ಆ್ಯಪ್ನಗರ

ಪರಿಸರ ಮಾರಕ ಪಿಒಪಿ ‘ಗಣೇಶನ ಗಲಾಟೆ’!: ರಾಜಧಾನಿಯೆಲ್ಲೆಡೆ ಎಗ್ಗಿಲ್ಲದೆ ಸಾಗಿದೆ ಮಾರಾಟ

ಪಿಒಪಿ ಗಣೇಶ ಮೂರ್ತಿಗಳ ಉತ್ಪಾದನೆ ಹಾಗೂ ಮಾರಾಟಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ, ಬಿಬಿಎಂಪಿ, ಮಾಲಿನ್ಯ ನಿಯಂತ್ರಣ ಮಂಡಳಿಗಳು ಹರಸಾಹಸ ನಡೆಸ್ತಿವೆ. ಆದ್ರೆ, ಬೆಂಗಳೂರಿನಲ್ಲಿ ಪಿಒಪಿ ಗಣೇಶ ಮೂರ್ತಿಗಳನ್ನು ರಾಜಾರೋಷವಾಗಿ ಮಾರಾಟ ಮಾಡಲಾಗ್ತಿದೆ.

Bangalore Mirror Bureau 28 Aug 2019, 1:04 pm
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಪಿಒಪಿ ಗಣೇಶನ ಹಾವಳಿಗೆ ಬ್ರೇಕ್ ಬೀಳುತ್ತಲೇ ಇಲ್ಲ. ಈವರೆಗೆ 2 ಸಾವಿರಕ್ಕೂ ಹೆಚ್ಚು ಪಿಒಪಿ ಗಣೇಶ ಮೂರ್ತಿಗಳನ್ನು ನಾಶಪಡಿಸಲಾಗಿದೆ. ಬಿಬಿಎಂಪಿ, ಮಾಲಿನ್ಯ ನಿಯಂತ್ರಣ ಮಂಡಳಿ ನಿರಂತರವಾಗಿ ನಗರದ ಹಲವೆಡೆ ದಾಳಿ ನಡೆಸುತ್ತಲೇ ಇವೆ. ಪಿಒಪಿ ಗಣೇಶ ಮೂರ್ತಿಗಳಿಂದ ಪರಿಸರದ ಮೇಲೆ ಆಗುವ ಮಾರಕ ಪರಿಣಾಮಗಳ ಕುರಿತು ಜನಜಾಗೃತಿಯನ್ನೂ ಮೂಡಿಸಲಾಗ್ತಿದೆ. ಮನುಷ್ಯರಿಗೆ ಮಾತ್ರವಲ್ಲ ಪ್ರಕೃತಿಗೂ ಪಿಒಪಿ ಗಣೇಶ ಹಾನಿಕರ ಅನ್ನೋ ಸಂದೇಶವನ್ನು ಜನರಿಗೆ ಮುಟ್ಟಿಸಲಾಗ್ತಿದೆ. ಆದ್ರೂ ಫಲಿತಾಂಶ ಮಾತ್ರ ಶೂನ್ಯ.
Vijaya Karnataka Web ganesha 1


ಬಿಬಿಎಂಪಿ, ಬೆಂಗಳೂರು ಜಿಲ್ಲಾಧಿಕಾರಿ ಹಾಗೂ ಪೊಲೀಸರ ಜೊತೆ ಮಾಲಿನ್ಯ ನಿಯಂತ್ರಣ ಮಂಡಳಿ ನಿರಂತರ ಸಂಪರ್ಕದಲ್ಲಿದೆ. ತಹಶೀಲ್ದಾರ್ ಹಾಗೂ ಡಿಸಿ ಮುತುವರ್ಜಿ ವಹಿಸಬೇಕು, ಬಿಬಿಎಂಪಿ ಜವಾಬ್ದಾರಿ ತೆಗೆದುಕೊಳ್ಳಬೇಕು, ಪೊಲೀಸರು ಪಿಒಪಿ ಗಣೇಶ ಮೂರ್ತಿಗಳ ತಯಾರಿಕಾ ಘಟಕಗಳ ಮೇಲೆ ದಾಳಿ ನಡೆಸಬೇಕು ಅಂತಾರೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಟಿ. ಮಹೇಶ್.

ಪಿಒಪಿ ಗಣೇಶನ ಹಾವಳಿ ನಿಯಂತ್ರಣಕ್ಕೆ ಸರ್ಕಾರ ಎಷ್ಟೇ ಮುತುವರ್ಜಿ ವಹಿಸಲಿ, ಜಾಗೃತಿ ಮೂಡಿಸಲಿ ಮಾರಾಟಗಾರರು ಮಾತ್ರ ಸ್ಪಂದನೆ ನೀಡುತ್ತಲೇ ಇಲ್ಲ. ಬೆಂಗಳೂರಿನ ಪಾಟರಿ ಟೌನ್ ಸೇರಿದಂತೆ ಹಲವೆಡೆ ಲಾರಿಗಟ್ಟಲೆ ಪಿಒಪಿ ಗಣೇಶ ಮೂರ್ತಿಗಳು ರಸ್ತೆಗಿಳಿಯುತ್ತಿವೆ. ಬೃಹತ್ ಗಾತ್ರದ ನೂರಾರು ಗಣೇಶ ಮೂರ್ತಿಗಳು ರಸ್ತೆ ಮಗ್ಗುಲಲ್ಲೇ ರಾರಾಜಿಸುತ್ತಿದ್ದರೂ ಯಾರು ಕೇಳುವವರಿಲ್ಲ. ಬಿಬಿಎಂಪಿ, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಇತ್ತ ತಲೆಯನ್ನೇ ಹಾಕಿಲ್ಲ.

ಗೌರಿಬಿದನೂರು ಸೇರಿದಂತೆ ಬೆಂಗಳೂರಿನ ಸುತ್ತಮುತ್ತಲ ಭಾಗಗಳಿಂದ ಲಾರಿಗಟ್ಟಲೆ ಪಿಒಪಿ ಗಣೇಶ ಮೂರ್ತಿಗಳು ಪ್ರತಿದಿನ ನಗರ ಪ್ರವೇಶ ಮಾಡುತ್ತಿವೆ. ಇವುಗಳ ಸಾಗಾಟವನ್ನೂ ಯಾರೂ ತಡೆಯುತ್ತಿಲ್ಲ ಎನ್ನುತ್ತಾರೆ ನಮ್ಮ ಬೆಂಗಳೂರು ಪ್ರತಿಷ್ಠಾನದ ಎನ್. ಆರ್. ಸುರೇಶ್.

ರಾಜ್ಯ ಸರ್ಕಾರ ಪಿಒಪಿ ಗಣೇಶ ಮೂರ್ತಿಗಳ ತಯಾರಿಕೆಗೆ ನಿಷೇಧ ಹೇರಿದ್ದೇ ತಡ, ಹೊರ ರಾಜ್ಯಗಳಲ್ಲಿ ಮೂರ್ತಿ ತಯಾರಿಸಿ ಬೆಂಗಳೂರಿಗೆ ರವಾನಿಸುವ ದಂಧೆಯೂ ಆರಂಭವಾಗಿಬಿಟ್ಟಿದೆ. 6 ಅಡಿ ಎತ್ತರದ ಗಣೇಶ ಮೂರ್ತಿ ಕಳೆದ ವರ್ಷ 10,000 ರೂ.ಗೆ ವ್ಯಾಪಾರಿಗಳಿಗೆ ಸಿಗುತ್ತಿತ್ತು. ಈಗ ಅದೇ ಮೂರ್ತಿಯ ಬೆಲೆ 16,000 ರೂ. ದಾಟಿದೆ. ಒಟ್ನಲ್ಲಿ, ಪಿಒಪಿ ಮೂರ್ತಿಗಳ ತಯಾರಿಕೆ ನಿಷೇಧ ಕೂಡಾ ಹೊಸ ದಂಧೆಯಾಗಿ ಪರಿವರ್ತನೆಯಾಗಿಬಿಟ್ಟಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ