ಆ್ಯಪ್ನಗರ

ಆನ್‌ಲೈನ್‌ ಮೂಲಕವೇ ಕಟ್ಟಡ ನಕ್ಷೆ ಮಂಜೂರಾತಿ, ಸಿಸಿ

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಕಟ್ಟಡ ನಕ್ಷೆ ಮಂಜೂರಾತಿ ಮತ್ತು ಪ್ರಾರಂಭಿಕ ಪ್ರಮಾಣಪತ್ರಗಳನ್ನು ಸಂಪೂರ್ಣವಾಗಿ ಆನ್‌ಲೈನ್‌ ಮೂಲಕವೇ ವಿತರಿಸಲು ಸಿದ್ಧತೆ ನಡೆಸಿದೆ. ಈ ವ್ಯವಸ್ಥೆಯು ಏ. 1ರಿಂದ ಜಾರಿಗೆ ಬರಲಿದೆ.

Vijaya Karnataka 21 Mar 2019, 5:00 am
ಬೆಂಗಳೂರು : ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಕಟ್ಟಡ ನಕ್ಷೆ ಮಂಜೂರಾತಿ ಮತ್ತು ಪ್ರಾರಂಭಿಕ ಪ್ರಮಾಣಪತ್ರಗಳನ್ನು ಸಂಪೂರ್ಣವಾಗಿ ಆನ್‌ಲೈನ್‌ ಮೂಲಕವೇ ವಿತರಿಸಲು ಸಿದ್ಧತೆ ನಡೆಸಿದೆ. ಈ ವ್ಯವಸ್ಥೆಯು ಏ. 1ರಿಂದ ಜಾರಿಗೆ ಬರಲಿದೆ.
Vijaya Karnataka Web building plan cc will available on online
ಆನ್‌ಲೈನ್‌ ಮೂಲಕವೇ ಕಟ್ಟಡ ನಕ್ಷೆ ಮಂಜೂರಾತಿ, ಸಿಸಿ


ಪಾಲಿಕೆಯ ಮಹತ್ವಾಕಾಂಕ್ಷಿ ಯೋಜನೆಯಾದ ಕಟ್ಟಡ ನಕ್ಷೆ ಸ್ವಯಂಚಾಲಿತ ಮಂಜೂರಾತಿ ವ್ಯವಸ್ಥೆಗೆ 2018ರ ಏ. 1ರಂದು ಚಾಲನೆ ನೀಡಲಾಗಿತ್ತು. 2400 ಚ.ಅಡಿ ಮತ್ತು ಅದಕ್ಕಿಂತ ಹೆಚ್ಚಿನ ವಿಸ್ತೀರ್ಣದ ನಿವೇಶನಗಳಿಗೆ ಮಾತ್ರ ಆನ್‌ಲೈನ್‌ ಮುಖೇನ ನಕ್ಷೆ ಮಂಜೂರಾತಿ ನೀಡುವ ಸೇವೆ ಆರಂಭಿಸಲಾಯಿತು. ಆದರೆ, ತಂತ್ರಾಂಶದಲ್ಲಿನ ದೋಷದಿಂದ ಆನ್‌ಲೈನ್‌ ಮೂಲಕ ನಕ್ಷೆ ಮಂಜೂರಾತಿ ಪ್ರಮಾಣಪತ್ರ ನೀಡಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ, ಮ್ಯಾನ್ಯುಯಲ್‌ ಪದ್ಧತಿಯಲ್ಲೇ ಪ್ರಮಾಣಪತ್ರ ಕೊಡಲಾಗುತ್ತಿತ್ತು. ಸದ್ಯ ದೋಷಗಳನ್ನು ಸರಿಪಡಿಸಿದ್ದು, ಮುಂದಿನ ಏ. 1ರಿಂದ ಮ್ಯಾನ್ಯುಯಲ್‌ ಪದ್ಧತಿಗೆ ತಿಲಾಂಜಲಿ ಇಡಲಾಗುತ್ತಿದೆ.

2400 ಚ.ಅಡಿ ಮತ್ತು ಅದಕ್ಕಿಂತ ಮೇಲ್ಪಟ್ಟ ನಿವೇಶನಗಳಿಗಷ್ಟೇ ಸೀಮಿತವಾಗಿದ್ದ ಆನ್‌ಲೈನ್‌ ಸೇವೆಯು, ಏ. 1ರಿಂದ ಎಲ್ಲ ವಿಸ್ತೀರ್ಣದ ನಿವೇಶನಗಳಿಗೆ ಅನ್ವಯಿಸಲಿದೆ. ಇದಲ್ಲದೇ ಈವರೆಗೆ ಮ್ಯಾನ್ಯುಯಲ್‌ ಮೂಲಕ ನೀಡುತ್ತಿದ್ದ ಪ್ರಾರಂಭಿಕ ಪ್ರಮಾಣಪತ್ರವೂ (ಸಿಸಿ) ಆನ್‌ಲೈನ್‌ನಲ್ಲೇ ಸಿಗಲಿದೆ. ಇನ್ನು ಕೆಲವೇ ದಿನಗಳಲ್ಲಿ ಸ್ವಾಧೀನಾನುಭವ ಪ್ರಮಾಣಪತ್ರವೂ (ಒಸಿ) ಆನ್‌ಲೈನ್‌ನಲ್ಲೇ ದೊರಕಲಿದೆ.

ಸಾರ್ವಜನಿಕರು ಕಟ್ಟಡ ನಕ್ಷೆಗೆ ಮತ್ತು ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಸಿಸಿ ಪ್ರಮಾಣಪತ್ರ ಪಡೆಯಲು ಪಾಲಿಕೆಯ ಕಚೇರಿಗಳಿಗೆ ತಿಂಗಳುಗಟ್ಟಲೆ ಅಲೆದಾಡುವುದನ್ನು ತಪ್ಪಿಸಲು ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಆಸ್ತಿ ಮಾಲೀಕರು ಮನೆಯಲ್ಲೇ ಕುಳಿತು ಆನ್‌ಲೈನ್‌ ಮೂಲಕ ಶುಲ್ಕ ಪಾವತಿಸಿ, ಪ್ರಮಾಣಪತ್ರಗಳನ್ನು ಪಡೆಯಬಹುದಾಗಿದೆ. ಇದರಿಂದ ಲಂಚಾವತಾರಕ್ಕೂ ಬ್ರೇಕ್‌ ಬೀಳಲಿದೆ. ಜನರು ಕಟ್ಟಡ ನಕ್ಷೆ, ಸಿಸಿ ಗೆ ಅರ್ಜಿ ಸಲ್ಲಿಸಿ, ಡಿಜಿಟಲ್‌ ಸಹಿಯುಳ್ಳ ಪ್ರಮಾಣಪತ್ರಗಳ ಮುದ್ರಿತ ಪ್ರತಿಯನ್ನು ಪಡೆದುಕೊಳ್ಳಬಹುದಾಗಿದೆ. ಪರವಾನಗಿ, ಮಂಜೂರಾತಿ ಪ್ರಮಾಣಪತ್ರಗಳ ಮೂಲ ಪ್ರತಿ ವಿತರಣೆ, ಮಂಜೂರಾದ ನಕ್ಷೆಗಳನ್ನು ಮ್ಯಾನ್ಯುಯಲ್‌ ಕ್ರಮದಲ್ಲಿ ವಿತರಿಸುವುದನ್ನು ನಿಲ್ಲಿಸಲಾಗುತ್ತಿದೆ.

ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗೆ?

ನೋಂದಾಯಿತ ವಾಸ್ತುಶಿಲ್ಪಿ ಅಥವಾ ಕಟ್ಟಡ ಮಾಲೀಕರು ಪಾಲಿಕೆಯ ವೆಬ್‌ಸೈಟ್‌ಗೆ ಲಾಗಿನ್‌ ಆಗಿ ಅರ್ಜಿ ಮತ್ತು ಅದಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ಅಪ್‌ಲೋಡ್‌ ಮಾಡಬೇಕು. ಪ್ರಾರಂಭಿಕ ಪರಿಶೀಲನಾ ಶುಲ್ಕದ ಮೊತ್ತವನ್ನು ಆನ್‌ಲೈನ್‌ ಮೂಲಕವೇ ಪಾವತಿಸಬೇಕು. ಶುಲ್ಕ ಪಾವತಿ ಬಳಿಕ ಅರ್ಜಿಯ ಸ್ವೀಕೃತಿ ಪ್ರತಿಯನ್ನು ಪಡೆದುಕೊಳ್ಳಬಹುದು. ಅರ್ಜಿಗೆ ಸಂಬಂಧಿಸಿದ ಕಡತ ಸಂಖ್ಯೆ ನೀಡಲಾಗುತ್ತದೆ. ಆನಂತರ ಕಡತದ ಪ್ರಕ್ರಿಯೆ ಕಾರ್ಯ ಪ್ರಾರಂಭವಾಗುತ್ತದೆ.

ಕಟ್ಟಡ ನಕ್ಷೆ, ಸಿಸಿ ಪ್ರಮಾಣಪತ್ರಗಳಿಗೆ ಸಾರ್ವಜನಿಕರು ಅಗತ್ಯ ದಾಖಲೆಗಳೊಂದಿಗೆ ಆನ್‌ಲೈನ್‌ನಲ್ಲಿ ಸಲ್ಲಿಸುವ ಅರ್ಜಿಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಲಿದ್ದಾರೆ. ಆನಂತರ 7 ದಿನಗಳೊಳಗೆ ಸ್ಥಳ ಪರಿಶೀಲಿಸುವ ಕುರಿತು ಅರ್ಜಿದಾರರಿಗೆ ಮಾಹಿತಿ ನೀಡಲಾಗುತ್ತದೆ. ಬಳಿಕ ಅದರ ವಿವರಗಳನ್ನು 48 ಗಂಟೆಯೊಳಗೆ ಅಪ್‌ಲೋಡ್‌ ಮಾಡಲಿದ್ದಾರೆ. ದಾಖಲೆಗಳು ಸಮರ್ಪಕವಾಗಿದ್ದರೆ, ಕಾಲಮಿತಿಯೊಳಗೆ ಮಂಜೂರಾತಿ ನೀಡುತ್ತಾರೆ. ದಾಖಲೆಗಳು ತಪ್ಪಾಗಿದ್ದರೆ ಅಥವಾ ಯಾವುದೇ ಸ್ಪಷ್ಟನೆಗೆ ಇ-ಮೇಲ್‌, ಎಸ್‌ಎಂಎಸ್‌ ಮೂಲಕ ಅರ್ಜಿದಾರರಿಗೆ ಮಾಹಿತಿ ನೀಡಲಾಗುತ್ತದೆ.

30 ದಿನದಲ್ಲಿ ಪ್ರಮಾಣಪತ್ರ ಸಿದ್ಧ

ಅರ್ಜಿಯು ಸಹಾಯಕ ನಿರ್ದೇಶಕ, ಉಪ ನಿರ್ದೇಶಕ, ಜಂಟಿ ನಿರ್ದೇಶಕ, ವಿಶೇಷ ಆಯುಕ್ತರ ಮೂಲಕ ಅಂತಿಮವಾಗಿ ಆಯುಕ್ತರಿಗೆ ತಲುಪುತ್ತದೆ. ಆಯುಕ್ತರು ಅನುಮೋದನೆ ನೀಡಿದ ನಂತರ ಶುಲ್ಕ ಪಾವತಿ ತಿಳಿವಳಿಕೆ ಸಂದೇಶ, ಪರವಾನಗಿ ಪತ್ರ ಮತ್ತು ಮಂಜೂರಾತಿ ನಕ್ಷೆಗಳು ಆನ್‌ಲೈನ್‌ ಮೂಲಕವೇ ಅರ್ಜಿದಾರರ ಇ-ಮೇಲ್‌ಗೆ ರವಾನೆಯಾಗುತ್ತದೆ. ಈ ಪ್ರಕ್ರಿಯೆ 30 ದಿನಗಳಲ್ಲಿ ಪೂರ್ಣಗೊಳ್ಳುತ್ತದೆ. ಪ್ರತಿ ಹಂತದ ಮಾಹಿತಿಯನ್ನು ಅರ್ಜಿದಾರರ ಮೊಬೈಲ್‌ ಸಂಖ್ಯೆ ಎಸ್‌ಎಂಎಸ್‌ ಕಳುಹಿಸಲಾಗುತ್ತದೆ. ಬಿಡಿಎ, ಬಿಎಂಐಸಿಎಪಿಎಯಿಂದ ನಿರ್ಮಾಣವಾಗಿರುವ ಬಡಾವಣೆಗಳಲ್ಲಿನ ನಿವೇಶನಗಳಿಗೆ ನಕ್ಷೆ ಮಂಜೂರಾತಿ ನೀಡುವಾಗ ಪೂರ್ವಭಾವಿಯಾಗಿ ಸ್ಥಳ ಪರಿಶೀಲನೆ ನಡೆಸುವುದಕ್ಕೆ ವಿನಾಯಿತಿ ನೀಡಲಾಗಿದೆ.

''ಸ್ವಯಂಘೋಷಣೆ ಆಧಾರದ ಮೇಲೆ ಕಟ್ಟಡ ನಕ್ಷೆಗೆ ಮಂಜೂರಾತಿ ನೀಡಲು ತೀರ್ಮಾನಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗುತ್ತಿದೆ,'' ಎಂದು ಬಿಬಿಎಂಪಿಯ ನಗರ ಯೋಜನೆ ವಿಭಾಗದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ನಕ್ಷೆಗೆ ಸಲ್ಲಿಸಬೇಕಾದ ದಾಖಲೆಗಳೇನು?

ವಾಸ್ತುಶಾಸ್ತ್ರಜ್ಞರಿಂದ ಪಡೆದ ಕಟ್ಟಡ ನಿರ್ಮಾಣ ನಕ್ಷೆ, ದೃಢೀಕೃತ ಅಂದಾಜು ಪಟ್ಟಿ, ಆಸ್ತಿ ಮಾಲೀಕತ್ವದ ದಾಖಲೆಗಳು, ತಳಪಾಯ ಭದ್ರತೆ ಬಗ್ಗೆ ಪ್ರಮಾಣಪತ್ರ (ಹಳೆಯ ಕಟ್ಟಡಗಳಲ್ಲಿ ಹೆಚ್ಚುವರಿ ಮಹಡಿ ನಿರ್ಮಾಣಕ್ಕೆ) ಸಕ್ಷಮ ಪ್ರಾಧಿಕಾರಗಳಿಂದ ಪಡೆದ ನಿರಾಕ್ಷೇಪಣಾ ಪ್ರಮಾಣಪತ್ರಗಳು, ಖಾತೆ, ತೆರಿಗೆ ಪಾವತಿ ರಸೀದಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ