ಆ್ಯಪ್ನಗರ

ಕೆಲಸ ಮಾಡುತ್ತಿದ್ದ ಕಂಪನಿಗೆ ಮೋಸ: ಇಬ್ಬರ ಸೆರೆ

ಕಂಪನಿಯ ಗ್ರಾಹಕರ ಹಣವನ್ನು ದುರ್ಬಳಕೆ ಮಾಡಿಕೊಂಡು ವಂಚಿಸಿದ ಆರೋಪದ ಮೇಲೆ ಮಹದೇವಪುರ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

Vijaya Karnataka 14 Jan 2019, 5:00 am
ಬೆಂಗಳೂರು: ಕಂಪನಿಯ ಗ್ರಾಹಕರ ಹಣವನ್ನು ದುರ್ಬಳಕೆ ಮಾಡಿಕೊಂಡು ವಂಚಿಸಿದ ಆರೋಪದ ಮೇಲೆ ಮಹದೇವಪುರ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
Vijaya Karnataka Web online fraud1


ಕಲ್ಕೆರೆಯಲ್ಲಿ ನೆಲೆಸಿರುವ ಕಾರ್ತಿಕ್‌ ಶ್ರೀನಿವಾಸನ್‌ (35) ಮತ್ತು ಹೊರಮಾವು ನಿವಾಸಿ ಬಿ.ವಿ.ಪ್ರತಾಪ್‌ (32) ಬಂಧಿತ ಆರೋಪಿಗಳು. ಇವರಿಬ್ಬರೂ 'ಐಯಾನ್‌ ಐಡಿಯಾ' ಕಂಪನಿ ಸಿಬ್ಬಂದಿಯಾಗಿದ್ದು ತಮ್ಮದೇ ಕಂಪನಿಗೆ ವಂಚಿಸಿದ್ದರು.

ತಮಿಳುನಾಡು ಮೂಲದ ಕಾರ್ತಿಕ್‌ ಶ್ರೀನಿವಾಸನ್‌ ಕಂಪನಿಯಲ್ಲಿ ಸೀನಿಯರ್‌ ಮ್ಯಾನೇಜರ್‌ ಆಗಿದ್ದರೆ, ಪ್ರತಾಪ್‌ ಆಪರೇಷನ್‌ ಮ್ಯಾನೇಜರ್‌ ಆಗಿದ್ದ. ಇವರಿಬ್ಬರೂ 'ಕ್ಯಾಪ್‌ಟೀಮ್‌ ಮೆಡ್‌ ಸೊಲ್ಯುಷನ್ಸ್‌' ಹೆಸರಿನಲ್ಲಿ ಹೊಸ ಕಂಪನಿ ತೆರೆದು, ತಾವು ಕೆಲಸ ಮಾಡುವ ಕಂಪನಿಯ ಗ್ರಾಹಕರ ಹಣವನ್ನೇ ತಮ್ಮ ವೈಯಕ್ತಿಕ ಖಾತೆಗಳಿಗೆ ಬಳಸಿಕೊಂಡಿದ್ದರು.

ಐಯಾನ್‌ ಐಡಿಯಾ ಕಂಪನಿಯು ವಿದೇಶಿಯರು ಮತ್ತು ಅನಿವಾಸಿ ಭಾರತೀಯರ ವೈದ್ಯಕೀಯ ಮತ್ತು ವಿಮೆ ಬಿಲ್‌ಗಳ ನಿರ್ವಹಣೆ ಮಾಡುತ್ತಿದೆ. ಈ ಕಂಪನಿಯ ಗ್ರಾಹಕರ ಡಿಜಿಟಲ್‌ ಡೇಟಾ ಸಂಗ್ರಹಿಸಿದ್ದ ಆರೋಪಿಗಳು, ಆ ಮೂಲಕ ತಮ್ಮ ಕಂಪನಿಯ ಕುರಿತು ಪ್ರಚಾರ ಮಾಡಿದ್ದಲ್ಲದೆ ಗ್ರಾಹಕರಿಗೆ ತಮ್ಮ ಕಂಪನಿಯ ಖಾತೆ ನಂಬರ್‌ ನೀಡಿ ಅದಕ್ಕೇ ಹಣ ಕಳುಹಿಸುವಂತೆ ಕೋರಿದ್ದರು. ಐಯಾನ್‌ ಐಡಿಯಾ ಕಂಪನಿಯ ಖಾತೆಯೇ ಬದಲಾಗಿದೆ ಎಂದುಕೊಂಡ ಈ ಕಂಪನಿಯ ಗ್ರಾಹಕರು, ಆರೋಪಿಗಳು ಕೊಟ್ಟಿದ್ದ ಅವರ ಖಾಸಗಿ ಖಾತೆಗೆ ಹಣ ವರ್ಗಾಯಿಸಿದ್ದರು. ಈ ರೀತಿ ಸುಮಾರು 2 ಕೋಟಿ ತರಿಸಿಕೊಂಡು ವಂಚಿಸಿದ್ದರು ಎಂದು ದೂರು ದಾಖಲಾಗಿತ್ತು.

ಪರಿಶೀಲನೆ ವೇಳೆ ಸಿಕ್ಕಿ ಬಿದ್ದರು: ವಿದೇಶದಲ್ಲಿರುವ ಗ್ರಾಹಕರು ತಮ್ಮ ವಿಮಾ ಕಂತುಗಳ ಹಣ ನೀಡದಿರುವ ಬಗ್ಗೆ ಐಯಾನ್‌ ಐಡಿಯಾ ಕಂಪನಿ ಸಿಬ್ಬಂದಿ ಪರಿಶೀಲನೆ ನಡೆಸಿ, ಅಲ್ಲಿನ ಗ್ರಾಹಕರ ಜತೆ ಇ-ಮೇಲ್‌ ಸಂದೇಶ ವಿನಿಮಯ ಮಾಡಿಕೊಂಡಾಗ ಈ ವಂಚನೆ ಬೆಳಕಿಗೆ ಬಂದಿದೆ. ಹಣ ಸಂದಾಯವಾಗಿಲ್ಲ ಎನ್ನುವ ಬಗ್ಗೆ ಆತಂಕಗೊಂಡ ವಿದೇಶಿ ಗ್ರಾಹಕರು ತಾವು ಹಣ ಪಾವತಿಸಿರುವ ದಾಖಲೆಗಳನ್ನು ಐಯಾನ್‌ ಕಂಪನಿಗೆ ರವಾನಿಸಿದ್ದರು. ಇದನ್ನು ಪರಿಶೀಲನೆ ನಡೆಸಿದ ಕಂಪನಿ ಲೆಕ್ಕ ಪರಿಶೋಧಕರಿಗೆ ತಮ್ಮದೇ ಕಂಪನಿಯ ಸಿಬ್ಬಂದಿ ಮಾಡಿರುವ ವಂಚನೆ ಗೊತ್ತಾಗಿ ಮಹದೇವಪುರ ಠಾಣೆಗೆ ದೂರು ನೀಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ