ಆ್ಯಪ್ನಗರ

ಉತ್ತಮ ಆಡಳಿತ ನೀಡುವಲ್ಲಿ ಕಾಂಗ್ರೆಸ್‌ ವಿಫಲ: ಸಚಿವೆ ನಿರ್ಮಲಾ

ರಾಜ್ಯದ ನಾಗರಿಕರ ಆಶಯಕ್ಕೆ ತಕ್ಕಂತೆ ಉತ್ತಮ ಆಡಳಿತ ನೀಡುವಲ್ಲಿ ಕಾಂಗ್ರೆಸ್‌ ಸರಕಾರ ವಿಫಲವಾಗಿದ್ದು, 24/7 ಮಾದರಿಯ ಆಡಳಿತಕ್ಕಾಗಿ ಬಿಜೆಪಿ ಸರಕಾರವನ್ನು ಮರು ಪ್ರತಿಷ್ಠಾಪಿಸಬೇಕಾದ ಅಗತ್ಯವಿದೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಪ್ರತಿಪಾದಿಸಿದರು.

Vijaya Karnataka 30 Apr 2018, 9:32 am
ಬೆಂಗಳೂರು: ರಾಜ್ಯದ ನಾಗರಿಕರ ಆಶಯಕ್ಕೆ ತಕ್ಕಂತೆ ಉತ್ತಮ ಆಡಳಿತ ನೀಡುವಲ್ಲಿ ಕಾಂಗ್ರೆಸ್‌ ಸರಕಾರ ವಿಫಲವಾಗಿದ್ದು, 24/7 ಮಾದರಿಯ ಆಡಳಿತಕ್ಕಾಗಿ ಬಿಜೆಪಿ ಸರಕಾರವನ್ನು ಮರು ಪ್ರತಿಷ್ಠಾಪಿಸಬೇಕಾದ ಅಗತ್ಯವಿದೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಪ್ರತಿಪಾದಿಸಿದರು.
Vijaya Karnataka Web nirmala


ಎಚ್‌ಎಸ್‌ಆರ್‌ ಲೇಔಟ್‌ನ 'ಸಿಟಿಜನ್ಸ್‌ ಕೌನ್ಸಿಲ್‌' ಸಂಘಟನೆ ಭಾನುವಾರ ಆಯೋಜಿಸಿದ್ದ ಸಂವಾದದಲ್ಲಿ ಪಾಲ್ಗೊಂಡ ಅವರು ''ಮತದಾರನಿಂದ ಚುನಾಯಿತವಾದ ಸರಕಾರ ಜನಸ್ನೇಹಿ ಆಡಳಿತ ನೀಡುವತ್ತ ಹೆಚ್ಚಿನ ಕಾಳಜಿ ವಹಿಸಬೇಕು. ಇದನ್ನು ಐದು ವರ್ಷ ಮಾಡದ ಕಾಂಗ್ರೆಸ್‌ ವೈಫಲ್ಯ ಮುಚ್ಚಿಟ್ಟುಕೊಳ್ಳಲು ಸಮಾಜ ಒಡೆಯುವ ಕೆಲಸಕ್ಕೆ ಕೈ ಹಾಕಿತು. ಇದರಿಂದಾಗಿ ಕರ್ನಾಟಕದಲ್ಲಿ ಸರಕಾರಿ ಯಂತ್ರ ಹಾಗೂ ಕಾನೂನು ಸುವ್ಯವಸ್ಥೆ ಹಳಿ ತಪ್ಪಿತು,'' ಎಂದು ವಿಶ್ಲೇಷಿಸಿದರು.

''ಸರಕಾರ ನಡೆಸುವವರು ತಮ್ಮ ಇಚ್ಛೆಗೆ ಅನುಸಾರ ಕಾರ್ಯ ನಿರ್ವಹಿಸದೆ ಜನರ ಸಲಹೆಗಳನ್ನು ಪರಿಗಣಿಸಬೇಕು. ಒಳ್ಳೆಯ ಸಲಹೆಗಳಿದ್ದಲ್ಲಿ ಅವುಗಳನ್ನು ಮಾನ್ಯ ಮಾಡಬೇಕು. ಜನ ಕೂಡ ರಾಜ್ಯದ ಅಭಿವೃದ್ಧಿ ವಿಚಾರವಾಗಿ ಸರಕಾರವನ್ನು ಎಚ್ಚರಿಸುತ್ತಿರಬೇಕು. ಇಲ್ಲದಿದ್ದಲ್ಲಿ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನದನಿ ಕ್ರಮೇಣ ಕ್ಷೀಣಿಸಲಾರಂಭಿಸುತ್ತದೆ,'' ಎಂದರು.

ಸೇನಾ ಸಾಮಗ್ರಿ ಖರೀದಿಗಿಲ್ಲ ಅಡ್ಡಿ: ''ಸೇನೆಯಲ್ಲಿ ಯುದ್ಧದ ಉಪಕರಣ ಹಾಗೂ ಇತರೆ ಸಾಮಗ್ರಿ ಖರೀದಿ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿರುತ್ತದೆ. ಪಂಚ ವಾರ್ಷಿಕ ಯೋಜನೆ ರೀತಿ ಆಯಾ ಕಾಲಕ್ಕೆ ಬೇಕಿರುವ ಸಾಮಗ್ರಿಗಳನ್ನು ಖರೀದಿಸಿ ಸೇನಾ ಕೋಠಿಯಲ್ಲಿ ಇರಿಸಲಾಗುತ್ತದೆ. ಹೀಗಾಗಿ, ಚೀನಾ ಗಡಿಯಲ್ಲಿ ಭಾರತೀಯ ಸೈನಿಕರು ಉಪಕರಣಗಳ ಕೊರತೆ ಎದುರಿಸುತ್ತಿರುವುದು ಶುದ್ಧ ಸುಳ್ಳು,'' ಎಂದು ಸಚಿವರು ಪ್ರತಿಕ್ರಿಯಿಸಿದರು.

ಇದೇ ವೇಳೆ ಸಚಿವೆ ಸಭಿಕರ ಕೆಲ ಪ್ರಶ್ನೆಗಳಿಗೆ ಉತ್ತರಿಸಿದರು. ಎಚ್‌ಎಸ್‌ಆರ್‌ ಲೇಔಟ್‌ ವ್ಯಾಪ್ತಿಯಲ್ಲಿ ಜನಸೇವೆಯಲ್ಲಿ ನಿರತವಾಗಿರುವ ಸಾಧಕರನ್ನು ಸಚಿವರು ಗೌರವಿಸಿದರು. ಶಾಸಕ ಸತೀಶ್‌ರೆಡ್ಡಿ ಹಾಜರಿದ್ದರು.

ರಾಫೆಲ್‌ ರಾದ್ಧಾಂತ ಕುತೂಹಲವಷ್ಟೇ !

''ವಾಯುಪಡೆಗೆ ಬೇಕಿರುವ ರಾಫೆಲ್‌ ಯುದ್ಧ ವಿಮಾನ ಖರೀದಿಯಲ್ಲಿ ಯಾವುದೇ ಲೋಪ ಆಗಿಲ್ಲ. ಎಲ್ಲವೂ ನಿಯಮದಂತೆಯೇ ನಡೆದಿದೆ. ಕೆಲವರಿಗೆ ಯುದ್ಧ ವಿಮಾನಕ್ಕೆ ಖರ್ಚು ಮಾಡಿದ ಹಣ ಎಷ್ಟೆಂಬ ಕುತೂಹಲ ಇರುವುದರಿಂದ ಡೀಲ್‌ ನಡೆದಿದೆ ಎಂಬ ಆರೋಪ ಹೊರಿಸುತ್ತಿದ್ದಾರೆ'' ಎಂದು ಸಭಿಕರ ಪ್ರಶ್ನೆಯೊಂದಕ್ಕೆ ಸಚಿವರು ಸಮಜಾಯಿಷಿ ನೀಡಿದರು.

ಯುದ್ಧ ವಿಮಾನಗಳಲ್ಲಿ ಮಹಿಳಾ ಪೈಲಟ್‌ಗಳ ನಿಯೋಜನೆ ಪ್ರಕ್ರಿಯೆ ನಡೆದಿದೆ. ನವೋದ್ಯಮಿಗಳು ಕೂಡ ಸೇನೆಗೆ ಬೇಕಿರುವ ಉಪಕರಣ ಪೂರೈಕೆಗೆ ಪ್ರಸ್ತಾವನೆ ಸಲ್ಲಿಸಬಹುದು. ಸೈನಿಕರ ಪಿಂಚಣಿ ವಿಚಾರದಲ್ಲಿ ಸರಕಾರ ಸ್ಪಷ್ಟ ತೀರ್ಮಾನ ಕೈಗೊಳ್ಳಲಿದೆ. ಪಾಕ್‌ಗೆ ತಕ್ಕ ಪಾಠ ಕಲಿಸುವ ವಿಚಾರದಲ್ಲಿ ರಾಜಿ ಇಲ್ಲ.
- ನಿರ್ಮಲಾ ಸೀತಾರಾಮನ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ