ಆ್ಯಪ್ನಗರ

ಇನ್ಮುಂದೆ ಮಧ್ಯರಾತ್ರಿವರೆಗೆ ಮೆಟ್ರೋ ಅವಧಿ ವಿಸ್ತರಣೆ; ಶೀಘ್ರದಲ್ಲೇ ನಿರ್ಧಾರ ಪ್ರಕಟ: BMRCL

Namma Metro : ಬೆಂಗಳೂರು ಮಹಾನಗರದಲ್ಲಿ ಕ್ಷಿಪ್ರ ಸಾರಿಗೆ ಒದಗಿಸುವ ಮೆಟ್ರೊ ರೈಲು ಸೇವೆ ಮಾತ್ರ ರಾತ್ರಿ 10 ಗಂಟೆಗೆ ಕೊನೆಗೊಳ್ಳುತ್ತಿದೆ. ಹೀಗಾಗಿ, ಉದ್ಯೋಗಿಗಳು, ವರ್ತಕರು, ಗ್ರಾಹಕರು ಹಾಗೂ ವಿದ್ಯಾರ್ಥಿಗಳು ಪ್ರಯಾಣಕ್ಕಾಗಿ ವೈಯಕ್ತಿಕ ವಾಹನ, ಬಸ್‌, ಟ್ಯಾಕ್ಸಿ ಅಥವಾ ಆಟೊಗಳನ್ನು ಅವಲಂಬಿಸುವ ಸ್ಥಿತಿ ನಿರ್ಮಾಣವಾಗಿದೆ.

Vijaya Karnataka 17 Nov 2021, 6:47 am
ಬೆಂಗಳೂರು: ನಗರದಲ್ಲಿ ಕೋವಿಡ್‌ ಮಹಾಮಾರಿಯ ಅಬ್ಬರ ತಹಬದಿಗೆ ಬಂದಿದೆ. ಜನಜೀವನವೂ ಸಹಜ ಸ್ಥಿತಿಗೆ ಮರಳಿದೆ. ನಗರವನ್ನು ದಿನದ 24 ಗಂಟೆಯೂ ತೆರೆದಿಡುವ ಬಗ್ಗೆ ಚಿಂತನೆ ಕೂಡ ನಡೆದಿದೆ. ಆದರೆ, ಮಹಾನಗರದಲ್ಲಿ ಕ್ಷಿಪ್ರ ಸಾರಿಗೆ ಒದಗಿಸುವ ಮೆಟ್ರೊ ರೈಲು ಸೇವೆ ಮಾತ್ರ ರಾತ್ರಿ 10 ಗಂಟೆಗೆ ಕೊನೆಗೊಳ್ಳುತ್ತಿದೆ. ಹೀಗಾಗಿ, ಉದ್ಯೋಗಿಗಳು, ವರ್ತಕರು, ಗ್ರಾಹಕರು ಹಾಗೂ ವಿದ್ಯಾರ್ಥಿಗಳು ಪ್ರಯಾಣಕ್ಕಾಗಿ ವೈಯಕ್ತಿಕ ವಾಹನ, ಬಸ್‌, ಟ್ಯಾಕ್ಸಿ ಅಥವಾ ಆಟೊಗಳನ್ನು ಅವಲಂಬಿಸುವ ಸ್ಥಿತಿ ನಿರ್ಮಾಣವಾಗಿದೆ.
Vijaya Karnataka Web bengaluru metro namma metro rep


ಕೋವಿಡ್‌ ಪೂರ್ವದಂತೆಯೇ ಮುಂಜಾನೆ 5 ಗಂಟೆಯಿಂದ ರಾತ್ರಿ 11ರವರೆಗೆ ಮೆಟ್ರೊ ರೈಲು ಸೇವೆ ಕಾರ್ಯಾಚರಣೆಗೊಳಿಸಬೇಕೆಂಬುದು ಪ್ರಯಾಣಿಕರ ಒತ್ತಾಯವಾಗಿದ್ದು, ಒಂದು ವಾರದೊಳಗೆ ಮೆಟ್ರೊ ರೈಲು ಅವಧಿಯನ್ನು ವಿಸ್ತರಣೆ ಮಾಡಲಾಗುತ್ತದೆ ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್‌ ತಿಳಿಸಿದ್ದಾರೆ. ಆದರೆ, ಪ್ರಸ್ತುತ ಬೆಳಗ್ಗೆ 5ರಿಂದ ರಾತ್ರಿ 10 ಗಂಟೆವರೆಗೆ ಮಾತ್ರ ರೈಲುಗಳು ಕಾರ್ಯಾಚರಣೆಗೊಳ್ಳುತ್ತಿವೆ. ಹೀಗಾಗಿ, ಮೆಜೆಸ್ಟಿಕ್‌, ಚಿಕ್ಕಪೇಟೆ, ಪೀಣ್ಯ, ಎಂ.ಜಿ.ರಸ್ತೆ, ಜಯನಗರ, ರಾಜಾಜಿನಗರ, ಮಲ್ಲೇಶ್ವರ ಸೇರಿದಂತೆ ಇತರೆ ಪ್ರದೇಶಗಳಲ್ಲಿನ ಅಂಗಡಿಗಳಲ್ಲಿ ಕೆಲಸ ಮಾಡುವ ನೌಕರರಿಗೆ ರಾತ್ರಿ ವೇಳೆ ರೈಲು ಸೇವೆ ಸಿಗದಂತಾಗಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಈಗಾಗಲೇ ಮಧ್ಯರಾತ್ರಿಯವರೆಗೆ ಸೇವೆ ಆರಂಭಿಸಿದ್ದು, ವ್ಯಾಪಾರಿಗಳು, ಉದ್ಯೋಗಿಗಳಿಗೆ ತಕ್ಕಮಟ್ಟಿಗೆ ಅನುಕೂಲವಾಗಿದೆ. ಆದರೆ, ಮೆಟ್ರೊ ಸೇವೆ ಆರಂಭಿಸಿದ್ದಲ್ಲಿ ಪ್ರಯಾಣ ಇನ್ನಷ್ಟು ಸುಲಭವಾಗಲಿದೆ.
BMTC: ರಾತ್ರಿ ಬಸ್ ಸೇವೆಯನ್ನು ಮತ್ತೆ ಆರಂಭಿಸಿದ ಬಿಎಂಟಿಸಿ: ಎಲ್ಲಿಲ್ಲಿಗೆ ಸಂಚಾರ ಸೌಲಭ್ಯ?
2.5 ಲಕ್ಷ ಪ್ರಯಾಣಿಕರು:
ಲಾಕ್‌ಡೌನ್‌ ನಂತರ ಮೆಟ್ರೊ ಸೇವೆ ಆರಂಭವಾದಾಗ ಬೆಳಗ್ಗೆ 7 ರಿಂದ ಸಂಜೆ 8ರ ತನಕ ಸಂಚಾರವಿತ್ತು. ಈ ಸಮಯದಲ್ಲಿ ಪ್ರತಿದಿನ ಪ್ರಯಾಣಿಕರ ಸಂಖ್ಯೆ ಸರಾಸರಿ ಒಂದು ಲಕ್ಷ ಇತ್ತು. ನಂತರದ ಸಮಯವನ್ನು ಬೆಳಗ್ಗೆ 5 ರಿಂದ ಸಂಜೆ 10ರವರೆಗೆ ವಿಸ್ತರಿಸಲಾಯಿತು. ಪ್ರಯಾಣಿಕರ ಸಂಖ್ಯೆ ಕೂಡ ಅಧಿಕವಾಯಿತು. ಪ್ರಸ್ತುತ ಪ್ರತಿದಿನ ಸರಾಸರಿ 2.5 ಲಕ್ಷ ಜನರು ಸಂಚಾರ ಮಾಡುತ್ತಿದ್ದಾರೆ. ಅವಧಿಯನ್ನು ಮಧ್ಯರಾತ್ರಿಯವರೆಗೆ ವಿಸ್ತರಿಸಿದರೆ ಪ್ರಯಾಣಿಕರ ಸಂಖ್ಯೆ ಕೂಡ ಅಧಿಕವಾಗಲಿದ್ದು, ಆದಾಯ ಕೂಡ ಹೆಚ್ಚಲಿದೆ. ಕೋವಿಡ್‌ ಪೂರ್ವದಲ್ಲಿ ಪ್ರತಿದಿನ ಸರಾಸರಿ 4 ಲಕ್ಷಕ್ಕೂ ಅಧಿಕ ಜನರು ಮೆಟ್ರೊ ಸೇವೆ ಬಳಸುತ್ತಿದ್ದರು.

ರೈಲುಗಳ ನಡುವೆ ಸಮಯದ ಅಂತರ ಕಡಿಮೆ ಮಾಡಿ:
ಪ್ರತಿ ದಿನ ಬೆಳಗ್ಗೆ 8 ರಿಂದ 11 ಗಂಟೆವರೆಗೆ 5 ನಿಮಿಷ, ಸಂಜೆ 4.30 ರಿಂದ ರಾತ್ರಿ 7.30ರವರೆಗೆ 5 ನಿಮಿಷ ಹಾಗೂ ಉಳಿದ ಸಮಯದಲ್ಲಿ 10 ನಿಮಿಷದ ಅವಧಿಯಲ್ಲಿ ರೈಲುಗಳು ಸಂಚರಿಸುತ್ತಿವೆ. ಈ ಅವಧಿಯನ್ನು ಇನ್ನೂ ಒಂದೆರಡು ನಿಮಿಷ ಕಡಿಮೆ ಮಾಡಬೇಕೆನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ. ಐದು ನಿಮಿಷಗಳ ಅವಧಿಯಲ್ಲಿ ಜನರು ತುಂಬಿ ತುಳುಕುತ್ತಾರೆ. ನಿಂತುಕೊಳ್ಳುವುದಕ್ಕೂ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ರೈಲುಗಳ ಸಂಚಾರ ಅವಧಿ ಕಡಿಮೆ ಮಾಡಿದರೆ ಇನ್ನಷ್ಟು ಸುಖಕರ ಪ್ರಯಾಣ ಮಾಡಬಹುದಾಗಿದೆ.
ಕೋವಿಡ್‌ ನಂತರ ಎಲ್ಲಾ ಸಹಜ ಸ್ಥಿತಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಮೆಟ್ರೋವನ್ನು ಮಧ್ಯರಾತ್ರಿಯವರೆಗೆ ಓಡಿಸುವ ಸಂಬಂಧ ಚರ್ಚೆ ನಡೆಯುತ್ತಿದ್ದು, ಒಂದು ವಾರದೊಳಗೆ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು.
ಅಂಜುಂ ಪರ್ವೇಜ್‌, ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ