ಆ್ಯಪ್ನಗರ

ಹೆಬ್ಬಾಳ-ಕೆ.ಆರ್‌.ಪುರಂ ರಿಂಗ್‌ ರಸ್ತೆ ಅತಿ ಅಪಾಯಕಾರಿ

ಉದ್ಯಾನ ನಗರಿಯಲ್ಲಿ ಅತಿಹೆಚ್ಚು ಅಪಘಾತಗಳು ಸಂಭವಿಸುವ ರಸ್ತೆಗಳ ಪೈಕಿ ಹೆಬ್ಬಾಳ-ಕೆ.ಆರ್‌.ಪುರಂ ರಿಂಗ್‌ ರಸ್ತೆ ಪ್ರಥಮ ಸ್ಥಾನದಲ್ಲಿದೆ ಎಂದು ಇನ್ಸ್‌ಟಿಟ್ಯೂಟ್‌ ಆಫ್‌ ಪಬ್ಲಿಕ್‌ ಹೆಲ್ತ್‌ (ಐವಿಎಚ್‌) ನಡೆಸಿದ ಸಮೀಕ್ಷೆ ವೇಳೆ ಗೊತ್ತಾಗಿದೆ.

Vijaya Karnataka 28 Feb 2019, 5:00 am
ಬೆಂಗಳೂರು : ಉದ್ಯಾನ ನಗರಿಯಲ್ಲಿ ಅತಿಹೆಚ್ಚು ಅಪಘಾತಗಳು ಸಂಭವಿಸುವ ರಸ್ತೆಗಳ ಪೈಕಿ ಹೆಬ್ಬಾಳ-ಕೆ.ಆರ್‌.ಪುರಂ ರಿಂಗ್‌ ರಸ್ತೆ ಪ್ರಥಮ ಸ್ಥಾನದಲ್ಲಿದೆ ಎಂದು ಇನ್ಸ್‌ಟಿಟ್ಯೂಟ್‌ ಆಫ್‌ ಪಬ್ಲಿಕ್‌ ಹೆಲ್ತ್‌ (ಐವಿಎಚ್‌) ನಡೆಸಿದ ಸಮೀಕ್ಷೆ ವೇಳೆ ಗೊತ್ತಾಗಿದೆ.
Vijaya Karnataka Web hebbala k r puram road dangerous
ಹೆಬ್ಬಾಳ-ಕೆ.ಆರ್‌.ಪುರಂ ರಿಂಗ್‌ ರಸ್ತೆ ಅತಿ ಅಪಾಯಕಾರಿ


ನಗರದ ಐವಿಎಚ್‌ ಸಂಸ್ಥೆಯಲ್ಲಿ ಬುಧವಾರ 'ಸೇಫರ್‌ ರೋಡ್ಸ್‌ ಬೆಂಗಳೂರು' ಅಭಿಯಾನದ ಪ್ರಾಥಮಿಕ ವರದಿಯನ್ನು ಬಿಡುಗಡೆ ಮಾಡಿದ ಸಂಸ್ಥೆಯ ಪ್ರಾಧ್ಯಾಪಕಿ ಡಾ.ಪ್ರಗತಿ ಹೆಬ್ಬಾರ್‌ ಈ ಬಗ್ಗೆ ಮಾಹಿತಿ ನೀಡಿದರು. ''ನಮ್ಮ ಸಂಸ್ಥೆಯು ಪದ್ಮಶ್ರೀ ಸ್ಕೂಲ್‌ ಆಫ್‌ ಪಬ್ಲಿಕ್‌ ಹೆಲ್ತ್‌ ಸಹಯೋಗದೊಂದಿಗೆ ನಗರದಲ್ಲಿ ಹೆಲ್ಮೆಟ್‌ ಧರಿಸದೆ ದ್ವಿಚಕ್ರ ವಾಹನ ಚಾಲನೆ ಮತ್ತು ಅತಿವೇಗದ ವಾಹನ ಚಲಾಯಿಸುವ ಕುರಿತು ಜನವರಿ ತಿಂಗಳಲ್ಲಿ ಸಮೀಕ್ಷೆ ನಡೆಸಿತ್ತು. ಈ ವೇಳೆ ಹೆಬ್ಬಾಳ-ಕೆ.ಆರ್‌.ಪುರಂ ರಸ್ತೆಯಲ್ಲಿ ಅತಿಹೆಚ್ಚು ಅಪಘಾತಗಳು ಕಂಡು ಬಂತು. ದೇವನಹಳ್ಳಿ-ಬೆಂಗಳೂರು ಮಾರ್ಗ ಎರಡನೇ ಸ್ಥಾನದಲ್ಲಿದ್ದು, ಹೆಬ್ಬಾಳ-ಪೀಣ್ಯ ರಸ್ತೆಯು ಮೂರನೇ ಸ್ಥಾನದಲ್ಲಿದೆ,''ಎಂದರು.

''ದ್ವಿಚಕ್ರ ವಾಹನ, ಕಾರು, ಬಸ್‌, ಬೃಹತ್‌ ವಾಹನ, ಸೈಕಲ್‌ ಸವಾರರು ಸೇರಿದಂತೆ ಒಟ್ಟು 1,175 ಮಂದಿಯನ್ನು ಸಮೀಕ್ಷೆ ವೇಳೆ ಸಂದರ್ಶನ ಮಾಡಲಾಗಿದೆ. ಇದರಲ್ಲಿ ಶೇ.86ರಷ್ಟು ಪುರುಷರು ಮತ್ತು ಶೇ.14ರಷ್ಟು ಮಹಿಳಾ ಚಾಲಕರಿದ್ದರು. ಈ ಪೈಕಿ ಶೇ.34ರಷ್ಟು ಚಾಲಕರು ಪರವಾನಗಿ ಇಲ್ಲದೆ ವಾಹನ ಚಲಾಯಿಸುತ್ತಿರುವುದು, ಶೇ.40 ರಷ್ಟು ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್‌ ಧರಿಸದೇ ವಾಹನ ಚಾಲನೆ ಮಾಡುತ್ತಿರುವುದು ಕಂಡು ಬಂದಿವೆ.'' ಎಂದು ವಿವರಿಸಿದರು.

ಐವಿಎಚ್‌ ರಸ್ತೆ ಸುರಕ್ಷತಾ ಕೋಶದ ಉಪ ನಿರ್ದೇಶಕಿ ಡಾ.ಆಶಾ ಅಭಿಕರ್‌ ಮಾತನಾಡಿ, ''ರಸ್ತೆ ಸುರಕ್ಷತೆ ಬಗ್ಗೆ ಅರಿವಿಲ್ಲದೆ, ಮತ್ತು ರಸ್ತೆ ನಿಯಮಗಳು ಹಾಗೂ ಕಾನೂನುಗಳ ಜ್ಞಾನದ ಕೊರತೆಯಿಂದಾಗಿ ಸಾರ್ವಜನಿಕರು ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಅಪಘಾತಕ್ಕೆ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಈ ಬಗ್ಗೆ ಜನರಿಗೆ ಅರಿವು ಮೂಡಿಸುವ ಅಗತ್ಯವಿದೆ. ನಗರದಲ್ಲಿ ಅತಿಹೆಚ್ಚು ಅಪಘಾತಗಳು ಸಂಭವಿಸುತ್ತಿರುವ ರಸ್ತೆಗಳ ಸುತ್ತಮತ್ತಲಿರುವ ಶಾಲಾ-ಕಾಲೇಜು, ಐಟಿ-ಬಿಟಿ ಕಂಪನಿಗಳು, ಕಾರ್ಖಾನೆಗಳಿಗೆ ತೆರಳಿ ರಸ್ತೆ ಸುರಕ್ಷತೆ ಕುರಿತಂತೆ ಅರಿವು ಮೂಡಿಸಲಾಗುವುದು. 2020ರವರೆಗೆ ರಸ್ತೆ ಸುರಕ್ಷತಾ ಅಭಿಯಾನ, ಬೀದಿ ನಾಟಕಗಳನ್ನು ಸಹ ಹಮ್ಮಿಕೊಳ್ಳಲಾಗುವುದು. ನಂತರ ಮತ್ತೊಮ್ಮೆ ಸಮೀಕ್ಷೆ ನಡೆಸಿ ಅಂತಿಮ ವರದಿಯನ್ನು ಬಿಡುಗಡೆ ಮಾಡಲಾಗುವುದು,'' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ