ಆ್ಯಪ್ನಗರ

ಮಾಧ್ಯಮಗಳಲ್ಲಿ ವೈಜ್ಞಾನಿಕ ಬರಹಗಳ ಸುಲಭಗ್ರಾಹ್ಯತೆಗೆ ಒತ್ತು

ಮಾಧ್ಯಮ ಕ್ಷೇತ್ರದಲ್ಲಿಯೂ ವಿಜ್ಞಾನದ ಕುರಿತು ಆಸಕ್ತಿ ಬೆಳೆಸಿಕೊಂಡು, ವಿಜ್ಞಾನದ ಸುದ್ದಿಗಳಿಗೆ ಮೌಲ್ಯ ವರ್ಧಿಸುವ ಮೂಲಕ ಜನಸಾಮಾನ್ಯರಿಗೆ ವಿಜ್ಞಾನವನ್ನು ಸರಳವಾಗಿ ತಲುಪಿಸುವ ಕಾರ್ಯ ಆಗಬೇಕಿದೆ.

Vijaya Karnataka Web 12 Nov 2018, 3:56 pm
ಬೆಂಗಳೂರು: ಜನ ಸಾಮಾನ್ಯರನ್ನು ತಲುಪುವ ಮಾಧ್ಯಮವಾಗಿರುವ ಪತ್ರಿಕೆ ಹಾಗೂ ವಾಹಿನಿಗಳು ಸುಲಭಗ್ರಾಹ್ಯವಾಗುವಂತೆ ವಿಜ್ಞಾನದ ಲೇಖನಗಳು, ವೈಜ್ಞಾನಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಿದರೆ ಜನರಲ್ಲೂ ವಿಜ್ಞಾನದ ಬಗ್ಗೆ ಆಸಕ್ತಿ ಹೆಚ್ಚಿ, ವೈಜ್ಞಾನಿಕ ಮನೋಭಾವ ಬೆಳೆಯಲು ಕಾರಣವಾಗಬಹುದು ಎಂದು ಸುವರ್ಣ ನ್ಯೂಸ್ ಇಂಟರ್ನೆಟ್ ವಿಭಾಗದ ಮುಖ್ಯಸ್ಥ ಎಸ್.ಕೆ.ಶಾಮಸುಂದರ್ ಹೇಳಿದರು.
Vijaya Karnataka Web Vijana


ಕನ್ನಡದ ಮೊದಲ ವಿಜ್ಞಾನ ಪತ್ರಿಕೆ 'ವಿಜ್ಞಾನ' ಪ್ರಕಟವಾಗಿ ನೂರು ವರ್ಷದ ನೆನಪಿಗಾಗಿ ಜಯನಗರದ ನ್ಯಾಶನಲ್ ಕಾಲೇಜಿನ ಬಿ.ವಿ. ಜಗದೀಶ್ ವಿಜ್ಞಾನ ಕೇಂದ್ರವು ಇ-ಜ್ಞಾನ ಟ್ರಸ್ಟ್ ಹಾಗೂ ಉದಯಭಾನು ಕಲಾಸಂಘದ ಸಹಯೋಗದೊಡನೆ ಭಾನುವಾರ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಮಾಧ್ಯಮ ಕ್ಷೇತ್ರದಲ್ಲಿಯೂ ವಿಜ್ಞಾನದ ಕುರಿತು ಆಸಕ್ತಿ ಬೆಳೆಸಿಕೊಂಡು, ವಿಜ್ಞಾನದ ಸುದ್ದಿಗಳಿಗೆ ಮೌಲ್ಯ ವರ್ಧಿಸುವ ಮೂಲಕ ಜನಸಾಮಾನ್ಯರಿಗೆ ವಿಜ್ಞಾನವನ್ನು ಸರಳವಾಗಿ ತಲುಪಿಸುವ ಕಾರ್ಯ ಆಗಬೇಕಿದೆ ಎಂದು ಕನ್ನಡಪ್ರಭ ಸಹಾಯಕ ಸಂಪಾದಕ ರವಿಶಂಕರ್ ಭಟ್ ಅಭಿಪ್ರಾಯಪಟ್ಟರು.

ಸಮಯ ಟಿವಿ ಪ್ರಧಾನ ಸಂಪಾದಕ ಟಿ.ಆರ್.ಶಿವಪ್ರಸಾದ್ ಮಾತನಾಡಿ, ಮಾಧ್ಯಮ ರಂಗದಲ್ಲಿ ವಿಜ್ಞಾನದ ಜ್ಞಾನ ಇರುವವರ ಕೊರತೆಯಿದ್ದು, ವಿಜ್ಞಾನದ ಹಿನ್ನೆಲೆಯಿಂದ ಬಂದವರಿದ್ದರೆ ಉತ್ತಮವಾದ ಕಾರ್ಯಕ್ರಮವನ್ನು ಜನರಿಗೆ ನಿಖರವಾಗಿ ತಲುಪಿಸುವುದು ಸಾಧ್ಯ ಎಂದು ಹೇಳಿದರು.

ದಿವಂಗತ ಬೆಳ್ಳಾವೆ ವೆಂಕಟನಾರಣಪ್ಪ ಹಾಗೂ ನಂಗಪುರಂ ವೆಂಕಟೇಶ ಅಯ್ಯಂಗಾರರು 1918ರಲ್ಲಿ ಪ್ರಾರಂಭಿಸಿದ್ದ 'ವಿಜ್ಞಾನ' ಪತ್ರಿಕೆಯು ಸಾಗಿ ಬಂದ ದಾರಿಯ ಕುರಿತು ಪ್ರೊ. ಎಚ್. ಆರ್. ರಾಮಕೃಷ್ಣರಾವ್ ಉಪನ್ಯಾಸ ನೀಡಿದರು.

ನೂರು ವರ್ಷಗಳ ಹಿಂದೆಯೇ ಜನಸಾಮಾನ್ಯರಿಗೂ ಗ್ರಾಹ್ಯವಾಗುವಂತೆ ಸುಲಭ ಶೈಲಿಯಲ್ಲಿ ವೈಜ್ಞಾನಿಕ ಬರಹಗಳನ್ನು ಪ್ರಕಟಿಸಿದ್ದ 'ವಿಜ್ಞಾನ' ಪತ್ರಿಕೆಯ ಕುರಿತು ವಿಜ್ಞಾನ ಲೇಖಕ, ಇ-ಜ್ಞಾನ ಟ್ರಸ್ಟ್‌ನ ಟಿ.ಜಿ.ಶ್ರೀನಿಧಿ ಮಾಹಿತಿ ನೀಡಿದರು.

ನ್ಯಾಷನಲ್ ಕಾಲೇಜು ಅಧ್ಯಕ್ಷ ಎ.ಎಚ್.ರಾಮರಾವ್, ಆಕಾಶವಾಣಿ ಬೆಂಗಳೂರು ಪ್ರಾದೇಶಿಕ ವಿಭಾಗದ ನಿರ್ದೇಶಕ ಜಿ.ಕೆ.ರವೀಂದ್ರ ಕುಮಾರ್ ಹಾಗೂ ವಿಜ್ಞಾನ ಬರಹಗಾರರು ಈ ಸಂವಾದದಲ್ಲಿ ಅಭಿಪ್ರಾಯ ಮಂಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ