ಆ್ಯಪ್ನಗರ

ಜ್ಯೋತಿ ಉದಯ್‌ ಮೇಲೆ ಹಲ್ಲೆ ಮಾಡಿದ್ದು ನಾನೇ, ನನಗೆ ಶಿಕ್ಷೆ ಕೊಡಿ: ಮಧುಕರ ರೆಡ್ಡಿ

''ನಾನು ತಪ್ಪು ಮಾಡಿದ್ದೇನೆ. ವಕೀಲರನ್ನು ನೇಮಿಸಿಕೊಳ್ಳುವುದಿಲ್ಲ. ನನಗೆ ವಿಚಾರಣೆಯೂ ಬೇಡ. ನೇರವಾಗಿ ಶಿಕ್ಷೆ ಕೊಟ್ಟು ಬಿಡಿ''.

Vijaya Karnataka 29 Dec 2018, 9:00 am
ಬೆಂಗಳೂರು: ''ನಾನು ತಪ್ಪು ಮಾಡಿದ್ದೇನೆ. ವಕೀಲರನ್ನು ನೇಮಿಸಿಕೊಳ್ಳುವುದಿಲ್ಲ. ನನಗೆ ವಿಚಾರಣೆಯೂ ಬೇಡ. ನೇರವಾಗಿ ಶಿಕ್ಷೆ ಕೊಟ್ಟು ಬಿಡಿ''.
Vijaya Karnataka Web JAIL1


ಇದು ಕಾರ್ಪೋರೇಷನ್‌ ಬ್ಯಾಂಕ್‌ ಎಟಿಎಂ ಕೇಂದ್ರದಲ್ಲಿ ಬ್ಯಾಂಕ್‌ ಉದ್ಯೋಗಿ ಜ್ಯೋತಿ ಉದಯ್‌ ಅವರ ಮೇಲೆ ಮಾರಣಾಂತಿಕವಾಗಿಮಚ್ಚಿನಿಂದ ಹಲ್ಲೆ ನಡೆಸಿದ್ದ ಆರೋಪಿ ಮಧುಕರ ರೆಡ್ಡಿ ಅಳಲು. ಈತನನ್ನು ಎಸ್‌.ಜೆ.ಪಾರ್ಕ್‌ ಠಾಣೆ ಪೊಲೀಸರು ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ವೇಳೆ ನ್ಯಾಯಾಧೀಶರ ಮುಂದೆ ಕೈ ಮುಗಿದು ನೇರವಾಗಿ ಶಿಕ್ಷೆ ನೀಡುವಂತೆ ಆತ ಬೇಡಿಕೊಂಡಿದ್ದಾನೆ.

ತಪ್ಪು ಮಾಡಿದ್ದೇನೆ: ರಾಷ್ಟ್ರಾದ್ಯಂತ ಆತಂಕ ಸೃಷ್ಟಿಸಿದ್ದ ಎಟಿಎಂ ಹಲ್ಲೆ ಪ್ರಕರಣದ ಆರೋಪಿ ಮಧುಕರ ರೆಡ್ಡಿಯನ್ನು ಪೊಲೀಸರು ಶುಕ್ರವಾರ 65ನೇ ಸಿಸಿಹೆಚ್‌ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈತನ ಬಂಧನದ ನಂತರ ಪ್ರಕರಣದ ಆರೋಪ ಪಟ್ಟಿ ಸಲ್ಲಿಸಿದ್ದ ಪೊಲೀಸರು ವಿಚಾರಣೆಗೆಂದು ಇದೇ ಮೊದಲ ಬಾರಿಗೆ ಹಾಜರು ಪಡಿಸಿದ್ದರು. ಆಗ ಆರೋಪಿಯು ''ಸ್ವಾಮಿ, ಜ್ಯೋತಿ ಉದಯ್‌ ಅವರ ಮೇಲೆ ದಾಳಿ ನಡೆಸಿರುವುದು ನಾನೇ. ತಪ್ಪು ಒಪ್ಪಿಕೊಳ್ಳುತ್ತೇನೆ. ನನಗೆ ಯಾವ ವಿಚಾರಣೆಯೂ ಬೇಡ. ಇವತ್ತೇ ಶಿಕ್ಷೆ ಪ್ರಕಟಿಸಿಬಿಡಿ'' ಎಂದು ನ್ಯಾಯಾಲಯಕ್ಕೆ ಅಂಗಲಾಚಿ ಬೇಡಿಕೊಂಡಿದ್ದಾನೆ.

ಆರೋಪಿಯ ಮಾತಿಗೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ''ನಿಮ್ಮ ಮೇಲಿರುವ ಆರೋಪಕ್ಕೆ ಜೀವಾವಧಿ ಶಿಕ್ಷೆ ಆಗಬಹುದು. ತಪ್ಪು ಒಪ್ಪಿಕೊಂಡ ಮಾತ್ರಕ್ಕೆ ಶಿಕ್ಷೆ ಕಡಿಮೆ ಆಗುತ್ತದೆ ಎಂದು ಹೇಳಲಾಗುವುದಿಲ್ಲ. ನಿಮಗೆ ವಕೀಲರನ್ನು ನೇಮಿಸಲಾಗಿದೆ. ಅವರ ಜತೆ ಕೇಸಿನ ಬಗ್ಗೆ ಚರ್ಚಿಸಿ'' ಎಂದು ಸೂಚಿಸಿದರು. ಇದಕ್ಕೂ ಒಪ್ಪದ ಆರೋಪಿ, ''ನಾನು ಈಗಾಗಲೇ ಮದನಪಲ್ಲಿಯಲ್ಲಿ ಶಿಕ್ಷೆ ಅನುಭವಿಸಿದ್ದೇನೆ. ನಾನು ಹೆಂಡತಿ ಮಕ್ಕಳ ಮುಖ ನೋಡಬೇಕು. ಅವರು ನನಗಾಗಿ ಕಾಯುತ್ತಿದ್ದಾರೆ. ನನಗೆ ಇದೆಲ್ಲಾ ಸಾಕಾಗಿದೆ. ನೇರವಾಗಿ ಶಿಕ್ಷೆ ಕೊಟ್ಟುಬಿಡಿ. ಶಿಕ್ಷೆ ಮುಗಿಸಿಕೊಂಡು ಕುಟುಂಬದ ಜತೆ ನಾನು ಇರಬೇಕು'' ಎಂದು ವಿನಂತಿಸಿಕೊಂಡ. ಈತನ ಮನವಿಯನ್ನು ಪರಿಗಣಿಸಿದ ನ್ಯಾಯಾಲಯ ವಿಚಾರಣೆಯನ್ನು ಜ.7ಕ್ಕೆ ಮುಂದೂಡಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ