ಆ್ಯಪ್ನಗರ

ವಿಜ್ಞಾನದಿಂದ ವಿಮುಖರಾಗುತ್ತಿರುವ ಬೆಂಗಳೂರಿಗರು : ಡಾ. ಸಿ.ಎನ್‌.ಆರ್‌. ರಾವ್‌ ಕಳವಳ

ಐಟಿ-ಬಿಟಿ ಕ್ಷೇತ್ರಕ್ಕೆ ಮಾರು ಹೋಗುತ್ತಿರುವ ಬೆಂಗಳೂರಿನ ಯುವಜನರು ವಿಜ್ಞಾನದಿಂದ ವಿಮುಖರಾಗುತ್ತಿದ್ದಾರೆ ಎಂದು ಭಾರತರತ್ನ ವಿಜ್ಞಾನಿ ಡಾ. ಸಿ.ಎನ್‌.ಆರ್‌. ರಾವ್‌ ಬೇಸರ ವ್ಯಕ್ತಪಡಿಸಿದರು.

Vijaya Karnataka 24 Mar 2019, 5:00 am
ಬೆಂಗಳೂರು: ಐಟಿ-ಬಿಟಿ ಕ್ಷೇತ್ರಕ್ಕೆ ಮಾರು ಹೋಗುತ್ತಿರುವ ಬೆಂಗಳೂರಿನ ಯುವಜನರು ವಿಜ್ಞಾನದಿಂದ ವಿಮುಖರಾಗುತ್ತಿದ್ದಾರೆ ಎಂದು ಭಾರತರತ್ನ ವಿಜ್ಞಾನಿ ಡಾ. ಸಿ.ಎನ್‌.ಆರ್‌. ರಾವ್‌ ಬೇಸರ ವ್ಯಕ್ತಪಡಿಸಿದರು.
Vijaya Karnataka Web 2303-2-2-801


ಕನ್ನಡ ಸಾಹಿತ್ಯ ಪರಿಷತ್ತು ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಆಯೋಜಿಸಿದ್ದ 'ಸಾಧಕರೊಂದಿಗೆ ಸಂವಾದ' ಕಾರ್ಯಕ್ರಮದಲ್ಲಿ ಶನಿವಾರ ಅವರು ಮಾತನಾಡಿದರು. ಸಂವಾದದುದ್ದಕ್ಕೂ ಕನ್ನಡದಲ್ಲಿಯೇ ಮಾತನಾಡಿ ಗಮನಸೆಳೆದರು.

''ಹೆಚ್ಚು ಹಣ ಸಂಪಾದಿಸುವ ಆಸೆಯೊಂದಿಗೆ ಐಟಿ ಉದ್ಯಮ ಅರಸಿ ಹೋಗುವ ಬೆಂಗಳೂರಿನ ಯುವಜನರು ಅಷ್ಟೇ ವೇಗವಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇದು ಅತ್ಯಂತ ಖೇದದ ಸಂಗತಿ'' ಎಂದು ಕಳವಳ ವ್ಯಕ್ತಪಡಿಸಿದ ಅವರು, ''ಬೆಂಗಳೂರಿಗರು ವಿಜ್ಞಾನದಿಂದ ಹಿಂದೆ ಸರಿದರೂ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ವಿಜ್ಞಾನ ಕ್ಷೇತ್ರವನ್ನು ಅರಸಿ ಬರುತ್ತಿರುವುದು ಆಶಾದಾಯಕ ಬೆಳವಣಿಗೆ,'' ಎಂದರು.

''ದೇಶದ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದರೂ ವಿಜ್ಞಾನ ಕ್ಷೇತ್ರಕ್ಕೆ ಒತ್ತು ಕೊಡುತ್ತಿರುವವರು ಮಾತೃಭಾಷೆ ಕನ್ನಡದಲ್ಲಿ ಕಲಿತ ಗ್ರಾಮೀಣರೇ ಹೊರತು ಇಂಗ್ಲಿಷ್‌ ಮಾಧ್ಯಮದವರಲ್ಲ. ನಾನು ಕೂಡ ಕನ್ನಡ ಮಾಧ್ಯಮದಲ್ಲೇ ಓದಿದವನು. ನಮ್ಮ ತಾತ ಕನ್ನಡದ ಶಿಕ್ಷಕರು. ಭಾರತದ ಭವಿಷ್ಯ ಅಡಗಿರುವುದೇ ಹಳ್ಳಿ ಮಕ್ಕಳಲ್ಲಿ. ಹೀಗಾಗಿಯೇ ನಾನು ಮತ್ತು ನನ್ನ ಪತ್ನಿ ದೇಶದ ನಾನಾ ಭಾಗಗಳಿಗೆ ತೆರಳಿ ಗ್ರಾಮೀಣ ಮಕ್ಕಳಿಗೆ ವಿಜ್ಞಾನದಲ್ಲಿ ಆಸಕ್ತಿ ಮೂಡಿಸುತ್ತಿದ್ದೇವೆ. ನಮ್ಮಲ್ಲಿ ಹಣ ಇಲ್ಲ. ಆದರೆ, ಇರುವ ಬುದ್ಧಿ, ಜ್ಞಾನವನ್ನು ಧಾರೆ ಎರೆಯುತ್ತಿದ್ದೇವೆ'' ಎಂದರು.

ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷ ಡಾ. ಮನು ಬಳಿಗಾರ್‌, ಪದಾಧಿಕಾರಿಗಳಾದ ಪಿ. ಮಲ್ಲಿಕಾರ್ಜುನಪ್ಪ, ವ.ಚ. ಚನ್ನೇಗೌಡ ಉಪಸ್ಥಿತರಿದ್ದರು.

ಶಿಕ್ಷಣಕ್ಕೆ ಕಡಿಮೆ ಹಣ: ''ನಾನು ಐವರು ಪ್ರಧಾನ ಮಂತ್ರಿಗಳ ಜತೆ ಕೆಲಸ ಮಾಡಿದ್ದೇನೆ. ಆದರೆ ಶಿಕ್ಷಣಕ್ಕೆ ಒತ್ತು ನೀಡುವ ಕೆಲಸ ಆಗದಿರುವುದು ಅತ್ಯಂತ ನೋವಿನ ಸಂಗತಿ. ಒಟ್ಟಾರೆ ಜಿಡಿಪಿಯಲ್ಲಿ ಶೇ. 3.5ರಷ್ಟು ಮಾತ್ರ ಶಿಕ್ಷಣಕ್ಕೆ ಹಣ ಮೀಸಲಿಡಲಾಗುತ್ತಿದೆ. ಶಿಕ್ಷಣಕ್ಕೆ ಶೇ.6ರಷ್ಟು ಹಣ ಮೀಸಲಿಡಬೇಕು ಎಂಬುದು ನನ್ನ ಆಶಯ. ಅಷ್ಟೇ ಅಲ್ಲ ವಿಜ್ಞಾನಕ್ಕೆ ಶೇ. 0.9ರಷ್ಟು ಮಾತ್ರ ಹಣ ನೀಡಲಾಗುತ್ತಿದೆ. ಇದರಿಂದ ಸಂಶೋಧನೆಗಳು ಹೇಗೆ ನಡೆಯುತ್ತವೆ?'' ಎಂದು ಡಾ.ಸಿ.ಎನ್‌.ಆರ್‌. ರಾವ್‌ ಪ್ರಶ್ನಿಸಿದರು.

ಚೀನಾ ವಿಜ್ಞಾನದಲ್ಲಿ ಮುಂದೆ: ''ವಿಜ್ಞಾನ ಮತ್ತು ಶಿಕ್ಷಣದಲ್ಲಿ ಚೀನಾ ಭಾರತಕ್ಕಿಂತ ಹೆಚ್ಚು ಮುಂದಿದೆ. ಏಕೆಂದರೆ ಅದು ಈ ಎರಡೂ ಕ್ಷೇತ್ರಗಳಿಗೆ ವಿಶೇಷ ಒತ್ತು ಮತ್ತು ಹಣ ಮೀಸಲಿಡುತ್ತಿದೆ. ಚೀನಾವನ್ನು ಮೀರಿಸಬೇಕೆಂದರೆ ಎಲ್ಲರೂ ಒಗ್ಗಟ್ಟಾಗಿ ವಿಜ್ಞಾನ ಕ್ಷೇತ್ರದಲ್ಲಿ ಹೆಚ್ಚು ಹೆಚ್ಚು ದುಡಿಯಬೇಕು,'' ಎಂದು ಸಲಹೆ ನೀಡಿದರು.

ನೊಬೆಲ್‌ ಸಿಕ್ಕರೆ ಖುಷಿಯಾಗುತ್ತೆ: ''ನಾನು 60 ವರ್ಷಗಳಿಂದ ಪ್ರೊಫೆಸರ್‌ ಆಗಿದ್ದೀನಿ. ಈಗ ಉದ್ಯೋಗಕ್ಕೆ ಸೇರುತ್ತಿರುವ ಯುವಜನರಿಗಿಂತ ಹೆಚ್ಚಾಗಿಯೇ ನಾನು ಕೆಲಸ ಮಾಡುತ್ತಿದ್ದೇನೆ. 1.50 ಲಕ್ಷ ವಿಜ್ಞಾನ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದೇನೆ. 52 ಪುಸ್ತಕಗಳನ್ನು ಬರೆದಿದ್ದೇನೆ. ಆದರೆ ನಾನೆಂದೂ ಪ್ರಶಸ್ತಿಗಳನ್ನು ಅರಸಿ ಹೋಗಲಿಲ್ಲ. ಆದರೂ ಭಾರತರತ್ನ ಸಿಕ್ಕಿದೆ. ನೊಬೆಲ್‌ ಪ್ರಶಸ್ತಿಗೆ ಸಾಕಷ್ಟು ಬಾರಿ ನನ್ನ ಹೆಸರು ಹೋಗಿದೆ. ಆದರೆ ಇನ್ನೂ ಸಿಕ್ಕಿಲ್ಲ. ಆ ಪ್ರಶಸ್ತಿ ಸಿಕ್ಕರೆ ನಾನು ಖುಷಿಯಿಂದ ಪಡೆಯುತ್ತೇನೆ'' ಎಂದು ಸಂತಸದಿಂದ ನುಡಿದರು.

ಬೆಂಗಳೂರು ಭಯ ಹುಟ್ಟಿಸಿದ್ರೂ ಇಷ್ಟ: ''ಬೆಂಗಳೂರಿನಲ್ಲಿ ತಲೆ ಎತ್ತುತ್ತಿರುವ ಬಹುಮಹಡಿ ಕಟ್ಟಡಗಳನ್ನು ನೋಡಿದರೆ ಭಯವಾಗುತ್ತದೆ. ಇಲ್ಲಿನ ವಾಯುಮಾಲಿನ್ಯ ತೀರಾ ಹದಗೆಟ್ಟಿದ್ದು, ಬೆಂಗಳೂರು ಹೊಸದಿಲ್ಲಿಯ ಹಾದಿ ತುಳಿಯುತ್ತಿದೆ. ಸಂಚಾರ ಸಮಸ್ಯೆ ಅಗಾಧವಾಗಿದೆ. ಆದರೂ ನನಗೆ ಬೆಂಗಳೂರು ಇಷ್ಟ. ಇಂದಿನ ಜನ ಮೊಬೈಲ್‌ ಬಳಕೆಯಲ್ಲಿ ಮುಳುಗಿದ್ದಾರೆ. ಇದರಿಂದ ಎಷ್ಟು ಸಮಯ ವ್ಯರ್ಥವಾಗುತ್ತಿದೆ ಎಂಬುದನ್ನು ಯಾಕೆ ಯಾರೂ ಅರಿಯುತ್ತಿಲ್ಲ?'' ಎಂದು ಅವರು ಪ್ರಶ್ನಿಸಿದರು.

''ಬಸವನಗುಡಿಯಿಂದ ಆಚಾರ್ಯ ಪಾಠಶಾಲೆಗೆ ಸೈಕಲ್‌ನಲ್ಲೇ ಹೋಗುತ್ತಿದ್ದೆ. ಬ್ಯೂಗಲ್‌ರಾಕ್‌ನಲ್ಲಿ ಆಡಿ ಬೆಳೆದೆ. ಆದರೆ, ಈಗ ಬೆಂಗಳೂರು ಧೂಳು, ಹೊಗೆಯಿಂದ ಗಾಳಿ ಕಲುಷಿತಗೊಂಡಿದೆ. ಆದರೂ ಬೆಂಗಳೂರು ಇಷ್ಟವಾಗುತ್ತೆ'' ಎಂದು ಸಿ.ಎನ್‌.ಆರ್‌. ರಾವ್‌ ನುಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ