ಆ್ಯಪ್ನಗರ

ಬೆಂಗಳೂರಿನ 1,000ಕ್ಕೂ ಹೆಚ್ಚು ಸರಕಾರಿ ಶಾಲೆಗಳಿಗೆ ತಲುಪದ ಸಿಸಿಟಿವಿ ಕ್ಯಾಮೆರಾ

'ಖಾಸಗಿ ಶಾಲೆಗಳಿಗೆ ಮಾತ್ರ ಸಿಸಿಟಿವಿ ಕಡ್ಡಾಯ ಎಂದು ಭಾವಿಸುವುದು ತಪ್ಪು ಗ್ರಹಿಕೆ. ಸರಕಾರಿ ಶಾಲೆಗಳಲ್ಲೂ ಎಷ್ಟೋ ಮಕ್ಕಳ ಮೇಲೆ ಹಿಂಸಾಚಾರ, ದುರ್ಬಳಕೆ ನಡೆಯುತ್ತಿವೆ. ಆದರೆ ವರದಿಯಾಗದೇ ಮುಚ್ಚಿ ಹೋಗುತ್ತವೆ' ಎಂದು ಆರ್‌ಟಿಇ ಕಾರ್ಯಪಡೆಯ ಸಂಚಾಲಕ ನಾಗಸಿಂಹ ಜಿ ರಾವ್ ಹೇಳುತ್ತಾರೆ.

Vijaya Karnataka Web 13 Feb 2019, 7:44 pm
ಬೆಂಗಳೂರು: ಎಲ್ಲ ಸರಕಾರಿ ಶಾಲೆಗಳಲ್ಲೂ ಸಿಸಿಟವಿಗಳನ್ನು ಆದ್ಯತೆ ಮೇರೆಗೆ ಅಳವಡಿಸುವುದಾಗಿ ರಾಜ್ಯ ಸರಕಾರ ಘೋಷಿಸಿ ಒಂದು ವರ್ಷ ಕಳೆದರೂ ಬೆಂಗಳೂರಿನ 1,151 ಸರಕಾರಿ ಶಾಲೆಗಳ ಪೈಕಿ ಒಂದರಲ್ಲೂ ಸಿಸಿಟಿವಿ ಅಳವಡಿಕೆಯಾಗಿಲ್ಲ.
Vijaya Karnataka Web CCTV


ಮಕ್ಕಳ ಮೇಲೆ ಅತ್ಯಾಚಾರ, ಲೈಂಗಿಕ ಹಲ್ಲೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭದ್ರತಾ ಕ್ರಮವಾಗಿ ಶಾಲೆಗಳಲ್ಲಿ ಸಿಸಿಟಿವಿ ಅಳವಡಿಸುವುದನ್ನು ಕೆಲವು ವರ್ಷಗಳ ಹಿಂದೆಯೇ ಕಡ್ಡಾಯಗೊಳಿಸಲಾಗಿದೆ. ವಿಶೇಷವೆಂದರೆ, ಈ ಕಡ್ಡಾಯ ಆದೇಶ ಕೇವಲ ಖಾಸಗಿ ಶಾಲೆಗಳಿಗೆ ಮಾತ್ರ ಸೀಮಿತವಾಗಿದೆ.

'ಖಾಸಗಿ ಶಾಲೆಗಳಿಗೆ ಮಾತ್ರ ಸಿಸಿಟಿವಿ ಕಡ್ಡಾಯ ಎಂದು ಭಾವಿಸುವುದು ತಪ್ಪು ಗ್ರಹಿಕೆ. ಸರಕಾರಿ ಶಾಲೆಗಳಲ್ಲೂ ಎಷ್ಟೋ ಮಕ್ಕಳ ಮೇಲೆ ಹಿಂಸಾಚಾರ, ದುರ್ಬಳಕೆ ನಡೆಯುತ್ತಿವೆ. ಆದರೆ ವರದಿಯಾಗದೇ ಮುಚ್ಚಿ ಹೋಗುತ್ತವೆ' ಎಂದು ಆರ್‌ಟಿಇ ಕಾರ್ಯಪಡೆಯ ಸಂಚಾಲಕ ನಾಗಸಿಂಹ ಜಿ ರಾವ್ ಹೇಳುತ್ತಾರೆ.

ಖಾಸಗಿ ಶಾಲೆಗಳಲ್ಲಿ ಇಂತಹ ಪ್ರಕರಣಗಳು ಬೆಳಕಿಗೆ ಬರಲು ಪೋಷಕರ ಜಾಗೃತಿ ಹಾಗೂ ಹೋರಾಟವೇ ಕಾರಣ. ಆದರೆ ಮಕ್ಕಳು ಎಷ್ಟೋ ಬಾರಿ ಭಯದಿಂದ ಇಂತಹ ವಿಷಯಗಳನ್ನು ಬಹಿರಂಗಪಡಿಸುವುದೇ ಇಲ್ಲ. ಸರಕಾರಿ ಶಾಲೆಗಳಲ್ಲಿ ಮಕ್ಕಳಾಗಲಿ, ಪೋಷಕರಾಗಲಿ ಇಂತಹ ವಿಷಯಗಳ ಬಗ್ಗೆ ಹೋರಾಟ ನಡೆಸದೆ ಸುಮ್ಮನಿರುವುದೇ ಪ್ರಕರಣಗಳು ಮುಚ್ಚಿಹೋಗಲು ಕಾರಣ ಎಂದು ರಾವ್ ಹೇಳುತ್ತಾರೆ.

ರಾಜರಾಜೇಶ್ವರಿ ನಗರದ ಸರಕಾರಿ ಶಾಲೆಯಲ್ಲಿ 100ಕ್ಕೂ ಹೆಚ್ಚು ಬಾಲಕ-ಬಾಲಕಿಯರು ಓದುತ್ತಿದ್ದಾರೆ. ಆದರೆ ಕ್ಯಾಂಪಸ್‌ನಲ್ಲಿ ಎಲ್ಲೂ ಸಿಸಿಟಿವಿ ಕ್ಯಾಮೆರಗಳು ಕಾಣಿಸುವುದಿಲ್ಲ. 'ಕಳೆದ ನವೆಂಬರ್‌ನಲ್ಲಿ ಶಿಕ್ಷಣ ಇಲಾಖೆ ಸಿಬ್ಬಂದಿ ಶಾಲೆಗೆ ಭೇಟಿ ನೀಡಿ ಎರಡು ಸಿಸಿಟಿವಿ ಕ್ಯಾಮೆರಾ ಅಳವಡಿಸುವುದಾಗಿ ಹೇಳಿದ್ದರು. ಆದರೆ ಇದುವರೆಗೂ ಅಳವಡಿಕೆಯಾಗಿಲ್ಲ' ಎಂದು ಶಾಲೆಯ ಅಧ್ಯಾಪಕರೊಬ್ಬರು ತಿಳಿಸಿದರು.

ಇನ್ನೊಂದು ಸರಕಾರಿ ಶಾಲೆಯಲ್ಲಿ 5ನೇ ತರಗತಿ ಬಾಲಕಿಯೊಬ್ಬಳು ಹಿರಿಯ ವಿದ್ಯಾರ್ಥಿಗಳ ಕಿರುಕುಳದ ಕಾರಣಕ್ಕೆ ಒಂದು ತಿಂಗಳಿನಿಂದ ಶಾಲೆಗೆ ಬರುವುದನ್ನೇ ನಿಲ್ಲಿಸಿದ್ದಳು.

'ನಮ್ಮ ದೈನಂದಿನ ದೈಹಿಕ ಶಿಕ್ಷಣದ ಅವಧಿಯಲ್ಲಿ ಹಿರಿಯ ಹುಡುಗನೊಬ್ಬ ನನ್ನ ಜಡೆ ಎಳೆದು ನನ್ನನ್ನು ಅಸಭ್ಯವಾಗಿ ಮುಟ್ಟುತ್ತಾನೆ. ನಾನು ಟೀಚರ್‌ಗೆ ದೂರು ಕೊಟ್ಟರೂ ಇದನ್ನು ದೊಡ್ಡ ವಿಷಯ ಮಾಡಬೇಡ ಎಂದು ಹೇಳಿದರು' ಎಂದು ಆ ಬಾಲಕಿ ತಿಳಿಸಿದ್ದಾಳೆ.

ಬಾಲಕಿಯ ಬಗ್ಗೆ ವಿಶೇಷ ಕಾಳಜಿ ವಹಿಸಿ ಮುಂದೆ ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳುವುದಾಗಿ ಪ್ರಿನ್ಸಿಪಾಲರು ಪೋಷಕರಿಗೆ ಭರವಸೆ ನೀಡಿದ ಬಳಿಕ ಆ ಹುಡುಗಿ ಪುನಃ ಶಾಲೆಗೆ ಬರಲಾರಂಭಿಸಿದ್ದಾಳೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ