ಆ್ಯಪ್ನಗರ

Honey Trap: ಸೋಷಿಯಲ್ ಮೀಡಿಯಾ ಮೂಲಕ ಹನಿ ಟ್ರ್ಯಾಪ್‌! ಸಹಪಾಠಿಯನ್ನೇ ಸುಲಿಗೆ ಮಾಡಿದ ಗ್ಯಾಂಗ್!

Honey Trap In Bengaluru: ಸಾಮಾಜಿಕ ಜಾಲತಾಣಗಳಲ್ಲಿ ಚಾಟ್ ಮಾಡುವಾಗ ಮೈ ಎಲ್ಲಾ ಕಣ್ಣಾಗಿರಬೇಕು. ಅದರಲ್ಲೂ ಅಪರಿಚಿತ ಯುವತಿಯ ಫೋಟೋ ಹಾಗೂ ಹೆಸರಿನ ಮೂಲಕ ಸಂದೇಶಗಳು ಬಂದಾಗ ಜಾಗ್ರತೆ ವಹಿಸಬೇಕು. ಇಲ್ಲವಾದ್ರೆ ಮೋಸ ಹೋಗೋದು ಖಂಡಿತಾ. ಇಂಥದ್ದೇ ಒಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ. ತನ್ನ ಜೊತೆಯಲ್ಲೇ ಓದುತ್ತಿದ್ದ ಯುವಕನನ್ನು ಹನಿ ಟ್ರ್ಯಾಪ್ ಬಲೆಗೆ ಕೆಡವಿದ ತಂಡ, ಹಣ, ಮೊಬೈಲ್, ಚಿನ್ನಾಭರಣ ಸೇರಿದಂತೆ ಹಲವು ಬೆಲೆಬಾಳುವ ವಸ್ತುಗಳನ್ನು ಸುಲಿಗೆ ಮಾಡಿ ಇದೀಗ ಸಿಕ್ಕಿಬಿದ್ದಿದೆ!

Authored byದಿಲೀಪ್ ಡಿ. ಆರ್. | Bangalore Mirror Bureau 30 Mar 2023, 1:34 pm

ಹೈಲೈಟ್ಸ್‌:

  • ಬಿಕಾಂ ವಿದ್ಯಾರ್ಥಿ 23 ವರ್ಷ ವಯಸ್ಸಿನ ಯುವಕ ಈ ಪ್ರಕರಣದ ಮಾಸ್ಟರ್ ಮೈಂಡ್!
  • ಈತ ತನ್ನ ಸಹಪಾಠಿ ಶಶಾಂಕ್ ಎಂಬಾತನನ್ನು ಹನಿ ಟ್ರ್ಯಾಪ್‌ನ ಬಲೆಗೆ ಬೀಳಿಸಿದ್ದ
  • ತನ್ನ ಗೆಳತಿಯ ನೆರವು ಪಡೆದು ಶಶಾಂಕ್‌ನನ್ನು ಹನಿ ಟ್ರ್ಯಾಪ್ ಬಲೆಗೆ ಕೆಡವಿದ್ದ ವಿಷ್ಣು!
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Honey trap.
ಬೆಂಗಳೂರು: ಫೇಸ್‌ಬುಕ್, ಇನ್‌ಸ್ಟಾ ಗ್ರಾಂ ಸೇರಿದಂತೆ ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಚಾಟ್ ಮಾಡುವಾಗ, ವಿಡಿಯೋ ಕಾಲ್ ಮಾಡುವಾಗ ಎಚ್ಚರಿಕೆ ವಹಿಸಿ ಎಂದು ಪೊಲೀಸರು ಹಾಗೂ ಸೈಬರ್ ಕ್ರೈಂ ಪರಿಣಿತರು ಎಷ್ಟೇ ಬುದ್ದಿವಾದ ಹೇಳಿದರೂ ಜನರಿಗೆ ಅರ್ಥವಾದಂತೆ ಕಾಣುತ್ತಿಲ್ಲ. ಮೇಲಿಂದ ಮೇಲೆ ಈ ರೀತಿಯ ಪ್ರಕರಣಗಳು ವರದಿಯಾಗುತ್ತಲೇ ಇವೆ. ಅದರಲ್ಲೂ ಹನಿಟ್ರಾಪ್‌ ಹಾಗೂ ಲೈಂಗಿಕ ಸುಲಿಗೆ ಪ್ರಕರಣಗಳಿಗೆ ಕಡಿವಾಣವೇ ಇಲ್ಲದಂತಾಗಿದೆ. ಬಹುತೇಕ ಸಂದರ್ಭಗಳಲ್ಲಿ ಮೋಸ ಹೋದವರು ಮರ್ಯಾದೆಗೆ ಅಂಜಿ ಪೊಲೀಸರಿಗೆ ದೂರು ನೀಡೋದೇ ಇಲ್ಲ. ಜನತೆಯ ಈ ದೌರ್ಬಲ್ಯವೇ ದುಷ್ಟರಿಗೆ ವರದಾನವಾಗಿದೆ. ಅಂಥದ್ದೇ ಮತ್ತೊಂದು ಪ್ರಕರಣ ಇದೀಗ ಬೆಂಗಳೂರಿನಲ್ಲಿ ವರದಿಯಾಗಿದೆ.

ಸುಲಿಗೆ ಮಾಡಲು ಸ್ನೇಹಿತೆಯನ್ನು ಬಳಸಿಕೊಂಡ ದುಷ್ಟ!


ಬೆಂಗಳೂರಿನ ಗೊಟ್ಟಿಗೆರೆ ನಿವಾಸಿ ಬಿ ಕಾಂ ವಿದ್ಯಾರ್ಥಿ 23 ವರ್ಷ ವಯಸ್ಸಿನ ವಿಷ್ಣು ಅಲಿಯಾಸ್ ರುತೀಕ್ ಈ ಪ್ರಕರಣದ ಮಾಸ್ಟರ್ ಮೈಂಡ್! ಈತ ತನ್ನ ಸಹಪಾಠಿ ಶಶಾಂಕ್ ಎಂಬಾತನನ್ನು ಹನಿ ಟ್ರ್ಯಾಪ್‌ನ ಬಲೆಗೆ ಬೀಳಿಸಲು ಸಂಚು ರೂಪಿಸಿದ್ದ. ಹಣ, ಒಡವೆ, ಐಫೋನ್ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ಹೊಂದಿದ್ದ ಶಶಾಂಕ್‌ನ ಮೇಲೆ ಬಹಳ ದಿನಗಳಿಂದ ಕಣ್ಣಿಟ್ಟಿದ್ದ ಆರೋಪಿ ವಿಷ್ಣು, ಆತನನ್ನು ಹನಿಟ್ರ್ಯಾಪ್ ಬಲೆಗೆ ಕೆಡವಲು ತನ್ನ ಗೆಳತಿಯ ನೆರವು ಕೋರಿದ!

'ಲೈಂಗಿಕ ಸುಲಿಗೆ'ಗೆ 40 ವರ್ಷದ ಆಸುಪಾಸಿನವರೇ ಟಾರ್ಗೆಟ್! ಅಪರಿಚಿತರ ಜೊತೆ ಚಾಟಿಂಗ್ ಬೇಡವೇ ಬೇಡ!
ವಿಷ್ಣು ಗೆಳೆತಿ ಶಶಾಂಕ್‌ಗೆ ಇನ್‌ಸ್ಟಾ ಗ್ರಾಂ ಮೂಲಕ ಉದ್ರೇಕಕಾರಿ ಮೆಸೇಜ್‌ಗಳನ್ನು ಮಾಡಿ ಆತನನ್ನು ತನ್ನ ಬಲೆಗೆ ಬೀಳಿಸಿಕೊಂಡಳು. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಬರಲು ಶಶಾಂಕ್‌ಗೆ ಆಹ್ವಾನಿಸಿದಳು. ಆಕೆಯ ಆಹ್ವಾನದ ಮೇರೆಗೆ ಆಕೆಯನ್ನು ಸೇರುವ ತವಕದಲ್ಲಿ ಶಶಾಂಕ್ ಬನ್ನೇರುಘಟ್ಟ ಝೂ ಬಳಿಯ ನಿರ್ಜನ ಪ್ರದೇಶಕ್ಕೆ ಬಂದಾಗ ವಿಷ್ಣು ತನ್ನ ನಾಲ್ವರು ಗೆಳೆಯರ ಮೂಲಕ ಶಶಾಂಕ್ ಮೇಲೆ ದಾಳಿ ನಡೆಸಿದ್ದ. ದೊಣ್ಣೆಗಳಿಂದ ಶಶಾಂಕ್ ಮೇಲೆ ಹಲ್ಲೆ ನಡೆಸಿದ ವಿಷ್ಣು ಮತ್ತು ಆತನ ಸಹಚರರು, ಶಶಾಂಕ್ ಬಳಿ ಇದ್ದ ಹಣ, ಮೊಬೈಲ್ ಫೋನ್, ಚಿನ್ನಾಭರಣ ಸಮೇತ ಹಲವು ಬೆಲೆ ಬಾಳುವ ವಸ್ತುಗಳನ್ನು ದೋಚಿದರು ಎಂದು ಪೊಲೀಸರಿಗೆ ದೂರು ನೀಡಲಾಗಿತ್ತು.

Honey Trap: ವಾಟ್ಸಪ್‌ ಮೂಲಕ ಹನಿ ಟ್ರ್ಯಾಪ್‌: ಪ್ರಿಯಕರನೊಂದಿಗೆ ಯುವತಿ ಸೆರೆ!
ಕೂಡಲೇ ಕಾರ್ಯಾಚರಣೆ ನಡೆಸಿದ ಪೊಲೀಸರು ಶಶಾಂಕ್‌ನಿಂದ ವಿಷ್ಣು ಹಾಗೂ ಆತನ ಸಹಚರರು ದೋಚಿದ್ದ ಚಿನ್ನಾಭರಣ, ಐಫೋನ್ ಹಾಗೂ ಹಣವನ್ನು ವಶಕ್ಕೆ ಪಡೆದಿದ್ದಾರೆ. ಐಫೋನ್ ಜೊತೆಯಲ್ಲಿ 68 ಗ್ರಾಂ ತೂಕದ ಚಿನ್ನಾಭರಣವನ್ನು ದುಷ್ಕರ್ಮಿಗಳು ದೋಚಿದ್ದರು. ಕಿವಿಯೋಲೆ, ಉಂಗುರ, ಚಿನ್ನದ ಸರವನ್ನು ದೋಚಿದ್ದ ದುಷ್ಕರ್ಮಿಗಳು ಶಶಾಂಕ್‌ನ ಬೈಕ್ ಕೂಡಾ ತೆಗೆದುಕೊಂಡು ಪರಾರಿಯಾಗಿದ್ದರು. ಇದೀಗ ಅವೆಲ್ಲವನ್ನೂ ವಶಕ್ಕೆ ಪಡೆದಿರುವ ಪೊಲೀಸರು, ಆರೋಪಿ ಬಳಿ ಇದ್ದ ಸ್ಕೂಟರ್ ಅನ್ನೂ ವಶಕ್ಕೆ ಪಡೆದಿದ್ದಾರೆ.


ವಿಷ್ಣು ಜೊತೆಗೆ ಇದ್ದ ಆರೋಪಿಗಳ ಮಾಹಿತಿಯನ್ನೂ ಪೊಲೀಸರು ಮಾಧ್ಯಮಗಳಿಗೆ ನೀಡಿದ್ದಾರೆ. ಜೆಪಿ ನಗರದಲ್ಲಿ ಎಸಿ ಟೆಕ್ನೀಶಿಯನ್ ಆಗಿರುವ 22 ವರ್ಷ ವಯಸ್ಸಿನ ಮೊಹಮ್ಮದ್ ಆಸೀಫ್, ಬೊಮ್ಮನಹಳ್ಳಿ ನಿವಾಸಿ ವಾಹನಗಳ ಮೆಕಾನಿಕ್ 20 ವರ್ಷ ವಯಸ್ಸಿನ ಯಾಸಿನ್ ಪಾಶಾ ಹಾಗೂ ಡಿಲೆವರಿ ಬಾಯ್ ಆಗಿದ್ದ 21 ವರ್ಷ ವಯಸ್ಸಿನ ಸಮೀರ್ ಅಲಿಯಾಸ್ ಇರ್ಫಾನ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತನ್ನ ಸಹಪಾಠಿಯಾಗಿದ್ದ ವ್ಯಕ್ತಿಯೇ ಯುವತಿಯೊಬ್ಬಳನ್ನು ಬಳಸಿಕೊಂಡು ತನ್ನ ಮೇಲೆ ದಾಳಿ ಮಾಡಿದ ವಿಚಾರ ತಿಳಿದು ಶಶಾಂಕ್‌ ಶಾಕ್‌ನಲ್ಲಿದ್ದಾನೆ!
ಲೇಖಕರ ಬಗ್ಗೆ
ದಿಲೀಪ್ ಡಿ. ಆರ್.
ವಿಜಯ ಕರ್ನಾಟಕದ ಡಿಜಿಟಲ್ ಪತ್ರಕರ್ತನಾಗಿ 2019ರ ಆಗಸ್ಟ್‌ನಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡ ಟಿವಿ ನ್ಯೂಸ್ ವಾಹಿನಿಗಳಲ್ಲಿ 14 ವರ್ಷಕ್ಕೂ ಹೆಚ್ಚು ಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ರಾಜಕೀಯ, ವಿಜ್ಞಾನ-ತಂತ್ರಜ್ಞಾನ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ಹಾಸ್ಯ, ವಿಡಂಬನಾತ್ಮಕ ಬರಹ, ವ್ಯಕ್ತಿ ಚಿತ್ರ, ಜೀವ ಪರ ನಿಲುವಿನ ಸಂವೇದನಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕಾಡು, ಹಸಿರು, ಬೆಟ್ಟ ಗುಡ್ಡಗಳ ಚಾರಣ ಮಾಡುವುದು ಇವರ ಹವ್ಯಾಸ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ