ಆ್ಯಪ್ನಗರ

ಬೆಂಗಳೂರಲ್ಲಿ ಕೋವಿಡ್‌ ವರದಿ ಪ್ರದರ್ಶಿಸದ ಮಳಿಗೆಗೆ ಬೀಗಮುದ್ರೆ!

ಬಿಬಿಎಂಪಿಯು ಕೊರೊನಾ ಸೋಂಕು ಹರಡುವುದನ್ನು ತಡೆಯಲು ಅಂಗಡಿ-ಮುಂಗಟ್ಟುಗಳ ಪ್ರವೇಶ ದ್ವಾರದಲ್ಲಿ ಕೋವಿಡ್‌ ಪತ್ತೆ ಪರೀಕ್ಷಾ ವರದಿ ಪ್ರದರ್ಶಿಸಲು ಮಾಲೀಕರಿಗೆ ತಾಕೀತು ಮಾಡುತ್ತಿದೆ. ಕೊರೊನಾ ತಡೆಗೆ ಬಿಬಿಎಂಪಿ ನೂತನ ಅಭಿಯಾ ಕೈಗೊಂಡಿದೆ.

Vijaya Karnataka Web 11 Aug 2020, 10:04 pm
ಬೆಂಗಳೂರು: ಬಿಬಿಎಂಪಿಯು ಕೊರೊನಾ ಸೋಂಕು ಹರಡುವುದನ್ನು ತಡೆಯಲು ಅಂಗಡಿ-ಮುಂಗಟ್ಟುಗಳ ಪ್ರವೇಶ ದ್ವಾರದಲ್ಲಿ ಕೋವಿಡ್‌ ಪತ್ತೆ ಪರೀಕ್ಷಾ ವರದಿ ಪ್ರದರ್ಶಿಸಲು ಮಾಲೀಕರಿಗೆ ತಾಕೀತು ಮಾಡುತ್ತಿದೆ.
Vijaya Karnataka Web coronavirus
ಸಾಂದರ್ಭಿಕ ಚಿತ್ರ


ಬೊಮ್ಮನಹಳ್ಳಿ ವಲಯದ ಜರಗನಹಳ್ಳಿ ವಾರ್ಡ್‌ನಲ್ಲಿ ಕೊರೊನಾ ವಿರುದ್ಧ ಸಮರ ಸಾರಿರುವ ಪಾಲಿಕೆ ಅಧಿಕಾರಿಗಳು ಸೋಂಕು ತಡೆಗೆ ವಿಶೇಷ ಅಭಿಯಾನವನ್ನೇ ಕೈಗೊಂಡಿದೆ.

ಜರಗನಹಳ್ಳಿ ವಾರ್ಡ್‌ನಲ್ಲಿ ಕೊರೊನಾ ಸೋಂಕು ಪತ್ತೆ ಪರೀಕ್ಷಾ ವರದಿ ಪ್ರದರ್ಶಿಸದ ಅಂಗಡಿಗಳು, ಶೋ ರೂಂಗಳು, ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳು, ಹೋಟೆಲ್‌ಗಳಿಗೆ ನೋಟಿಸ್‌ ನೀಡಲಾಗುತ್ತಿದೆ. ಎರಡು ದಿನಗಳೊಳಗೆ ಕೋವಿಡ್‌ ಪತ್ತೆ ಪರೀಕ್ಷೆ ಮಾಡಿಸಿಕೊಂಡು, ವರದಿಯನ್ನು ಪ್ರವೇಶ ದ್ವಾರದಲ್ಲಿ ಪ್ರದರ್ಶಿಸದಿದ್ದರೆ ಬೀಗಮುದ್ರೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಲಾಗುತ್ತಿದೆ.

ಆಸ್ತಿ ಕೈತಪ್ಪಿ ಹೋಗುವ ಆತಂಕ: ತಂದೆಯ ಕೊಲೆಗೆ ಮಗನಿಂದಲೇ ಸುಪಾರಿ!

ಬೊಮ್ಮನಹಳ್ಳಿ ವಲಯದ ಉಸ್ತುವಾರಿ ಮಣಿವಣ್ಣನ್‌ ನೇತೃತ್ವದಲ್ಲಿ ಜರಗನಹಳ್ಳಿ ವಾರ್ಡ್‌ನ ನೋಡಲ್‌ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಕೆಎಎಸ್‌ ಅಧಿಕಾರಿ ಶ್ವೇತಾ ಕುಮಾರ್‌ ಅವರ ತಂಡವು ಅಂಗಡಿ- ಮುಂಗಟ್ಟುಗಳಿಗೆ ನೋಟಿಸ್‌ ನೀಡಿ, ಸೋಂಕು ಹರಡುವುದನ್ನು ತಡೆಯಲು ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದೆ.

''ಕಳೆದೆರಡು ದಿನಗಳಲ್ಲಿ 250 ಮಳಿಗೆಗಳಿಗೆ ನೋಟಿಸ್‌ ಕೊಡಲಾಗಿತ್ತು. ಈ ಪೈಕಿ 200 ಮಂದಿ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಮಳಿಗೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಯನ್ನೂ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ,'' ಎಂದು ಪಾಲಿಕೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ರಷ್ಯಾ ಅಧ್ಯಕ್ಷ ಪುಟಿನ್‌ ಮಗಳಿಗೆ ಜಗತ್ತಿನ ಮೊದಲ ಯಶಸ್ವಿ ಕೊರೊನಾ ಲಸಿಕೆ ಪ್ರಯೋಗ

''ಕೋವಿಡ್‌ ಪತ್ತೆ ಪರೀಕ್ಷೆ ಮಾಡಿಸಿಕೊಳ್ಳುವಂತೆ ಮನವಿ ಮಾಡಿಕೊಂಡರೂ ಸ್ಪಂದಿಸಿರಲಿಲ್ಲ. ಪರೀಕ್ಷಾ ವರದಿಯನ್ನು ಪ್ರದರ್ಶಿಸದಿದ್ದಲ್ಲಿ ಬೀಗಮುದ್ರೆ ಹಾಕಲಾಗುವುದೆಂದು ನೋಟಿಸ್‌ ನೀಡಿದ ಬಳಿಕ ಎಲ್ಲರೂ ಬಂದು ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ. ಈವರೆಗೆ 97 ಮಂದಿಯ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದು, ಈವರೆಗೆ ವರದಿ ಬಂದಿಲ್ಲ. 57 ಮಂದಿಯನ್ನು ರ‍್ಯಾಪಿಡ್ ‌ ಆ್ಯಂಟಿಜೆನ್‌ ಪರೀಕ್ಷೆಗೆ ಒಳಪಡಿಸಿದ್ದು, ಈ ಪೈಕಿ 4 ಮಂದಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ,'' ಎಂದು ಹೇಳಿದರು.

''ಮೊಬೈಲ್‌ ಯೂನಿಟ್‌ನಲ್ಲಿ ಆರ್‌ಟಿಪಿಸಿಆರ್‌ ಮತ್ತು ರ‍್ಯಾಪಿಡ್ ‌ ಆ್ಯಂಟಿಜೆನ್‌ ಪರೀಕ್ಷೆ ಮಾಡಲಾಗುತ್ತಿದೆ. ಅಂಗಡಿ-ಮುಂಗಟ್ಟುಗಳ ಮಾಲೀಕರು ಗ್ರಾಹಕರೊಂದಿಗೆ ಹೆಚ್ಚು ವ್ಯವಹರಿಸುತ್ತಾರೆ. ಹೀಗಾಗಿ, ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ. ಆದ ಕಾರಣ, ಎಲ್ಲರನ್ನೂ ಪರೀಕ್ಷೆ ಮಾಡಿಸಲಾಗುತ್ತಿದೆ. ಜತೆಗೆ ಜನರಲ್ಲಿಅರಿವು ಸಹ ಮೂಡಿಸಲಾಗುತ್ತಿದೆ,'' ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ