Please enable javascript.BBMP Election,ಬಿಬಿಎಂಪಿ ಚುನಾವಣೆ ಎರಡು ವರ್ಷ ಮುಂದೂಡಲು ಪ್ರಯತ್ನ, ತಂತ್ರ ಹೆಣೆಯುತ್ತಿರುವುದು ಯಾರು? - planning to extend bbmp election for two years - Vijay Karnataka

ಬಿಬಿಎಂಪಿ ಚುನಾವಣೆ ಎರಡು ವರ್ಷ ಮುಂದೂಡಲು ಪ್ರಯತ್ನ, ತಂತ್ರ ಹೆಣೆಯುತ್ತಿರುವುದು ಯಾರು?

Vijaya Karnataka Web 31 Aug 2020, 10:15 am
Subscribe

ಬಿಬಿಎಂಪಿ ಆಡಳಿತಾವಧಿ ಸೆ. 10ಕ್ಕೆ ಮುಕ್ತಾಯವಾಗುತ್ತಿದ್ದು, ಈ ನಡುವೆ ಕೋವಿಡ್ ನೆಪವಿಟ್ಟುಕೊಂಡು ಚುನಾವಣೆ ಮುಂದೂಡಲು ಹುನ್ನಾರ ನಡೆಯುತ್ತಿದೆ. ವಾರ್ಡ್‌ ಮೀಸಲುಪಟ್ಟಿ ತಯಾರಿಸಲು ಸರಕಾರದ ಸಿದ್ಧತೆ ನಡೆಸಿದೆ.

planning to extend bbmp election for two years
ಬಿಬಿಎಂಪಿ ಚುನಾವಣೆ ಎರಡು ವರ್ಷ ಮುಂದೂಡಲು ಪ್ರಯತ್ನ, ತಂತ್ರ ಹೆಣೆಯುತ್ತಿರುವುದು ಯಾರು?
ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ ಹೊಸ ಕಾನೂನು ಜಾರಿಗೆ ತರುವ ನೆಪದಲ್ಲಿ ಬಿಬಿಎಂಪಿ ಚುನಾವಣೆಯನ್ನು ಎರಡು ವರ್ಷ ಮುಂದೂಡಲು ಬೆಂಗಳೂರಿನ ಶಾಸಕರು ಪ್ರಯತ್ನ ನಡೆಸಿದ್ದಾರೆ ಎಂಬುದು ತಿಳಿದುಬಂದಿದೆ. ಬಿಬಿಎಂಪಿ ಚುನಾವಣೆ ನಡೆಯುವುದು ಯಾವ ಪಕ್ಷದ ಶಾಸಕರಿಗೂ ಇಷ್ಟವಿಲ್ಲ. ಈ ಅವಕಾಶ ಬಳಸಿಕೊಂಡು ಆಡಳಿತಾರೂಢ ಬಿಜೆಪಿ ಶಾಸಕರು ಚುನಾವಣೆ ಮುಂದೂಡಲು ತಂತ್ರ ನಡೆಸಿದ್ದಾರೆ. ಇದರ ಮಧ್ಯೆ ಕೋರ್ಟ್‌ ಭಯವೂ ಇರುವುದರಿಂದ ವಾರ್ಡ್‌ ಮೀಸಲು ಪಟ್ಟಿ ತಯಾರಿಸಲು ಬಿಜೆಪಿ ಸರಕಾರ ಸಿದ್ಧತೆಯೂ ನಡೆಸಿದೆ ಎಂದು ಉನ್ನತ ಮೂಲಗಳು ಖಚಿತಪಡಿಸಿವೆ.

ಬಿಬಿಎಂಪಿ ಆಡಳಿತಾವಧಿ ಸೆ.10ಕ್ಕೆ ಮುಕ್ತಾಯಗೊಳ್ಳಲಿದ್ದು, ಅಷ್ಟರೊಳಗೆ ಚುನಾವಣೆ ನಡೆದು ಹೊಸ ಆಡಳಿತ ಚಾಲ್ತಿಗೆ ಬರಬೇಕಿತ್ತು. ಕೋವಿಡ್‌ ಹಿನ್ನೆಲೆಯಲ್ಲಿ ಸಿದ್ಧತೆ ವಿಳಂಬವಾಗಿದೆ. ಇದರ ಮಧ್ಯೆ ಬಿಬಿಎಂಪಿಯಲ್ಲಿ ಜಾರಿಯಲ್ಲಿರುವ ಕೆಎಂಸಿ ಕಾಯಿದೆಗೆ ತಿದ್ದುಪಡಿ ತಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ ಪ್ರತ್ಯೇಕ ಕಾನೂನು ಜಾರಿಗೆ ತರುವ ಸಂಬಂಧ ವಿಧೇಯಕ ಸಿದ್ಧಪಡಿಸಲಾಗಿದೆ. ವಿಧೇಯಕದಲ್ಲಿ ನ್ಯೂನತೆಗಳು ಇವೆ ಎಂದು ಬೆಂಗಳೂರಿನ ಬಿಜೆಪಿ ಶಾಸಕರೇ ಕಳೆದ ಅಧಿವೇಶನದ ವೇಳೆ ತಗಾದೆ ತೆಗೆದಿದ್ದರಿಂದ ವಿಧೇಯಕ ಸಂಬಂಧ ಅಧ್ಯಯನ ನಡೆಸಿ ವರದಿ ನೀಡಲು ವಿಧಾನಸಭಾಧ್ಯಕ್ಷರು 20 ಮಂದಿ ಶಾಸಕರನ್ನೊಳಗೊಂಡ ವಿಧಾನಮಂಡಲ ಜಂಟಿ ಪರಿಶೀಲನಾ ಸಮಿತಿ ರಚಿಸಿದ್ದಾರೆ. ಈ ಸಮಿತಿ ವರದಿ ನೀಡಿದ ನಂತರ ವಿಧಾನಮಂಡಲದ ಅಧಿವೇಶನದಲ್ಲಿ ಚರ್ಚೆ ಮಾಡಿ ಬಳಿಕ ಜಾರಿಗೆ ತರಬೇಕು. ಇದಕ್ಕೆ ಕಾಲಾವಕಾಶ ಬೇಕು. ಹೊಸ ಕಾನೂನು ಸಿದ್ಧಗೊಂಡ ಬಳಿಕವೇ ಚುನಾವಣೆ ನಡೆಸುವುದು ಸೂಕ್ತ. ಈಗ ಹೇಗೂ ಕೋವಿಡ್‌ ಪರಿಸ್ಥಿತಿ ಇದೆ. ಈ ಸನ್ನಿವೇಶದಲ್ಲಿ ಚುನಾವಣೆ ನಡೆಸುವುದು ಕಷ್ಟ. ಈ ಅಂಶಗಳನ್ನು ಮುಂದಿಟ್ಟುಕೊಂಡು ಎರಡು ವರ್ಷ ಮುಂದೂಡಬಹುದು ಎಂಬ ವಾದವನ್ನು ಬೆಂಗಳೂರಿನ ಬಿಜೆಪಿ ಶಾಸಕರು ಸರಕಾರದ ಮುಂದಿಟ್ಟಿದ್ದಾರೆ. ಇದಕ್ಕೆ ಕಂದಾಯ ಸಚಿವ ಆರ್‌.ಅಶೋಕ್‌ ಸೇರಿದಂತೆ ಇತರ ಸಚಿವರು ಬೆಂಬಲವಾಗಿ ನಿಂತಿದ್ದಾರೆ.

​​ಶಾಸಕರಿಗೆ ಚುನಾವಣೆ ಯಾಕೆ ಬೇಡ :

​​ಶಾಸಕರಿಗೆ ಚುನಾವಣೆ ಯಾಕೆ ಬೇಡ :

ವಾರ್ಡ್‌ ಮಟ್ಟದ ಅಭಿವೃದ್ಧಿ ಕಾರ್ಯಗಳಲ್ಲಿ ಶಾಸಕರು ಹಾಗೂ ಕಾರ್ಪೊರೇಟರ್‌ಗಳ ನಡುವೆ ಆಗಾಗ ಗುದ್ದಾಟ ನಡೆಯುತ್ತಿರುತ್ತದೆ. ಅಭಿವೃದ್ಧಿ ವಿಚಾರದಲ್ಲಿ ಹಾಗೂ ಬಿಬಿಎಂಪಿ ಕಲ್ಯಾಣ ಯೋಜನೆಗಳಿಗೆ ಫಲಾನುಭವಿಗಳ ಆಯ್ಕೆ ಮಾಡುವಾಗ ಕಾರ್ಪೊರೇಟರ್‌ಗಳು ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ, ತಮಗೆ ಬೇಕಾದವರನ್ನು ಆಯ್ಕೆ ಮಾಡುತ್ತಾರೆ ಎಂಬುದು ಶಾಸಕರಿಂದ ನಿರಂತರ ಕೇಳಿಬರುವ ಆರೋಪಗಳು. ಕಾರ್ಪೊರೇಟರ್‌ಗಳ ಪ್ರಭಾವದ ಮಧ್ಯೆ ಶಾಸಕರ ಮಾತಿಗೆ ಕಿಮ್ಮತ್ತು ಸಿಗುವುದಿಲ್ಲ. ಒಂದು ವೇಳೆ ಚುನಾವಣೆ ನಡೆಸದೇ ಇದ್ದರೆ ಬಿಬಿಎಂಪಿಗೆ ಆಡಳಿತಾಧಿಕಾರಿ ನೇಮಕ ಮಾಡುತ್ತಾರೆ. ಆಗ ಜನಪ್ರತಿನಿಧಿಗಳಾಗಿ ಶಾಸಕರು ತಮಗೆ ಬೇಕಾದಂತೆ ಕ್ಷೇತ್ರದಲ್ಲಿ ಆಡಳಿತ ನಡೆಸಬಹುದು ಎಂಬುದು ಲೆಕ್ಕಾಚಾರ. ಇದೇ ರೀತಿ 2008ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯಿಂದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ರಚನೆ ಮಾಡುವಾಗಲೂ ಎರಡು ವರ್ಷ ಚುನಾವಣೆ ಮುಂದೂಡಲಾಗಿತ್ತು. ಈಗ ಬಿಬಿಎಂಪಿಗೆ ಹೊಸ ಕಾನೂನು ಜಾರಿ ನೆಪದಲ್ಲಿ ಚುನಾವಣೆ ಮುಂದಕ್ಕೆ ಹಾಕುವ ಪ್ರಯತ್ನ ನಡೆದಿದೆ ಎಂದು ಉನ್ನತ ಮೂಲಗಳು ಹೇಳುತ್ತವೆ.

​ವಾರ್ಡ್‌ ಮೀಸಲು ಪಟ್ಟಿ ತಯಾರಿ

​ವಾರ್ಡ್‌ ಮೀಸಲು ಪಟ್ಟಿ ತಯಾರಿ

ಕೋವಿಡ್‌ ನೆಪದಲ್ಲಿ ಚುನಾವಣೆ ನಡೆಸುವುದರಿಂದ ಕನಿಷ್ಠ ಆರು ತಿಂಗಳು ವಿನಾಯಿತಿ ಪಡೆಯಬಹುದು. ಇನ್ನು ಹೊಸ ಕಾನೂನು ರೂಪಿಸಿ ನಂತರ ಚುನಾವಣೆ ಮಾಡಬಹುದು ಎಂದು ಸರಕಾರ ವಾದ ಮಂಡಿಸಬಹುದು. ಇದನ್ನು ನ್ಯಾಯಾಲಯದಲ್ಲಿ ಸಾರ್ವಜನಿಕರು ಪ್ರಶ್ನೆ ಮಾಡಿದರೆ, ಅಂಥ ಸಂದರ್ಭದಲ್ಲಿನ್ಯಾಯಾಲಯ ತಕ್ಷಣವೇ ಚುನಾವಣೆ ನಡೆಸಿ ಎಂದು ರಾಜ್ಯ ಸರಕಾರಕ್ಕೆ ಸೂಚನೆ ನೀಡಲೂಬಹುದು. ಕೋರ್ಟ್‌ ನಿರ್ದೇಶನದ ಮೇರೆಗೆ ಕೂಡಲೇ ಚುನಾವಣೆ ನಡೆಸಬೇಕಾಗಿ ಬಂದರೆ ವಾರ್ಡ್‌ ಮೀಸಲು ಪಟ್ಟಿ ಸಿದ್ಧ ಇರಬೇಕಾಗುತ್ತದೆ. ಸಾಮಾನ್ಯವಾಗಿ ವಾರ್ಡ್‌ ಮೀಸಲು ಪಟ್ಟಿಯನ್ನು ಆಡಳಿತ ಪಕ್ಷ ತನಗೆ ಅನುಕೂಲ ಆಗುವಂತೆ ಸಿದ್ಧಪಡಿಸಿಕೊಳ್ಳುವುದು ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ. ಈಗ ಬಿಜೆಪಿ ಬಿಬಿಎಂಪಿ ಸದಸ್ಯರು ಅಧಿಕಾರ ಬಳಸಿಕೊಂಡು ತಮಗೆ ಅನುಕೂಲ ಆಗುವಂತೆ ವಾರ್ಡ್‌ ಮೀಸಲು ಪಟ್ಟಿ ಸಿದ್ಧಪಡಿಸಿಕೊಳ್ಳುವ ಅಂತಿಮ ಕಸರತ್ತಿನಲ್ಲಿಮುಳುಗಿದ್ದಾರೆ.

ಅವಧಿ ಪೂರ್ಣಗೊಳ್ಳುವ ಮುನ್ನ ಚುನಾವಣೆ ನಡೆಸಬೇಕು

ಸಂವಿಧಾನ 243(ಇ) ನಿಯಮದನ್ವಯ ಸ್ಥಳೀಯ ಸಂಸ್ಥೆಗಳ ಅವಧಿ ಪೂರ್ಣಗೊಳ್ಳುವ ಮುನ್ನ ಚುನಾವಣೆ ನಡೆಸಬೇಕಾಗುತ್ತದೆ. ಮತದಾರರ ಪಟ್ಟಿ ತಯಾರು, ವಾರ್ಡ್‌ವಾರು ಮೀಸಲು ಪಟ್ಟಿಯನ್ನು ಸಿದ್ಧಪಡಿಸಿ ಈ ಪ್ರಕ್ರಿಯೆಯನ್ನು ನಡೆಸಬೇಕು. ಇದಕ್ಕೆ ಅವಕಾಶ ಸಿಗದಿದ್ದಾಗ ರಾಜ್ಯ ಚುನಾವಣಾ ಆಯೋಗ ಹೈಕೋರ್ಟ್‌ ಮೊರೆ ಹೋಗಿ ಚುನಾವಣೆ ನಡೆಸಲು ಅವಕಾಶ ಕೋರಬಹುದು.
ಕೆ.ಎನ್‌.ಫಣೀಂದ್ರ, ಹಿರಿಯ ವಕೀಲರು

​ಕೊರೊನಾದಿಂದಾಗಿ ಬಿಬಿಎಂಪಿ ಚುನಾವಣೆ ತಡ

​ಕೊರೊನಾದಿಂದಾಗಿ ಬಿಬಿಎಂಪಿ ಚುನಾವಣೆ ತಡ

ಕಳೆದ ಮಾರ್ಚ್‌ನಲ್ಲಿಯೇ ರಾಜ್ಯ ಚುನಾವಣಾ ಆಯೋಗ ಪಾಲಿಕೆಗೆ ಚುನಾವಣೆ ನಡೆಸುವ ಸಂಬಂಧ ಸರಕಾರದ ಗಮನ ಸೆಳೆದಿತ್ತು. ಆ ಸಮಯದಲ್ಲಿ ಲಾಕ್‌ಡೌನ್‌, ಕೋವಿಡ್‌-19 ಸೋಂಕಿನಿಂದಾಗಿ ಸಿದ್ಧತೆಗೆ ಅಡ್ಡಿಯಾಯಿತು. ಇದರ ಮಧ್ಯೆ ವಾರ್ಡ್‌ ಪುನರ್‌ ವಿಂಗಡಣೆ ಪ್ರಕ್ರಿಯೆ ಪೂರ್ಣಗೊಳಿಸಿ ಅಧಿಸೂಚನೆ ಹೊರಡಿಸಲಾಗಿದೆ. ಮತದಾರರ ಪಟ್ಟಿಯನ್ನು ಮನೆಮನೆಗೆ ತೆರಳಿ ಸಿದ್ಧಪಡಿಸಬೇಕಿದ್ದು, ಕಂಟೇನ್‌ಮೆಂಟ್‌ ಪ್ರದೇಶಗಳಿಗೆ ತೆರಳಲು ಸಾಧ್ಯವಾಗಲಿಲ್ಲ. ಸರಕಾರ ಇತ್ತೀಚಿಗೆ ವಾರ್ಡ್‌ವಾರು ಮೀಸಲು ಪಟ್ಟಿ ಸಿದ್ಧತೆ ಹಾಗೂ ಮತದಾರರ ಪಟ್ಟಿ ಸಿದ್ಧಪಡಿಸಲು ಆರ್‌ಒ/ಎಆರ್‌ಒಗಳ ನೇಮಕಕ್ಕೆ ಮುಂದಾಗಿದೆ. ಚುನಾವಣೆ ಪೂರ್ವದಲ್ಲಿಕೈಗೊಳ್ಳಬೇಕಿರುವ ನಾನಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಕನಿಷ್ಠ ನವೆಂಬರ್‌ವರೆಗೆ ಕಾಲಾವಕಾಶ ಬೇಕು. ಆನಂತರವೇ ಆಯೋಗವು ಚುನಾವಣೆ ದಿನಾಂಕ ನಡೆಸಲು ಸಾಧ್ಯ ಎಂದು ಕಾನೂನು ತಜ್ಞರು ತಿಳಿಸಿದ್ದಾರೆ.

ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ