ಆ್ಯಪ್ನಗರ

ಬಿಡಿಎ ಕಚೇರಿ ಎದುರು ರೈತರಿಂದ ಅಹೋರಾತ್ರಿ ಧರಣಿ

ಬೆಂಗಳೂರು ಹೊರವಲಯದ ಪೆರಿಫೆರಲ್‌ ರಿಂಗ್‌ ರಸ್ತೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡಬೇಕು ಹಾಗೂ ಡಾ.ಶಿವರಾಮ ಕಾರಂತ ಬಡಾವಣೆ ಯೋಜನೆ ಕೈಬಿಡಬೇಕು ಎಂದು ಒತ್ತಾಯಿಸಿ ನೂರಾರು ರೈತರು ಮಂಗಳವಾರ ಬಿಡಿಎ ಕೇಂದ್ರ ಕಚೇರಿ ಎದುರು ಅಹೋರಾತ್ರಿ ಮುಷ್ಕರ ಆರಂಭಿಸಿದ್ದಾರೆ.

Vijaya Karnataka 13 Mar 2019, 5:00 am
ಬೆಂಗಳೂರು: ಬೆಂಗಳೂರು ಹೊರವಲಯದ ಪೆರಿಫೆರಲ್‌ ರಿಂಗ್‌ ರಸ್ತೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡಬೇಕು ಹಾಗೂ ಡಾ.ಶಿವರಾಮ ಕಾರಂತ ಬಡಾವಣೆ ಯೋಜನೆ ಕೈಬಿಡಬೇಕು ಎಂದು ಒತ್ತಾಯಿಸಿ ನೂರಾರು ರೈತರು ಮಂಗಳವಾರ ಬಿಡಿಎ ಕೇಂದ್ರ ಕಚೇರಿ ಎದುರು ಅಹೋರಾತ್ರಿ ಮುಷ್ಕರ ಆರಂಭಿಸಿದ್ದಾರೆ.
Vijaya Karnataka Web 1203-2-2-01 (023)


ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಅವರ ನೇತೃತ್ವದಲ್ಲಿ ಮಂಗಳವಾರ ಮುಷ್ಕರವನ್ನು ಆರಂಭಿಸಲಾಯಿತು. ಬಿಡಿಎ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ರೈತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಸರಕಾರ ತಮಗೆ ನ್ಯಾಯೋಚಿತ ಪರಿಹಾರದ ಭರವಸೆ ನೀಡುವವರೆಗೂ ಮುಷ್ಕರ ಕೈಬಿಡುವುದಿಲ್ಲ. ಇದರಿಂದಾಗುವ ಅನಾಹುತಕ್ಕೆ ಸರಕಾರವೇ ಹೊಣೆ ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ಕೋಡಿಹಳ್ಳಿ ಚಂದ್ರಶೇಖರ್‌ ಮಾತನಾಡಿ, ''ಬೆಂಗಳೂರು ಹೊರವಲಯದ ರಿಂಗ್‌ ರಸ್ತೆ ಯೋಜನೆಯು ಕಳೆದ 15 ವರ್ಷಗಳಿಂದ ಬರೀ ಕಾಗದದಲ್ಲಿಯೇ ಇದೆ. 2005ರಲ್ಲಿ ಪ್ರಾಥಮಿಕ ನೋಟೀಸ್‌ ನೀಡಿ ಇದುವರೆಗೂ ರೈತರಿಗೆ ಪರಿಹಾರ ಕೊಟ್ಟಿಲ್ಲ. ನಿಮ್ಮ ಕೈಯಲ್ಲಿ ಅಭಿವೃದ್ಧಿ ಸಾಧ್ಯವಿಲ್ಲ ಎನ್ನುವುದಾದರೆ ನಮಗೆ ಎನ್‌ಒಸಿ ಕೊಡಿ,'' ಎಂದು ಆಗ್ರಹಿಸಿದರು.

''ಸರಕಾರ ರಸ್ತೆ ಯೋಜನೆಯ ಒಳಭಾಗದಲ್ಲಿ 5 ಬಡಾವಣೆಗಳನ್ನು ನಿರ್ಮಿಸಲು ಯೋಜನೆ ರೂಪಿಸಿದ್ದು, ಅದರಲ್ಲಿ ಶಿವರಾಮ ಕಾರಂತ ಬಡಾವಣೆಯೂ ಒಂದು. ಬಿಡಿಎ ರೈತರ ಜಮೀನನ್ನು ಕಿತ್ತುಕೊಂಡು 'ನೋ ಲಾಸ್‌ ನೋ ಪ್ರಾಫಿಟ್‌' ಲೆಕ್ಕದಲ್ಲಿ ಸೈಟ್‌ ಮಾಡಿ ಹಣವಂತರಿಗೆ ಮಾತ್ರ ಮಾರುವ ಯೋಜನೆ ಇದಾಗಿದೆ. ಈಗಾಗಲೇ ಇಲ್ಲಿ 25-30 ಸಾವಿರ ಮಂದಿ ಮನೆ ಕಟ್ಟಿಕೊಂಡು ವಾಸವಿದ್ದಾರೆ. 50 ಅಪಾರ್ಟ್‌ಮೆಂಟ್‌ಗಳಿವೆ. ಇದೀಗ ಅವರಿಂದ ಕಿತ್ತುಕೊಂಡು ಬೇರೆಯವರಿಗೆ ಕೊಡುವುದು ಯಾವ ಮಹತ್ಕಾರ್ಯವೂ ಅಲ್ಲ. ಆದ್ದರಿಂದ ಈ ಯೋಜನೆಯನ್ನು ಕೈಬಿಡಬೇಕು,''ಎಂದು ಕೋಡಿಹಳ್ಳಿ ಚಂದ್ರಶೇಖರ್‌ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಚಿಕ್ಕಬಳ್ಳಾಪುರ, ದೇವನಹಳ್ಳಿ, ಯಲಹಂಕ ಮತ್ತಿತರ ಭಾಗಗಳಲ್ಲಿ ರೈತರು ಪಾಲ್ಗೊಂಡಿದ್ದರು. ಈ ಮಧ್ಯೆ ಬಿಡಿಎ ಅಧ್ಯಕ್ಷ ಎಸ್‌.ಟಿ. ಸೋಮಶೇಖರ್‌ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದರಾದರೂ ಯಾವುದೇ ನಿರ್ಧಾರ ಕೈಗೊಳ್ಳಲಿಲ್ಲ. ಹೀಗಾಗಿ ಮುಖ್ಯಮಂತ್ರಿ ಅವರೇ ತಮ್ಮ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದು ಧರಣಿ ನಿರತರು ಆಗ್ರಹಿಸಿದರು.

ಶಿವರಾಮ ಕಾರಂತ ಬಡಾವಣೆ ಯೋಜನೆಯನ್ನು ಕೈಬಿಡಬೇಕು. ಜತೆಗೆ ಪೆರಿಫೆರಲ್‌ ರಿಂಗ್‌ ರಸ್ತೆ ಜಾಗಕ್ಕೆ ಶಾಶ್ವತ ಪರಿಹಾರ ಒದಗಿಸಬೇಕು. ಸರಕಾರ ಈ ವಿಚಾರದಲ್ಲಿ ಶೀಘ್ರದಲ್ಲೇ ನ್ಯಾಯ ಒದಗಿಸದಿದ್ದರೆ, ಲೋಕಸಭಾ ಚುನಾವಣೆಯಲ್ಲಿ ಆ ಭಾಗದ ರೈತರು ಮತದಾನವನ್ನು ಬಹಿಷ್ಕರಿಸಲಿದ್ದಾರೆ ಎಂದು ಶಿವರಾಮ ಕಾರಂತ ಬಡಾವಣೆ ನಿವಾಸಿಗಳ ಸಂಘದ ಅಧ್ಯಕ್ಷ ಬಿ.ಆರ್‌. ನಂಜುಂಡಪ್ಪ ಎಚ್ಚರಿಕೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ