆ ನಗರದಲ್ಲಿ ಆರಂಭವಾಗಿದ್ದು, ಹಲವು ಕಂಪನಿಗಳು ಸೇವೆ ನೀಡುತ್ತಿವೆ. ಆದರೆ ನಾಗರಿಕ ಪ್ರಜ್ಞೆಯಿಲ್ಲದ ಹಲವು ಬಳಕೆದಾರರು ತಾವು ಬಾಡಿಗೆಗೆ ಪಡೆದ ದ್ವಿಚಕ್ರ ವಾಹನಗಳ ಬ್ಯಾಟರಿ, ಟೈರುಗಳು, ಹೆಡ್‌ಲೈಟ್‌ಗಳು, ಕನ್ನಡಿ ಸೇರಿದಂತೆ ಬಿಡಿ ಭಾಗಗಳು ಮತ್ತು ಪೆಟ್ರೋಲ್‌ ಕದಿಯುವುದು, ಹಾಳುಗೆಡಹುವುದು, ದುರ್ಬಳಕೆ ಮಾಡುವುದು ಮತ್ತು ಎಲ್ಲೆಂದರಲ್ಲಿ ಬಿಟ್ಟುಹೋಗುವುದು- ಇಂತಹ ಬೇಜವಾಬ್ದಾರಿಯುತ ವರ್ತನೆಗಳನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಸೇವಾದಾರ ಕಂಪನಿಗಳು ಆರೋಪಿಸುತ್ತಿವೆ.

TNN 16 Jun 2019, 3:33 pm
ಬೆಂಗಳೂರು: ಬಳಕೆದಾರರ ಅನಾಗರಿಕ ನಡವಳಿಕೆ, ನಾಗರಿಕ ಪ್ರಜ್ಞೆಯ ಕೊರತೆ, ಅಸೂಕ್ಷ್ಮತೆ, ಸಾಮಾನ್ಯ ಜ್ಞಾನದ ಕೊರತೆಯಿಂದಾಗಿ ನಗರದಲ್ಲಿ ಸೈಕಲ್‌ ಮತ್ತು ಸ್ಕೂಟರ್‌ಗಳನ್ನು ಬಾಡಿಗೆಗೆ ನೀಡುವ ಸಂಸ್ಥೆಗಳು ತೀವ್ರ ಸಂಕಷ್ಟಕ್ಕೆ ಗುರಿಯಾಗಿವೆ.
Vijaya Karnataka Web Yulu Bicycles


'ಕೊನೆ ತನಕ ಪ್ರಯಾಣ' (ಲಾಸ್ಟ್ ಮೈಲ್ ಕನೆಕ್ಟಿವಿಟಿ) ಕಲ್ಪನೆಯಡಿ ದ್ವಿಚಕ್ರ ವಾಹನಗಳ ಬಾಡಿಗೆ ಸೇವೆ ನಗರದಲ್ಲಿ ಆರಂಭವಾಗಿದ್ದು, ಹಲವು ಕಂಪನಿಗಳು ಸೇವೆ ನೀಡುತ್ತಿವೆ. ಆದರೆ ನಾಗರಿಕ ಪ್ರಜ್ಞೆಯಿಲ್ಲದ ಹಲವು ಬಳಕೆದಾರರು ತಾವು ಬಾಡಿಗೆಗೆ ಪಡೆದ ದ್ವಿಚಕ್ರ ವಾಹನಗಳ ಬ್ಯಾಟರಿ, ಟೈರುಗಳು, ಹೆಡ್‌ಲೈಟ್‌ಗಳು, ಕನ್ನಡಿ ಸೇರಿದಂತೆ ಬಿಡಿ ಭಾಗಗಳು ಮತ್ತು ಪೆಟ್ರೋಲ್‌ ಕದಿಯುವುದು, ಹಾಳುಗೆಡಹುವುದು, ದುರ್ಬಳಕೆ ಮಾಡುವುದು ಮತ್ತು ಎಲ್ಲೆಂದರಲ್ಲಿ ಬಿಟ್ಟುಹೋಗುವುದು- ಇಂತಹ ಬೇಜವಾಬ್ದಾರಿಯುತ ವರ್ತನೆಗಳನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಸೇವಾದಾರ ಕಂಪನಿಗಳು ಆರೋಪಿಸುತ್ತಿವೆ.

ಬೌನ್ಸ್‌, ಯುಲು, ವೋಗೋ ಮತ್ತು ಡ್ರೈವ್‌ ಈಝಿ ಯಂತಹ ಕಂಪನಿಗಳು ಈ ರೀತಿ ಬಾಡಿಗೆ ದ್ವಿಚಕ್ರ ವಾಹನಗಳ ಸೇವೆ ಒದಗಿಸುತ್ತಿವೆ. ಪೌರ ಅಧಿಕಾರಿಗಳು ಮತ್ತು ಪೊಲೀಸರು ಭರವಸೆಗಳನ್ನು ನೀಡಿದರೂ ಇಂತಹ ಅನಾಗರಿಕ ತಪ್ಪಿತಸ್ಥರು ಸುಲಭವಾಗಿ ತಪ್ಪಿಸಿಕೊಂಡು ಹೋಗುತ್ತಿದ್ದಾರೆ.

ಯುಲು (Yulu) ಪ್ರಕಾರ, 2018ರ ಜನವರಿಯಿಂದ 2019ರ ಮೇ ವರೆಗಿನ ಅವಧಿಯಲ್ಲಿ ಸುಮಾರು 300 ಸೈಕಲ್‌ಗಳನ್ನು ದುಷ್ಕರ್ಮಿಗಳು ಹಾಳುಗೆಡಹಿದ್ದಾರೆ ಮತ್ತು ಕಳವು ಮಾಡಿದ್ದಾರೆ. 2019ರ ಮಾರ್ಚ್‌ ಮತ್ತು ಮೇ ಅವಧಿಯಲ್ಲಿ 2 ಎಲೆಕ್ಟ್ರಿಕ್‌ ಸ್ಕೂಟರ್‌ಗಳನ್ನು ಹಾಳು ಮಾಡಿದ್ದಾರೆ.

'ಈ ರೀತಿ ಹಾಳುಗೆಡಹುವುದರಿಂದ ನಮಗೆ 40ರಿಂದ 50 ಲಕ್ಷ ರೂ ನಷ್ಟವಾಗಿದೆ; ಆದರೆ ಹೆಚ್ಚಿನ ಮೊತ್ತವನ್ನು ವಿಮಾ ಕಂಪನಿಗಳು ತುಂಬಿಕೊಟ್ಟಿವೆ' ಎಂದು ಯುಲು ಸಿಇಓ ಅಮಿತ್ ಗುಪ್ತಾ ಹೇಳಿದರು.


ಆ್ಯಪ್‌ ಆಧರಿತ ಇತರ ಬಾಡಿಗೆ ಸೇವಾದಾರರು ತಮ್ಮ ವಾಹನಗಳಿಗಾದ ಹಾನಿಯ ವಿವರ ನೀಡಿದ್ದಾರೆ. 'ಟೈರುಗಳನ್ನು ಕಳವು ಮಾಡಿದ ಮತ್ತು ಬೈಕ್‌ಗಳಿಗೆ ಹಾನಿ ಮಾಡಿದ ಹಲವು ಪ್ರಕರಣಗಳು ನಡೆದಿವೆ' ಎಂದು ಬೌನ್ಸ್‌ ಸಹಸಂಸ್ಥಾಪಕ ವಿವೇಕಾನಂದ ಎಚ್‌.ಆರ್ ಹೇಳಿದ್ದಾರೆ.

'ವಾಹನಗಳ ಕಳವು ಅಥವಾ ಹಾನಿಮಾಡಿದ ಘಟನೆಗಳು ಶೇ 1ಕ್ಕಿಂತ ಕಡಿಮೆ ಇವೆ. ನಮ್ಮ ಸ್ಟೇಷನ್- ಟು- ಸ್ಟೇಷನ್ ಮಾದರಿಯ ಸೇವೆಯಿಂದಾಗಿ ಬಳಕೆದಾರರು ಸ್ಕೂಟರ್‌ಗಳನ್ನು ಎಲ್ಲೆಂದರಲ್ಲಿ ಬಿಟ್ಟು ಹೋಗದಂತೆ ಖಾತ್ರಿಪಡಿಸಲು ಸಾಧ್ಯವಾಗಿದೆ' ಎಂದು ವೋಗೋ (Vogo) ಸಿಇಓ ಆನಂದ್ ಅಯ್ಯಾದುರೈ ತಿಳಿಸಿದರು.

ಬಳಕೆದಾರರು ವಾಹನವನ್ನು ನಿಗದಿತ ಪಾರ್ಕಿಂಗ್‌ ಸ್ಥಳದ ಹೊರಗೆ ಪಾರ್ಕಿಂಗ್ ಮಾಡಿದರೆ ಯುಲು ಸಂಸ್ಥೆ ಸೈಕಲ್‌ಗಳಿಗೆ 20 ರೂ ಹಾಗೂ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ 40 ರೂ ದಂಡ ವಿಧಿಸುತ್ತದೆ. 2018ರ ನವೆಂಬರ್‌ನಿಂದ 2019 ಏಪ್ರಿಲ್‌ ವರೆಗೆ ತಾನು 29,382 ರೂ ದಂಡ ವಿಧಿಸಿರುವುದಾಗಿ ಕಂಪನಿ ಹೇಳಿದೆ.

ಯುಲು ಇದುವರೆಗೆ 7 ಪೊಲೀಸ್‌ ದೂರುಗಳನ್ನು ದಾಖಲಿಸಿದ್ದು, ಒಬ್ಬ ಗ್ರಾಹಕನಿಂದ ಕ್ಷಮಾಪಣೆ ಪತ್ರ ಪಡೆದಿದೆ. ಅಲ್ಲದೆ 65 ಹಾನಿ ಪ್ರಕರಣಗಳಲ್ಲಿ ನಷ್ಟ ಭರ್ತಿ ಮಾಡಿಕೊಳ್ಳಲು ಯಶಸ್ವಿಯಾಗಿದೆ.

'ಇಂತಹ ದುಷ್ಕೃತ್ಯ ಎಸಗುವ ಬಳಕೆದಾರರ ಡ್ರೈವಿಂಗ್ ಲೈಸೆನ್ಸ್‌ (ಚಾಲನಾ ಪರವಾನಗಿ) ರದ್ದುಪಡಿಸುವಂತೆ ಮಾಡುವಲ್ಲಿ ಸರಕಾರದ ಜತೆ ನಾವು ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ. ಉತ್ತಮ ಚಾಲಕರನ್ನು ಗುರುತಿಸಿ ಬಹುಮಾನ ನೀಡುವ ಕೆಲಸವನ್ನೂ ಮಾಡುತ್ತೇವೆ. 100 ರೂ ಗಳಿಂದ 2,000 ರೂ.ಗಳ ವರೆಗೆ ದಂಡ ವಿಧಿಸುವ ಕೆಲಸವನ್ನೂ ಮಾಡುತ್ತಿದ್ದೇವೆ' ಎಂದು ಬೌನ್ಸ್‌ ಸಹಸಂಸ್ಥಾಪಕ ವಿವೇಕಾನಂದ ತಿಳಿಸಿದರು.

ಕಳವು ಮತ್ತು ಹಾನಿ ಪ್ರಕರಣಗಳನ್ನು ತಡೆಯಲು ಬಳಕೆದಾರರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಗುಪ್ತಾ ಹೇಳಿದರೆ, ಬೌನ್ಸ್ ತನ್ನ ವಾಹನಗಳಿಗೆ ಕಳವು ತಡೆ ಸಾಧನಗಳನ್ನು ಅಳವಡಿಸಿದೆ ಎಂದು ವಿವೇಕಾನಂದ ತಿಳಿಸಿದರು.

'ಟ್ರ್ಯಾಕಿಂಗ್ ವ್ಯವಸ್ಥೆ ಮೂಲಕ ಹೆಚ್ಚಿನ ವಾಹನಗಳನ್ನೂ ನಾವು ಮರಳಿ ಪಡೆಯಲು ಶಕ್ತರಾಗಿದ್ದೇವೆ. ಇದು ಯಶಸ್ವಿಯಾಗದ ಕೆಲವು ಪ್ರಕರಣಗಳಲ್ಲಿ ಸ್ಥಳೀಯ ಗುಪ್ತಚರ ಮಾಹಿತಿ ಮತ್ತು ನಾಗರಿಕರ ಬೆಂಬಲ ಪಡೆಯುತ್ತೇವೆ. ನಮ್ಮಲ್ಲಿ ಒಂದು ಸಮರ್ಪಿತ ಬೈಕ್ ಮಾರ್ಷಲ್ ತಂಡವಿದ್ದು, ಸೂಕ್ಷ್ಮ ಸ್ಥಳಗಳಲ್ಲಿ ಗಸ್ತು ತಿರುಗಲು ಮತ್ತು ವಾಹನಗಳನ್ನು ಮರಳಿ ಪಡೆಯಲು ನೆರವಾಗುತ್ತದೆ. ಸಿಸಿಟಿವಿ ಕ್ಯಾಮೆರಾಗಳ ಬಳಕೆ ಹಾಗೂ ಪೊಲೀಸ್ ಇಲಾಖೆಯ ಸಕ್ರಿಯ ಭಾಗೀದಾರಿಕೆಯಿಂದ ಇಂತಹ ಘಟನೆಗಳನ್ನು ತಡೆಯಬಹುದು' ಎನ್ನುತ್ತಾರೆ ಗುಪ್ತಾ.

ಯಾವುದೇ ಅನಿರೀಕ್ಷಿತ ಕೃತ್ಯ ನಡೆದರೆ ತಕ್ಷಣವೇ ಸಂಸ್ಥೆಗೆ ಮಾಹಿತಿ ರವಾನಿಸುವ ಸೆನ್ಸರ್‌ಗಳನ್ನು ಬೌನ್ಸ್‌ ಅಭಿವೃದ್ಧಿಪಡಿಸುತ್ತಿದೆ ಎಂದು ವಿವೇಕಾನಂದ ತಿಳಿಸಿದರು. 'ಬಳಕೆದಾರರು ಮತ್ತು ಗಸ್ತು ತಂಡಗಳ ನೆರವಿನೊಂದಿಗೆ ವಾಹನಗಳನ್ನು ನಾವು ಪತ್ತೆ ಮಾಡುತ್ತೇವೆ. ಸ್ಕೂಟರ್‌ಗಳಲ್ಲಿ ಹೆಲ್ಮೆಟ್‌ ಸೆನ್ಸರ್‌ಗಳನ್ನು ಅಳವಡಿಸಿದ್ದು, ಯಾರಾದರೂ ಹೆಲ್ಮೆಟ್‌ ಎತ್ತಿಕೊಂಡು ಹೋದರೆ ತಕ್ಷಣವೇ ಮಾಹಿತಿ ದೊರೆಯುತ್ತದೆ' ಎಂದು ಅವರು ನುಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ