ಆ್ಯಪ್ನಗರ

ಮಗುವಿನ ಶವವನ್ನು ತೋಳಿನಲ್ಲಿ ಹೊತ್ತೊಯ್ದ ಸ್ವಯಂಸೇವಕನ ವಿಡಿಯೋ ವೈರಲ್: ಕಣ್ಣೀರಿಟ್ಟ ನೆಟ್ಟಿಗರು

ಕೊರೊನಾ ಮಹಾಮಾರಿ ಉಂಟು ಮಾಡಿದ ಭೀಕರ ಪರಿಣಾಮ ಅಷ್ಟಿಷ್ಟಲ್ಲ.. ಎಲ್ಲೆಲ್ಲೂ ನೋಡಿದರೂ, ಕೇಳಿದರೂ ನೋವಿನ ಕಥೆಗಳೇ... ಇದೀಗ ಬೆಂಗಳೂರಿನಲ್ಲಿ ಒಂದು ಹೃದಯ ವಿದ್ರಾವಕ ಘಟನೆಯ ವಿಡಿಯೋ ವೈರಲ್ ಆಗಿದ್ದು, ಸ್ವಯಂಸೇವಕರೊಬ್ಬರು ಮಗುವಿನ ಮೃತದೇಹವನ್ನು ತೋಳಿನಲ್ಲಿ ಹಿಡಿದು ಎತ್ತಿಕೊಂಡು ಹೋಗುವಂತಹ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ದೃಶ್ಯವನ್ನು ನೋಡಿದವರ ಕಣ್ಣಲ್ಲೂ ನೀರು ಜಿನುಗುತ್ತಿದ್ದು, ನೆಟ್ಟಿಗರು ಕೂಡಾ ಅಕ್ಷರಶಃ ಕಣ್ಣೀರಿಟ್ಟಿದ್ದಾರೆ.

Vijaya Karnataka Web 20 Aug 2020, 1:18 pm
ಬೆಂಗಳೂರು: ಚಹಾ ಅಂಗಡಿ ಮಾಲೀಕರೊಬ್ಬರು ಈ ಕೊರೊನಾ ಮಹಾಮಾರಿಯ ಸಂಕಷ್ಟದ ಸಮಯದಲ್ಲಿ ಸ್ವಯಂಸೇವಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೋವಿಡ್ ನಿಂದ ಬಲಿಯಾದ ಕುಟುಂಬಗಳಿಗೆ ಕೊನೆಯ ಅಂತ್ಯ ಸಂಸ್ಕಾರವನ್ನು ನಡೆಸಲು ಸಹಾಯ ಮಾಡುತ್ತಿದ್ದಾರೆ. ಮಂಗಳವಾರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ವಿಡಿಯೋ ಮೂಲಕ ಓರ್ವ ವ್ಯಕ್ತಿ ಎಲ್ಲರ ಗಮನ ಸೆಳೆದಿದ್ದು, ಎಲ್ಲರ ಕಣ್ಣಲ್ಲೂ ನೀರು ಜಿನುಗುವಂತೆ ಮಾಡಿದ್ದಾರೆ.
Vijaya Karnataka Web ಸಾಂದರ್ಭಿಕ ಚಿತ್ರ


ಅಬ್ದುಲ್ ರಜಾಕ್ (40) ಅವರು ಶಿಶುವಿನ ಮೃತ ದೇಹವನ್ನು ಸೇಂಟ್ ಜಾನ್ ಆಸ್ಪತ್ರೆಯಿಂದ ಶವಾಗಾರಕ್ಕೆ ಕೊಂಡೊಯ್ಯುತ್ತಿದ್ದ ದೃಶ್ಯ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ದೃಶ್ಯವನ್ನು ಕಂಡ ನೆಟ್ಟಿಗರು ಪುಲ್ ಶಾಕ್ ಆಗಿದ್ದು, ಕಣ್ಣೀರಿನೊಂದಿಗೆ ರಜಾಕ್ ಅವರ ಈ ಕಾರ್ಯವನ್ನು ಶ್ಲಾಘನೆ ಮಾಡಿದ್ದಾರೆ.

ರಜಾಕ್ ಈ ಘಟನೆಯ ಕುರಿತಾಗಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಕೊರೊನಾ ಸಂಕಷ್ಟದ ಸಮಯದಲ್ಲಿ ನಾನು ಜನರಿಗೆ ಸಹಾಯ ಮಾಡಲು ಇಚ್ಚಿಸುತ್ತೇನೆ ಎಂಬುದಾಗಿ ತಿಳಿಸಿದ್ದಾರೆ. "ಪಶ್ಚಿಮ ಬಂಗಾಳದ ಪುಟ್ಟ ಹುಡುಗಿಗೆ ಮೂತ್ರಪಿಂಡದ ಮೊದಲಾದ ತೊಂದರೆಗಳಿದ್ದವು. ಆದ್ದರಿಂದ ಆಕೆಯನ್ನು ಸೇಂಟ್ ಜಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಆಕೆಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದು, ಸ್ವಲ್ಪ ಸಮಯದವರೆಗೆ ಆಕೆ ಆಸ್ಪತ್ರೆಯಲ್ಲಿದ್ದಳು. ಚಿಕಿತ್ಸೆ ಫಲಕಾರಿಯಾಗದೇ ಕಂದಮ್ಮ ಸಾವನ್ನಪ್ಪಿದ್ದಾಳೆ ಎಂದರು.

ಸ್ವಯಂಸೇವಕ ಗುಂಪಿನಿಂದ ನಮಗೆ ಕರೆ ಬಂದಾಗ, ನಾನು ಕೋವಿಡ್ ನಿಂದ ಕೊನೆಯುಸಿರೆಳೆದ ಮುದ್ದು ಕಂದಮ್ಮನ ಅಂತಿಮ ಸಂಸ್ಕಾರದ ಕೊನೆಯ ವಿಧಿಗಳನ್ನು ಪೂರ್ಣಗೊಳಿಸುತ್ತಿದ್ದೆವು. ಆ ಸಮಯದಲ್ಲಿ ಆಕೆಯ ಪೋಷಕರು ಸಹ ನನ್ನೊಂದಿಗೆ ಇದ್ದರು ಮತ್ತು ಅವರು ಆಘಾತಕ್ಕೊಳಗಾಗಿದ್ದರು. ನಾನು ಮಗುವಿನ ಮೃತದೇಹವನ್ನು ಎತ್ತಿಕೊಂಡು, ಆಂಬ್ಯುಲೆನ್ಸ್‌ನಲ್ಲಿ ಚಿತಾಗಾರದತ್ತ ಗಾಡಿಯನ್ನು ಓಡಿಸಿದೆ ಎಂದು ಅವರು ಕಂಬನಿ ಮಿಡಿಯುತ್ತ ಹೇಳಿದರು.

“ನಾನು ಕಣ್ಣೂರಿನವನು ಮತ್ತು ಫ್ರೇಜರ್ ಟೌನ್‌ನಲ್ಲಿ ಚಹಾ ಅಂಗಡಿಯನ್ನು ಹೊಂದಿದ್ದೇನೆ. ನಾನು ಬಹಳ ಸಮಯದಿಂದ ಇಲ್ಲಿಯೇ ಇದ್ದೇನೆ ಮತ್ತು ಕಳೆದ ಕೆಲವು ತಿಂಗಳುಗಳಿಂದ ಕೊರೊನಾದಿಂದಾಗಿ ಜನರು ತಮ್ಮ ಜೀವನಕ್ಕಾಗಿ ಹೇಗೆ ಹೆಣಗಾಡುತ್ತಿದ್ದಾರೆ ಎಂಬುದನ್ನು ನಾನು ಗಮನಿಸಿದ್ದೇನೆ. ನನಗೆ ಕರೆ ಬಂದರೆ, ನಾನು ಅಂಗಡಿಯನ್ನು ಬಿಟ್ಟು, ಕೋವಿಡ್ ನಿಂದ ಮೃತಪಟ್ಟವರ ಕೊನೆಯ ವಿಧಿಗಳನ್ನು ಮುಗಿಸಿ, ಸ್ನಾನ ಮಾಡಿ ನಂತರ ನನ್ನ ಕೆಲಸಕ್ಕೆ ಮರಳುತ್ತೇನೆ, ”ಎಂದು ನೋವಿನಿಂದಲೇ ಮಾತನಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ