ಆ್ಯಪ್ನಗರ

ಮೆಟ್ರೊದಲ್ಲಿ ಹೆಚ್ಚುತ್ತಿದೆ ಬಾಗಿಲಲ್ಲಿ ಸಿಲುಕಿ ಪರದಾಡುವವರ ಸಂಖ್ಯೆ

41 ಕೋಟಿ ಪ್ರಯಾಣಿಕರಿಗೆ ಸುಲಭವಾದ ಸಾರಿಗೆ ಸೌಲಭ್ಯ ನೀಡುವುದರೊಂದಿಗೆ ‘ನಮ್ಮ ಮೆಟ್ರೊ’ ಸೇವೆಯು 8 ವರ್ಷ ತುಂಬಿ 9ನೇ ವರ್ಷಕ್ಕೆ ಕಾಲಿಟ್ಟಿದೆ.ಮೆಟ್ರೊ ಸೇವೆ ಜನಪ್ರಿಯವಾಗುತ್ತಿದೆ. ಅದರ ಜತೆಗೆ ಮೆಟ್ರೊ ಡೋರ್‌ನಲ್ಲಿ ಸಿಲುಕಿ ಒದ್ದಾಡುವ ಪ್ರಕರಣಗಳು ಕೂಡ ಹೆಚ್ಚುತ್ತಿವೆ.

Vijaya Karnataka 21 Oct 2019, 12:47 pm
ಬೆಂಗಳೂರು: ಮೆಟ್ರೊದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದ್ದಂತೆ ಬಾಗಿಲಿಗೆ ಸಿಲುಕಿ ಪರದಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ಹಸಿರು ಮಾರ್ಗದ ರೈಲಿನಲ್ಲಿ ಬಾಗಿಲ ಬಳಿ ಕಾಲು ಸಿಕ್ಕಿಕೊಂಡು ಒದ್ದಾಡಿದ ಎರಡು ಘಟನೆಗಳು ಇತ್ತೀಚೆಗೆ ನಡೆದಿವೆ. ಅ.14 ರಂದು ಸಂಜೆ 6.20 ರ ಸುಮಾರಿಗೆ ಮೆಜೆಸ್ಟಿಕ್‌ ನಿಲ್ದಾಣದಲ್ಲಿ ಹೆಣ್ಣು ಮಗುವಿನ ಕಾಲು ಬಾಗಿಲಿನಲ್ಲಿ ಸಿಕ್ಕಿ ಹಾಕಿಕೊಂಡ ಘಟನೆ ನಡೆದಿದೆ. ನಿಲ್ದಾಣದಲ್ಲಿ ದಂಪತಿ ಮಗುವಿನೊಂದಿಗೆ ರೈಲಿನ ಒಳಗೆ ಪ್ರವೇಶಿಸುತ್ತಿದ್ದರು. ದಟ್ಟಣೆ ಹೆಚ್ಚಿದ್ದರಿಂದ ದಂಪತಿ ಹಾಗೂ ಮಗು ಬಾಗಿಲಿನ ಬಳಿಯಲ್ಲೇ ನಿಲ್ಲಬೇಕಾಯಿತು. ಈ ವೇಳೆ ಸ್ವಯಂಚಾಲಿತವಾಗಿ ಬಾಗಿಲು ಮುಚ್ಚಿಕೊಂಡಾಗ ಮಗುವಿನ ಕಾಲು ಬಾಗಿಲಿನ ನಡುವೆ ಸಿಕ್ಕಿಹಾಕಿಕೊಂಡಿತು. ರೈಲು ಹೊರಟಿದ್ದರಿಂದ ದಂಪತಿ ಹಾಗೂ ಸುತ್ತಮುತ್ತಲಿದ್ದ ಪ್ರಯಾಣಿಕರು ಆತಂಕಕ್ಕೊಳಗಾಗಿ ನೆರವಿಗಾಗಿ ಕೂಗಿದರು. ಅಷ್ಟರಲ್ಲೇ ದಂಪತಿ ಮಗುವಿನ ಕಾಲನ್ನು ಒಳಕ್ಕೆ ಎಳೆದುಕೊಂಡರು.
Vijaya Karnataka Web Namm Metro


ನಮ್ಮ ಹೆಮ್ಮೆಯ ಮೆಟ್ರೊಗೆ 8ರ ಸಂಭ್ರಮ: 41 ಕೋಟಿ ಪ್ರಯಾಣಿಕರ ಪಯಣ

ಆದರೆ, ಲೋಕೊ ಪೈಲಟ್‌ಗೆ ಮಾಹಿತಿ ತಿಳಿದು ರೈಲು ಸಂಚಾರ ಸ್ಥಗಿತಗೊಳಿಸಿದ್ದರಿಂದ ಸೇವೆಯಲ್ಲಿ ವ್ಯತ್ಯಯವಾಯಿತು. 5-7 ನಿಮಿಷಗಳ ಕಾಲ ಸಂಚಾರದಲ್ಲಿ ವ್ಯತ್ಯಯವಾಗಿದೆ. ಎರಡು ಟ್ರಿಪ್‌ಗಳು ಕಡಿತವಾಗಿವೆ ಎಂದು ಮೂಲಗಳು ತಿಳಿಸಿವೆ.

‘‘ಮೆಜೆಸ್ಟಿಕ್‌ ನಿಲ್ದಾಣದಲ್ಲಿ ದಟ್ಟಣೆ ಅಧಿಕವಾಗಿತ್ತು. ರೈಲು ಬಂದು ನಿಂತಾಗ ಒಳಗೆ ಹೋಗುವಂತೆ ಸಿಬ್ಬಂದಿ ಸೂಚನೆ ನೀಡಿದರು. ಮೂರು ವರ್ಷದ ಮಗು ಅಪ್ಪ, ಅಮ್ಮನೊಂದಿಗೆ ಒಳಗೆ ಪ್ರವೇಶಿಸಿದಳು. ಸ್ವಯಂಚಾಲಿತವಾಗಿ ಮುಚ್ಚಿಕೊಂಡ ಬಾಗಿಲಲ್ಲಿ ಬಾಲಕಿಯ ಕಾಲು ಸಿಲುಕಿತು. ಅದನ್ನು ಎಳೆದುಕೊಳ್ಳುವಲ್ಲಿ ದಂಪತಿ ಯಶಸ್ವಿಯಾದರು,’’ ಎಂದು ಪ್ರತ್ಯಕ್ಷದರ್ಶಿ ಮುಕ್ತಿಯಾರ್‌ ವಿವರಿಸಿದರು.

ಸಿಕ್ಕಿಕೊಂಡ ಮಹಿಳೆ: ಅ.13 ರಂದು ರಾತ್ರಿ 8.32 ಕ್ಕೆ ಮೆಜೆಸ್ಟಿಕ್‌ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ಪ್ಲಾಟ್‌‌ಫಾರಂ ಹಾಗೂ ರೈಲಿನ ನಡುವೆ ಸಿಕ್ಕಿ ಹಾಕಿಕೊಂಡಿದ್ದ ಘಟನೆ ನಡೆದಿದೆ. ರೈಲು ಹಾಗೂ ಪ್ಲಾಟ್‌ಫಾರಂ ನಡುವೆ ಅಂತರವಿದ್ದು, ಇದರಲ್ಲಿ ಮಹಿಳೆಯ ಕಾಲು ಸಿಕ್ಕಿಹಾಕಿಕೊಂಡಿತ್ತು. ಲೋಕೊ ಪೈಲಟ್‌ ಕೂಡಲೇ ಇದನ್ನು ಗಮನಿಸಿದ್ದರಿಂದ ಬಾಗಿಲು ಮುಚ್ಚಲಿಲ್ಲ. ನಂತರ ಸಹಾಯಕ್ಕೆ ಬಂದ ಸಿಬ್ಬಂದಿ ಹಾಗೂ ಪ್ರಯಾಣಿಕರು ಕಾಲು ಬಿಡಿಸಿದರು. ಈ ವೇಳೆ ಸುರಕ್ಷತಾ ಕ್ರಮವಾಗಿ ಥರ್ಡ್‌ ರೇಲ್‌ನಲ್ಲಿ ಹರಿಯುವ ವಿದ್ಯುತ್‌ ಬಂದ್‌ ಮಾಡಲಾಗಿತ್ತು. 8.36ಕ್ಕೆ ವಿದ್ಯುತ್‌ ಪೂರೈಕೆಯನ್ನು ಸರಿಪಡಿಸಿ ರೈಲು ಕಾರ್ಯಾಚರಣೆ ಗೊಳಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ