ಆ್ಯಪ್ನಗರ

ಪಾದಚಾರಿ ಸುರಂಗಮಾರ್ಗಕ್ಕೆ ಬಿಎಂಆರ್‌ಸಿಎಲ್‌ ಸಿದ್ಧತೆ

ನಾಗಸಂದ್ರ ಹಾಗೂ ದಾಸರಹಳ್ಳಿ ಮೆಟ್ರೊ ನಿಲ್ದಾಣಗಳನ್ನು ಬಳಸುವ ಹಾಗೂ ಈ ಭಾಗದಲ್ಲಿ ಪ್ರತಿ ದಿನ ರಸ್ತೆ ದಾಟುವವರ ಸಮಸ್ಯೆ ಶೀಘ್ರವೇ ಕೊನೆಗೊಳ್ಳಲಿದೆ. ಎರಡೂ ನಿಲ್ದಾಣಗಳ ಬಳಿ ತಲಾ ಒಂದೊಂದು ಪಾದಚಾರಿ ಸುರಂಗಮಾರ್ಗ ನಿರ್ಮಿಸಲು ಬಿಎಂಆರ್‌ಸಿಎಲ್‌ ಎರಡನೇ ಬಾರಿಗೆ ಟೆಂಡರ್‌ ಕರೆದಿದೆ.

Vijaya Karnataka 1 Jun 2018, 5:00 am
ಬೆಂಗಳೂರು: ನಾಗಸಂದ್ರ ಹಾಗೂ ದಾಸರಹಳ್ಳಿ ಮೆಟ್ರೊ ನಿಲ್ದಾಣಗಳನ್ನು ಬಳಸುವ ಹಾಗೂ ಈ ಭಾಗದಲ್ಲಿ ಪ್ರತಿ ದಿನ ರಸ್ತೆ ದಾಟುವವರ ಸಮಸ್ಯೆ ಶೀಘ್ರವೇ ಕೊನೆಗೊಳ್ಳಲಿದೆ. ಎರಡೂ ನಿಲ್ದಾಣಗಳ ಬಳಿ ತಲಾ ಒಂದೊಂದು ಪಾದಚಾರಿ ಸುರಂಗಮಾರ್ಗ ನಿರ್ಮಿಸಲು ಬಿಎಂಆರ್‌ಸಿಎಲ್‌ ಎರಡನೇ ಬಾರಿಗೆ ಟೆಂಡರ್‌ ಕರೆದಿದೆ.
Vijaya Karnataka Web bmrcl prepares for pedestrian subway
ಪಾದಚಾರಿ ಸುರಂಗಮಾರ್ಗಕ್ಕೆ ಬಿಎಂಆರ್‌ಸಿಎಲ್‌ ಸಿದ್ಧತೆ


ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿರುವ ಈ ಎರಡು ಮೆಟ್ರೊ ನಿಲ್ದಾಣಗಳನ್ನು ತಲುಪಲು ಜನರು ರಸ್ತೆಯನ್ನು ದಾಟಬೇಕು. ಆದರೆ, ಇದು ಸುರಕ್ಷಿತವಲ್ಲ ಎಂಬ ವಿಚಾರ ತಿಳಿದಿದ್ದರೂ ನಿಲ್ದಾಣಗಳನ್ನು ನಿರ್ಮಿಸುವ ಹಂತದಲ್ಲಿ ಅಧಿಕಾರಿಗಳು, ಜನರು ರಸ್ತೆ ದಾಟುವುದು ಹೇಗೆ ಎಂಬ ಬಗ್ಗೆ ಚಿಂತಿಸಲೇ ಇಲ್ಲ. ಹೆದ್ದಾರಿಯಲ್ಲಿ ವಾಹನಗಳು ವೇಗವಾಗಿ ಬರುವುದರಿಂದ ಈ ಎರಡು ನಿಲ್ದಾಣಗಳಿಗೆ ರಸ್ತೆಯ ಮತ್ತೊಂದು ಬದಿಯಿಂದ ಬರಬೇಕೆಂದರೆ ಬಹಳ ಎಚ್ಚರಿಕೆ ವಹಿಸಬೇಕಾಗುತ್ತದೆ. ಕಳೆದ ವರ್ಷವಷ್ಟೆ ನಾಗಸಂದ್ರ ನಿಲ್ದಾಣದಲ್ಲಿ ಇಳಿದು ರಸ್ತೆ ದಾಟುತ್ತಿದ್ದ ವಿದ್ಯಾರ್ಥಿನಿ ಅಪಘಾತಕ್ಕೀಡಾಗಿ ಮೃತಪಟ್ಟಿದ್ದಳು. ಆ ಬಳಿಕ ಎಚ್ಚೆತ್ತುಕೊಂಡ ನಿಗಮ, ಸುರಂಗಮಾರ್ಗ ನಿರ್ಮಿಸಲು ನಿರ್ಧರಿಸಿತ್ತು. ಅದರಂತೆ, 2017ರ ಸೆಪ್ಟೆಂಬರ್‌ನಲ್ಲಿ ಸುರಂಗಮಾರ್ಗ ನಿರ್ಮಾಣಕ್ಕಾಗಿ ಟೆಂಡರ್‌ ಕರೆಯಲಾಯಿತು. ಆದರೆ, ಕಂಪನಿಯೊಂದು ಅಧಿಕ ಮೊತ್ತದ ಬಿಡ್‌ ಸಲ್ಲಿಸಿದ್ದರಿಂದ ಟೆಂಡರ್‌ ಅನಿವಾರ್ಯವಾಗಿ ರದ್ದಾಯಿತು. ಇದರ ಜತೆಗೆ ಸುರಂಗಮಾರ್ಗ ನಿರ್ಮಿಸಲು ಟೆಂಡರ್‌ ಕರೆದಿದ್ದ ಮೆಟ್ರೊ ನಿಗಮ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಭೂಮಿ ಬಳಸಲು ಅನುಮತಿ ಪಡೆದಿರಲಿಲ್ಲ. ಇದು ಮುಂದಿನ ದಿನಗಳಲ್ಲಿ ಕಾನೂನು ತೊಡಕನ್ನು ಉಂಟುಮಾಡಲಿದೆ ಎಂಬುದು ಅಧಿಕಾರಿಗಳಿಗೆ ತಡವಾಗಿ ಗೊತ್ತಾಯಿತು.

ಟೆಂಡರ್‌ ರದ್ದಾದ ನಂತರ ಪ್ರಾಧಿಕಾರವನ್ನು ಸಂಪರ್ಕಿಸಿದ ಮೆಟ್ರೊನಿಗಮ, ಅನುಮತಿ ಕೋರಿತ್ತು. ಭೂಮಿ ಬಳಸುವ ಮುನ್ನ 30 ವರ್ಷದ ಅವಧಿಗೆ 2.5 ಕೋಟಿ ರೂ. ಠೇವಣಿ ಇಡಲು ಪ್ರಾಧಿಕಾರ ಸೂಚಿಸಿತ್ತು. ತ್ವರಿತಗತಿಯಲ್ಲಿ ಕಾಮಗಾರಿ ಆಗಬೇಕಿರುವುದರಿಂದ ಹಾಗೂ ಹಣದ ಕೊರತೆಯಿರುವುದರಿಂದ ಇಂತಹ ನಿಯಮದಿಂದ ವಿನಾಯಿತಿ ನೀಡುವಂತೆ ನಿಗಮ ಮನವಿ ಮಾಡಿತ್ತು. ಇದಕ್ಕೆ ಒಪ್ಪಿರುವ ಪ್ರಾಧಿಕಾರ ಭೂಮಿ ಬಳಸಿಕೊಳ್ಳಲು ಅನುಮತಿ ಕೊಟ್ಟಿದೆ. ಇದರಿಂದ ನಿಗಮದ ಹಾದಿ ಸುಲಭವಾಗಿದೆ.

ಎರಡು ನಿಲ್ದಾಣಗಳ ಸಮೀಪ ರಸ್ತೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ಹೋಗುವಂತೆ ಒಟ್ಟು 12.13 ಕೋಟಿ ರೂ. ವೆಚ್ಚದಲ್ಲಿ ಸುರಂಗಮಾರ್ಗ ನಿರ್ಮಿಸಲಾಗುತ್ತದೆ. 18 ತಿಂಗಳಲ್ಲಿ ಕಾಮಗಾರಿ ಮುಗಿಸಬೇಕು ಎಂದು ಸೂಚಿಸಲಾಗಿದೆ.

ಪ್ರಯೋಜನಕ್ಕೆ ಬಾರದ ಸ್ಕೈವಾಕ್‌

ನಾಗಸಂದ್ರ ಮೆಟ್ರೊ ನಿಲ್ದಾಣದಿಂದ ಸುಮಾರು ಅರ್ಧ ಕಿ.ಮೀ. ಮುಂದೆ ಸ್ಕೈವಾಕ್‌ ಇದೆ. ನಿವಾಸಿಗಳು, ಶಾಲಾ ಮಕ್ಕಳು ಇದನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಸ್ಕೈವಾಕ್‌ ಕೆಳಗೆ ಬಿಎಂಟಿಸಿ ಬಸ್‌ಸ್ಟಾಪ್‌ ಇರುವುದರಿಂದ ಇಲ್ಲಿ ಜನರು ಬಸ್‌ಗಾಗಿ ಕಾಯುತ್ತಾ ನಿಲ್ಲುತ್ತಾರೆ. ಆದರೆ ಈ ಸ್ಕೈವಾಕ್‌ನಿಂದ ಮೆಟ್ರೊ ಪ್ರಯಾಣಿಕರಿಗೆ ಯಾವುದೇ ಪ್ರಯೋಜನವಿಲ್ಲ. ರಸ್ತೆಯನ್ನು ದಾಟಬೇಕೆಂದರೆ ಮೆಟ್ರೊ ಪ್ರಯಾಣಿಕರು ಅರ್ಧ ಕಿ.ಮೀ. ನಡೆದು, ಬಳಿಕವೇ ಸ್ಕೈವಾಕ್‌ ಹತ್ತಬೇಕು. ಇಷ್ಟು ಮಾಡುವ ಹೊತ್ತಿಗೆ ಪ್ರಯಾಣಿಕರು ಸುಸ್ತಾಗಿ ಏದುಸಿರು ಬಿಡಬೇಕಾಗುತ್ತದೆ. ಮೆಟ್ರೊ ನಿಗಮ ಅಂದುಕೊಂಡಂತೆ 18 ತಿಂಗಳಲ್ಲೇ ಸುರಂಗ ಕಾಮಗಾರಿ ಪೂರ್ಣಗೊಳಿಸಿದರೆ, ಮೆಟ್ರೊ ಪ್ರಯಾಣಿಕರು ಮಾತ್ರವಲ್ಲದೆ ಸಾವಿರಾರು ನಿವಾಸಿಗಳಿಗೂ ಅನುಕೂಲವಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ