ಆ್ಯಪ್ನಗರ

ಕೆರೆಗಳ ವಸ್ತುಸ್ಥಿತಿ ಅಧ್ಯಯನಕ್ಕೆ ಸಮಿತಿ

ಬೆಂಗಳೂರು ಕೆರೆಗಳನ್ನು ಸರಿಯಾಗಿ ನಿರ್ವಹಿಸಿ ಎಂದು ಪದೇಪದೆ ನಾವು ಆದೇಶಗಳನ್ನು ನೀಡುತ್ತಿದ್ದರೂ ರಾಜ್ಯ ಸರಕಾರ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿರುವ ಬೆಳ್ಳಂದೂರು, ವರ್ತೂರು ಮತ್ತು ಅಗರ ಕೆರೆಗಳಲ್ಲಿ ವಸ್ತುಸ್ಥಿತಿ ಅಧ್ಯಯನ ಮಾಡಲು ಅಧ್ಯಯನ ಸಮಿತಿ ರಚನೆ ಮಾಡಿದೆ.

Vijaya Karnataka 12 Apr 2018, 5:00 am
ಹೊಸದಿಲ್ಲಿ: ಬೆಂಗಳೂರು ಕೆರೆಗಳನ್ನು ಸರಿಯಾಗಿ ನಿರ್ವಹಿಸಿ ಎಂದು ಪದೇಪದೆ ನಾವು ಆದೇಶಗಳನ್ನು ನೀಡುತ್ತಿದ್ದರೂ ರಾಜ್ಯ ಸರಕಾರ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿರುವ ಬೆಳ್ಳಂದೂರು, ವರ್ತೂರು ಮತ್ತು ಅಗರ ಕೆರೆಗಳಲ್ಲಿ ವಸ್ತುಸ್ಥಿತಿ ಅಧ್ಯಯನ ಮಾಡಲು ಅಧ್ಯಯನ ಸಮಿತಿ ರಚನೆ ಮಾಡಿದೆ.
Vijaya Karnataka Web committee for the study of lakes
ಕೆರೆಗಳ ವಸ್ತುಸ್ಥಿತಿ ಅಧ್ಯಯನಕ್ಕೆ ಸಮಿತಿ


ನ್ಯಾಯಮೂರ್ತಿ ಡಾ.ಜವಾದ್‌ ರಹೀಂ ನೇತೃತ್ವದ ಪೀಠ ಈ ಆದೇಶ ನೀಡಿದ್ದು, ಈ ತಿಂಗಳು 14 ಮತ್ತು 15 ರಂದು ಸಮಿತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಮತ್ತು ಮೇ 11ರೊಳಗೆ ವರದಿ ಸಲ್ಲಿಸಬೇಕು ಎಂದು ಸೂಚಿಸಿದೆ.

ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಹೊತ್ತಿಕೊಳ್ಳುವಷ್ಟರ ಮಟ್ಟಿಗೆ ಪರಿಸ್ಥಿತಿ ಹದಗೆಟ್ಟರೂ ರಾಜ್ಯ ಸರಕಾರ ಈ ಬಗ್ಗೆ ಕ್ಯಾರೇ ಅನ್ನುತ್ತಿಲ್ಲ. ಅಗರ ಮತ್ತು ವರ್ತೂರು ಕೆರೆಗಳ ಸಂರಕ್ಷಣೆಯೂ ಬಗ್ಗೆಯೂ ಗಮನ ನೀಡಿಲ್ಲ ಎಂದು ರಾಜ್ಯಸಭೆ ಸದಸ್ಯ ಕುಪೇಂದ್ರ ರೆಡ್ಡಿ ಸಲ್ಲಿಸಿರುವ ಅರ್ಜಿಯ ಮೇಲೆ ಬುಧವಾರ ವಿಚಾರಣೆ ನಡೆಸಿದ ಪೀಠ, ಹಿರಿಯ ವಕೀಲ ರಾಜ್‌ ಪಂಜ್ವಾನಿ, ಭಾರತೀಯ ವಿಜ್ಞಾನ ಸಂಸ್ಥೆಯ ಒಬ್ಬ ಪ್ರಾಧ್ಯಾಪಕ, ಬಿಬಿಎಂಪಿ ಕಮೀಷನರ್‌, ಬಿಡಿಎ ಕಾರ‍್ಯದರ್ಶಿ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ವಿಜ್ಞಾನಿ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ‍್ಯದರ್ಶಿ, ಕೆರೆ ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಕಾರ‍್ಯನಿರ್ವಾಹಕ ಕಾರ‍್ಯದರ್ಶಿ ಹಾಗೂ ರಾಜ್‌ ಪಂಜ್ವಾನಿ ಸೂಚಿಸುವ ಮತ್ತೊಬ್ಬ ಸದಸ್ಯರು ಈ ಸಮಿತಿಯಲ್ಲಿರಬೇಕು ಎಂದು ಆದೇಶಿಸಿತು.

ಈ ಸಮಿತಿಯು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವುದಕ್ಕೆ ತಗಲುವ ವೆಚ್ಚವನ್ನೆಲ್ಲ ಬಿಡಿಎ ಭರಿಸಬೇಕು ಎಂದೂ ಹೇಳಿದ ಪೀಠ, ಅರ್ಜಿದಾರರು ಮತ್ತು ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ಸಹ ಸಮಿತಿ ಸಂಗ್ರಹಿಸಬಹುದು ಎಂದು ಅಭಿಪ್ರಾಯಪಟ್ಟಿತು.

''ಈ ಮೂರೂ ಕೆರೆಗಳ ಬಫರ್‌ ಝೋನ್‌ ಉಲ್ಲಂಘನೆ, ಕಾರ್ಖಾನೆಗಳಿಂದ ತ್ಯಾಜ್ಯಗಳ ವಿಲೇವಾರಿ, ಸ್ಥಳೀಯ ಸಂಸ್ಥೆಗಳಿಂದ ಕಸ ಚೆಲ್ಲುವಿಕೆ ಸೇರಿದಂತೆ ಎಲ್ಲ ಆಯಾಮಗಳ ಬಗ್ಗೆಯೂ ಸಮಿತಿ ಅಧ್ಯಯನ ನಡೆಸಬೇಕು'' ಎಂದು ಡಾ.ಜವಾದ್‌ ರಹೀಂ ಸೂಚಿಸಿದರು.

ಅರ್ಜಿದಾರರ ಪರ ವಾದಿಸಿದ ವಕೀಲ ಪಿ.ರಾಮಪ್ರಸಾದ್‌, ''ಈ ಕೆರೆಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಒಂದು ವರ್ಷದಲ್ಲಿ ನ್ಯಾಯಮಂಡಳಿ ನಾಲ್ಕು ಆದೇಶಗಳನ್ನು ನೀಡಿದೆ. ಆದರೆ, ಒಂದರ ಬಗ್ಗೆಯೂ ಸರಕಾರ ಗಂಭೀರವಾಗಿಲ್ಲ,'' ಎಂದರು.

ಸರಕಾರದ ಪರ ವಕೀಲ ಅಶೋಕ್‌ ದೇವರಾಜ್‌, ''ಕೆರೆಗಳ ಸಂರಕ್ಷಣೆ ಕುರಿತಂತೆ ಸರಕಾರ ಸುಮ್ಮನೆ ಕುಳಿತಿಲ್ಲ. ಈ ಬಗ್ಗೆ ಕ್ರಿಯಾಯೋಜನೆ ರೂಪಿಸಿದ್ದು, ಹಲವು ಕಾಮಗಾರಿಗಳೂ ನಡೆದಿವೆ'' ಎಂದು ಹೇಳಿ ಈ ಕುರಿತ ವರದಿಯೊಂದನ್ನು ನ್ಯಾಯಮಂಡಳಿಗೆ ನೀಡಲು ಮುಂದಾದರು. ಆ ವರದಿಯ ಬಗ್ಗೆಯೂ ತೃಪ್ತವಾಗದ ಪೀಠವು, ''ನೀವು ನೀಡಿರುವ ಉಪಗ್ರಹ ಆಧರಿತ ಫೋಟೊಗಳನ್ನು ನೋಡಿದರೂ ನೀವು ಅಲ್ಲಿ ಏನೂ ಕೆಲಸ ಮಾಡಿಲ್ಲ, ತ್ಯಾಜ್ಯ ಮೊದಲಿಗಿಂತ ಹೆಚ್ಚಾಗಿದೆ ಎಂಬುದು ತಿಳಿಯುತ್ತದೆ'' ಎಂದು ಆಕ್ರೋಶ ವ್ಯಕ್ತಪಡಿಸಿತು.

''ಬೆಳ್ಳಂದೂರು ಕೆರೆಯ ಸುತ್ತ ಸ್ಲಂಗಳ ಸಂಖ್ಯೆ ಹೆಚ್ಚಿಗೆ ಇರುವುದರಿಂದ ಹೆಚ್ಚಿನ ಪ್ರಮಾಣದ ತ್ಯಾಜ್ಯಗಳು ಮತ್ತು ಒಳ ಚರಂಡಿ ನೀರು ಕೆರೆಗೆ ಹರಿದು ಬರುತ್ತಿದೆ''ಎಂದು ಅಶೋಕ್‌ ದೇವರಾಜ್‌ ಹೇಳಿದರು. ಆಗ, ''ಸ್ಯಾಂಕಿ ಕೆರೆ ಮತ್ತು ಹುಲಸೂರು ಕೆರೆಗಳ ಬಳಿಯೂ ಸ್ಲಂಗಳಿವೆ, ಆ ಕೆರೆಗಳೇಕೆ ಅಷ್ಟು ಮಲೀನಗೊಂಡಿಲ್ಲ'' ಎಂದು ಪೀಠ ಪ್ರಶ್ನಿಸಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ