ಆ್ಯಪ್ನಗರ

ಆಟೊರಿಕ್ಷಾ ಪ್ರಯಾಣ ದರ ಪರಿಷ್ಕರಣೆಗೆ ಚಾಲಕರ ಸಂಘಟನೆಗಳ ಪಟ್ಟು

Vijaya Karnataka 6 Jan 2019, 5:00 am
ಬೆಂಗಳೂರು : ಪೆಟ್ರೋಲ್‌, ಡೀಸೆಲ್‌ ದರ ಏರಿಕೆಯ ಬೆನ್ನಲ್ಲೇ ಆಟೊರಿಕ್ಷಾ ಪ್ರಯಾಣ ದರವೂ ಜಾಸ್ತಿಯಾಗುವ ಸಾಧ್ಯತೆಗಳಿವೆ. ಆಟೊ ಚಾಲಕರು ಪ್ರಯಾಣ ದರ ಪರಿಷ್ಕರಣೆ ಮಾಡುವಂತೆ ಕೋರಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಒತ್ತಡ ಹೇರುತ್ತಿದ್ದಾರೆ.
Vijaya Karnataka Web auto drivers demand for rate revise
ಆಟೊರಿಕ್ಷಾ ಪ್ರಯಾಣ ದರ ಪರಿಷ್ಕರಣೆಗೆ ಚಾಲಕರ ಸಂಘಟನೆಗಳ ಪಟ್ಟು


ನಗರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಡಿಸೆಂಬರ್‌ ತಿಂಗಳಲ್ಲಿ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗಿಲ್ಲ. ಈ ತಿಂಗಳು ನಡೆಯುವ ಸಭೆಯಲ್ಲಿ ದರ ಪರಿಷ್ಕರಣೆ ಕುರಿತು ಚರ್ಚೆಗೆ ಬರುವ ಸಾಧ್ಯತೆ ಇದೆ. ಆಟೊ ಪ್ರಯಾಣ ದರವನ್ನು 25 ರೂ.ಗಳಿಂದ (ಕನಿಷ್ಠ 1.9 ಕಿ.ಮೀಗೆ) 30 ರೂ.ಗಳಿಗೆ ಏರಿಕೆ ಮಾಡಬೇಕು. ಆನಂತರದ ಪ್ರತಿ ಕಿ.ಮೀ.ಗೆ 13 ರೂ. ನಿಂದ 15 ರೂ.ಗಳಿಗೆ ಹೆಚ್ಚಳ ಮಾಡಬೇಕೆಂಬುದು ಚಾಲಕರ ಒತ್ತಾಯವಾಗಿದೆ.

ಎಲ್‌ಪಿಜಿ, ತೈಲ ಬೆಲೆ, ವಿಮೆ, ಬಿಡಿಭಾಗಗಳು ಮತ್ತು ಆರ್‌ಟಿಒ ಸೇವೆಗಳ ಶುಲ್ಕ ಹೆಚ್ಚಳದಿಂದ ಸಾಕಷ್ಟು ನಷ್ಟ ಅನುಭವಿಸುವಂತಾಗಿದ್ದು, ದರ ಪರಿಷ್ಕರಣೆ ಮಾಡುವಂತೆ ಆಟೊ ಚಾಲಕರ ಸಂಘಟನೆಗಳು ಪ್ರಾಧಿಕಾರದ ಅಧ್ಯಕ್ಷರಾದ ನಗರ ಜಿಲ್ಲಾಧಿಕಾರಿ ಬಿ.ಎಂ.ವಿಜಯಶಂಕರ್‌ ಅವರಿಗೆ ಮನವಿ ಸಲ್ಲಿಸಿವೆ. 2013ರ ಡಿ. 20ರಂದು ದರ ಪರಿಷ್ಕರಣೆ ಮಾಡಲಾಗಿತ್ತು. ಇದಾಗಿ 5 ವರ್ಷ ಕಳೆದರೂ ದರ ಜಾಸ್ತಿ ಮಾಡಿಲ್ಲ. ಈಗಲಾದರೂ ಪ್ರಯಾಣ ದರ ಹೆಚ್ಚಿಸಬೇಕು ಎಂಬುದು ಚಾಲಕರು ಮತ್ತು ಮಾಲೀಕರ ಸಂಘಟನೆಗಳ ಆಗ್ರಹವಾಗಿದೆ.

''ಚಾಲಕರು ಜೀವನ ನಿರ್ವಹಣೆಗಾಗಿ ಆಟೊಗಳನ್ನೇ ಅವಲಂಬಿಸಿದ್ದಾರೆ. ದರ ಪರಿಷ್ಕರಣೆ ಮಾಡದಿದ್ದರೆ, ಆಟೊಗಳ ಮೀಟರ್‌ಗಳನ್ನು ವಿರೂಪಗೊಳಿಸಿ, ಪ್ರಯಾಣಿಕರನ್ನು ವಂಚಿಸುವ ಪ್ರಕರಣಗಳು ಜಾಸ್ತಿಯಾಗಲಿವೆ. ಇದಕ್ಕೆ ಸರಕಾರ ಅವಕಾಶ ಮಾಡಿಕೊಡಬಾರದು,'' ಎಂದು ಚಾಲಕರೊಬ್ಬರು ತಿಳಿಸಿದರು.

''ಎರಡು ವರ್ಷದ ಬಳಿಕ ಅಥವಾ ಆಟೊ ಎಲ್‌ಪಿಜಿ ಇಂಧನ ಬೆಲೆ (ಲ್ಯೂಬ್ರಿಕೆಂಟ್ಸ್‌ ಆಯಿಲ್ಸ್‌ ಸಹಿತ) 70 ರೂ. ದಾಟಿದರೆ , ದರ ಪರಿಷ್ಕರಣೆ ಮಾಡಬೇಕೆಂದು 2013ರಲ್ಲೇ ನಿಯಮ ರೂಪಿಸಲಾಗಿದೆ. ಸದ್ಯ ಲೂಬ್ರಿಕೆಂಟ್ಸ್‌ ಆಯಿಲ್‌ಸಹಿತ ಅನಿಲ ದರ ಜಾಸ್ತಿ ಆಗಿದೆ. ಆದಾಗ್ಯೂ, ಪ್ರಾಧಿಕಾರವು ದರ ಪರಿಷ್ಕರಣೆಗೆ ಕ್ರಮ ಕೈಗೊಂಡಿಲ್ಲ,'' ಎಂದು ಬೃಹತ್‌ ಬೆಂಗಳೂರು ಆಟೊ ಮತ್ತು ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ಜವರೇಗೌಡ ಹೇಳಿದರು.

''ನಗರದಲ್ಲಿ ಆಟೊ ಚಾಲಕ ವೃತ್ತಿಯನ್ನೇ ನಂಬಿ ಅನೇಕರು ಜೀವನ ನಡೆಸುತ್ತಿದ್ದಾರೆ. ದರ ಪರಿಷ್ಕರಣೆ ಮಾಡದಿರುವುದರಿಂದ ಚಾಲಕರಿಗೆ ಪ್ರತಿದಿನ ದಿನಕ್ಕೆ 150-200 ರೂ. ನಷ್ಟ ಉಂಟಾಗುತ್ತಿದೆ. ಪರಿಣಾಮ, ಕುಟುಂಬ ನಿರ್ವಹಣೆ ಅಸಾಧ್ಯವಾಗುತ್ತಿದೆ. ಟ್ರಾಫಿಕ್‌ಜಾಮ್‌ನಿಂದ ಅನಿಲ ವ್ಯಯವಾಗುತ್ತಿದೆ. ಡಿ. 17ರಂದು ನಡೆದ ಪ್ರಾಧಿಕಾರದ ಸಭೆಯಲ್ಲಿ ದರ ಪರಿಷ್ಕರಣೆ ಕುರಿತು ಚರ್ಚೆ ನಡೆದಿಲ್ಲ. ಈ ತಿಂಗಳ ಸಭೆಯಲ್ಲಿ ಚರ್ಚಿಸಿ, ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದಾರೆ. ಒಂದೊಮ್ಮೆ ದರ ಏರಿಕೆ ಮಾಡದಿದ್ದರೆ, ಸಿಎಂ ಮತ್ತು ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಲಾಗುವುದು,'' ಎಂದು ತಿಳಿಸಿದರು.


ಪ್ರಸ್ತುತ ಚಾಲ್ತಿಯಲ್ಲಿರುವ ದರ

ಮೊದಲ 1.9 ಕಿ.ಮೀ.ಗೆ 25 ರೂ.

ನಂತರದ ಪ್ರತಿ ಕಿ.ಮೀ.ಗೆ 13 ರೂ.


ಕಾಯುವಿಕೆ ದರ

ಮೊದಲ 5 ನಿಮಿಷ ಉಚಿತ

ನಂತರ ಪ್ರತಿ 15 ನಿಮಿಷಕ್ಕೆ 5 ರೂ.

ರಾತ್ರಿ ವೇಳೆ ಒಂದೂವರೆ ಪಟ್ಟು ದರ ರಾತ್ರಿ 10 ರಿಂದ ಮುಂಜಾನೆ 5ರವರೆಗೆ



ಎಷ್ಟು ದರ ಏರಿಕೆಗೆ ಚಾಲಕರ ಆಗ್ರಹ

* ಕನಿಷ್ಠ 30 ರೂ. ನಿಗದಿಗೆ ಒತ್ತಾಯ

* ನಂತರದ ಪ್ರತಿ ಕಿ.ಮೀ. ಗೆ 15 ರೂ. ಏರಿಕೆಗೆ ಆಗ್ರಹ

* 5 ನಿಮಿಷ ನಂತರದ ಪ್ರತಿ 15 ನಿಮಿಷ ಕಾಯುವಿಕೆಗೆ 10 ರೂ.ಗಳಿಗೆ ಬೇಡಿಕೆ




ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ