ಆ್ಯಪ್ನಗರ

ಸಿಂಗಾಪುರದಿಂದ ತಂದಿದ್ದ 15 ಲ್ಯಾಪ್‌ಟಾಪ್‌ಗೆ ಕಸ್ಟಮ್ಸ್‌ ವಿಧಿಸದೆ ಲಂಚ ಕೇಳಿದ ಅಧಿಕಾರಿಗಳಿಗೆ 4 ವರ್ಷ ಜೈಲು

ಟ್ರ್ಯಾಪ್‌ ಕಾರ್ಯಾಚರಣೆ ನಡೆಸಿದ ಸಿಬಿಐ ಅಧಿಕಾರಿಗಳು, 2015ರ ಅಕ್ಟೋಬರ್‌ ತಿಂಗಳಲ್ಲಿ ಇಬ್ಬರನ್ನು ಬಂಧಿಸಿ, ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ಪೂರ್ಣಗೊಂಡು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶ್ರೀನಿವಾಸ ಪ್ರಸಾದ್‌ಗೆ 4 ವರ್ಷ ಜೈಲು ಮತ್ತು 30 ಸಾವಿರ ರೂ. ದಂಡ ಹಾಗೂ ಎ. ಲೂಧಿದ್‌ರ್ ಪ್ರಭುಗೆ 4 ವರ್ಷ ಜೈಲು ಮತ್ತು 15 ಸಾವಿರ ರೂ. ದಂಡ ವಿಧಿಸಲಾಗಿದೆ.

Vijaya Karnataka Web 10 Dec 2020, 7:25 am
ಬೆಂಗಳೂರು: ಸಿಂಗಾಪುರದಿಂದ ತರಲಾಗಿದ್ದ 15 ಲ್ಯಾಪ್‌ಟಾಪ್‌ಗಳನ್ನು ಕಸ್ಟಮ್ಸ್‌ ಡ್ಯೂಟಿ ವಿಧಿಸದೆ ಬಿಡುಗಡೆ ಮಾಡಲು 45 ಸಾವಿರ ರೂ. ಲಂಚ ಪಡೆದಿದ್ದ ಕಸ್ಟಮ್ಸ್‌ ಅಧೀಕ್ಷಕ ಸೇರಿ ಇಬ್ಬರಿಗೆ 4 ವರ್ಷ ಜೈಲು ಶಿಕ್ಷೆ ವಿಧಿಸಿ ಸಿಬಿಐ ಪ್ರಕರಣಗಳ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
Vijaya Karnataka Web cbi
Central Bureau of Investigation


ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಧಾನ ಕಸ್ಟಮ್ಸ್‌ ಕಮಿಷನರ್‌ ಕಚೇರಿಯಲ್ಲಿ ಕಸ್ಟಮ್ಸ್‌ ಅಧೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಕೆ.ವಿ. ಶ್ರೀನಿವಾಸ ಪ್ರಸಾದ್‌ ಮತ್ತು ಅದೇ ಕಚೇರಿಯಲ್ಲಿ ಮುಖ್ಯ ಹವಾಲ್ದಾರ್‌ ಆಗಿ ಕೆಲಸ ಮಾಡುತ್ತಿದ್ದ ಎ. ಲೂಧಿದ್‌ರ್‌ಪ್ರಭು ಶಿಕ್ಷೆಗೊಳಗಾದವರು. ಟಿ. ಶ್ರೀಕುಮಾರ್‌ ಎಂಬವರು ಸಿಂಗಾಪುರದಿಂದ 15 ಲ್ಯಾಪ್‌ಟಾಪ್‌ಗಳನ್ನು ತಂದಿದ್ದರು.

ಈ ಬಾರಿ ಹೊಸ ವರ್ಷ ಸಂಭ್ರಮಾಚರಣೆಗೆ ನಂದಿಬೆಟ್ಟಕ್ಕಿಲ್ಲ ಎಂಟ್ರಿ‌..!

ಕಸ್ಟಮ್ಸ್‌ ಅಧಿಕಾರಿಯಾಗಿದ್ದ ಶ್ರೀನಿವಾಸ ಪ್ರಸಾದ್‌, ಲಗೇಜ್‌ ತಪಾಸಣೆ ನಡೆಸಿ, ನಿಲ್ದಾಣದ ಆವರಣದಿಂದ ಲ್ಯಾಪ್‌ಟಾಪ್‌ ತೆಗೆದುಕೊಂಡು ಹೊರ ಹೋಗಬೇಕೆಂದರೆ 1.62 ಲಕ್ಷ ರೂ. ಕಸ್ಟಮ್ಸ್‌ ಡ್ಯೂಟಿ ಕಟ್ಟಬೇಕಾಗುತ್ತದೆ. ಇಲ್ಲದಿದ್ದರೆ 1 ಲಕ್ಷ ರೂ. ಲಂಚ ಹಾಗೂ 2 ಲ್ಯಾಪ್‌ಟಾಪ್‌ಗಳನ್ನು ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಮಾತುಕತೆ ಬಳಿಕ 45 ಸಾವಿರ ರೂ.ಗೆ ಒಪ್ಪಿದ್ದರು. ಆದರೆ, ಲಂಚ ನೀಡಲು ಇಚ್ಛಿಸದ ಶ್ರೀಕುಮಾರ್‌, ಸಿಬಿಐಗೆ ದೂರು ನೀಡಿದ್ದರು.

ಕೊರೊನಾ ನೆಪದಲ್ಲಿ ಪತಿಯನ್ನೇ ಅಪಹರಿಸಿ 40 ಲಕ್ಷಕ್ಕೆ ಬೇಡಿಕೆಯಿಟ್ಟು ತಗ್ಲಾಕ್ಕೊಂಡ ಪತ್ನಿ..!

ಟ್ರ್ಯಾಪ್‌ ಕಾರ್ಯಾಚರಣೆ ನಡೆಸಿದ ಸಿಬಿಐ ಅಧಿಕಾರಿಗಳು, 2015ರ ಅಕ್ಟೋಬರ್‌ ತಿಂಗಳಲ್ಲಿ ಇಬ್ಬರನ್ನು ಬಂಧಿಸಿ, ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ಪೂರ್ಣಗೊಂಡು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶ್ರೀನಿವಾಸ ಪ್ರಸಾದ್‌ಗೆ 4 ವರ್ಷ ಜೈಲು ಮತ್ತು 30 ಸಾವಿರ ರೂ. ದಂಡ ಹಾಗೂ ಎ. ಲೂಧಿದ್‌ರ್ ಪ್ರಭುಗೆ 4 ವರ್ಷ ಜೈಲು ಮತ್ತು 15 ಸಾವಿರ ರೂ. ದಂಡ ವಿಧಿಸಿ ನ್ಯಾಯಾಧೀಶರಾದ ಕೆ. ಶಿವರಾಮ್‌ ಆದೇಶ ಹೊರಡಿಸಿದ್ದಾರೆ. ಸರಕಾರಿ ಅಭಿಯೋಜಕರಾಗಿ ಕೆ.ಎಸ್‌. ಹೇಮಾ ವಾದ ಮಂಡಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ