ಆ್ಯಪ್ನಗರ

ಬೆಂಗಳೂರಿನ ರಿಯಲ್‌ ಹೀರೋಗಳಿಗೆ 'ನಮ್ಮ ಬೆಂಗಳೂರು ಪ್ರಶಸ್ತಿ'ಯ ಗರಿ! ಯಾರಿವರು?

ಬೆಂಗಳೂರನ್ನು ಸುಂದರ ನಗರವಾಗಿಸುವಲ್ಲಿ ಶ್ರಮಿಸಿರುವ ನಗರದ ರಿಯಲ್‌ ಹೀರೋಗಳಿಗೆ 'ನಮ್ಮ ಬೆಂಗಳೂರು ಅವಾರ್ಡ್ಸ್‌' ಪ್ರತಿಷ್ಠಾನವು ಶನಿವಾರ ಪ್ರಶಸ್ತಿ ನೀಡುವ ಮೂಲಕ ಗೌರವಿಸಿದೆ. ಈ ಬಾರಿ ಬೆಂಗಳೂರಿನ 6 ಮಂದಿ ರಿಯಲ್‌ ಹೀರೋಗಳಿಗೆ ಪ್ರಶಸ್ತಿಯ ಗೌರವ ಸಂದಿದೆ.

Vijaya Karnataka Web 19 Sep 2020, 8:36 pm
ಬೆಂಗಳೂರು: ವಿಶ್ವದ ಅಗ್ರಮಾನ್ಯ ನಗರಗಳಲ್ಲಿ ಒಂದಾಗಿರುವ ಬೆಂಗಳೂರನ್ನು ಸುಂದರ ನಗರವಾಗಿಸುವಲ್ಲಿ ಶ್ರಮಿಸಿರುವ ನಗರದ ರಿಯಲ್‌ ಹೀರೋಗಳಿಗೆ 'ನಮ್ಮ ಬೆಂಗಳೂರು ಅವಾರ್ಡ್ಸ್‌' ಪ್ರತಿಷ್ಠಾನವು ಶನಿವಾರ ಪ್ರಶಸ್ತಿ ನೀಡುವ ಮೂಲಕ ಗೌರವಿಸಿದೆ.
Vijaya Karnataka Web bengaluru heros


ಶನಿವಾರ ವರ್ಚುವಲ್ ಆಗಿ ನಡೆದ 11ನೇ ವರ್ಷದ 'ನಮ್ಮ ಬೆಂಗಳೂರು ಪ್ರಶಸ್ತಿ' ಪ್ರದಾನ ಕಾರ್ಯಕ್ರಮದಲ್ಲಿ ಬೆಂಗಳೂರಿನ 6 ಜನ ಸಾಧಕರಿಗೂ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಎಲೆಮರೆ ಕಾಯಿಯಂತೆ ಇದ್ದುಕೊಂಡೇ ಬೆಂಗಳೂರಿಗಾಗಿ ಅನನ್ಯ ಕೊಡುಗೆ ನೀಡುತ್ತಿರುವವರನ್ನು ಗುರುತಿಸಿ ಪ್ರತಿ ವರ್ಷವೂ ' ನಮ್ಮ ಬೆಂಗಳೂರು ಅವಾರ್ಡ್ಸ್‌ ಟ್ರಸ್ಟ್' ಪ್ರಶಸ್ತಿ ನೀಡಿ ಗೌರವಿಸುತ್ತ ಬಂದಿದೆ. ಈ ವರ್ಷ ಕೂಡ ಉದ್ಯಾನ ನಗರಿಯನ್ನು ಮತ್ತಷ್ಟು ಸುಂದರವಾಗಿಸುವಲ್ಲಿ ಅಮೋಘ ಕೊಡುಗೆ ನೀಡಿರುವ 6 ಮಂದಿಯನ್ನು ಗುರುತಿಸಿ ಪ್ರಶಸ್ತಿ ನೀಡಿದೆ.

ಬೆಂಗಳೂರಿನ ಸಾಧಕರಿಗೆ ಸೆ.19ರಂದು 'ನಮ್ಮ ಬೆಂಗಳೂರು ಪ್ರಶಸ್ತಿ' ಪ್ರದಾನ

ಈ ವಿಶಿಷ್ಟ ಬೆಂಗಳೂರಿಗರನ್ನು ಆಯ್ಕೆ ಮಾಡಲು ಬೆಂಗಳೂರಿನ ವಿವಿಧ ಕ್ಷೇತ್ರಗಳ ಗಣ್ಯರನ್ನೊಳಗೊಂಡ ಆಯ್ಕೆ ಸಮಿತಿ ಪ್ರತಿಯೊಬ್ಬ ಫೈನಲಿಗರನ್ನೂ ಸಂದರ್ಶಿಸಿ, ವಿಸ್ತೃತವಾಗಿ ಚರ್ಚೆ ನಡೆಸಿ, ನ್ಯಾಯಯುತ ಮತ್ತು ಪಾರದರ್ಶಕವಾಗಿ ವಿಜಯಿಗಳನ್ನು ಆಯ್ಕೆ ಮಾಡಿದೆ. ಪ್ರತಿ ವರ್ಷದಂತೆ ಈ ಬಾರಿಯೂ ನಮ್ಮ ಹೆಮ್ಮೆಯ ನಗರ ಬೆಂಗಳೂರಿನ ಗೌರವವನ್ನು ಇನ್ನಷ್ಟು ಹೆಚ್ಚಿಸುವ ವ್ಯಕ್ತಿಗಳಿಗೆ ಆದ್ಯತೆ ನೀಡಲಾಗಿದೆ.

ಪ್ರಶಸ್ತಿಗೆ ಭಾಜನರಾದ ಸಾಧಕರು ಇವರು
  • ಚೇತನ್ ಗೌಡ, ವರ್ಷದ ಉದಯೋನ್ಮುಖ ತಾರೆ
  • ಮಂಜುನಾಥ ಹೆಬ್ಬಾರ್, ವರ್ಷದ ಮಾಧ್ಯಮ ವ್ಯಕ್ತಿ
  • ಕುಮಾರಿ ಇಂದಿರಾ, ವರ್ಷದ ಸರಕಾರಿ ಅಧಿಕಾರಿ
  • ನಳಿನಿ ಶೇಖರ್, ವರ್ಷದ ನಮ್ಮ ಬೆಂಗಳೂರಿಗರು
  • ಸ್ಮಿತಾ ಕುಲಕರ್ಣಿ, ವರ್ಷದ ಸಾಮಾಜಿಕ ಉದ್ಯಮಿ
  • ಎಚ್.ಎಸ್. ದೊರೆಸ್ವಾಮಿ, ಜೀವಮಾನದ ಸಾಧನೆಯ ಪ್ರಶಸ್ತಿ
'ನಮ್ಮ‌ ಬೆಂಗಳೂರು ಪ್ರಶಸ್ತಿ'ಗೆ ಸಾಧಕರ ನಾಮಿನೇಟ್‌ ಮಾಡಲು ಪುನೀತ್‌ ರಾಜ್‌ಕುಮಾರ್‌ ಕರೆ

ಈ ಬಾರಿ ಜೀವಮಾನದ ಸಾಧನೆಗೂ ಪ್ರಶಸ್ತಿ
ಐದು ವಿಭಾಗಗಳಲ್ಲದೇ ಈ ವರ್ಷ ಜೀವಮಾನದ ಸಾಧನೆಯ ಪ್ರಶಸ್ತಿಯನ್ನೂ ಸೇರಿಸಲಾಗಿತ್ತು. ತಮ್ಮ ಜೀವಿತಾವಧಿಯಲ್ಲಿ ಬೆಂಗಳೂರಿಗೆ ಅತಿ ವಿಶಿಷ್ಟ ಸೇವೆ ಸಲ್ಲಿಸಿದವರನ್ನು ಗುರುತಿಸುವುದು ಈ ಪ್ರಶಸ್ತಿಯ ಉದ್ದೇಶವಾಗಿದೆ. ಸ್ವಾತಂತ್ರ್ಯ ಹೋರಾಟಗಾರ, ಶತಮಾನದ ವ್ಯಕ್ತಿ ಎಚ್.ಎಸ್. ದೊರೆಸ್ವಾಮಿ ಅವರಿಗೆ 2020ರ ಸಾಲಿನ ಜೀವಮಾನದ ಸಾಧನೆಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ನಮ್ಮ ಬೆಂಗಳೂರು ಪ್ರಶಸ್ತಿಗಳ ಬ್ರಾಂಡ್ ರಾಯಭಾರಿಯಾಗಿರುವ ನಟ ಶ್ರೀ ರಮೇಶ್ ಅರವಿಂದ್ ಅವರು ಮಾತನಾಡಿ “ಬೆಂಗಳೂರು ನನ್ನ ನಗರ ಮತ್ತು ಈ ನಗರದ ಏಳಿಗೆಗಾಗಿ ನಿಸ್ವಾರ್ಥವಾಗಿ ದುಡಿದ ಪ್ರತಿಯೊಬ್ಬರೂ ನನ್ನ ಹೀರೋಗಳು. ಈ ಪ್ರಶಸ್ತಿಗಳೊಂದಿಗೆ ಗುರುತಿಸಿಕೊಳ್ಳುವುದು ನನಗೆ ಹೆಮ್ಮೆಯ ವಿಷಯ. ನಿಜವಾದ ಹೀರೋಗಳಿಗೆ ತಕ್ಕ ಮನ್ನಣೆ ದೊರೆಯುವಂತಾಗಲು ನಾನು ಎಚ್ಚರಿಕೆಯಿಂದ ನೋಡಿದ್ದೇನೆ. ತೆರೆಯ ಮರೆಯಲ್ಲಿಯೇ ಇದ್ದು ಅಡೆತಡೆಗಳ ನಡುವೆಯೂ ನನ್ನ ನಗರವನ್ನು ಉತ್ತಮ ಸ್ಥಳವನ್ನಾಗಿ ಮಾಡುತ್ತಿರುವ ಅನಾಮಧೇಯ ಹೀರೋಗಳ ಹುಡುಕಾಟವೇ ಈ ಪ್ರಶಸ್ತಿ” ಎಂದು ಬಣ್ಣಿಸಿದರು.

ಪ್ರಶಸ್ತಿಗಳ ಕುರಿತು ಮಾತನಾಡಿದ ತೀರ್ಪುಗಾರರ ಸಮಿತಿಯ ಅಧ್ಯಕ್ಷ ಮತ್ತು ನಮ್ಮ ಬೆಂಗಳೂರು ಅವಾರ್ಡ್ ಟ್ರಸ್ಟಿನ ಟ್ರಸ್ಟಿ ಶ್ರೀ ಪ್ರದೀಪ್ ಕರ್ ಅವರು “ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅತ್ಯುತ್ತಮ ಕೆಲಸ ಮಾಡಿ ಅಂತಿಮ ಸುತ್ತು ತಲುಪಿದ ಎಲ್ಲ 26 ಮಂದಿಯೂ ವಿಜಯಿಗಳೇ. ಅಂತಿಮ ವಿಜಯಿಗಳನ್ನು ಗುರುತಿಸುವುದು ಸಮಿತಿಗೆ ಸವಾಲಿನ ಕೆಲಸವಾಗಿತ್ತು. ಹಲವು ಸುತ್ತಿನ ಚರ್ಚೆಗಳನ್ನು ನಡೆಸಬೇಕಾಯಿತು. ಇಂಥ ವಿಶಿಷ್ಟ ವ್ಯಕ್ತಿಗಳನ್ನು ನಾಮನಿರ್ದೇಶನ ಮಾಡಿದ ಬೆಂಗಳೂರಿನ ನಾಗರಿಕರಿಗೆ ನಾವು ಆಭಾರಿಯಾಗಿದ್ದೇವೆ” ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ನಟಿ ಮತ್ತು ರಂಗ ಕಲಾವಿದೆ ಶ್ರೀಮತಿ ಆರುಂಧತಿ ನಾಗ್ ಅವರು ಪ್ರಶಸ್ತಿ ಪ್ರದಾನ ಮಾಡಿ ನಮ್ಮ ಬೆಂಗಳೂರು ಅವಾರ್ಡ್ ಟ್ರಸ್ಟಿನ ಕೆಲಸವನ್ನು ಪ್ರಶಂಸಿಸಿದರು. “ಸಹಾಯದ ಅಗತ್ಯವಿರುವಾಗ ಆ ಸಹಾಯವನ್ನು ನೀಡುವುದೇ ನಿಜವಾದ ಸೇವೆಯ ತಿರುಳು. ಇಂಥ ಪರೀಕ್ಷೆಯ ಸಮಯದಲ್ಲಿಯೂ ಟ್ರಸ್ಟ್ ನಿಸ್ವಾರ್ಥವಾಗಿ ಕೆಲಸ ಮಾಡುವವನ್ನು ಗುರುತಿಸುತ್ತಿರುವುದು ಹೊಸ ಭರವಸೆಯನ್ನು ಮೂಡಿಸುತ್ತದೆ” ಎಂದು ಅವರು ಹೇಳಿದರು.

ತೀರ್ಪುಗಾರರ ಸಮಿತಿಯ ಸದಸ್ಯರ ವಿವರ
  • ಪ್ರದೀಪ್ ಕರ್, ಅಧ್ಯಕ್ಷರು ಮತ್ತು ಎಂಡಿ, ಮೈಕ್ರೋಲ್ಯಾಂಡ್
  • ಡಾ. ಅಶ್ವಿನ್ ಮಹೇಶ್, ಸ್ಥಾಪಕರು, ಮ್ಯಾಪ್‍ಯೂನಿಟಿ
  • ಡಾ. ವಿಶಾಲ್ ರಾವ್, ಆಂಕಾಲಜಿ ಸರ್ಜನ್
  • ಸಂಜಯ ಪ್ರಭು, ನಿರ್ದೇಶಕರು, ಎಎನ್‍ಎಂಇಎಲ್
  • ವಿ. ರವಿಚಂದರ್, ಅಧ್ಯಕ್ಷರು, ಫೀಡ್‍ಬ್ಯಾಕ್ ಕನ್ಸಲ್ಟಿಂಗ್
  • ಅನಿತಾ ರೆಡ್ಡಿ, ಸ್ಥಾಪಕ ಟ್ರಸ್ಟಿ, ಆವಾಸ್
  • ಎಸ್. ವಿಶ್ವನಾಥ್, ಜಲ ಸಂರಕ್ಷಣೆ ತಜ್ಞರು
  • ಡಾ. ಸುದರ್ಶನ್ ಬಲ್ಲಾಳ್, ಅಧ್ಯಕ್ಷರು, ಮಣಿಪಾಲ್ ಗ್ರೂಪ್ ಆಫ್ ಹಾಸ್ಪಿಟಲ್ಸ್
  • ಶ್ರೀ ಸಿ.ಎನ್. ಕುಮಾರ್, ಸ್ಥಾಪಕ ಅಧ್ಯಕ್ಷರು, ಅಡ್ವಾಂಟೇಜ್ ಆಫ್‍ಶೋರ್ ನಾಲೆಜ್ ಸರ್ವಿಸಸ್
  • ಜಿಷ್ಣು ದಾಸ್‍ಗುಪ್ತಾ, ಸಂಗೀತಗಾರರು ಮತ್ತು ಮಾರ್ಕೆಟಿಂಗ್ ಕನ್ಸಲ್ಟಂಟ್
  • ವಾಸಂತಿ ಹರಿಪ್ರಕಾಶ್, ಮಾಧ್ಯಮ ವೃತ್ತಿಪರರು
  • ಡಿ.ಎಸ್. ರಾಜಶೇಖರ್, ಮಾಜಿ ಅಧ್ಯಕ್ಷರು, ಸಿಟಿಜನ್ ಆಕ್ಷನ್ ಫೋರಂ
  • ಅಶೋಕ ಕಾಮತ್, ಮ್ಯಾನೇಜಿಂಗ್ ಟ್ರಸ್ಟಿ ಮತ್ತು ಅಧ್ಯಕ್ಷರು, ಅಕ್ಷರ ಫೌಂಡೇಷನ್
  • ಕಾತ್ಯಾಯಿನಿ ಚಾಮರಾಜ್, ಎಕ್ಸಿಕ್ಯುಟಿವ್ ಟ್ರಸ್ಟಿ, ಸಿವಿಕ್
  • ಪಿ.ಜಿ. ಭಟ್, ಅಧ್ಯಕ್ಷರು ಮತ್ತು ನಿರ್ದೇಶಕರು, ಪ್ಲುಮಾ
  • ಉದಯ ಕುಮಾರ್, ಪಾರಂಪರಿಕ ಸಂರಕ್ಷಣಾ ತಜ್ಞರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ