ಆ್ಯಪ್ನಗರ

ಶಾಲೆ ಆರಂಭವಾಗಿ 2 ತಿಂಗಳಾದ್ರೂ ಸಿಗದ ಸಮವಸ್ತ್ರ, ಶೂ!

ಬಿಬಿಎಂಪಿ ಸುಪರ್ದಿಯಲ್ಲಿರುವ ಶಾಲಾ-ಕಾಲೇಜುಗಳು ಆರಂಭವಾಗಿ 2 ತಿಂಗಳು ಕಳೆಯುತ್ತಾ ಬಂದಿದ್ದು, ಈವರೆಗೆ ಮಕ್ಕಳಿಗೆ ಸಮವಸ್ತ್ರ, ಶೂ, ಬ್ಯಾಗ್‌, ಸ್ವೆಟರ್‌ ಪಡೆಯುವ ಸೌಭಾಗ್ಯ ಸಿಕ್ಕಿಲ್ಲ.

Vijaya Karnataka 26 Jul 2019, 7:56 am
ಬೆಂಗಳೂರು : ಬಿಬಿಎಂಪಿ ಸುಪರ್ದಿಯಲ್ಲಿರುವ ಶಾಲಾ-ಕಾಲೇಜುಗಳು ಆರಂಭವಾಗಿ 2 ತಿಂಗಳು ಕಳೆಯುತ್ತಾ ಬಂದಿದ್ದು, ಈವರೆಗೆ ಮಕ್ಕಳಿಗೆ ಸಮವಸ್ತ್ರ, ಶೂ, ಬ್ಯಾಗ್‌, ಸ್ವೆಟರ್‌ ಪಡೆಯುವ ಸೌಭಾಗ್ಯ ಸಿಕ್ಕಿಲ್ಲ. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ತೊಡಕುಂಟಾಗಿದೆ.
Vijaya Karnataka Web school uniform


ನಗರದಲ್ಲಿ 90 ಶಿಶುವಿಹಾರ, 32 ಪ್ರೌಢಶಾಲೆ, 15 ಪ್ರಾಥಮಿಕ ಶಾಲೆ, 14 ಪಿಯು ಮತ್ತು 4 ಪದವಿ ಕಾಲೇಜುಗಳು ಹೀಗೆ ಒಟ್ಟು 155 ಶಾಲಾ-ಕಾಲೇಜುಗಳನ್ನು ಬಿಬಿಎಂಪಿ ನಡೆಸುತ್ತಿದೆ. ಇವುಗಳಲ್ಲಿ ಸುಮಾರು 15 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಸರಕಾರದಿಂದಲೇ ವಿತರಿಸುವ ಪುಸ್ತಕಗಳು ವಿದ್ಯಾರ್ಥಿಗಳ ಕೈತಲುಪಿದ್ದು ಹೊರತುಪಡಿಸಿದರೆ, ಪಾಲಿಕೆ ಒದಗಿಸಬೇಕಿರುವ ಸೌಲಭ್ಯಗಳು ಇನ್ನೂ ಸಿಕ್ಕಿಲ್ಲ. ಪಾಲಿಕೆಯು ಪ್ರತಿ ವರ್ಷವೂ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಶೂ, ಬ್ಯಾಗ್‌ ಮತ್ತು ಇನ್ನಿತರೆ ಸವಲತ್ತುಗಳನ್ನು ನೀಡಲು ವಿಳಂಬ ಧೋರಣೆ ಅನುಸರಿಸುತ್ತಿದೆ. ಶಾಲೆಗಳು ಆರಂಭವಾದ ಕೂಡಲೇ ಮಕ್ಕಳಿಗೆ ಸಮವಸ್ತ್ರ, ಪಠ್ಯಪುಸ್ತಕ, ನೋಟ್‌ಬುಕ್‌, ಶೂ, ಬ್ಯಾಗ್‌, ಸ್ವೆಟರ್‌ಗಳನ್ನು ವಿತರಣೆ ಮಾಡಬೇಕೆಂದು ಕಾರ್ಪೋರೇಟರ್‌ಗಳು ಪ್ರತಿ ವರ್ಷವೂ ಕೌನ್ಸಿಲ್‌ ಸಭೆಯಲ್ಲಿ ಧ್ವನಿ ಎತ್ತುತ್ತಲೇ ಇದ್ದಾರೆ. ಆದರೂ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಮಸ್ಯೆ ಪುನರಾವರ್ತನೆಯಾಗುವಂತಾಗಿದೆ.

ಬಿಬಿಎಂಪಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಸಮವಸ್ತ್ರ ವಿತರಣೆಯಲ್ಲಾಗುತ್ತಿದ್ದ ವಿಳಂಬವನ್ನು ತಪ್ಪಿಸಲು 2017-18ರಲ್ಲಿ ಮೂರು ವರ್ಷಗಳಿಗೊಮ್ಮೆ ಟೆಂಡರ್‌ ಕರೆಯಲು ನಿರ್ಧರಿಸಲಾಯಿತು. ಅದರಂತೆ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗಿದೆ. ಆದರೆ, ಗುತ್ತಿಗೆದಾರರ ನಿರಾಸಕ್ತಿಯಿಂದ ಮಕ್ಕಳಿಗೆ ಸಕಾಲಕ್ಕೆ ಸಮವಸ್ತ್ರ, ಶೂ, ನೋಟ್‌ಬುಕ್‌ಗಳು ಲಭಿಸದಂತಾಗಿದೆ.

ಪಾಲಿಕೆಯ ಶಾಲಾ-ಕಾಲೇಜುಗಳಲ್ಲಿ ಓದುತ್ತಿರುವವರಲ್ಲಿ ಕೂಲಿ ಕಾರ್ಮಿಕರು, ಪೌರ ಕಾರ್ಮಿಕರ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಗಳನ್ನಿಡಬೇಕಾದ ಪಾಲಿಕೆಯ ಶಿಕ್ಷಣ ವಿಭಾಗವು ಮಕ್ಕಳಿಗೆ ಸೌಲಭ್ಯಗಳನ್ನು ಒದಗಿಸುವಲ್ಲಿ ವಿಳಂಬ ಧೋರಣೆಯನ್ನು ಅನುಸರಿಸುತ್ತಿದೆ. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಹಿನ್ನೆಡೆಯುಂಟಾಗುತ್ತಿದೆ. ಮಕ್ಕಳು ಹರಿದ ಬಟ್ಟೆ, ಕಿತ್ತು ಹೋದ ಶೂ ಧರಿಸಿ ಶಾಲೆಗೆ ಬರುವ ಸ್ಥಿತಿ ನಿರ್ಮಾಣವಾಗಿದೆ.

''ಬಹುತೇಕ ಮಕ್ಕಳು ಕಳೆದ ವರ್ಷ ನೀಡಿರುವ ಸಮವಸ್ತ್ರ, ಶೂ ಧರಿಸಿಕೊಂಡು ಬರುತ್ತಿದ್ದಾರೆ. ಕೆಲವರಿಗೆ ಸಮವಸ್ತ್ರ, ಶೂ ಕಿರಿದಾಗಿದ್ದು, ಇನ್ನಿಲ್ಲದ ತೊಂದರೆ ಅನುಭವಿಸುವಂತಾಗಿದೆ. ಕಳಪೆ ಗುಣಮಟ್ಟದ ಬ್ಯಾಗ್‌ಗಳನ್ನು ವಿತರಿಸಲಾಗಿದೆ. ಮಕ್ಕಳು ಪ್ಲಾಸ್ಟಿಕ್‌ ಕೈಚೀಲ, ಬಟ್ಟೆ ಬ್ಯಾಗ್‌ಗಳಲ್ಲಿ ಪುಸ್ತಕಗಳನ್ನು ಹೊತ್ತು ಬರುತ್ತಿದ್ದಾರೆ,'' ಎಂದು ಶಿಕ್ಷಕರೊಬ್ಬರು ತಿಳಿಸಿದರು.

''ತಿಂಗಳ ಹಿಂದೆಯೇ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗಿದ್ದು, ಸಮವಸ್ತ್ರ, ಶೂ, ಸ್ವೆಟರ್‌ಗಳನ್ನು ದಾಸ್ತಾನಿಟ್ಟುಕೊಳ್ಳಲಾಗಿದೆ. ಶೀಘ್ರದಲ್ಲೇ ಎಲ್ಲ ಮಕ್ಕಳಿಗೆ ವಿತರಣೆ ಮಾಡಲಾಗುವುದು,'' ಎಂದು ಶಿಕ್ಷಣ ವಿಭಾಗದ ಅಧಿಕಾರಿಯೊಬ್ಬರು ಹೇಳಿದರು.

''ಸಮವಸ್ತ್ರದ ಬಣ್ಣದಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡಿಲ್ಲ. ಕಳೆದ ವರ್ಷದಂತೆಯೇ ಈ ಸಲವೂ ಅದೇ ಮಾದರಿಯ ಸಮವಸ್ತ್ರ, ಶೂ ನೀಡಲಾಗುತ್ತಿದೆ. ಮುಂದಿನ ವರ್ಷದಿಂದ ಬ್ಲೇಜರ್‌ಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ,'' ಎಂದು ಮಾಹಿತಿ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ